ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, July 16, 2008

ಅನುಭವ ಕಥನ

ನಮಸ್ಕಾರ,

ಮೊನ್ನೆ ದಿನಪೂರ್ತಿ ಕಂಪ್ಯೂಟರಿನ ಮುಂದೆ ಕಣ್ಣುರಿಸಿಕೊಂಡು ಕೆಲಸ ಮಾಡಿ ಬಹಳ ದಣಿವಾಗಿತ್ತು. ಆಯಾಸ ಪರಿಹರಿಸಿಕೊಳ್ಳಲು ತಂಪಾಗಿ ಏನಾದರೂ ಬೇಕೆನಿಸಿತು. ಆಫೀಸಿನ ಕಿಟಕಿಯಿಂದ ಹೊರಕ್ಕೆ ಇಣುಕಿನೋಡಿದಾಗ ದಟ್ಟವಾದ ಮೋಡಗಳು ಭುವಿಯನ್ನು ತಬ್ಬಿ ಹಿಡಿದಿದ್ದವು... ಇನ್ನೇನು ಅವುಗಳ ಮಿಲನಕಾಲ ಹತ್ತಿರವಾದಂತಿತ್ತು. ಹೇಗಿದ್ದರೂ ದಣಿವಾಗಿದ್ದರಿಂದ ಮಳೆಯಲ್ಲಿ ನೆನೆಯುವ ಆಸೆ, ಉತ್ಸಾಹ ಮನದಲ್ಲಿ ಪುಟಿಯುತ್ತಿತ್ತು. ಮನದ ಆಸೆಯನ್ನು ಮನದಲ್ಲೇ ಅಡಗಿಸಿಡುವುದು ಬೇಡವೆನಿಸಿ ನನ್ನ ಸಂಚಾರಿ ದೂರವಾಣಿಗಳನ್ನ ಮತ್ತೆ ಮುಖ್ಯವಾಗಿ ಬೇಕಾಗುವ Documentsಗಳನ್ನ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದಕ್ಕೆ ನೀರು ಬೀಳದಂತೆ ಅದನ್ನು ನನ್ನ ಭದ್ರಪಡಿಸಿಕೊಂಡೆ.

ಅಷ್ಟರಲ್ಲಿ ಊರಿನಿಂದ ಅಮ್ಮ ಕರೆ ಮಾಡತೊಡಗಿದರು. ಅವರೊಡನೆ ಮಾತನಾಡುವಾಗ ಅಲ್ಲಿ ಸ್ವಲ್ಪವೂ ಮಳೆಯೇ ಬಾರದ ಕಾರ್‍ಅಣ ಅಲ್ಲಿಯ ಬೇಸಾಯಕ್ಕೆ ತೊಂದರೆಯಾಗುತ್ತಿದೆ ಎಂದು ಅಮ್ಮ ಹೇಳಿದರು. ಹಾಗೇ ಕರುಳಬಳ್ಳಿಯ ಕಡೆಗಿನ ಪ್ರೀತಿಯನ್ನು ತೋರುತ್ತಾ, "ನೆನೀಬೇಡಾ ಕಣೋ, ಮಳೆ ಬಂದು ನಿಂತ್ಮೇಲೆ ಹೊರಡು, ಅಕಸ್ಮಾತ್ ನನ್ಕೊಂಡು ಹೋದ್ರೆ ಮನೆಗೆ ಹೋದ ತಕ್ಷಣಾ ತಲೆನ ಟವಲ್ ಇಂದ ಒರಸ್ಕೊಂಡು ಒಣಗಿಸ್ಕೋ" !!! ಅಮ್ಮನ ಪ್ರೀತಿ ತುಂಬಿದ ಮಾತುಗಳು ಮನಸ್ಸಿಗೆ ಏನೋ ಖುಷಿತುಂಬಿದವು. ಆದರೂ "ಅಮ್ಮಾ, ತಲೆಮೇಲೆ ಹೆಲ್ಮೆಟ್ ಇದ್ದೇ ಇರತ್ತೆ, ಮತ್ತೆ ಮೈ ಗೆ ಜರ್ಕಿನ್ ಹಾಕಿದೀನಿ, ಲೇಟಾಗಿ ಮನೆಗೆ ಹೋದ್ರೆ ನನ್ಗೊಸ್ಕರ ಅಡುಗೆ ಮಾಡ್ಕೊಂಡು ಯಾರು ಕಾಯ್ತಾ ಇರ್ತಾರೆ ಹೇಳಿ ??? ನಾನು ಜೋಪಾನವಾಗಿ ಮನೆಗೆ ಹೋಗಿ ನಿಮಗೆ ಫೋನ್ ಮಾಡ್ತೀನಿ, ಆಯ್ತಾ ?? ಅಂತೆ ಸಮಾಧಾನಿಸಿ ಅಲ್ಲಿಂದ ಮನೆಯೆಡೆಗೆ ಪಯಣ ಬೆಳೆಸಲು ಅಣಿಯಾದೆ.

ನಾನು ಮೊದಲೇ ಮಳೆಯಲ್ಲಿ ನೆನೆಯಬೇಕೆಂದು ನಿರ್ಧಾರ ಮಾಡಿದ್ದರಿಂದ ಸರಿಯಾಗಿ ೬.೦೦ಘಂಟೆಗೆ ನನ್ನ ಕಾರ್ಯಾಲಯವನ್ನ ಬಿಟ್ಟು ನನ್ನ ಲೋಹಕುದುರೆ (ಬಜಾಜ್)ಯನ್ನೇರಿ ಮನೆಯತ್ತ ಪಯಣ ಬೆಳೆಸಿದೆ. ಹೊರಟು ೧ ನಿಮಿಷಕೂಡಾ ಆಗಿರಲಿಲ್ಲ, ಧೋ ಎಂದು ಮಳೆ ಸುರಿಯಲಾರಂಭಿಸಿತು. ಆಕಾಶವೇ ಕಳಚಿ ಮೇಲೆ ಬೀಳುತ್ತಿದೆಯೇನೋ ಅನ್ನುವಂತಾ ದಪ್ಪ ದಪ್ಪ ಹನಿಗಳು !!! ನಾನು ಮಳೆಯಲ್ಲಿ ಸಂಪೂರ್ಣವಾಗಿ ತೊಯ್ದುಹೋದೆ. ಮನಸ್ಸಿನಲ್ಲಿ ಏನೋ ಸಂತಸ... ಉಲ್ಲಾಸ... ೩ ದಿನಗಳ ಹಿಂದೆಯಷ್ಟೇ ಹಲ್ಲು ನೋವಿನಿಂದ ಡಾಕ್ಟರ್ ಹತ್ತಿರ ಹೋಗಿ ಬಂದು ಅದರ ನೋವಿನಿಂದ ಬಳಲುತ್ತಿದ್ದೆ, ಒಮ್ಮೆ ಮಳೆ ಬಂದದ್ದೇ ತಡ !!! ಯಾವ ನೋವೂ ನನ್ನ ಪರಿವೆಗೆ ಇರಲಿಲ್ಲ, ನೀರಿನಲ್ಲಿ ಬಿಟ್ಟ ಮೀನಿನಂತೆ ಮಳೆಯಲ್ಲಿ ಸಾಗಿದೆ. ನನ್ನ ಬೈಕನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ ಪುಟ್ಟ ಮಗುವಿನಂತೆ ಮಳೆಯಲ್ಲಿ ನನ್ನ ಕೈಗಳನ್ನ ಚಾಚಿ ನಿಂತೆ...

ಆಗಷ್ಟೆ ಸುರಿದ ಮಳೆ ನನ್ನ ಮನದಲ್ಲಿದ್ದ ನೋವುಗಳನ್ನ ಅಲ್ಪಕಾಲವಾದರೂ ಕೊಚ್ಚಿಕೊಂಡು ಹೋಗಿತ್ತು. ನಾನು ಒಂಟಿಯಾಗಿ ಮನೆಗೆ ಹೋಗಲು ಬಿಡದ ಮಳೆ ಮನೆಯ ತನಕ ನನ್ನ ಜೊತೆಗೂಡಿ ಬಂದಿತ್ತು, ಆದರೆ ಮನೆಯ ಬಳಿ ನನ್ನ ಬಿಟ್ಟು ತಾನೆಲ್ಲೋ ಮಾಯವಾಗಿತ್ತು.

ಹೈದರಾಬಾದಿನಲ್ಲಿ ನಾನಿದ್ದ ದಿನಗಳಂದು ಬಂದ ಮಳೆಯ ಬಗ್ಗೆ ಬರೆದ ಕೆಲವೇ ಸಾಲುಗಳನ್ನ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ...

ಭೋರೆಂದು ಸುರಿದಿದೆ ಗಗನದಿಂದ
ಭುವಿಯ ದಾಹವ ತಣಿಸುವ ತವಕದಿಂದ...

ದಟ್ಟ ಮೋಡದಿಂದ ಸುರಿದುಬಂದಿಹೆ ನೀನು
ನಿನ್ನ ರಭಸವ ವರ್ಣಿಸುವುದೇನು...

ಜೊತೆಗೋಡಿ ಬಂದಿದೆ ವೇಗವಾಗಿ ಗಾಳಿ
ತಲೆದೊಗಿ ನಿಂತಿಹವು ಮರಗಿಡಗಳು ಕೇಳಿ...

ನೀಬಂದಿಹೆಯೇನು ಕೆರೆ, ನದಿಯ ಒಡಲು ತುಂಬಲು
ಹೇಳುವುದೇನು ಭುವಿಯು ಸಂತಸದಿ ನಗುತಿರಲು...

ಸುರಿದು ಬಾ ಮಳೆಯೆ ಸುರಿದು ಬಾ
ಬರಡು ನೆಲವನು ಹಸನುಗೊಳಿಸು ಬಾ...

ಕೊಂಚ ಕರುಣೆಯ ತೋರು
ನಿನ ರಭಸದಲೂ ಮಂದಹಾಸವ ಬೀರು...

ನೀ ನಮಗೆ ಜೀವಜಲ
ಕಾಯುನೀ ಸಕಲ ಜೀವಸಂಕುಲ...

ಮಳೆಯೇ ನಿನ್ನ ಮಾಯವಿದೇನೇ...

Friday, July 11, 2008

ಕನ್ನಡದಲ್ಲಿ ಬರೆಯೋದು ಬಹಳ ಸುಲಭ....

ಎಲ್ಲಾ ಸಹೃದಯ ಓದುಗರಿಗೆ ನಮಸ್ಕಾರಗಳು,

ಹೀಗೇ ಅಂತರ್ಜಾಲದಲ್ಲಿ ಸುತ್ತಾಡುತ್ತಿದ್ದಾಗ ನನಗೆ ಕನ್ನಡದಲ್ಲಿ ಬರೆಯುವ ಒಂದು ಒಳ್ಳೇ ಕೊಂಡಿ ಸಿಕ್ಕಿತು. ನಿಮ್ಮಲ್ಲಿ ಬಹುತೇಕರಿಗೆ ಇದರ ಬಗ್ಗೆ ಸುಳಿವಿದ್ದಿರಬಹುದು. ಆದರೂ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣಾ ಅಂತ ನಾನು ಇಲ್ಲಿ ಆ ಕೊಂಡಿಯನ್ನ ಹಾಕುತ್ತಿದ್ದೇನೆ. ಇದನ್ನು ಉಪಯೋಗಿಸಲು ನಿಮ್ಮ ಗಣಕಯಂತ್ರದಲ್ಲಿ ಬರಹ ತಂತ್ರಾಂಶ ಇರಲೇಬೇಕೆಂದೇನಿಲ್ಲ.

http://www.yanthram.com/kn/type/

ಸಾಧ್ಯವಾದಷ್ಟೂ ಕನ್ನಡದಲ್ಲಿ ಮಾತನಾಡೋಣ....

ಇಂತಿ ನಿಮ್ಮ ಸ್ನೇಹಿತ,
ಪ್ರಶಾಂತ ಜಿ ಉರಾಳ

Wednesday, July 9, 2008

ಮುಂದೇನಾಗಬಹುದು ???

ಉಸ್ಸಪ್ಪಾಪ್ಪಾಪ್ಪಾ !!!!


ಎಷ್ಟು ಕೆಲಸ ಇತ್ತು ಗೊತ್ತಾ, ಅದರ ಮಧ್ಯ Customer calls ಬೇರೆ !!!


ಯಾಕೋ ಈ ನಡುವೆ ನನ್ಗೆ ಸರಿಯಾಗಿ ಟೈಮ್ ಸಿಕ್ತಾನೇ ಇಲ್ಲ. ಆ ತೊಂದರೆ ಇಂದ ನನ್ನ friends ನ meetಕೂಡಾ ಮಾಡೋಕೆ ಅಗ್ತಾ ಇಲ್ಲ. ಹೀಗೇ ಯೋಚನೆ ಮಾಡ್ತಾ ಇರೋವಾಗ ನನ್ಗನ್ನಿಸ್ತು... ನಾಳೆದಿನ ನಮ್ಗೇನಾದ್ರೂ ಹೆಚ್ಚು ಕಮ್ಮಿ ಆಗಿ ನಾವು ಪರಲೋಕಕ್ಕೆ ಪ್ರಯಾಣ ಬೆಳೆಸಿದ್ರೆ ನಮ್ಮ ಬಗ್ಗೆ ನಮ್ಮ ಗೆಳೆಯರು ಏನಂತ ಮಾತಾಡ್ಕೋಬಹುದು ??? ಕೆಲವರಿಗೆ ಅಯ್ಯೋ ಪಾಪಾ ಅಂತ ಅನ್ನಿಸ್ಬಹುದು, ಮತ್ತೆ ಕೆಲವರ ಓಹೋ ಹೌದಾ ??? ಹೇಗಾಯ್ತಂತೆ ???? ಯಾವಾಗಾ ???? ಅಂತ ರಾಗ ತೆಗೆದು ತಮಗಿಲ್ಲದ ಕಾಳಜಿ ತೋರಿಸಬಹುದು, ಮತ್ತೆ ಕೆಲವರಿಗೆ ನಮ್ಮ ಉಳಿವು, ಅಳಿವಿನ ಸುಳಿವೇ ಇಲ್ಲದೇ ಹೋಗಬಹುದು... ಸುಮಾರು ದಿನಗಳ ನಂತರ ನನ್ನ ಮೊಬೈಲಿನಲ್ಲಿ Store ಆಗಿರುವ ಅವರ ನಂಬರಿನಿಂದ call ಬಂದು ಮೊಬೈಲ್ ರಿಂಗಣಿಸಬಹುದು, ಆನಂತರ ಆ ಕಡೆ ಇರುವ ವ್ಯಕ್ತಿ, ಛೇ !!! ನಂಗೆ ವಿಷ್ಯ ಗೊತ್ತೇ ಇರ್ಲಿಲ್ಲ.... ಅಂತ ಅನ್ನ ಬಹುದು. ಮತ್ತೆ ಕೆಲವರು ನಿಜವಾಗಿಯೂ ದುಃಖ ಪಡಬಹುದು...


ಇನ್ನು ನಮ್ಮ ಕುಟುಂಬದವರಲ್ಲಿ ದುಃಖ ಮಡುಗಟ್ಟಿರಬಹುದು.... ತದ ನಂತರ ನೆಂಟರಿಷ್ಟರಲ್ಲಿ ಕೆಲವರು ಮೊಸಳೇ ಕಣ್ಣೀರು ಇಡುತ್ತಾ Phone ಮಾಡಿ ದುಃಖದಲ್ಲಿರಿವವರನ್ನು ಮತ್ತಷ್ಟು ಅಳುವಂತೆ ಮಾಡಿ ತಾವೂ ದುಃಖಿತರಾಗಿದ್ದೀವಿ ಅಂತ ತೋರ್ಪಡಿಸಬಹುದು... ಕೆಲವರಿಗೆ ನೊಂದವರನ್ನು ಸಮಾಧಾನ ಪಡಿಸಲು ಬಾರದಿದ್ದರೂ, ಮತ್ತಷ್ಟು ಅಳಿಸಿ ಮರೆಯಲೆತ್ನಿಸುತ್ತಿದ್ದ ನೋವನ್ನ ಮತ್ತೆ ಕೆದಕಿ ತಿಳಿಗೊಳ್ಳುತ್ತಿರುವ ಮನವನ್ನ ಕದಡಿ ರಾಡಿ ಎಬ್ಬಿಸಿ ಹೋಗುತ್ತಾರೆ.


ನಮ್ಮ ಬ್ಯಾಂಕಿನ ಅಕೌಂಟುಗಳಲ್ಲಿ ಕೆಲವುದರ ಬಗ್ಗೆ ಮನೆಯವರಿಗೆ ತಿಳಿದಿದ್ದು ಸುಖಾಂತ್ಯ ಪಡೆಯಬಹುದು, ಮತ್ತೆ ಕೆಲವು ಸದ್ದಿಲ್ಲದೇ ಸತ್ತುಹೋಗಬಹುದು... ನಾವು ಉಪಯೋಗಿಸುತ್ತಿದ್ದ ವಸ್ತುಗಳು ಪರರ ಪಾಲಾಗಬಹುದು... ನಮ್ಮ ಬ್ಲಾಗು, ಈ-ಮೈಲ್ ಐಡಿ ಗಳು, ಅದರಲ್ಲಿ ಇರಬಹುದಾದ ವಿಷಯಗಳು ಎಲ್ಲಾ ಯಾರಕೈಗೂ ಸಿಗದೇ ಮುಂದೊಂದುದಿನ ಸರ್ವರ್ ಇಂದ ತೆಗೆಯಲ್ಪಡುತ್ತದೆ. ಇದೆಲ್ಲಾ ಆಗುವುದಂತೂ ಸತ್ಯ. ಏನಾದರೇನು ? ಅದನ್ನೆಲ್ಲಾ ನೋಡುವುದಕ್ಕೆ ನಾವೇ ಅಲ್ಲಿ ಇರುವುದಿಲ್ಲ ಅಲ್ವಾ ??? ಸುಮ್ಮನೇ ಯೋಚನೆ ಏತಕ್ಕೆ ಮಾಡಿ ತಲೆ ಕೆಡಿಸಿ ಇವತ್ತಿನ ದಿನವನ್ನ ಯಾಕೆ ಹಾಳುಮಾಡಿಕೊಳ್ಳುವುದು....
ಅಲ್ವಾ !!!


ಮತ್ತೆ ನೀವು ಈಗ ಕೇಳ್ತೀರಿ, ಯಾಕೆ ಅಷ್ಟೆಲ್ಲಾ ಹೇಳಿದ್ದು, ಬರೆದಿದ್ದು ಅಂತ.... ಸುಮ್ನೆ ಯಾಕೋ ತಲೇಲಿ ಯೋಚ್ನೆ ಬಂತು, ನಿಮ್ಮಲ್ಲಿ ಬೇರೆ ಯಾರಿಗಾದ್ರೂ ಇದೇ ಯೋಚ್ನೆ ಬಂದಿರ್ಬಹುದು, ಆದ್ರೆ ಅದ್ನ ಹೇಳಿರೋದಿಲ್ಲ ಅಷ್ಟೆ.
ಓಟ್ಟಿನಲ್ಲಿ ಎಲ್ಲಾ ಒಳ್ಳೇದಾಗ್ಲಿ ಅಂತ ಮಾತ್ರ ಹಾರೈಸಬಹುದು....

Tuesday, July 8, 2008

ದಿನಚರಿಯ ಒಂದು ದಿನ...

ಒಮ್ಮೊಮ್ಮೆ ಹೀಗೂ ಆಗುವುದು, ಎಲ್ಲಿಯೋ ಮನಸು ಜಾರುವುದು... ಹೌದಲ್ವಾ ? ಕೆಲವೊಮ್ಮೆ ನಮಗರಿವಿಲ್ಲದೇ ನಾವು ಎಲ್ಲೋ ಯೋಚನೆಗಳ ಕಡಲಲ್ಲಿ ತೇಲಿ ಹೋಗಿರ್ತೀವಿ, ಯೋಚನೆಗಳಲ್ಲಿ ಮಾಡುವ, ಮಾಡಬೇಕಿರುವ ಕೆಲಸಗಳನ್ನೆಲ್ಲಾ ಮರೆತಿರುತ್ತೀವಿ. ಈ ರೀತಿ ಆಗಲಿಕ್ಕೆ ಕಾರಣ ಏನು ? ನನಗಂತೂ ಗೊತ್ತಿಲ್ಲ... ನಿಮ್ಗೆನಾದ್ರೂ... ????

ಒಮ್ಮೊಮ್ಮೆ ಯಾವುದಾದರೂ ಪುಟ್ಟ ಮಕ್ಕಳನ್ನು ನೋಡಿದರೆ ನಾವೂ ಮಕ್ಕಳಾಗಿಬಿಡಬಾರದಾ !!! ಈ ಜಂಜಾಟಕ್ಕೆ ಸ್ವಲ್ಪನಾದ್ರೂ ಬಿಡುವು ಸಿಕ್ಕಬಾರದಾ ಅಂತ ಅನ್ಸತ್ತೆ. ದಿನಾ ಬೆಳಿಗ್ಗೆ ಎದ್ದು, ಗಡಿಬಿಡಿಯಲ್ಲಿ ಆಫೀಸಿಗೆ ಬಂದು ಬಾಸ್ ಎಂಬ ಭಾವನೆ ಇಲ್ಲದ ಪ್ರಾಣಿಯ ಕಿರಿ ಕಿರಿಯನ್ನ ಸಹಿಸಿಕೊಂಡು ಮನಸ್ಸಿಲ್ಲದ ಮನಸ್ಸಿಂದ ಆತನಿಗೆ ಒಂದು ಸ್ಮೈಲ್ ಕೊಟ್ಟು ಮತ್ತೆ ಕಂಪ್ಯೂಟರಿನ ಮುಂದೆ ಕೀಬೋರ್ಡನ್ನು ಕುಟ್ಟುತ್ತಾ ಕೆಲವೊಮ್ಮೆ ಊಟವನ್ನೂ ಮರೆಯುತ್ತಾ ಕೆಲಸ ಮಾಡಿ ಸಂಜೆಯ ಹೊತ್ತಿಗೆ ಅಲ್ಲಿಂದ ಯಾವಾಗ ಕಾಲು ಕೀಳುತ್ತೇವೋ ಅನ್ನುವ ರೀತಿ ಸುಸ್ತಾಗಿ ಮನೆಗೆ ಹೋಗುವಷ್ಟರಲ್ಲಿ ಸಾಕಪ್ಪಾ !!! ಸಾಕು !!!!

ಅಂದು ನನಗೂ ಇದೇ ರೀತಿ ಆಯಿತು, ಆರೋಗ್ಯ ಹದಗೆಟ್ಟಿದ್ದ ಕಾರಣ ದೇಹಕ್ಕೆ ದಣಿವಾಗಿತ್ತು. ರಾತ್ರಿ ಕೆಮ್ಮು ನಿದ್ದೆ ಮಾಡಲು ಅನುವುಮಾಡಿ ಕೊಟ್ಟಿರಲಿಲ್ಲ. ಬೆಳಿಗ್ಗೆ ೫.೩೦ಕ್ಕೆ ನನ್ನ ಮೊಬೈಲಿನ ಅಲಾರಾಂ ನನ್ನ ಬೈದು ಬೈದು ಎಬ್ಬಿಸೋದಕ್ಕೆ ಪ್ರಯತ್ನಿಸುತ್ತಿತ್ತು. ಅದರ ಮೇಲೊಂದು ಮೊಟಕಿ ಮತ್ತೆ ಐದು ನಿಮಿಷ, ಮತ್ತೆ ಐದು ನಿಮಿಷ ಅಂತಾ ೬.೩೦ ಕ್ಕೆ ಎದ್ದೆ, ಎದ್ದು ನಿದ್ದೆಗಣ್ಣಿಂದ ಗಡಿಯಾರ ನೋಡಿದಾಕ್ಷಣ ಎದೆ ಧಸಕ್ ಅಂತು, ಇನ್ನೂ ಸ್ನಾನ ಮಾಡಿ ತಿಂಡಿ ಮಾಡ್ಕೊಂಡು ಆಫೀಸಿಗೆ ಹೋಗೋದು ಯಾವಾಗ ??? ಮೀಟಿಂಗ್ ಬೇರೆ ಇದೆ, ಇವತ್ತು ನನ್ನ ಕತೆ ಅಷ್ಟೇ !!! ಅಂದುಕೊಂಡು ಈ ದಿನ ಎಲ್ಲಾ ಸಸೂತ್ರವಾಗಿ ಸಾಗಲಿ ದೇವರೇ ಅಂತ ವಿಘ್ನನಿವಾರಕನಲ್ಲಿ ಬೇಡಿಕೊಂಡು ಗಡಿಬಿಡಿಯಲ್ಲಿ ರೆಡಿಯಾಗಿ ಹೊರಟೆ. ಷೂಗಳಿಗೆ ಪಾಲಿಶ್ ಮಾಡಿಲ್ಲ, ಕರ್ಮಕಾಂಡವೇ.... ಸರಿ ಇನ್ನು ಅದಕ್ಕೆ ೫ ನಿಮಿಷ ತಡವಾಯ್ತು, ಅಲ್ಲಿಂದ ಗಾಡಿ ಹತ್ತಿದ ನಂತರವೇ ನೆನಪಿಗೆ ಬಂದದ್ದು, ಗಾಡಿಯಲ್ಲಿ ಪೆಟ್ರೋಲ್ ಕೇವಲ ಮುಂದಿನ ಬಂಕ್ ತನಕವೇ ನನ್ನ ಗಾಡಿಯನ್ನ ಮುನ್ನಡೆಸಬಲ್ಲದು ಅಂತ, ವಿಧಿ ಇಲ್ಲ.... ಪೆಟ್ರೋಲ್ ಬಂಕ್ ಕಡೆಗೆ ಗಾಡಿಯನ್ನ ತಿರುಗಿಸಿ ಅಲ್ಲಿದ್ದ ಸಾಲಿನಲ್ಲಿ ನಾನೂ ನಿಂತು ಮತ್ತೆ ೧೦ ನಿಮಿಷ ತಡ ಮಾಡಿಕೊಂಡು ಅಲ್ಲಿಂದ ಟ್ರ್‍ಆಫಿಕ್ ನೊಡನೆ ಹೋರಾಡುತ್ತಾ ಅಂತೂ ಇಂತೂ ಆಫೀಸಿಗೆ ಬರುವ ಹೊತ್ತಿಗೆ ನನ್ನ ಮೊಬೈಲಿನಲ್ಲಿ ೩ ಮಿಸ್ಸ್ಡ್ ಕಾಲ್ಗಳು !!!! ಇನ್ಯಾರದ್ದು ??? ನಮ್ಮ ರೇಷ್ಮ (ನಮ್ಮ ಆಫೀಸಿನ efficient worker!!!) ನನಗೆ ಮತ್ತೊಮ್ಮೆ ಕಾಲ್ ಮಾಡಿ "ಪ್ರಶಾಂತ್, ಎಲ್ಲಿದ್ದೀರ ? ಎಲ್ಲಾ ಮೀಟಿಂಗಿಗೆ ಬಂದಿದ್ದಾರೆ.... ನೀವೊಬ್ಬರೇ ತಡ" ಅಂತ ಹೇಳಿದಳು. ಗಡಿಬಿಡಿಯಲ್ಲಿ ತಲೆಯ ಕೂದಲನ್ನ ಸರಿಪಡಿಸಿಕೊಳ್ಳುತ್ತಾ Conference room ಕಡೆಗೆ ಹೆಜ್ಜೆ ಹಾಕಿದೆ, ನನ್ನ ಬಾಸ್ ಒಮ್ಮೆ ನನ್ನಕಡೆ ತನ್ನ ಕೆಂಗಣ್ಣು ಬೀರಿ ನಂತರ ತನ್ನ ಕೆಲಸದಲ್ಲಿ ಮಗ್ನರಾದರು. ಅದರ ಅರ್ಥ ಮೀಟಿಂಗ್ ಮುಗಿದ ಮೇಲೆ ನನಗೆ ಗ್ರಹಚಾರ ಕಾದಿದೆ ಅಂತ.

As usual ಮೀಟಿಂಗಿನಲ್ಲಿ ಅದೇ ಹಳೇ ಭರವಸೆಗಳು... ಅಂತೂ ಇಂತೂ ಮೀಟಿಂಗ್ ಮುಗೀತು, ನಂತರ ನನಗೆ ಒಂದು Customer call ಇದ್ದದ್ದರಿಂದ ನಾನು ಹೊರಡಬೇಕಾಯಿತು. ಪಯಣ ಬಹಳ ದೂರ ಆದ್ದರಿಂದ ಸ್ವಲ್ಪ ಸಮಾಧಾನ ಪಡಿಯೋದಕ್ಕೆ ರೇಡಿಯೋ ಕೇಳುವ ಮನಸ್ಸಾಯಿತು. ರೇಡಿಯೋ ಹಾಕಿದಾಗ ಅದರಲ್ಲಿ ಬರ್ತಾ ಇದ್ದ ಹಾಡು "ಜಾನೆ ತು ಮೆರ ಕ್ಯಾ ಹೈ, ಜಾನೆ ತು ಮೆರ ಕ್ಯ ಥಾ...." ಅನ್ನೋ ಹೊಸಾ ಹಾಡು. ಈ ಹಾಡು ಬರಿಯೋವ್ರಿಗೆ ಅದನ್ನ ಕೇಳೋವ್ರ ಮನಸ್ಸು ಹೇಗೆ ಅರ್ಥ ಆಗತ್ತೋ !!!! ನಿಜ ಅಲ್ವಾ ? ಒಮ್ಮೊಮ್ಮೆ ನಮ್ಗೂ ಹಾಗೇ ಅನ್ಸತ್ತೆ. ಯಾರಾದರೂ ನಮಗೆ ಹತ್ತಿರ ಅನ್ಸಿದ್ರೆ ಅವ್ರಜೊತೆ ಏನೇನೋ ಹೇಳೋಣ ಅಂತ ಅನ್ನಿಸ್ಬಹುದು, ಆದ್ರೆ ಅವ್ರು ಏನಾದ್ರೂ ಅಂದ್ಕೊಂಡ್ಬಿಟ್ರೇ ??? ಅನ್ನೋ ಭಾವನೆ. ಹಾಗಾಗಿ ಬಹಳಷ್ಟು ಮಾತುಗಳು ಮನಸ್ಸಲ್ಲೇ ಮೂಡಿ ಮನಸ್ಸಲ್ಲೇ ಮುದುಡಿ ಹೋಗ್ತಾವೆ.

ನಾನು ಕಾಲ್ ಮುಗಿಸಿ ಸಂಜೆ ಮನೆಗೆ ಬಂದಾಗ ನನ್ನ ಹೂವಿನ ಗಿಡ ಒಂದು ಚೆಲುವಾದ ಹೂವನ್ನ ಅರಳಿಸಿ ನಗು ನಗುತ್ತಾ ತನ್ನ ಕಂಪನ್ನ ಬೀರಿ ನನ್ನ ಸ್ವಾಗತಿಸ್ತಾ ಇತ್ತು. ಅದನ್ನ ನೋಡಿ ನನ್ನಲ್ಲೇ ಏನೋ ಒಂದು ರೀತಿಯ ಸ್ಪೂರ್ತಿ ಮೂಡಿಬಂತು. ಮನೆಯ ಒಳಗೆ ಹೋಗಿ ಮನೆಯನ್ನ ಗುಡಿಸಿ, ಬಟ್ಟೆಗಳನ್ನ ಮಡಿಸಿಟ್ಟು ಗಿಡಗಳಿಗೆ ನೀರು ಹಾಕಿ ಅಮ್ಮನೊಡನೆ ಮಾತನಾಡಲು ಫೋನ್ ಮಾಡಿದೆ...

ಅನಿರೀಕ್ಷಿತ ಅತಿಥಿ...




ಕಳೆದ ತಿಂಗಳು ಒಂದು ಶುಕ್ರವಾರದಂದು ನಡೆದ ಘಟನೆ ಇದು. ವಾರಾಂತ್ಯವಾದ್ದರಿಂದ ನನ್ನ ಆಫೀಸಿನಿಂದ ಸ್ವಲ್ಪ ಬೇಗ ಹೊರಟಿದ್ದೆ. ಹೇಗಿದ್ದರೂ ಬೇಗ ಹೊರಟಿದ್ದರಿಂದ ಜಯನಗರದ ಜನತಾಬಜಾರ್‍ ನಿಂದ ಚಪಾತಿ ಮಾಡುವ ಸಲುವಾಗಿ ಹಿಟ್ಟು ಮತ್ತು ಸ್ವಲ್ಪ ತರಕಾರಿಯನ್ನ ತಂದು ಮನೆಗೆ ಬಂದ ನನಗೆ ಮನೆಯ ಗೇಟಿನ ಬಳಿ ಅನಿರೀಕ್ಷಿತವಾಗಿ ಯಾವುದೋ ಪ್ರಾಣಿ ಮಲಗಿರುವಂತೆ ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಒಂದು ಪುಟಾಣಿ ಅಳಿಲಿನ ಮರಿ !!!

ಪಾಪ ಅದು ಅಲ್ಲಿ ಏತಕ್ಕಾಗಿ ಬಂದು ಬಿದ್ದಿತ್ತೋ ? ಯಾರಾದರೂ ಕಿಡಿಗೇಡಿಗಳು ಅದನ್ನ ಹಿಡಿಯಲು ಪ್ರಯತ್ನಿಸಿ ಹಿಡಿಯಲಾಗದೇ ಕಲ್ಲು ತೂರಿ ಅದನ್ನು ಬಿಟ್ಟು ಹೋಗಿದ್ದರೋ ನನಗೆ ಅರ್ಥವಾಗಲಿಲ್ಲ, ಪಾಪ, ಅದರ ಬಾಯಿಯಲ್ಲಿ ಕೆಳಗಿನ ಒಂದು ಹಲ್ಲು ಮುರಿದಿತ್ತು, ಬಾಯಿಯಿಂದ ರಕ್ತ ಬಂದಿತ್ತು. ನಿತ್ರಾಣಗೊಂಡಿದ್ದ ಅದನ್ನ ತಕ್ಷಣವೇ ಕೈನಲ್ಲಿ ಎತ್ತಿಕೊಂಡು ಮನೆಗೆ ಓಡಿಬಂದು ಅದಕ್ಕೆ ಸ್ವಲ್ಪ ನೀರು ಕುಡಿಸಿದೆ... ಉಸಿರಾಡುವಲ್ಲಿ ಕಷ್ಟ ಪಡುತ್ತಿದ್ದ ಅದನ್ನು ನಿಧಾನವಾಗಿ ಮನೆಯ ಬಕೇಟಿನೊಳಗೆ ತೆಂಗಿನನಾರು ಮತ್ತೆ ಹಳೇ ಬನಿಯನ್ ಅನ್ನು ಇಟ್ಟು ಅದರೊಳಗೆ ಜೋಪಾನವಾಗಿ ಅಳಿಲಿನ ಮರಿಯನ್ನ ಇಟ್ಟು ಅಂಗಡಿಗೆ ಹಾಲು ತರಲು ಓಡಿದೆ. ಹಲ್ಲು ಇಲ್ಲದ ಕಾರಣ ಅದಕ್ಕೆ ಏನನ್ನೂ ತಿನ್ನಲು ಆಗುವುದಿಲ್ಲವೆಂದು ತಿಳಿದಿತ್ತು. ಹಾಲು ತಂದು ಅದಕ್ಕೆ ಸ್ವಲ್ಪ ಬಿಸ್ಕೇಟನ್ನು ನುರಿದು ಆ ಬಿಸ್ಕೇಟಿನ ಹಾಲನ್ನು ಸ್ವಲ್ಪ ಸ್ವಲ್ಪವಾಗೇ ಅದರ ಬಾಯಿಗೆ ಹಾಕಿದೆ. ಕೇವಲ ಬಾಯಿಯ ಮೂಲಕ ಉಸಿರಾಡುತ್ತಿದ್ದ ಆ ಮರಿ ವಿಧಿಯಿಲ್ಲದೇ ನಾನು ಹಾಕಿದ ಹಾಲನ್ನು ಕುಡಿಯುತ್ತಲಿತ್ತು. ನಾನು ಬಲವಂತದಿಂದಾದರೂ ಸ್ವಲ್ಪ ಕುಡಿಸಲೇಬೇಕು, ಶಕ್ತಿಯಿಲ್ಲದಿದ್ದರೆ ಅದು ಮತ್ತೆ ಮೊದಲಿನಂತೆ ಆಗುವುದಾದರೂ ಹೇಗೆ ಅಂತ ಪ್ರಯತ್ನ ಪಟ್ಟು ಸ್ವಲ್ಪ ಕುಡಿಸಿ ನಂತರ ಅದನ್ನು ಆ ಬಕೇಟಿನಲ್ಲಿ ಮಲಗಿಸಿದೆ.

ಪಾಪ, ಅದರಲ್ಲಿ ಶಕ್ತಿ ಅಡಗಿಹೋಗಿತ್ತು. ಪೂರ್ಣವಾಗಿ ನಿತ್ರಾಣಗೊಂಡಿದ್ದ ಅದು ನನಗೆ ಮುಗ್ದ ಮಗುವಿನಂತೆ, ಕೈಲಾಗದ ಹಸುಗೂಸಿನಂತೆ ಕಾಣಿಸಿತು. ನಾನು ಹೇಳಿದ ಮಾತನ್ನು ಕೇಳುತ್ತಿದೆಯೇನೋ ಅನ್ನುವಹಾಗೆ ಹಾಲು ಕುಡಿದು ತನ್ನ ಬಕೇಟಿನಲ್ಲಿ ಮಲಗಿತ್ತು. ಅದಕ್ಕೆ ಹೊರಗಿನಿಂದ ಏನೂ ಪೆಟ್ಟಾದಂತೆ ಕಾಣದಿದ್ದರೂ ಒಳಗಿನಿಂದ ಪೆಟ್ಟಾದದ್ದು ಅದರ ನಿತ್ರಾಣಕ್ಕೆ ಕಾರಣವಾಗಿತ್ತು. ಸಂಜೆಯಿಂದಾ ರಾತ್ರಿಯ ವರೆವಿಗೂ ಅದನ್ನು ಗಮನಿಸುತ್ತಲೇ ಇದ್ದೆ. ರಾತ್ರಿಯ ಹೊತ್ತಿಗೆ ಅದರಲ್ಲಿ ಸ್ವಲ್ಪ ಚೈತನ್ಯ ಬಂದು ಆ ಬಕೇಟಿನ ಒಳಗಡೆ ಓಡಾಡುತ್ತಲಿತ್ತು. ಅಬ್ಬಾ !!! ಸಧ್ಯ ಅಪಾಯದಿಂದ ಪಾರಾಯಿತಲ್ಲ !!! ಅಂದುಕೊಂಡು ಸಂತಸದಿಂದ ಅದನ್ನು ಬಕೇಟಿನಿಂದ ಹೊರಗೆ ತೆಗೆದು ಹಾಲು ಕುಡಿಸಿದೆ. ಮನೆಯೆಲ್ಲಾ ತಿರುಗಾಡಿದ ಅದು ನನ್ನ ಕೈಮೇಲೆಲ್ಲಾ ಹತ್ತಿ ನಂತರ ಕೈಲಾಗದ ಮಗುವಿನಂತೆ ಬಂದು ನನ್ನ ತೊಡೆಯನ್ನೇರಿ ಅಲ್ಲೇ ತನ್ನ ಸುಂದರ ಕಣ್ಣುಗಳಿಂದ ಪಿಳಿ ಪಿಳಿ ಎಂದು ನನ್ನೇ ನೋಡುತ್ತಾ ನನ್ನಲ್ಲಿ ಏನೋ ಹೇಳುತ್ತಿದೆಯೇನೋ ಅನ್ನಿಸುತ್ತಿತ್ತು. ಮೊದಲೇ ಪ್ರಾಣಿ ಪ್ರಿಯನಾದ ನಾನು ಅದನ್ನೆತ್ತಿಕೊಂಡು ಮುದ್ದಾಡಿ ಮತ್ತೆ ರಾತ್ರಿಯಾದ್ದರಿಂದ ಅದರ ಬಕೇಟಿನಲ್ಲಿ ಮಲಗಿಸಿ ಚಳಿಯಾಗದಂತೆ ಅದಕ್ಕೆ ಬನಿಯನ್ ಬಟ್ಟೆಯನ್ನು ಹೊದ್ದಿಸಿ ಮಲಗಿಸಿದೆ. ಹಾಲು ಕುಡಿದು ಹೊಟ್ಟೇ ತುಂಬಿಸಿಕೊಂಡಿದ್ದ ಅದು ನಿರಮ್ಮಳವಾಗಿ ನಿದ್ರೆ ಮಾಡುತ್ತಿತ್ತು. ಅದನ್ನು ನೋಡಿ ನಾನು ನಿದ್ರೆ ಮಾಡಿದೆ. ಬೆಳಗ್ಗಿನತನಕ ನನಗೆ ಅದರದ್ದೇ ಯೋಚನೆ, ಮುಂಜಾವದಲ್ಲಿ ಎದ್ದು ಅದು ಏನುಮಾಡುತ್ತಿದೆ ಎಂದು ನೋಡಿ, ಇನ್ನೂ ನಿದ್ರೆ ಮಾಡುತ್ತಿದ್ದರಿಂದ ನಾನು ನನ್ನ ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ಮಾಡಿ ಬಂದು ನೋಡುವ ಹೊತ್ತಿಗೆ ಅದು ಎದ್ದು ಅತ್ತಿಂದಿತ್ತ ಓಡಾಡುತ್ತಿತ್ತು. ಅದಕ್ಕೆ ಹಾಲು ಕುಡಿಸಿ ಎಂದಿನಂತೆ ನನ್ನ ಕೆಲಸಕ್ಕೆ ಹೊರಟೆ.

ಮಧ್ಯಾನ್ನ ಬೇಗ ಮನೆಗೆ ಬಂದು ಅದು ಏನುಮಾಡುತ್ತಿದೆ ಎಂದು ನೋಡುವ ತವಕದಿಂದಲೇ ಹೊರಟೆ. ಹಾಗೆಯೇ ಅಕಸ್ಮಾತಾಗಿ ಅದಕ್ಕೆ ಹೊಟ್ಟೆ ಹಸಿದರೆ ಎಂದು ಒಂದು ಬಿಸ್ಕೇಟನ್ನೂ ಆ ಬಕೇಟಿನಲ್ಲಿ ಇಟ್ಟಿದ್ದೆ. ಮಧ್ಯಾನ್ನ ಮನೆಗೆ ಬಂದಾಕ್ಷಣ ಅದಕ್ಕೆ ಹಾಲು ಕುಡಿಸಿ ಸಾಧ್ಯವಾದರೆ ಸ್ವಲ್ಪ ಅನ್ನ, ಬಿಸ್ಕೇಟನ್ನು ನೀಡಬೇಕೆಂದು ಮನದಲ್ಲೇ ನೆನೆದು ಬಂದು ಅದನ್ನು ನೋಡಿದೆ, ಅದು ಸ್ವಲ್ಪ ನಿತ್ರಾಣಗೊಂಡಂತೆ ಕಂಡದ್ದರಿಂದ ತಕ್ಷಣ ಅದಕ್ಕೆ ಸ್ವಲ್ಪ ಹಾಲು ಕುಡಿಸಿ ಮಲಗಲು ಬಿಟ್ಟೆ. ಮಧ್ಯಾನ್ನದ ಮಂಪರು ಹತ್ತಿದ್ದರಿಂದ ಆ ಬಕೇಟಿನ ಪಕ್ಕದಲ್ಲೇ ನಾನು ನಿದ್ರೆಗೆ ಶರಣಾದೆ. ಒಂದು ೩೦ ನಿಮಿಷಗಳ ತರುವಾಯ ಎಚ್ಚರವಾಗಿ ಅದನ್ನು ನೋಡಿದರೆ ಅದು ಉಸಿರಾಡುತ್ತಿರುವಂತೆ ಕಾಣಲಿಲ್ಲ, ಅಯ್ಯೋ ದೇವರೇ ಎಂದುಕೊಂಡು ಅದನ್ನು ಎತ್ತಿಕೊಳ್ಳಲು ಕೈಚಾಚಿದರೆ ಅದರ ದೇಹ ಪೂರ್ಣವಾಗಿ ಮರುಗಟ್ಟಿತ್ತು, ಅದರ ಹೃದಯಬಡಿತ ನಿಂತುಹೋಗಿತ್ತು, ಅದು ಆತ್ಮವಿಲ್ಲದ ಶರೀರವಾಗಿತ್ತು. ಕೇವಲ ಒಂದು ದಿನದ ಅತಿಥಿಯಾಗಿ ಬಂದ ಅದು ನನ್ನ ಮನದಲ್ಲಿ ಆಳವಾದ ಹೆಜ್ಜೆಯ ಗುರುತನ್ನ ಮೂಡಿಸಿ ಪರಲೋಕಕ್ಕೆ ಪಯಣ ಬೆಳೆಸಿತ್ತು. ಮುಂಗಾರುಮಳೆಯಲ್ಲಿನ ದೇವದಾಸ ಗಣೇಶನನ್ನು ಬಿಟ್ಟು ಹೋದಾಗ ಕೂಡಾ ನನ್ನ ಕಣ್ಣಿನಲ್ಲಿ ನೀರು ಬಂದಿತ್ತು, ಅದು ಕೇವಲ ಸಿನಿಮಾ ಆದರೂ ದುಃಖ ತಡಿಯಲಾಗಿರಲಿಲ್ಲ, ಅಂತದ್ದರಲ್ಲಿ ನನ್ನ ಜೊತೆಯಲ್ಲೇ, ನನ್ನ ಆರೈಕೆಯಲ್ಲೇ ಒಂದು ದಿನ ಕಳೆದ ಆ ಪುಟ್ಟ ಅಳಿಲಿನ ಮರಿಯೊಡನೆ ಬೆಳೆದ ಬಾಂಧವ್ಯ ನನ್ನ ಕಣ್ಣಂಚಿನಲ್ಲಿ ನೀರುಬರಿಸಿತ್ತು. ನೆನ್ನೆತಾನೆ ಜಿಗಿದು ಓಡಾಡಿಕೊಂಡಿದ್ದ ಅಳಿಲು ಇಂದು ಕೇವಲ ಒಂದು ಶವವಾಗಿತ್ತು. ಅದನ್ನು ಎಲ್ಲೆಲ್ಲೋ ಬಿಸಾಡಲು ಮನಸ್ಸು ಬರದೇ ನನ್ನಬಳಿ ಇದ್ದ ಒಂದು ಹೂವಿನ ಕುಂಡದಲ್ಲಿ ಅದನ್ನು ಮಣ್ಣು ಮಾಡಿ ಅದರ ನೆನಪಿಗೆ ಅದೇ ಕುಂಡದಲ್ಲಿ ಒಂದು ಗಿಡವನ್ನ ನೆಟ್ಟೆ.

ಇಂದು ಆ ಗಿಡದಲ್ಲಿ ಹೂ ಮೂಡಿದೆ, ಆ ಗಿಡದ ಬುಡದಲ್ಲಿ ಬಹುಷ: ಮಣ್ಣಲ್ಲಿ ಮಣ್ಣಾಗಿ ಆ ಪುಟ್ಟ ಅಳಿಲುಮರಿ ನಿಸರ್ಗದ ಮಡಿಲಲ್ಲಿ ಸೇರಿಹೋಗಿದೆ...