ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Thursday, April 22, 2010

ಚುಟುಕ - Weekend ಪ್ರೇಮಿ

ಅನುದಿನ ಮಟ ಮಟ ಮಧ್ಯಾನವಾದರೂ ಸರಿಯೇ
ಸೂರ್ಯನ ಕಾಟವಿದ್ದರೂ ಸರಿಯೇ
ದಟ್ಟ ಕಂಬಳಿಯನು ಮುಸುಕು ಹಾಕಿಕೊಂಡು ಮಲಗುವ ಈ ನನ್ನ ರೀತಿ...
ದುರಭ್ಯಾಸವಲ್ಲ HERO...

ಅದೇನಂದರೆ..
ಶನಿವಾರ ಭಾನುವಾರ ನೀವೆನ್ನ ಎಚ್ಚರಿಸುವ ಪರಿಯ ಮೋಡಿಯನನುಭವಿಸಿ
ಪ್ರತಿನಿತ್ಯವೂ WEEKEND ಎಂಬ ಹುಸಿ ಆಶ್ವಾಸನೆ ನೀಡಿ
ಕನವರಿಸಿ ಮಲಗುವ ಹಾಗೆ ಮಾಡುವ ನನ್ನ ಈ ಹುಚ್ಚು ಹೃದಯದ "WEEKEND ಪ್ರೀತಿ"!!!

Wednesday, April 21, 2010

ಮೊಟ್ಟ ಮೊದಲ ಕೇಕ್ ಕಟ್ಟಿಂಗ್

ಫೆಬ್ರವರಿ ೧೪ ೨೦೦೯

ಇವತ್ತಿನ ದಿನವನ್ನ ನಾನು ಮರಿಯೋದಕ್ಕೆ ಆಗೊದಿಲ್ಲ. ಇವತ್ತು ಪ್ರೇಮಿಗಳ ದಿನ ಅನ್ನೋ ಕಾರಣದಿಂದ ಅಲ್ಲ, ಇವತ್ತು ನನ್ನ ಜನ್ಮದಿನ... ನಾನು ನನ್ನ ಪ್ರತೀ ಜನ್ಮದಿನದಂದು ಯಾರೊಬ್ಬರೊಂದಿಗಾದರೂ ಇರ್ತಾ ಇದ್ದೆ. ಆದರೆ ಈ ಸಲ ನನ್ನ ಬಾಡಿಗೆ ಮನೆಯಲ್ಲಿ ನಾನು ಮತ್ತೆ ನನ್ನ ಎಫ್ ಎಂ ರೇಡಿಯೋ ಮಾತ್ರ ಇದ್ದದ್ದು. ಯಾಕೋ ಮನಸ್ಸಿಗೆ ಬೇಸರ ಆಗ್ತಾ ಇತ್ತು. ಕಳೆದವರ್ಷವಷ್ಟೇ ನನ್ನ ಅಪ್ಪನ್ನ ಕಳ್ಕೊಂಡಿದ್ದ ನಾನು ಈ ಬಾರೀನೂ ಅವರನ್ನ, ಮತ್ತೆ ಅಮ್ಮ, ಅಕ್ಕ, ಅಣ್ಣನ್ನ ಮಿಸ್ ಮಾಡ್ಕೋತಾ ಇದೀನಿ. ಅಪ್ಪ ಇದ್ದಾಗ ಮೈಸೂರಿನ ನಮ್ಮ ಮನೆಗೆ ಹೋಗಿ ಮನೆಯವರೆಲ್ಲರ ಜೊತೆ ಸ್ವಲ್ಪ ಹರಟೆ ಹೊಡೆದು ಬೇಕರಿ ತಿನಿಸುಗಳನ್ನ ತರಿಸಿಕೊಂಡು ಸಣ್ಣದಾಗಿ ಪಾರ್ಟಿ ಮಾಡೋದು, ಅದರಲ್ಲೇ ಖುಷಿ ಕಾಣೋದು, ಅಣ್ಣನ ತಲೆ ತಿಂದು ಯಾವುದಾದರೂ ಸಿನಿಮಾಕೆ ಹೋಗೋದು, ಸಂಜೆ ಪಾನೀಪೂರಿ ತಿನ್ನೋದು ಮನೆಗೆ ಬಂದು ಊಟ ಮಾಡಲ್ಲ ಅಂತ ಅಮ್ಮನಹತ್ತಿರ ಬೈಸ್ಕೊಳೋದು. :)

ಈ ಸಲ ಯಾರಿದ್ದಾರೆ... ಹಾಗೇ ಬೇಸರದಲ್ಲಿ ರಾತ್ರಿ ಕಳಿತಾ ಇದ್ದಾಗ ಟ್ರಿಣ್ ಟ್ರಿಣ್ ಅಂತ ನನ್ನ ಮೊಬೈಲ್ ಮೆಸ್ಸೇಜ್ ಬಂತು ಅಂತ ಹೇಳ್ತು. ಹುಟ್ಟುಹಬ್ಬನ್ನ ಆಫೀಸಿದ್ದಿದ್ದ್ರೆ ನನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಆಚರಿಸ್ತಾ ಇದ್ದೆ. ಆದ್ರೆ ಇವತ್ತು ರಜಾದಿನ ಬೇರೆ, ಹೇಳೀ ಕೇಳೀ ಎರಡನೇ ಶನಿವಾರ. ಹಾಗಾಗಿ ಮನೆಯಲ್ಲೇ ಇದ್ದ ನಾನು ಬೆಳಗಿನ ಯೋಗಾ ಕ್ಲಾಸಿಗೆ ಹೋಗುವ ಬಗ್ಗೆ ಯೋಚ್ನೆ ಮಾಡ್ತಾ ಮೆಸೇಜ್ ನೋಡಿದೆ. ಘಂಟೆ ಸರಿ ಸುಮಾರು ೪.೧೫ ಅನ್ಸತ್ತೆ, ನನ್ನ ಅಣ್ಣ ಮೆಸ್ಸೇಜ್ ಮಾಡಿದ್ದ. "ಇಷ್ಟು ಹೊತ್ತಿಗೆ ಬಹುಷಃ ಅಮ್ಮನಿಗೆ ಹೊಟ್ಟೇ ನೋವ್ತಾ ಇತ್ತು ಅಂತ ಕಾಣತ್ತೆ" ಅನ್ನೋ ಸಂದೇಶ ಇತ್ತು. ನಾನು ಏನು ಅಂತ ಯೋಚ್ನೆ ಮಾಡಿದ್ಮೇಲೆ ಗೊತ್ತಗಿದ್ದು... ಇದು ನಾನು ಹುಟ್ಟಿದಾಗ ಅಂದರೆ __ ವರ್ಷಗಳ ಹಿಂದಿನ ಮಾತನ್ನ ಅಣ್ಣ ಹೇಳ್ತಾ ಇದಾನೆ ಅಂತ. ಖುಷಿ ಆಯ್ತು :) ಮೆಸ್ಸೇಜ್ ಮುಂದುವರೆದಿತ್ತು: "ಅಪ್ಪ ನನ್ನ ಪಕ್ಕದಿಂದ ಎದ್ದು ಅಮ್ಮನ ಮಾತಾಡಿಸೊಕೆ ಹೋಗಿದ್ರು, ಅಮ್ಮ ಅಪ್ಪನಿಗೆ First shift ಇದ್ದದ್ದರಿಂದ ತಿಂಡಿಮಾಡಲು ಹಿಡಿದಿದ್ದ ಪಾತ್ರೆನ ದಾರಿಯಲ್ಲೇ ಇಟ್ಟು ಏದುಸಿರು ಬಿಡ್ತಾ ಇದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ ನಾನು ಮಲಗಿಬಿಟ್ಟೆ"

ಇಷ್ಟಕ್ಕೆ ನಾನು __ ವರ್ಷ ಹಿಂದಕ್ಕೆ ಹೋಗಿಬಿಟ್ಟಿದ್ದೆ :) ನನ್ನ ಅಣ್ಣನ ಬರಹ ಹಾಗಿತ್ತು. ಎಲ್ಲಾ ನನ್ನ ಕಣ್ಮುಂದೇ ನಡಿತಾಇದ್ಯೇನೋ ಅನ್ನೋ ಹಾಗೆ. ಅಷ್ಟರಲ್ಲಿ ಮತ್ತೊಮ್ಮೆ ಟ್ರಿಣ್ ಟ್ರಿಣ್.... ಯಾರದ್ದೋ ಶುಭಾಷಯ ಅಂತ ತಿಳ್ಕೊಂಡು ಮೆಸ್ಸೇಜ್ ನೋಡಿದೆ, ಮತ್ತೆ ನನ್ನ ಅಣ್ಣನದೇ ಮೆಸ್ಸೇಜ್. ಅಣ್ಣ __ ವರ್ಷಹಿಂದಿನ ಘಟನೆಯನ್ನ ನನ್ನ ಮುಂದೆ ಎಳೆ ಎಳೆಯಾಗಿ ಬಿಡಿಸಿಡ್ತಾ ಇದ್ದ. "ಸುಮಾರು ೭ ಘಂಟೆ ಇರಬಹುದು, ಬೀಗ ತೆಕ್ಕೊಂಡು ಅಪ್ಪ ಒಳಗೆ ಬಂದ್ರು. ಬಂದವರೇ ನನ್ನನ್ನ ಇವತ್ತು ನೀನು ಸ್ಕೂಲಿಗೆ ಹೋಗಬೇಡ ಅಂದ್ರು. ರಾತ್ರಿ ಕೂತ್ಕೊಂಡು ಬರೆದಿದ್ದ ಹೋಂವರ್ಕ್ ಮುದುಕೀ ಜಯ ಮಿಸ್ಸಿಗೆ ತೋರಿಸೋಕೆ ಆಗೊದಿಲ್ವಲ್ಲ ಅಂತ ಬೇಜಾರಾಯ್ತು" (ಅಣ್ಣನ ಸ್ಕೂಲಿನಲ್ಲಿ ೩ ಜನ ಜಯ ಅನ್ನೋ ಟೀಚರ್ ಇದ್ದಿದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡಹೆಸರು)

ನಾನು ಅಣ್ಣನ ಮೆಸೇಜ್ ಗಳನ್ನ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತಸಪಡ್ತಾ ಇದ್ದೆ. ಮುಂದೇನಾಯ್ತು... ಹೇಳು... ನನು ಅಣ್ಣನಿಗೆ ಪ್ರತ್ಯುತ್ತರ ಕೊಟ್ಟೆ. ಅಣ್ಣ ಮುಂದುವರಿಸಿದ್ದ: "ನನಗಿನ್ನೂ ನೆನಪಿದೆ ಆವತ್ತು ಗುಲಾಬಿ ಬಣ್ಣದ ಟೀ ಷರ್ಟ್ ಹಾಕ್ಕೊಂಡಿದ್ದೆ, ಆವತ್ತು ಫಸ್ಟ್ ಟೈಮ್ ಅಷ್ಟು ಬೆಳಿಗ್ಗೆ ೫ ನಿಮಿಷ ಬಾಗಿಲ ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದೆ, ಆವತ್ತು ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮನೆ ಯಜಮಾನನ ಹೆಂಡತಿ 'ನಿನಗೊಬ್ಬ ತಮ್ಮ ಹುಟ್ಟಿದಾನೆ ಕಣೋ' ಅಂದ್ರು. ಆಗ ನನ್ಗೆ ವಿವರಿಸಲಾಗದ ಅವ್ಯಕ್ತ ಭಾವನೆಗಳ ಕ್ಷಣ. ಏನೋ ತರೋದಿಕ್ಕೆ ಅಂತ ಅಪ್ಪ ಹೊರಗಡೆ ಹೋಗಿದ್ರು. ಅವರು ಬರೋ ದಾರೀನೇ ಕಾಯ್ತಾಇದ್ದೆ"

ಅಣ್ಣ ನನಗೆ ಈ ರೀತಿ ಮೆಸ್ಸೇಜಿನಲ್ಲಿ __ ವರ್ಷದ ಹಿಂದಿನ ಘಟನೆಯನ್ನ ಹೇಳ್ತಾಇದ್ರೆ ನಾನೇ ಅಲ್ಲಿದ್ದು ಎಲ್ಲದನ್ನ ನೋಡ್ತಾ ಇದೀನೇನೋ ಅನ್ನೋರೀತಿ ಖುಷಿ ಆಗ್ತಾ ಇತ್ತು. ಮತ್ತೊಮ್ಮೆ ಟ್ರಿನ್ ಟ್ರಿನ್ ಅಂತ ರಿಂಗಣಿಸಿದ ನನ್ನ ಮೊಬೈಲ್ ನನ್ನ ಹುಟ್ಟಿದ ಸಂಭ್ರಮದ ಕಥೆ ಹೇಳಲು ಬೆಳಕ ಚೆಲ್ಲಿ ನಕ್ಕಿತ್ತು. "ಅಪ್ಪ ನನ್ನನ್ನ ಸೈಕಲ್ಲಿನಲ್ಲಿ ಕೂರಿಸ್ಕೊಂಡು ಕಮಲಾರಾಮನ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಅಮ್ಮ ಮಲಗಿದ್ರು. ನನ್ನನ ನೋಡಿ ನಕ್ಕರು. ಆಯ ಒಳಗಿನಿಂದ ಬಟ್ಟೆಯಲ್ಲಿ ಸುತ್ತಿದ ನಿನ್ನನ್ನ ಸಂಭ್ರಮದಿಂದ ತಂದು ತೋರಿಸಿ ನಿನ್ನ ತಮ್ಮನ್ನ ನೋಡಪ್ಪಾ ಅಂದ್ರು". ನಿಜ ಅಲ್ವ... ಆ ಪುಟ್ಟ ಮನಸ್ಸಿನ ಕಂದನಿಗೆ ತನ್ನ ತಮ್ಮನನ್ನ ನೋಡಲು ಎಷ್ಟು ಕಾತರ ಇದ್ದಿರಬಹುದು, ಮನಸ್ಸಲ್ಲಿ ಏನೇನು ಭಾವನೆಗಳು ಮೂಡಿರಬಹುದು... ಆ ಭಾವನೆಗಳು ನನ್ನ ಅಣ್ಣನ ಮತ್ತೊಂದು ಮೆಸ್ಸೇಜಿನಲ್ಲಿ ಮುಂದುವರೆದಿತ್ತು. "ನಿನ್ನ ಕಣ್ಣುಮುಚ್ಚಿದ ಮುಖ, ಆ ಪುಟ್ಟ ಕೈ ಬೆರಳುಗಳು, ಮಧ್ಯ ಮಧ್ಯ ಹೊರಡುತ್ತಿದ್ದ ಉವ್ವ್ಯಾ ಉವ್ವ್ಯಾ ರಾಗ... ನನಗೆ ಅರಿವಿಲ್ಲದಂತೆ ನಿನ್ನನ್ನು ಮುಟ್ಟಲು ನಿನ್ನ ಕಡೆ ಹೆಜ್ಜೆ ಹಾಕಿದ್ದೆ. ಮುಟ್ಟಬಾರದು !!! ದೂರ ನಿಂತ್ಕೊ !! ಅಮ್ಮ ಅಲ್ಲಿಂದ್ಲೇ ಗದರಿದ್ರು"

ಇಲ್ಲಿಗೆ ನನ್ನ ಹುಟ್ಟಿದ ಘಳಿಗೆಯ ಸಂಭ್ರಮವನ್ನ ಅಣ್ಣ ನನ್ನ ಮುಂದಿಟ್ಟಿದ್ದ. ಇದಕ್ಕಿಂತಾ ಒಂದು ಒಳ್ಳೇ ಉಡುಗೊರೆ ಬೇರೆ ಏನೂ ಇರಲಿಕ್ಕಿಲ್ಲ. ಆ ಮೆಸ್ಸೇಜನ್ನ ಓದಿ ಸಂಭ್ರಮಿಸೋದ್ರಲ್ಲಿ ಅಣ್ಣ ನಿದ್ದೆ ಬಿಟ್ಟು ನನಗೆ ಮೆಸ್ಸೇಜ್ ಮಾಡ್ತಾಇರೋದು ನನ್ನ ಗಮನಕ್ಕೆ ಬಾರದೇ ಹೋಗಿತ್ತು. ಸಮಯ ಸುಮಾರು ೫.೧೫ ಆಗಿತ್ತು. ಅಣ್ಣ ತನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿದ್ದ, ರಾತ್ರಿಯೆಲ್ಲಾ ಅವನ ವಿಧ್ಯಾರ್ಥಿಗಳ ಉತ್ತರಪತ್ರಿಕೆಯನ್ನ ತಿದ್ದುತ್ತಾ ಅದರಮಧ್ಯೆ ನನಗೆ ಮೆಸ್ಸೇಜ್ ಮಾಡ್ತಾ ಇದ್ದ. ಆ ಮೆಸ್ಸೇಜ್ಗಳನ್ನ ಓದಿ ಒಳಗೊಳಗೇ ಸಂತಸಪಡುತ್ತಾ ನಾನೂ ಸ್ನಾನಮಾಡಿಕೊಂಡು ನನ್ನ ಯೋಗಾ ಕ್ಲಾಸಿಗೆ ಹೊರಟೆ. ದಿನಪೂರ್ತಿ ನನ್ನ ಕಣ್ ಮುಂದೆ ನನ್ನ ಹುಟ್ಟಿದ ದೃಷ್ಯಾವಳಿಗಳು ತೇಲಿ ಬರುತ್ತಿದ್ದವು.


ಯೋಗಾ ಕ್ಲಾಸಿನಿಂದ ಮನೆಗೆ ಬಂದೆ. ಅಣ್ಣನ ಮೆಸ್ಸೇಜ್ ಇತ್ತು. "ಬಿಡುವಿದ್ದಾಗ ಕಾಲ್ ಮಾಡು, ನಿನ್ನ ಬಗ್ಗೆ ಒಂದು ಕವನ ಬರ್ದಿದೀನಿ" ಒಂದು ಕ್ಷಣ ಕೂಡಾ ತಡ ಮಾಡದೇ ಅಣ್ಣನಿಗೆ ಕರೆನೀಡಿದೆ. ಅವನು ಬರೆದ ಕವನ ಓದಿದ. ನಾನು ಹುಟ್ಟಿದಾಗಿನಿಂದಾ ನಾನು ಬೆಳೆದುಬಂದ ದಾರಿಯ ಮೈಲಿಗಲ್ಲುಗಳನ್ನು ಗುರುತಿಸಿ ಒಂದು ಸೊಗಸಾದ ಕವನ ಬರೆದಿದ್ದ. ಆ ಕವನವನ್ನ ಕೇಳಿ ನನಗೆ ವ್ಯಕ್ತಪಡಿಸಲಾಗದ ಸಂತಸವಾಗ್ತಾ ಇತ್ತು. :) ನಿಂತಲ್ಲೇ ಮುಗುಳ್ನಕ್ಕೆ, ಅಣ್ಣನನ್ನನ್ನು ಎಷ್ಟು ಇಷ್ಟಾ ಪಡ್ತಾನೆ ಅನ್ನೋದನ್ನ ಕಂಡುಕೊಂಡೆ. ನನ್ನ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟಿದ್ದ ನನ್ನ ಮುದ್ದಿನ ಅಣ್ಣ. ಕಾಲ ಇವತ್ತಿನ ರೀತಿ ನಾಳೆ ಇರೋದಿಲ್ಲ, ಆದರೆ ನಾನು ಆ ಭಗವಂತನನ್ನ ಇದಕ್ಕಿಂತಾ ಚೆನ್ನಾಗಿ ಇರದಿದ್ದರೂ ಪರವಾಗಿಲ್ಲ, ಹೀಗೇ ಮುಂದುವರೀತಾ ಇರ್ಲಿ ನಮ್ಮ ಪ್ರೀತಿ ವಿಶ್ವಾಸ ಅಂತ ಕೋರಿಕೊಂಡೆ.

ಸಾಯಂಕಾಲ ಯೋಗಾ ಕ್ಲಾಸಿನಲ್ಲಿ ನನ್ನ ಜನ್ಮದಿನದ ಆಚರಣೆ ಭಿನ್ನವಾಗಿತ್ತು. ನನ್ನ ತರಗತಿಯ ಗುರುಗಳು ನನಗೇ ತಿಳಿಯದಂತೆ ಒಂದು ಕೇಕ್ ತರಿಸಿದ್ದರು. ಎಲ್ಲರಮುಂದೆ ನಾನು ಆ ಕೇಕನ್ನ ಕತ್ತರಿಸಿದೆ. ಅದು ನನ್ನ ಜೀವನದ ಮೊಟ್ಟ ಮೊದಲ ಕೇಕ್ ಕಟ್ಟಿಂಗ್ :) ಈಗ ಸಮಯ ಸುಮಾರು ರಾತ್ರಿ ೧೨.೩೦ ನನ್ನ ಇಂದಿನ ಜನ್ಮದಿನದ ಆಚರಣೆಯನ್ನ ಮೆಲುಕುಹಾಕುತ್ತಾ ಮಲಗುತ್ತಿದ್ದೇನೆ...

(ಲೇಖನ ಬರೆದು ಬಹಳ ತಿಂಗಳಾಯ್ತು. ಆದ್ರೆ ನಾ ಬರೆದಿದ್ದ ಪುಸ್ತಕ ನನ್ನ ಕೈಗೆ ಸಿಕ್ಕದೇ ಕಣ್ಣಾಮುಚ್ಚೇ ಕಾಡೇಗೂಡೇ ಆಡ್ತಾ ಇತ್ತು... ಇವತ್ತಿಗೆ ಸಿಕ್ಕೇ ಬಿಡ್ತು :) ಅದಕ್ಕೇ ನಿಮ್ಮೊಂದಿಗೆ ಹಂಚಿಕೊಳ್ತಾ ಇದೀನಿ....)

Monday, April 12, 2010

"ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ"

ಪ್ರತೀ ದಿನ ಕಂಪ್ಯೂಟರಿನ ಕೆಲಸ ಬಿಟ್ಟರೆ ನನ್ನ ಚಟುವಟಿಕೆಗಳು ಮತ್ಯಾವುದರಲ್ಲೂ ಹೆಚ್ಚಿಗೆ ಇರದ ದಿನಗಳ ಮಾತು. ನಾನು ಅಂದು ನನ್ನ ಗೆಳೆಯರೊಡನೆ ಚಾರಣಕ್ಕೆ ಹೊರಟಿದ್ದೆ. ಹೊಸಾ ತಂಡ, ಹೊಸಾ ಜನ, ಹೊಸಾ ಪ್ರದೇಶ... ಎಲ್ಲವೂ ಹೊಸತಾಗಿತ್ತು. ಯಾವುದೇ ಪ್ರವಾಸದಲ್ಲಾಗಲಿ, ಅಥವಾ ಸಭೆ ಸಮಾರಂಭಗಳಲ್ಲಾಗಲಿ ನಮಗೆ ಮೊದಲು ಯಾರ ಪರಿಚಯವೂ ಇಲ್ಲದಿದ್ದರೂ ಅಲ್ಲಿಂದ ಹೊರ ನಡೆವಾಗ ಯಾರದ್ದಾದರೂ ಪರಿಚಯ ಆಗಿರುತ್ತದ್ದೆ.

ನನಗೆ ನಿನ್ನ ಪರಿಚಯವೂ ಹಾಗೇ ಆದದ್ದು. ನಾವೆಲ್ಲಾ ಅಂದು ರಾತ್ರಿ ಬೆಂಗಳೂರಿನಿಂದ ಹೊರಟು ನಮ್ಮ ಪ್ರವಾಸದ ತಾಣದೆಡೆಗೆ ತೆರಳುವಾಗ ನೀನಾರೋ ನಾನಾರೋ... ಆ ಬಸ್ಸಿನ ಒಂದು ಮೂಲೆಯಲ್ಲಿ ನಾನು ಕುಳಿತಿದ್ದರೆ ನೀನೆಲ್ಲಿದ್ದೆಯೋ ನನಗಂತೂ ನೆನಪಿಲ್ಲ. ನಾನು ನನ್ನಷ್ಟಕ್ಕೆ ಕಿಟಕಿಯಿಂದ ಇಣುಕಿ ಹೊರ ಪ್ರಪಂಚವನ್ನು ನೋಡುತ್ತಾ ಕುಳಿತಿದ್ದೆ. ಮೊದಲಿಗೆ ನನ್ನ ಸ್ನೇಹಿತನಿಂದ ನಿನ್ನ ಪರಿಚಯವಾದರೂ ಬರಿಯ ನಗೆ ಬೀರಿ ಸುಮ್ಮನಾದೆ. ಅಲ್ಲಿಂದ ನಮ್ಮ ತಂಡ ಪ್ರವಾಸ ಮಾಡಲಿದ್ದ ಸ್ಥಳಕ್ಕೆ ಬಂದಾಗ ಕತ್ತಲೆಯನ್ನ ಸೀಳಿಕೊಂಡು ಸೂರ್ಯದೇವ ನಮಗೆಲ್ಲ ಶುಭೋದಯವನ್ನ ಸಾರಿದ್ದ. ಮಾರ್ಗ ಕಡಿದಾದ್ದರಿಂದ ನಾವೆಲ್ಲಾ ಅಲ್ಲಿದ್ದ ಮಿನಿ ಲಾರಿಯೊಂದನ್ನೇರಿ ಪಯಣವನ್ನು ಮುಂದುವರೆಸಿದ್ದೆವು. ನಾನು ನನ್ನಷ್ಟಕ್ಕೇ ನನ್ನ ಕ್ಯಾಮರಾ ಕಣ್ಣಿನಿಂದ ಸುತ್ತಲ ಪರಿಸರವನ್ನ ನೋಡುತ್ತಿದ್ದೆ. ಆಗ ಮೊದಲಬಾರಿಗೆ ನೀನು ನನ್ನೊಡನೆ ಮಾತಿಗಿಳಿದೆ. "ಬರೀ ನಿಮ್ದೇ ಫೋಟೋ ತೆಕ್ಕೋತೀರಾ ? ನಾವೂ ಎಲ್ಲಾ ಇಲ್ಲೇ ಇದೀವಲ್ಲ"... ಸರಿ... ಮಾತಿಗಿಳಿದಾಯಿತು. "ಅದಕ್ಕೇನಂತೆ, ನಿಮ್ದೂ ಒಂದ್ ಫೋಟೋ ತೆಗೀತೀನಿ" ಅಂದು ನಿನ್ನದೂ ಒಂದು ಫೋಟೋವನ್ನ ತೆಗೆದಿದ್ದೆ. ತದನಂತರ ನಿನ್ನ ಈ-ಮೈಲ್ ಐಡಿಯನ್ನು ನನಗೆ ತಿಳಿಸಿ "ಈ ಫೋಟೋನ ಮೈಲ್ ಮಾಡಿ, ಮರೀಬೇಡಿ" ಅಂದಿದ್ದೆ- ಅಷ್ಟಕ್ಕೇ ನಮ್ಮ ಮಾತು ಅಲ್ಲಿಗೆ ಮುಗಿದಿತ್ತು.

ನಮ್ಮ ಚಾರಣದ ಪ್ರಾರಂಭದ ಹಂತದಲ್ಲಿ ಹೆಚ್ಚಾಗಿ ಕಷ್ಟಕರವೆನಿಸಿರದಿದ್ದರೂ ನಮ್ಮಲ್ಲಿ ಕೆಲವರು ತುಸು ಬಳಲಿದ್ದರು, ನೀನೂ ಅದರಲ್ಲೊಬ್ಬಳು. ಚಾರಣದ ಮೊದಲ ಹಂತದಲ್ಲಿ ಎಲ್ಲಾ ಒಟ್ಟಿಗೇ ಮಾತನಾಡುತ್ತಾ ಹೋದಂತೆ ನೀನೂ ನನ್ನೊಡನೆ ಮಾತಿಗಿಳಿದೆ. ಆ ಗುಂಪಿನಲ್ಲಿ ನನಗೆ ಪರಿಚಯವಿದ್ದ ಒಬ್ಬನೇ ಗೆಳೆಯ ತುಸು ದೂರದಲ್ಲಿ ಹೋಗುತ್ತಿದ್ದರಿಂದ ನಿನ್ನೊಡನೆ ಮಾತನಾಡುತ್ತಾ ನಾನೂ ಹೆಜ್ಜೆ ಹಾಕತೊಡಗಿದೆ. ಅದು ನಿನ್ನ ಮೊದಲನೇ ಚಾರಣ. ನಾನು ವರ್ಷಕ್ಕೊಂದುಬಾರಿ ತಪ್ಪದೇ ಚಾರಣಕ್ಕೆ ಹೋಗುತ್ತಿದ್ದ ಚಾರಣಿಗ. ನನಗೆ ಚಾರಣದಲ್ಲಿದ್ದ ಅನುಭವವನ್ನ ಹಂಚಿಕೊಳ್ಳುತ್ತಾ ನಿನ್ನೊಡನೆ ನಡೆಯುತ್ತಿದ್ದೆ. ಒಂದು ಹಂತದಲ್ಲಿ ಚಾರಣದ ಹಾದಿ ಕಡಿದಾಗಿತ್ತು ಅಲ್ಲಿ ನಿನ್ನಿಂದ ಹತ್ತಲು ತುಸು ಕಷ್ಟವೆನಿಸಿದ್ದರಿಂದ ನನ್ನ ಸಹಾಯ ಹಸ್ತವನ್ನ ನಿನ್ನೆಡೆಗೆ ಚಾಚಿದ್ದೆ. ಅಲ್ಲಿಂದ ಮುಂದೆ ಎಲ್ಲೇ ಕಡಿದಾದ ದಾರಿಯಿದ್ದರೂ ನಾನು ನಿನ್ನ ಸಹಾಯಕ್ಕೆ ನಿಂತಿರುತ್ತಿದ್ದೆ, ಕೈ ಹಿಡಿದು ಮೇಲೆ ಹತ್ತಿಸುತ್ತಿದ್ದೆ.

ನಿನ್ನಲ್ಲಿ ಏನೋ ವಿಷೇಶತೆ ಇರುವ ಹಾಗನಿಸುತ್ತಿತ್ತು. ಎಲ್ಲರಂತೆ ನೀನು ಅತಿಯಾಗಿ ಅಲಂಕಾರ ಮಾಡಿರಲಿಲ್ಲ ನಿನ್ನಲ್ಲಿ ಮುಗ್ಧತೆ ಮತ್ತು ಸರಳತೆ ಎದ್ದು ಕಾಣುತ್ತಿತ್ತು. ನಿನ್ನ ಸ್ನೇಹಮಾಡಬೇಕೆನಿಸಿತು. ಸಾಮಾನ್ಯವಾಗಿ ಬಹುಪಾಲು ಹುಡುಗರಿಗೆ ಗರ್ಲ್ ಫ್ರೆಂಡ್ಸ್ ಇದ್ದೇ ಇರುತ್ತಾರೆ. ಎಲ್ಲೋ ನೂರಕ್ಕೆ ೧೦ ಜನಮಾತ್ರ ಆ ತಾಪತ್ರೇಯ (?) ದಿಂದ ದೂರ ಉಳಿದಿರುತ್ತಾರೆ. ಆ ಹತ್ತು ಜನರಲ್ಲಿ ನಾನೂ ಒಬ್ಬನಾಗಿದ್ದೆ. ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಕೆಲವು ಘಟನೆಗಳು ಇದ್ದೇ ಇರುತ್ತದೆ. ನನ್ನ ಜೀವನದಲ್ಲಿಕೂಡಾ ಹಲವು ಘಟನೆಗಳು ನಡೆದಿವೆ. ಆದರೆ ನಿನ್ನೊಡನೆ ಕಳೆದ ಆ ೨ ದಿನಕೂಡಾ ಆ ಘಟನೆಗಳ ಸಾಲಿನಲ್ಲಿ ಬಂದು ನಿಲ್ಲುತ್ತವೆಂದು ನಾನು ಎಣಿಸಿರಲಿಲ್ಲ.

ಬಿಸಿಲಿನ ತಾಪ ಏರುತ್ತಲಿತ್ತು. ನೀನು ತಲೆಯಮೇಲೆ ಯಾವುದೇ cap ಹಾಕಿರಲಿಲ್ಲ. ಬಹುಷಃ ಅನುಭವದ ಕೊರತೆ ಅಂತ ಕಾಣ್ಸತ್ತೆ. ನಾನು ಪೂರ್ವಸಿದ್ದತೆ ಮಾಡಿಕೊಂಡೇ ಬಂದಿದ್ದೆ. ತಲೆಯಮೇಲೆ ಒಂದು ಕ್ಯಾಪ್, ಸೊಂಟಕ್ಕೊಂದು ಪೌಚ್, ಅದರಲ್ಲಿ ಕೆಲವು ಪೆಪ್ಪರ್ಮೆಂಟ್ ಗಳು. ಪುಟ್ಟದೊಂದು ನೀರಿನ ಬಾಟಲಿ, ಆಪತ್ಕಾಲಕ್ಕೆ ಗಾಯಗಳಿಗೆ ಹಚ್ಚುವ ಒಂದು ತೈಲ... ಇತ್ಯಾದಿ. ನಿನ್ನ ಪಾಡು ನೋಡಿ ಅಯ್ಯೋ ಅನ್ನಿಸ್ತಾ ಇತ್ತು ನನ್ಗೆ. ಹುಡುಗರಾದರೆ ಗಟ್ಟಿಗರು.. ಹೇಗಾದರೂ ತಡೆದುಕೊಳ್ಳ್ತಾರೆ. ಆದರೆ ಹುಡುಗಿಯರು ಸ್ವಲ್ಪಮಟ್ಟಿಗೆ ಕೋಮಲಾಂಗಿಯರು. ಬಿಸಿಲಿನ ತಾಪ ತಡೆಯಲೆಂದು Sunscreen Lotionಗಳು ತುಟಿ ಒಡೆಯದಿರಲೆಂದು Lip Guard ಗಳು ಇತ್ಯಾದಿ ಇಲ್ಲದೇ ಹೊರಗೆ ಬಾರದವರು. ನಾನು ನನ್ನ ತಲೆಏರಿದ್ದ capಅನ್ನ ತೆಗೆದು ನಿನಗೆ ಕೊಟ್ಟೆ. ಬಿಸಿಲಿನ ತಾಪದಲ್ಲೂ ನಿನ್ನ ಮೊಗದಲ್ಲಿ ಮಂದಹಾಸ ಮಿನುಗಿತ್ತು. ಒಟ್ಟಿನಲ್ಲಿ ನನಗೆ ಪದೇ ಪದೇ ಹಿಂದಿಯ ಮಧುರ ಗೀತೆ "ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ" ನೆನಪಿಗೆ ಬರುತ್ತಲಿತ್ತು.

ನಾ ಕೊಟ್ಟ capಅನ್ನ ತಲೆಮೇಲೇರಿಸಿ ಕಡಿದಾದ (ಅಷ್ಟೇನೂ ಕಡಿದಾಗಿರಲಿಲ್ಲದ) ದಾರಿಯಲ್ಲಿ ತ್ರಾಸಪಟ್ಟು ಅಲ್ಲಲ್ಲಿ ಬಂಡೆಗಳಮೇಲೆ ಕುಳಿತು ಮತ್ತೆ ಮರಗಳ ನೆರಳಿನಲ್ಲಿ ವಿಶ್ರಮಿಸಿ ಮುಂದೆ ಬರುತ್ತಿದ್ದ ನಿನ್ನಪಾಡು ನೋಡಿ ಯಾರಿಗಾದರೂ "ಅಯ್ಯೋ ಪಾಪದ್ ಹುಡ್ಗಿ, ಯಾಕ್ ಅಷ್ಟು ಕಷ್ಟಾಪಟ್ಕೊಂಡ್ ಹೋಗ್ಬೇಕೋ, ಸುಮ್ನೆ ಮನೆಲಿ ಕೂತ್ರೆ ಆಗಲ್ವಾ ???" ಅಂತ ಅನ್ನಿಸೋ ಹಾಗಿತ್ತು . ಅಂತೂ ಇಂತೂ ಆ ಗುಡ್ಡದ ಅರ್ಧ ದಾರಿ ಕ್ರಮಿಸಿಯಾಯಿತು. ನಾನು ಮಾರ್ಗಮಧ್ಯದಲ್ಲಿ ಅವಕಾಶ ಸಿಕ್ಕಲ್ಲೆಲ್ಲಾ ಆ ಪ್ರಕೃತಿಯ ಸೊಬಗನ್ನ ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾ ಹೋದೆ. ಅದರ ಮಧ್ಯೆ ನನಗರಿವಿಲ್ಲದಂತೇ ನಿನ್ನ ಕೆಲವು ತುಣುಕುಗಳೂ ಸೆರೆಯಾಗಿದ್ದವು. ಅರ್ಧ ದಾರಿ ಕ್ರಮಿಸಿದಮೇಲೆ ಮಿಕ್ಕಿದ್ದ ಅರ್ಧ ದಾರಿ ಬಲು ತ್ರಾಸದಾಯಕವಾಗಿ ಕಾಣತೊಡಗಿತು. ನಾನೊಬ್ಬನೇ ಇದ್ದಲ್ಲಿ ಬಹುಷಃ ಪೂರ್ತಿಯಾಗಿ ಹತ್ತಿಬಿಡುತ್ತಿದ್ದೆ. ಆದರೆ ನಿನ್ನ ಮೊಗದಲ್ಲಿ "ನನ್ಗೆ ಯಾರೂ ಹೆಲ್ಪ್ ಮಾಡ್ತಾ ಇಲ್ಲ, ನನ್ ಜೊತೆ ಇರು, ಪ್ಲೀಸ್" ಅನ್ನೊ ಭಾವನೆ ಎದ್ದು ಕಾಣುತ್ತಿತ್ತು. ಸರಿ ಆದದ್ದು ಆಗಿಹೋಗಲಿ ಅಂತ ಚಾರಣವನ್ನ ಅಲ್ಲಿಗೇ ನಿಲ್ಲಿಸಿ ಸ್ವಲ್ಪ ಹೊತ್ತು ನಾವು ಮತ್ತೆ ಹಲವರು ಅಲ್ಲಿಯೇ ಕುಳಿತು ಆ ಸೌಂದರ್ಯವನ್ನ ಸವಿಯುತ್ತಾ ಕೆಲಹೊತ್ತು ಕಾಲ ಮುಂದೂಡಿದೆವು. ಹೇಗೋ ಮಾಡಿ ಅರ್ಧ ಹತ್ತಿದ್ದೇನೋ ಆಯಿತು, ಇನ್ನು ಇಳಿಯೋದು ಹೇಗೇ ??? ಹತ್ತುವಾಗ ಸ್ವಲ್ಪ ಸುಲಭವಾದರೂ ಇಳಿಯುವಾಗ ನಮ್ಮ ದೇಹದ ಸಮತೋಲನ ಅತ್ಯಗತ್ಯ. ಕಾಲು ಜಾರಿದರೆ ಸೀದಾ ಕೆಳಗಿನ ಬಂಡೆಗಳಿಗೆ ಢಿಕ್ಕಿ ಹೊಡೆಯುವುದು ಖಂಡಿತ. ನಮ್ಮಲ್ಲಿ ಕೆಲವರು ಜೊತೆಗೆ ತಂದಿದ್ದ ಕೋಲಿನ ಸಹಾಯ ಪಡೆದು ಇಳಿದರೆ, ನೀನು ಮತ್ತೆ ನಿನ್ನ ಬೆಂಬಲಿಗರು ಬಾಲ್ಯದ "ಜಾರುಬಂಡಿ" ಯನ್ನ ಮತ್ತೆ ನೆನಪಿಸಿಕೊಂಡು ಜಾರುತ್ತಾ ಇಳಿದಿರಿ.

ನಾವೆಲ್ಲಾ ಪ್ರವಾಸವನ್ನ ಪ್ರಯಾಸದಿಂದ ಮುಗಿಸಿ ಮರಳಿ ನಮ್ಮ ನಮ್ಮ ಗೂಡಿಗೆ ಮರಳಲು ಇದ್ದ ಸಂಪರ್ಕ ಕೊಂಡಿಯನ್ನೇರಿದೆವು. ದಾರಿಯುದ್ದಕ್ಕೂ ಅಂತ್ಯಾಕ್ಷರಿಗಳ ಸುರಿಮಳೆ. ಆ ಬಸ್ಸಿನ ಛಾವಣಿ ಸ್ವಲ್ಪ ಗಟ್ಟಿಮುಟ್ಟಾಗಿದ್ದರಿಂದ ಹಾರಿ ಹೋಗಲಿಲ್ಲವೆನ್ನುವುದು ಸಂತಸದ ವಿಷಯ :) ಅಲ್ಲಿಯೇ ನಿನ್ನ ಮೊಬೈಲ್ ಸಂಖ್ಯೆ, ಈ-ಮೈಲ್ ವಿಳಾಸವನ್ನು ಮತ್ತೊಮ್ಮೆ ಪಡೆದುಕೊಂಡೆ. ನಾವೆಲ್ಲಾ ಹಾಡುತ್ತಾ ಕುಣಿಯುತ್ತಾ ಮರಳಿ ಬೆಂಗಳೂರಿಗೆ ಸೇರಿದ್ದೆವು. ಅದಾದನಂತರದ ಕೆಲವು ದಿನಗಳು ನೀನು ನನ್ನೊಂದಿಗೆ ಮೊಬೈಲಿನಲ್ಲಿ ಮಾತನಾಡಿಸಿದ್ದುಂಟು. SMS ಕಳಿಸಿದ್ದುಂಟು. ಆದರೆ ದಿನ ಕಳೆದಂತೆ ಅವೆಲ್ಲವೂ ಕಡಿಮೆಯಾಗತೊಡಗಿತು.

ನಿಜವಾಗಲೂ ನನಗೆ ನಿನ್ನಲ್ಲಿ ಪ್ರೀತಿ ಪ್ರೇಮ ಅಂಥದ್ದೇನೂ ಇರಲಿಲ್ಲ.. ಆದರೆ ಒಬ್ಬ ಹುಡುಗ ಮತ್ತೊಂದು ಹುಡುಗಿಯಜೊತೆಯಲ್ಲಿ ಸಲುಗೆಇಂದ ಇದ್ದಾಗ ಸಮಾಜದ ಜನ ಮಾತನಾಡುವುದೇ ಪ್ರೇಮದ ಬಗ್ಗೆ. ನಮ್ಮ ನಡುವೆಯೂ ಹಾಗೇ ಆಯಿತು. ನಮ್ಮಿಬ್ಬರ ಸ್ನೇಹಕ್ಕೆ ಬೇರೆಯ ಹೆಸರು ಕಟ್ಟತೊಡಗಿತು ಸಮಾಜ. ಅದು ನನ್ನ ಗಮನಕ್ಕೆ ಬಂದದ್ದು ನನ್ನ ಸ್ನೇಹಿತನಿಂದ. ಬಹುಷಃ ನಿನಗೆ ನಿನ್ನ ಆಫೀಸಿನಲ್ಲೂ ಹಾಗೇ ಹೇಳಿದ್ದಿರಬಹುದು. ಅದೇ ಕಾರಣದಿಂದ ನೀನು ಕ್ರಮೇಣ ಫೋನ್ ಕಾಲ್, ಮೆಸ್ಸೇಜ್ ಎಲ್ಲ ವನ್ನೂ ಕಡಿಮೆಮಾಡಿರಬಹುದು. ನಾನುಕೂಡಾ ಕಡಿಮೆ ಮಾಡಿದೆ. ನೀನು ಚಾಟ್ ನಲ್ಲಿ Online ಇದ್ದರೂ ನಾನು ನಿನ್ನನ್ನು ಮಾತನಾಡಿಸುವ ಧೈರ್ಯ ಮಾಡುತ್ತಿರಲಿಲ್ಲ. ಇಂದಿಗೂ ನಿನ್ನನ್ನು Online ನಲ್ಲಿ ನೋಡುತ್ತೇನೆ. ನಮ್ಮ ಚಾರಣದ ದಿನಗಳನ್ನ ನೆನಪಿಸಿಕೊಳ್ಳುತ್ತೇನೆ, ಹಿಂದಿಯ ಮಧುರ ಗೀತೆ "ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ" ಹಾಗೆಯೇ ನನ್ನ ಕಿವಿಗಳಲ್ಲಿ ಗುಯ್ ಗುಡುತ್ತದೆ.

"ಖೂಬ್ ಸೂರತ್ ಬಾತ್ ಯೇ, ಚಾರ್ ಪಲ್ಕಾ ಸಾಥ್ ಯೇ, ಸಾರೀ ಉಮರ್ ಮುಝ್ಕೋ ರಹೇಗಾ ಯಾದ್"

Wednesday, April 7, 2010

ಚಿಗರೆ ಕಂಗಳ ಚೆಲುವೆ

ನೀ ಬರುವೆ ಪ್ರತಿದಿನವು ನನ್ನ ಕನಸಿನಲ್ಲಿ
ಆನಂದ ಅನುದಿನವು ನನ್ನ ಮನಸಿನಲ್ಲಿ
ಅನುದಿನವು ಹೂದೋಟ, ನಡೆವದಾರಿಯಲ್ಲಿ
ಸಾಕೆನಗೆ ಆ ಕುಡಿನೋಟ, ಮನಕರಗಿತಿಲ್ಲಿ

ನಿನ್ನದೆಂತಹಾ ಬೆರಗು, ಬಿಂಕ ಬಿನ್ನಾಣ
ನಿನ ಚೆಲುವು ಎನಗಾಯ್ತು ಸ್ಪೂರ್ತಿಯಾ ತಾಣ
ಕನಸಲ್ಲೂ ಹೊಂಬೆಳಕು ತಂದ ಬೆಳದಿಂಗಳು
ದಾಳಿಂಬೆ ನಗುಚೆಲ್ಲಿ ಬಿರಿದ ಆ ತುಟಿಗಳು

ಅರಳಿದಾ ಸುಮವು ನಾಚಿ ನೀರಾಗಿರಲು
ನಿನ ಸೌಂದರ್ಯಕೆ ಸಾಟಿ ನೀನೇ ಆಗಿರಲು
ದುಂಬಿಯದು ಝೇಂಕರಿಸಿ ನಿನ್ನರಸಿ ಬಂದಿರಲು
ಸುಮವಲ್ಲವೋ ಮರುಳೆ, ಕುಸುಮಬಾಲೆಯು ಇವಳು

ಸಿಂಹಿಣಿಯ ನಡು ನಿನದು ಬಳುಕುತಾ ನಡೆ ನೀನು
ಗೆಜ್ಜೆನಾದದಿ ನುಡಿಸಿ ಮಧುರಗೀತೆಯ ಜೇನು
ನಿನ ನಾಟ್ಯವಾ ನೋಡಿ ನವಿಲೂ ನಿಂದಿತ್ತು
ಆ ಮಧುರ ಗಾನಕ್ಕೆ ಕೋಗಿಲೆಯೂ ನಾಚಿತ್ತು

ಬೆಳಗಾಯ್ತು ಹಾಳಾಯ್ತು ಆ ನನ್ನ ಸವಿಗನಸು
ಚಿಗರೆ ಕಂಗಳ ಚೆಲುವೆ ನೀ ಸಿಗುವೆ- ಹೇಳುತಿದೆ ಈ ಮನಸು
ಕಾವಲಿರು ನೀ ಎನ್ನ ಸವಿಗನಸುಗಳಿಗೆ
ಕಳೆದು ಹೋಗದಿರಲೆಂದೂ ಈ ಮಧುರ ಘಳಿಗೆ
:D

Monday, April 5, 2010

ತಾಯೇ ನಿನಗೆ ವಂದನೆ...

Human body can bear only upto 45 Del(Unit) of pain. But at the time of giving girth, a woman feels upto 57 del of pain. this is similar to 20 bones getting fractured, at a time. Love your Mother till the end of your life.... ಈ SMS ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದರ ಬಗ್ಗೆ ವಾದ ವಿವಾದ ಮಾಡದೇಇದ್ರೂ ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ಪಡುವ ಕಷ್ಟ ಅಪಾರವಾದದ್ದು ಅನ್ನೋದು ಸತ್ಯ. ಅಂತಹಾ ತಾಯಂದಿರಿಗಾಗಿ, ಪ್ರತಿಯೊಬ್ಬ ಮಹಿಳಾಮಣಿಯರಿಗಾಗಿ ನಾನು ಬರೆದ ಕೆಲವು ಸಾಲುಗಳಿವು. :)

I am dedicating this poem to all such ladies with respect.

ಹಸುಗೂಸು ಹೆರುವಾಗ ನೀ ಕಷ್ಟಪಟ್ಟೆ
ಹೆತ್ತಕಂದನ ಕಂಡು ಸಂತಸವ ಪಟ್ಟೆ
ಹುಟ್ಟಿದ ಹಸುಗೂಸ ಒಲುಮೆಯಲಿ ಸಾಕಿ
ಒಲುಮೆ ಸಿರಿ ಸಂತಸವ ಅನುದಿನವು ಉಣಿಸಿ

ಎದ್ದು ಬಂದಿದ್ದೆ ನಡುರಾತ್ರಿಯಲಿ, ಕೇಳಿ ಕಂದನ ಕೂಗು
ರಟ್ಟೆನೋವಾದರೂ ನೀ ಬಿಡಲಿಲ್ಲ ತೊಟ್ಟಿಲ ತೂಗು
ರಚ್ಚೆಹಿಡಿದತ್ತಾಗ ತೋಳ ತೆಕ್ಕೆಯಲಿ ಮಲಗಿಸಿ
ಮುದ್ದು ಕಂದನ ನಿನ್ನ ಕಣ್ರೆಪ್ಪೆಯಲಿ ಇರಿಸಿ

ಅಯ್ಯೋ ಕಂದನ ಒಡಲು ಬಿಸಿಯಾಯ್ತು
ಹೆತ್ತಕರುಳಿನ ಕೂಗು, ಚಿಂತೆ ನೂರಾಯ್ತು
ಗುಡಿ ಗೋಪುರದಿ ಪೂಜೆ, ಮನೆ ದೇವರಲಿ ಹರಕೆ
ಕಂದನಿಗೆ ಗುಣಮಾಡು, ನಗುತರಿಸು ಮೊಗಕೆ

ಅಪಾರ ಪ್ರೀತಿಯ ಮೊಗೆದು ಬೊಗಸೆಯಲಿ ತುಂಬಿ
ಮಮಕಾರ ತೋರಿ ಮುತ್ತಿನ ಮಳೆ ಸುರಿಸಿ
ನೋವುಗಳ ನುಂಗಿ, ಸಂತಸವ ಉಣಬಡಿಸಿ
ಕಣ್ಣೀರನು ಮರೆಸಿ, ನೋವನ್ನು ತೊರೆಸಿ

ಕೂಸದು ಗೆದ್ದಾಗ ನೀನೂ ಸಂಭ್ರಮಿಸಿ
ಸಿಹಿಯೂಟ ಪ್ರೋತ್ಸಾಹ, ಕಂದನಿಗೆ ಹರಸಿ
ನಿನ್ನೊಲುಮೆಯ ಧಾರೆ ಹರಿದಿರಲಿ ನಿರಂತರ
ನೀಜೊತೆಯಲಿದ್ದರೆ ಸಂಭ್ರಮದ ಸಡಗರ