ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Friday, August 21, 2009

"ಮುನಿಯ"



"ಮುನಿಯ" ಎಂದಾಕ್ಷಣ ಯಾವುದೋ ಕನ್ನಡ ಚಿತ್ರವಲ್ಲ... ಇದು ಒಂದು ಪುಟ್ಟ ಪಕ್ಷಿಯ ಉಳಿವಿನ ಹೋರಾಟದ ಲೇಖನ...

ಶುಕ್ರವಾರದಂದು ವಾರಾಂತ್ಯವಾದ್ದರಿಂದ ಕೆಲಸದ ಒತ್ತಡ ಹೆಚ್ಚಿರಲಿಲ್ಲ. ರಾತ್ರಿ ಸವಿಯಾದ ನಿದ್ದೆ ಮಾಡಿ ಬೆಳಗ್ಗೆ ಬೇಗ ಎದ್ದು ಬರಿಅಕ್ಕಿ ದೋಸೆ (ನೀರು ದೋಸೆ) ಮತ್ತೆ ಕಡಲೇ ಬೇಳೆ ಚಟ್ನಿ ಮಾಡಿದ್ದೆ. ನೆನ್ನೆ ನನ್ನ ಸಹೋದ್ಯೋಗಿಯಾದ ಕನಕರಾಜ ತನಗೂ ತಿಂಡಿ ತರುವಂತೆ ಹೇಳಿದ್ದರಿಂದ ಅವನನಿಗೂ ದೋಸೆಯನ್ನ ಮಾಡಿಕೊಂಡು ಡಬ್ಬಿಯಲ್ಲಿ ತಂದಿದ್ದೆ. ಪ್ರತಿದಿನದಂತೆ ಇಂದಿನ ಕೆಲಸ ಪ್ರಾರಂಭಿಸಿ ಮಧ್ಯೆ ವಿರಾಮದ ಸಲುವಾಗಿ ನಮ್ಮ ಕ್ಯಾಂಟಿನಿಗೆ ಟೀ ಕುಡಿಯಲು ಹೋದಾಗ ಅಲ್ಲಿ ಒಂದು ಪುಟ್ಟ ಪಕ್ಷಿ ಹಾರಾಡಿದಂತಾಯಿತು. ಸಂಪೂರ್ಣವಾಗಿ ಕಿಟಕಿಗಳನ್ನು ಮುಚ್ಚಿರುವ ಜಾಗದಲ್ಲಿ ಇದ್ಯಾವ ಹಕ್ಕಿ ಬಂದಿತೆಂದು ಗಮನವಿಟ್ಟು ನೋಡಿದಾಗ ಅದು ಹಿಂದೆ ನಾನು ಸಾಕಿದ್ದ "ಮುನಿಯ" ಎಂಬ ಹಕ್ಕಿ ಎಂದು ತಿಳಿಯಿತು. ಪಾಪ... ಅದು ಹೇಗೋ ದಾರಿ ತಪ್ಪಿ ಕ್ಯಾಂಟಿನಿಗೆ ಬಂದುಬಿಟ್ಟಿತ್ತು. ಹವಾನಿಯಂತ್ರಿತವಾದ ನಮ್ಮ ಕಾರ್ಯಾಲಯದಲ್ಲಿ ಯಾವುದೇ ಕಿಟಕಿಯನ್ನು ತೆರೆದಿಡುವ ಹಾಗಿಲ್ಲ, ದಾರಿ ತಪ್ಪಿ ಒಳಗೆ ಬಂದಿರುವ ಇದನ್ನು ಮತ್ತೆ ಹೊರಗೆ ಕಳಿಸುವುದು ಹೇಗೆಂದು ನನಗೆ ತಿಳಿಯಲಿಲ್ಲ. ಆ ಪಕ್ಷಿಯೋ ಅಪಾರ ಜನ ಜಂಗುಳಿಯನ್ನು ಕಂಡು ಬೆದರಿ ಅತ್ತಿಂದಿತ್ತ ಇತ್ತಿಂದತ್ತ ಹಾರಾಡುತ್ತಾ ತನ್ನಲ್ಲಿದ್ದ ಶಕ್ತಿಯನ್ನ ಕಳೆದುಕೊಳ್ಳುತ್ತಲಿತ್ತು. ಅದನ್ನು ಕಂಡು ಹಾಗೇ ಏನೂಮಾಡಲಾಗದೇ ಮರಳಿ ನನ್ನ ಜಾಗಕ್ಕೆ ಬಂದೆ.

ಕೆಲಸದ ಒತ್ತಡದಲ್ಲೂ ನನಗೆ ಅದರದೇ ಚಿಂತೆ... ಮತ್ತೊಂಮ್ಮೆ ನಾನು ಹೊರಬಂದಾಗ ಅದೇ ಹಕ್ಕಿ ನಮ್ಮ ಕ್ಯಾಂಟಿನಿನಿಂದ ಹೊರಬಂದು ನಮ್ಮ ಕಾರ್ಯಾಲಯದ ಆವರಣದಲ್ಲಿ ಹಾರಾಡುತ್ತಾ ಹೊರ ಹೋಗುವ ದಾರಿ ಹುಡುಕುತ್ತಿತ್ತು. ನಾನು ಕೆಲಸ ಮಾಡುವುದು ೬ನೇ ಅಂತಸ್ಥಿನಲ್ಲಿ. ಅದೂ ಪೂರ್ಣವಾಗಿ ಗಾಜಿನಿಂದಾವ್ರುತವಾದ ಕಟ್ಟಡ. ಇನ್ನು ಅದಕ್ಕೆ ಹೊರ ಹೋಗುವ ದಾರಿಯಾದರೂ ಹೇಗೆ ಸಿಗಬೇಕು... ನಾನು ಅದನ್ನು ಹಿಡಿದು ಹೊರಬಿಡಲು ನನ್ನ ಶಕ್ತಿಮೀರಿದ ಪ್ರಯತ್ನ ಮಾಡಿ ವಿಫಲನಾಗಿದ್ದೆ. ಅದು ನನ್ನ ಕೈಗೆಟುಕದಂತೆ ಮೇಲೆ ಹೋಗಿ ಕಣ್ಮುಚ್ಚಿ ಕುಳಿತಿತ್ತು.

ದಾರಿಕಾಣದೇ ಕೊನೆಗೆ ಆ ಗಣೇಶನನ್ನು ನೆನೆದು ಆ ಪಕ್ಷಿಗೆ ಒಂದು ದಾರಿ ತೋರಿಸೆಂದು ಕೋರಿಕೊಂಡು ಮತ್ತೆ ನನ್ನ ಕಾರ್ಯಸ್ಥಳಕ್ಕೆ ಮರಳಿದೆ. ಪ್ರತೀ ಅರ್ಧ ಘಂಟೆಗೊಮ್ಮೆ ಅದು ಕುಳಿತಿದ್ದ ಸ್ಥಳಕ್ಕೆ ಹೋಗಿ ಅದನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದೆ. ಕಡೆಗೂ ನನ್ನ ಕೋರಿಕೆ ಆ ಗಣೇಶನಿಗೆ ಕೇಳಿಸಿತೇನೋ ಎಂಬಂತೆ ಆ ಹಕ್ಕಿ ನನ್ನ ಕೈಗೆಟುಕುವ ಸ್ಥಳಕ್ಕೆ ಬಂದು ಕಣ್ಮುಚ್ಚಿ ಕುಳಿತಿತ್ತು. ಬಹಳಹೊತ್ತಿನಿಂದಾ ಹಾರಾಡಿ ಸ್ವಲ್ಪ ಬಳಲಿದ್ದರಿಂದ ಮಿಸುಕಾಡದೇ ಕುಳಿತಿದ್ದ ಅದರೆಡೆಗೆ ಸದ್ದು ಮಾಡದೇ ಹೆಜ್ಜೆ ಹಾಕಿದೆ. ಆ ಪಕ್ಷಿಯನ್ನ ನನ್ನೆರಡೂ ಕೈಗಳಿಂದ ಅದಕ್ಕೆ ತೊಂದರೆಯಾಗದಂತೆ ಹಿಡಿದು ನಮ್ಮ ಕಟ್ಟಡದಿಂದ ಹೊರಬಂದು ಅದನ್ನು ಮತ್ತೆ ನಿಸರ್ಗದ ಮಡಿಲಿಗೆ ಬಿಟ್ಟೆ. ಬದುಕಿದೆಯಾ ಬಡಜೀವವೇ ಎಂಬಂತೆ ತನ್ನೆ ರೆಕ್ಕೆಗಳನ್ನು ಚಾಚುತ್ತಾ ಅದು ಹತ್ತಿರವಿದ್ದ ಒಂದು ಮರದ ಮೇಲೆ ಹಾರಿ ಕುಳಿತಿತು. :-D

ಕೆಲವು ತಿಂಗಳ ಹಿಂದೆ ಒಂದು ಪುಟ್ಟ ಅಳಿಲಿನ ಮರಿಯನ್ನ ಕಾಪಾಡಲು ಪ್ರಯತ್ನ ಪಟ್ಟು ಅದು ವಿಫಲವಾಗಿತ್ತು :-( , ಆದರೆ ಇಂದು ಆ ಪುಟ್ಟಜೀವವನ್ನ ಕಾಪಾಡಿದ ಸಂತಸದಿಂದ ಮರಳಿ ನನ್ನ ಕೆಲಸದೆಡೆಗೆ ಮರಳಿದೆ :-) . ಮೇಲೆ ಲಗತ್ತಿಸಿರುವ ಚಿತ್ರವನ್ನ ಗೂಗಲ್ಲಿನಿಂದ ಪಡೆದದ್ದು.