ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, July 16, 2008

ಅನುಭವ ಕಥನ

ನಮಸ್ಕಾರ,

ಮೊನ್ನೆ ದಿನಪೂರ್ತಿ ಕಂಪ್ಯೂಟರಿನ ಮುಂದೆ ಕಣ್ಣುರಿಸಿಕೊಂಡು ಕೆಲಸ ಮಾಡಿ ಬಹಳ ದಣಿವಾಗಿತ್ತು. ಆಯಾಸ ಪರಿಹರಿಸಿಕೊಳ್ಳಲು ತಂಪಾಗಿ ಏನಾದರೂ ಬೇಕೆನಿಸಿತು. ಆಫೀಸಿನ ಕಿಟಕಿಯಿಂದ ಹೊರಕ್ಕೆ ಇಣುಕಿನೋಡಿದಾಗ ದಟ್ಟವಾದ ಮೋಡಗಳು ಭುವಿಯನ್ನು ತಬ್ಬಿ ಹಿಡಿದಿದ್ದವು... ಇನ್ನೇನು ಅವುಗಳ ಮಿಲನಕಾಲ ಹತ್ತಿರವಾದಂತಿತ್ತು. ಹೇಗಿದ್ದರೂ ದಣಿವಾಗಿದ್ದರಿಂದ ಮಳೆಯಲ್ಲಿ ನೆನೆಯುವ ಆಸೆ, ಉತ್ಸಾಹ ಮನದಲ್ಲಿ ಪುಟಿಯುತ್ತಿತ್ತು. ಮನದ ಆಸೆಯನ್ನು ಮನದಲ್ಲೇ ಅಡಗಿಸಿಡುವುದು ಬೇಡವೆನಿಸಿ ನನ್ನ ಸಂಚಾರಿ ದೂರವಾಣಿಗಳನ್ನ ಮತ್ತೆ ಮುಖ್ಯವಾಗಿ ಬೇಕಾಗುವ Documentsಗಳನ್ನ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದಕ್ಕೆ ನೀರು ಬೀಳದಂತೆ ಅದನ್ನು ನನ್ನ ಭದ್ರಪಡಿಸಿಕೊಂಡೆ.

ಅಷ್ಟರಲ್ಲಿ ಊರಿನಿಂದ ಅಮ್ಮ ಕರೆ ಮಾಡತೊಡಗಿದರು. ಅವರೊಡನೆ ಮಾತನಾಡುವಾಗ ಅಲ್ಲಿ ಸ್ವಲ್ಪವೂ ಮಳೆಯೇ ಬಾರದ ಕಾರ್‍ಅಣ ಅಲ್ಲಿಯ ಬೇಸಾಯಕ್ಕೆ ತೊಂದರೆಯಾಗುತ್ತಿದೆ ಎಂದು ಅಮ್ಮ ಹೇಳಿದರು. ಹಾಗೇ ಕರುಳಬಳ್ಳಿಯ ಕಡೆಗಿನ ಪ್ರೀತಿಯನ್ನು ತೋರುತ್ತಾ, "ನೆನೀಬೇಡಾ ಕಣೋ, ಮಳೆ ಬಂದು ನಿಂತ್ಮೇಲೆ ಹೊರಡು, ಅಕಸ್ಮಾತ್ ನನ್ಕೊಂಡು ಹೋದ್ರೆ ಮನೆಗೆ ಹೋದ ತಕ್ಷಣಾ ತಲೆನ ಟವಲ್ ಇಂದ ಒರಸ್ಕೊಂಡು ಒಣಗಿಸ್ಕೋ" !!! ಅಮ್ಮನ ಪ್ರೀತಿ ತುಂಬಿದ ಮಾತುಗಳು ಮನಸ್ಸಿಗೆ ಏನೋ ಖುಷಿತುಂಬಿದವು. ಆದರೂ "ಅಮ್ಮಾ, ತಲೆಮೇಲೆ ಹೆಲ್ಮೆಟ್ ಇದ್ದೇ ಇರತ್ತೆ, ಮತ್ತೆ ಮೈ ಗೆ ಜರ್ಕಿನ್ ಹಾಕಿದೀನಿ, ಲೇಟಾಗಿ ಮನೆಗೆ ಹೋದ್ರೆ ನನ್ಗೊಸ್ಕರ ಅಡುಗೆ ಮಾಡ್ಕೊಂಡು ಯಾರು ಕಾಯ್ತಾ ಇರ್ತಾರೆ ಹೇಳಿ ??? ನಾನು ಜೋಪಾನವಾಗಿ ಮನೆಗೆ ಹೋಗಿ ನಿಮಗೆ ಫೋನ್ ಮಾಡ್ತೀನಿ, ಆಯ್ತಾ ?? ಅಂತೆ ಸಮಾಧಾನಿಸಿ ಅಲ್ಲಿಂದ ಮನೆಯೆಡೆಗೆ ಪಯಣ ಬೆಳೆಸಲು ಅಣಿಯಾದೆ.

ನಾನು ಮೊದಲೇ ಮಳೆಯಲ್ಲಿ ನೆನೆಯಬೇಕೆಂದು ನಿರ್ಧಾರ ಮಾಡಿದ್ದರಿಂದ ಸರಿಯಾಗಿ ೬.೦೦ಘಂಟೆಗೆ ನನ್ನ ಕಾರ್ಯಾಲಯವನ್ನ ಬಿಟ್ಟು ನನ್ನ ಲೋಹಕುದುರೆ (ಬಜಾಜ್)ಯನ್ನೇರಿ ಮನೆಯತ್ತ ಪಯಣ ಬೆಳೆಸಿದೆ. ಹೊರಟು ೧ ನಿಮಿಷಕೂಡಾ ಆಗಿರಲಿಲ್ಲ, ಧೋ ಎಂದು ಮಳೆ ಸುರಿಯಲಾರಂಭಿಸಿತು. ಆಕಾಶವೇ ಕಳಚಿ ಮೇಲೆ ಬೀಳುತ್ತಿದೆಯೇನೋ ಅನ್ನುವಂತಾ ದಪ್ಪ ದಪ್ಪ ಹನಿಗಳು !!! ನಾನು ಮಳೆಯಲ್ಲಿ ಸಂಪೂರ್ಣವಾಗಿ ತೊಯ್ದುಹೋದೆ. ಮನಸ್ಸಿನಲ್ಲಿ ಏನೋ ಸಂತಸ... ಉಲ್ಲಾಸ... ೩ ದಿನಗಳ ಹಿಂದೆಯಷ್ಟೇ ಹಲ್ಲು ನೋವಿನಿಂದ ಡಾಕ್ಟರ್ ಹತ್ತಿರ ಹೋಗಿ ಬಂದು ಅದರ ನೋವಿನಿಂದ ಬಳಲುತ್ತಿದ್ದೆ, ಒಮ್ಮೆ ಮಳೆ ಬಂದದ್ದೇ ತಡ !!! ಯಾವ ನೋವೂ ನನ್ನ ಪರಿವೆಗೆ ಇರಲಿಲ್ಲ, ನೀರಿನಲ್ಲಿ ಬಿಟ್ಟ ಮೀನಿನಂತೆ ಮಳೆಯಲ್ಲಿ ಸಾಗಿದೆ. ನನ್ನ ಬೈಕನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ ಪುಟ್ಟ ಮಗುವಿನಂತೆ ಮಳೆಯಲ್ಲಿ ನನ್ನ ಕೈಗಳನ್ನ ಚಾಚಿ ನಿಂತೆ...

ಆಗಷ್ಟೆ ಸುರಿದ ಮಳೆ ನನ್ನ ಮನದಲ್ಲಿದ್ದ ನೋವುಗಳನ್ನ ಅಲ್ಪಕಾಲವಾದರೂ ಕೊಚ್ಚಿಕೊಂಡು ಹೋಗಿತ್ತು. ನಾನು ಒಂಟಿಯಾಗಿ ಮನೆಗೆ ಹೋಗಲು ಬಿಡದ ಮಳೆ ಮನೆಯ ತನಕ ನನ್ನ ಜೊತೆಗೂಡಿ ಬಂದಿತ್ತು, ಆದರೆ ಮನೆಯ ಬಳಿ ನನ್ನ ಬಿಟ್ಟು ತಾನೆಲ್ಲೋ ಮಾಯವಾಗಿತ್ತು.

ಹೈದರಾಬಾದಿನಲ್ಲಿ ನಾನಿದ್ದ ದಿನಗಳಂದು ಬಂದ ಮಳೆಯ ಬಗ್ಗೆ ಬರೆದ ಕೆಲವೇ ಸಾಲುಗಳನ್ನ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ...

ಭೋರೆಂದು ಸುರಿದಿದೆ ಗಗನದಿಂದ
ಭುವಿಯ ದಾಹವ ತಣಿಸುವ ತವಕದಿಂದ...

ದಟ್ಟ ಮೋಡದಿಂದ ಸುರಿದುಬಂದಿಹೆ ನೀನು
ನಿನ್ನ ರಭಸವ ವರ್ಣಿಸುವುದೇನು...

ಜೊತೆಗೋಡಿ ಬಂದಿದೆ ವೇಗವಾಗಿ ಗಾಳಿ
ತಲೆದೊಗಿ ನಿಂತಿಹವು ಮರಗಿಡಗಳು ಕೇಳಿ...

ನೀಬಂದಿಹೆಯೇನು ಕೆರೆ, ನದಿಯ ಒಡಲು ತುಂಬಲು
ಹೇಳುವುದೇನು ಭುವಿಯು ಸಂತಸದಿ ನಗುತಿರಲು...

ಸುರಿದು ಬಾ ಮಳೆಯೆ ಸುರಿದು ಬಾ
ಬರಡು ನೆಲವನು ಹಸನುಗೊಳಿಸು ಬಾ...

ಕೊಂಚ ಕರುಣೆಯ ತೋರು
ನಿನ ರಭಸದಲೂ ಮಂದಹಾಸವ ಬೀರು...

ನೀ ನಮಗೆ ಜೀವಜಲ
ಕಾಯುನೀ ಸಕಲ ಜೀವಸಂಕುಲ...

ಮಳೆಯೇ ನಿನ್ನ ಮಾಯವಿದೇನೇ...