ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Tuesday, July 8, 2008

ಅನಿರೀಕ್ಷಿತ ಅತಿಥಿ...




ಕಳೆದ ತಿಂಗಳು ಒಂದು ಶುಕ್ರವಾರದಂದು ನಡೆದ ಘಟನೆ ಇದು. ವಾರಾಂತ್ಯವಾದ್ದರಿಂದ ನನ್ನ ಆಫೀಸಿನಿಂದ ಸ್ವಲ್ಪ ಬೇಗ ಹೊರಟಿದ್ದೆ. ಹೇಗಿದ್ದರೂ ಬೇಗ ಹೊರಟಿದ್ದರಿಂದ ಜಯನಗರದ ಜನತಾಬಜಾರ್‍ ನಿಂದ ಚಪಾತಿ ಮಾಡುವ ಸಲುವಾಗಿ ಹಿಟ್ಟು ಮತ್ತು ಸ್ವಲ್ಪ ತರಕಾರಿಯನ್ನ ತಂದು ಮನೆಗೆ ಬಂದ ನನಗೆ ಮನೆಯ ಗೇಟಿನ ಬಳಿ ಅನಿರೀಕ್ಷಿತವಾಗಿ ಯಾವುದೋ ಪ್ರಾಣಿ ಮಲಗಿರುವಂತೆ ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಒಂದು ಪುಟಾಣಿ ಅಳಿಲಿನ ಮರಿ !!!

ಪಾಪ ಅದು ಅಲ್ಲಿ ಏತಕ್ಕಾಗಿ ಬಂದು ಬಿದ್ದಿತ್ತೋ ? ಯಾರಾದರೂ ಕಿಡಿಗೇಡಿಗಳು ಅದನ್ನ ಹಿಡಿಯಲು ಪ್ರಯತ್ನಿಸಿ ಹಿಡಿಯಲಾಗದೇ ಕಲ್ಲು ತೂರಿ ಅದನ್ನು ಬಿಟ್ಟು ಹೋಗಿದ್ದರೋ ನನಗೆ ಅರ್ಥವಾಗಲಿಲ್ಲ, ಪಾಪ, ಅದರ ಬಾಯಿಯಲ್ಲಿ ಕೆಳಗಿನ ಒಂದು ಹಲ್ಲು ಮುರಿದಿತ್ತು, ಬಾಯಿಯಿಂದ ರಕ್ತ ಬಂದಿತ್ತು. ನಿತ್ರಾಣಗೊಂಡಿದ್ದ ಅದನ್ನ ತಕ್ಷಣವೇ ಕೈನಲ್ಲಿ ಎತ್ತಿಕೊಂಡು ಮನೆಗೆ ಓಡಿಬಂದು ಅದಕ್ಕೆ ಸ್ವಲ್ಪ ನೀರು ಕುಡಿಸಿದೆ... ಉಸಿರಾಡುವಲ್ಲಿ ಕಷ್ಟ ಪಡುತ್ತಿದ್ದ ಅದನ್ನು ನಿಧಾನವಾಗಿ ಮನೆಯ ಬಕೇಟಿನೊಳಗೆ ತೆಂಗಿನನಾರು ಮತ್ತೆ ಹಳೇ ಬನಿಯನ್ ಅನ್ನು ಇಟ್ಟು ಅದರೊಳಗೆ ಜೋಪಾನವಾಗಿ ಅಳಿಲಿನ ಮರಿಯನ್ನ ಇಟ್ಟು ಅಂಗಡಿಗೆ ಹಾಲು ತರಲು ಓಡಿದೆ. ಹಲ್ಲು ಇಲ್ಲದ ಕಾರಣ ಅದಕ್ಕೆ ಏನನ್ನೂ ತಿನ್ನಲು ಆಗುವುದಿಲ್ಲವೆಂದು ತಿಳಿದಿತ್ತು. ಹಾಲು ತಂದು ಅದಕ್ಕೆ ಸ್ವಲ್ಪ ಬಿಸ್ಕೇಟನ್ನು ನುರಿದು ಆ ಬಿಸ್ಕೇಟಿನ ಹಾಲನ್ನು ಸ್ವಲ್ಪ ಸ್ವಲ್ಪವಾಗೇ ಅದರ ಬಾಯಿಗೆ ಹಾಕಿದೆ. ಕೇವಲ ಬಾಯಿಯ ಮೂಲಕ ಉಸಿರಾಡುತ್ತಿದ್ದ ಆ ಮರಿ ವಿಧಿಯಿಲ್ಲದೇ ನಾನು ಹಾಕಿದ ಹಾಲನ್ನು ಕುಡಿಯುತ್ತಲಿತ್ತು. ನಾನು ಬಲವಂತದಿಂದಾದರೂ ಸ್ವಲ್ಪ ಕುಡಿಸಲೇಬೇಕು, ಶಕ್ತಿಯಿಲ್ಲದಿದ್ದರೆ ಅದು ಮತ್ತೆ ಮೊದಲಿನಂತೆ ಆಗುವುದಾದರೂ ಹೇಗೆ ಅಂತ ಪ್ರಯತ್ನ ಪಟ್ಟು ಸ್ವಲ್ಪ ಕುಡಿಸಿ ನಂತರ ಅದನ್ನು ಆ ಬಕೇಟಿನಲ್ಲಿ ಮಲಗಿಸಿದೆ.

ಪಾಪ, ಅದರಲ್ಲಿ ಶಕ್ತಿ ಅಡಗಿಹೋಗಿತ್ತು. ಪೂರ್ಣವಾಗಿ ನಿತ್ರಾಣಗೊಂಡಿದ್ದ ಅದು ನನಗೆ ಮುಗ್ದ ಮಗುವಿನಂತೆ, ಕೈಲಾಗದ ಹಸುಗೂಸಿನಂತೆ ಕಾಣಿಸಿತು. ನಾನು ಹೇಳಿದ ಮಾತನ್ನು ಕೇಳುತ್ತಿದೆಯೇನೋ ಅನ್ನುವಹಾಗೆ ಹಾಲು ಕುಡಿದು ತನ್ನ ಬಕೇಟಿನಲ್ಲಿ ಮಲಗಿತ್ತು. ಅದಕ್ಕೆ ಹೊರಗಿನಿಂದ ಏನೂ ಪೆಟ್ಟಾದಂತೆ ಕಾಣದಿದ್ದರೂ ಒಳಗಿನಿಂದ ಪೆಟ್ಟಾದದ್ದು ಅದರ ನಿತ್ರಾಣಕ್ಕೆ ಕಾರಣವಾಗಿತ್ತು. ಸಂಜೆಯಿಂದಾ ರಾತ್ರಿಯ ವರೆವಿಗೂ ಅದನ್ನು ಗಮನಿಸುತ್ತಲೇ ಇದ್ದೆ. ರಾತ್ರಿಯ ಹೊತ್ತಿಗೆ ಅದರಲ್ಲಿ ಸ್ವಲ್ಪ ಚೈತನ್ಯ ಬಂದು ಆ ಬಕೇಟಿನ ಒಳಗಡೆ ಓಡಾಡುತ್ತಲಿತ್ತು. ಅಬ್ಬಾ !!! ಸಧ್ಯ ಅಪಾಯದಿಂದ ಪಾರಾಯಿತಲ್ಲ !!! ಅಂದುಕೊಂಡು ಸಂತಸದಿಂದ ಅದನ್ನು ಬಕೇಟಿನಿಂದ ಹೊರಗೆ ತೆಗೆದು ಹಾಲು ಕುಡಿಸಿದೆ. ಮನೆಯೆಲ್ಲಾ ತಿರುಗಾಡಿದ ಅದು ನನ್ನ ಕೈಮೇಲೆಲ್ಲಾ ಹತ್ತಿ ನಂತರ ಕೈಲಾಗದ ಮಗುವಿನಂತೆ ಬಂದು ನನ್ನ ತೊಡೆಯನ್ನೇರಿ ಅಲ್ಲೇ ತನ್ನ ಸುಂದರ ಕಣ್ಣುಗಳಿಂದ ಪಿಳಿ ಪಿಳಿ ಎಂದು ನನ್ನೇ ನೋಡುತ್ತಾ ನನ್ನಲ್ಲಿ ಏನೋ ಹೇಳುತ್ತಿದೆಯೇನೋ ಅನ್ನಿಸುತ್ತಿತ್ತು. ಮೊದಲೇ ಪ್ರಾಣಿ ಪ್ರಿಯನಾದ ನಾನು ಅದನ್ನೆತ್ತಿಕೊಂಡು ಮುದ್ದಾಡಿ ಮತ್ತೆ ರಾತ್ರಿಯಾದ್ದರಿಂದ ಅದರ ಬಕೇಟಿನಲ್ಲಿ ಮಲಗಿಸಿ ಚಳಿಯಾಗದಂತೆ ಅದಕ್ಕೆ ಬನಿಯನ್ ಬಟ್ಟೆಯನ್ನು ಹೊದ್ದಿಸಿ ಮಲಗಿಸಿದೆ. ಹಾಲು ಕುಡಿದು ಹೊಟ್ಟೇ ತುಂಬಿಸಿಕೊಂಡಿದ್ದ ಅದು ನಿರಮ್ಮಳವಾಗಿ ನಿದ್ರೆ ಮಾಡುತ್ತಿತ್ತು. ಅದನ್ನು ನೋಡಿ ನಾನು ನಿದ್ರೆ ಮಾಡಿದೆ. ಬೆಳಗ್ಗಿನತನಕ ನನಗೆ ಅದರದ್ದೇ ಯೋಚನೆ, ಮುಂಜಾವದಲ್ಲಿ ಎದ್ದು ಅದು ಏನುಮಾಡುತ್ತಿದೆ ಎಂದು ನೋಡಿ, ಇನ್ನೂ ನಿದ್ರೆ ಮಾಡುತ್ತಿದ್ದರಿಂದ ನಾನು ನನ್ನ ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ಮಾಡಿ ಬಂದು ನೋಡುವ ಹೊತ್ತಿಗೆ ಅದು ಎದ್ದು ಅತ್ತಿಂದಿತ್ತ ಓಡಾಡುತ್ತಿತ್ತು. ಅದಕ್ಕೆ ಹಾಲು ಕುಡಿಸಿ ಎಂದಿನಂತೆ ನನ್ನ ಕೆಲಸಕ್ಕೆ ಹೊರಟೆ.

ಮಧ್ಯಾನ್ನ ಬೇಗ ಮನೆಗೆ ಬಂದು ಅದು ಏನುಮಾಡುತ್ತಿದೆ ಎಂದು ನೋಡುವ ತವಕದಿಂದಲೇ ಹೊರಟೆ. ಹಾಗೆಯೇ ಅಕಸ್ಮಾತಾಗಿ ಅದಕ್ಕೆ ಹೊಟ್ಟೆ ಹಸಿದರೆ ಎಂದು ಒಂದು ಬಿಸ್ಕೇಟನ್ನೂ ಆ ಬಕೇಟಿನಲ್ಲಿ ಇಟ್ಟಿದ್ದೆ. ಮಧ್ಯಾನ್ನ ಮನೆಗೆ ಬಂದಾಕ್ಷಣ ಅದಕ್ಕೆ ಹಾಲು ಕುಡಿಸಿ ಸಾಧ್ಯವಾದರೆ ಸ್ವಲ್ಪ ಅನ್ನ, ಬಿಸ್ಕೇಟನ್ನು ನೀಡಬೇಕೆಂದು ಮನದಲ್ಲೇ ನೆನೆದು ಬಂದು ಅದನ್ನು ನೋಡಿದೆ, ಅದು ಸ್ವಲ್ಪ ನಿತ್ರಾಣಗೊಂಡಂತೆ ಕಂಡದ್ದರಿಂದ ತಕ್ಷಣ ಅದಕ್ಕೆ ಸ್ವಲ್ಪ ಹಾಲು ಕುಡಿಸಿ ಮಲಗಲು ಬಿಟ್ಟೆ. ಮಧ್ಯಾನ್ನದ ಮಂಪರು ಹತ್ತಿದ್ದರಿಂದ ಆ ಬಕೇಟಿನ ಪಕ್ಕದಲ್ಲೇ ನಾನು ನಿದ್ರೆಗೆ ಶರಣಾದೆ. ಒಂದು ೩೦ ನಿಮಿಷಗಳ ತರುವಾಯ ಎಚ್ಚರವಾಗಿ ಅದನ್ನು ನೋಡಿದರೆ ಅದು ಉಸಿರಾಡುತ್ತಿರುವಂತೆ ಕಾಣಲಿಲ್ಲ, ಅಯ್ಯೋ ದೇವರೇ ಎಂದುಕೊಂಡು ಅದನ್ನು ಎತ್ತಿಕೊಳ್ಳಲು ಕೈಚಾಚಿದರೆ ಅದರ ದೇಹ ಪೂರ್ಣವಾಗಿ ಮರುಗಟ್ಟಿತ್ತು, ಅದರ ಹೃದಯಬಡಿತ ನಿಂತುಹೋಗಿತ್ತು, ಅದು ಆತ್ಮವಿಲ್ಲದ ಶರೀರವಾಗಿತ್ತು. ಕೇವಲ ಒಂದು ದಿನದ ಅತಿಥಿಯಾಗಿ ಬಂದ ಅದು ನನ್ನ ಮನದಲ್ಲಿ ಆಳವಾದ ಹೆಜ್ಜೆಯ ಗುರುತನ್ನ ಮೂಡಿಸಿ ಪರಲೋಕಕ್ಕೆ ಪಯಣ ಬೆಳೆಸಿತ್ತು. ಮುಂಗಾರುಮಳೆಯಲ್ಲಿನ ದೇವದಾಸ ಗಣೇಶನನ್ನು ಬಿಟ್ಟು ಹೋದಾಗ ಕೂಡಾ ನನ್ನ ಕಣ್ಣಿನಲ್ಲಿ ನೀರು ಬಂದಿತ್ತು, ಅದು ಕೇವಲ ಸಿನಿಮಾ ಆದರೂ ದುಃಖ ತಡಿಯಲಾಗಿರಲಿಲ್ಲ, ಅಂತದ್ದರಲ್ಲಿ ನನ್ನ ಜೊತೆಯಲ್ಲೇ, ನನ್ನ ಆರೈಕೆಯಲ್ಲೇ ಒಂದು ದಿನ ಕಳೆದ ಆ ಪುಟ್ಟ ಅಳಿಲಿನ ಮರಿಯೊಡನೆ ಬೆಳೆದ ಬಾಂಧವ್ಯ ನನ್ನ ಕಣ್ಣಂಚಿನಲ್ಲಿ ನೀರುಬರಿಸಿತ್ತು. ನೆನ್ನೆತಾನೆ ಜಿಗಿದು ಓಡಾಡಿಕೊಂಡಿದ್ದ ಅಳಿಲು ಇಂದು ಕೇವಲ ಒಂದು ಶವವಾಗಿತ್ತು. ಅದನ್ನು ಎಲ್ಲೆಲ್ಲೋ ಬಿಸಾಡಲು ಮನಸ್ಸು ಬರದೇ ನನ್ನಬಳಿ ಇದ್ದ ಒಂದು ಹೂವಿನ ಕುಂಡದಲ್ಲಿ ಅದನ್ನು ಮಣ್ಣು ಮಾಡಿ ಅದರ ನೆನಪಿಗೆ ಅದೇ ಕುಂಡದಲ್ಲಿ ಒಂದು ಗಿಡವನ್ನ ನೆಟ್ಟೆ.

ಇಂದು ಆ ಗಿಡದಲ್ಲಿ ಹೂ ಮೂಡಿದೆ, ಆ ಗಿಡದ ಬುಡದಲ್ಲಿ ಬಹುಷ: ಮಣ್ಣಲ್ಲಿ ಮಣ್ಣಾಗಿ ಆ ಪುಟ್ಟ ಅಳಿಲುಮರಿ ನಿಸರ್ಗದ ಮಡಿಲಲ್ಲಿ ಸೇರಿಹೋಗಿದೆ...

1 comment:

anusha said...

i feel the same when my fish die...
:-(