ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, April 30, 2008

ಹೀಗೊಂದು ಪತ್ರ...

ಹೀಗೊಂದು ಪತ್ರ...

ಜೀವನದಲ್ಲಿ ನಾವು ಕಂಡಿದ್ದೆಲ್ಲಾ ಆಗೋದಿಲ್ಲ ಅಲ್ವ ??? ಹೀಗೆ ನನ್ನ ಮಿತ್ರರೊಬ್ಬರು ಹೇಳೊವಾಗ ನನ್ಗೂ ಅದು ಸತ್ಯ ಅಂತ ಅನ್ನಿಸ್ತು, ನಾ ಕಂಡಿದ್ದ ಕನಸು, ಪಟ್ಟ ಆ ಪುಟ್ಟ ಪುಟ್ಟ ಆಸೆಗಳು ಎಲ್ಲಿಗೆ ಹೊರ್ಟ್ ಹೊಯ್ತು ???

ನಾನು ಹುಟ್ಟಿ ಬೆಳೆದ ಊರನ್ನ ಬಿಟ್ಟು ಕೆಲ್ಸಮಾಡೊದಿಕ್ಕೆ ಅಂತ ಸದಾ ಟ್ರಾಫಿಕ್ ಜ್ಯಾಮ್ಗಳೇ ತುಂಬಿರೋ ಬೆಂಗಳೂರಿಗೆ ಬಂದಿದ್ದೆ. ಅಲ್ಲಿ ೨ ಕಂಪನಿಯಲ್ಲಿನ ಅನುಭವದಿಂದ ಒಂದು ಕಂಪನಿ ಸೇರಿದ್ದೆ. ಅಲ್ಲಿ ಕೆಲವು ತಿಂಗಳು ಕೆಲಸ ಮಾಡಿ ನಂತರ ಕಂಪನಿಯವರು ಹೈದರಾಬಾದಿನಲ್ಲಿ ಮತ್ತೊಂದು ಶಾಖೆ ತೆರೆದಿದ್ದರಿಂದ ಅಲ್ಲಿಗೆ ನನ್ನ ವರ್ಗಾಯಿಸಿದ್ದ್ರು.

ನನಗೂ ಹೊಸಾಜಾಗಕ್ಕೆ ಹೋಗಿ ಏನಾದರೂ ಕಲಿಯುವ, ಏನಾದರೂ ಸಾಧಿಸುವ ಉತ್ಸಾಹ, ಅದಕ್ಕೆ ನಾನೂ ಒಪ್ಪಿಕೊಂಡು ಮನೆಯಲ್ಲಿ ವಿಷಯ ತಿಳಿಸಿ ನನ್ನ ಪ್ರಯಾಣ ಬೆಳೆಸಿದ್ದೆ. ಹೈದರಾಬಾದಿನ ನನ್ನ ಮ್ಯಾನೇಜರ್ ಆದ ವ್ಯಕ್ತಿ ಮೊದಲೇ ಅಲ್ಲಿನ ಜನರಬಗ್ಗೆ ಎಚ್ಚರಿಕೆ ಕೊಟ್ಟಿದ್ದರೂ ಅಲ್ಲಿ ಕಾಲಿಡುತ್ತಿದ್ದಂತೇ ಒಬ್ಬ ಆಟೋ ಚಾಲಕನಿಂದ ಮೋಸಹೋಗಿ ನಾನು ತಲುಪಬೇಕಾದ ಹೋಟೆಲ್ ತಲುಪಿದೆ. ಅಲ್ಲಿಂದ ನನ್ನ ಮ್ಯಾನೇಜರ್ ಗೆ ವಿಷಯ ತಿಳಿಸಿದಾಗ ಅವರೇ ಬಂದು ನನ್ನ ಹೋಟೇಲಿಂದ ನನ್ನ ಹೊಸಾ ಆಫೀಸಿಗೆ ಕರೆತಂದಿದ್ದರು. ಹೊಸಾ ಜಾಗ, ಹೊಸಾ ಜನ... ನಾನು ಅಲ್ಲಿಗೆ ಹೇಗೆ ಹೊಂದಿಕೊಳ್ಳೋದು ಅಂತ ವಿಚಾರ ಮಾಡ್ತಾಇದ್ದಾಗ ಶಿವರಾಜ್ ಪರಿಚಯ ಆಯ್ತು. ಅಲ್ಲಿ ಬಂದು ಒಂದು ಸಮಾಧಾನ ಏನಂದ್ರೆ ನನ್ನ ಮ್ಯಾನೇಜರ್ ಮತ್ತೆ ಶಿವರಾಜ್ ಇಬ್ಬರೂ ಕನ್ನಡಿಗರು... ಆದರೆ ಧಾರವಾಡದವರು. ನಾನು ಮೊದಲ ಒಂದುವಾರ ಅಲ್ಲಿಯ ಹೋಟೇಲ್ ಒಂದರಲ್ಲಿ ತಂಗಿದ್ದು ನಂತರ ಶಿವರಾಜ್ ನೆರವಿನಿಂದ ಒಂದು ಮನೆ ಬಾಡಿಗೆ ಪಡೆದೆ.

ನಾನು ಬಂದ ಮೊದಲ ದಿನಗಳಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಶಿವರಾಜ್ ನಂತರದ ದಿನಗಳಲ್ಲಿ ಅದಕ್ಕಿಂತ ಹೆಚ್ಚಿಗೆ ಮಿತ್ರರಾಗಿ ನನ್ನ ಸಹಾಯಕ್ಕೆ ಬಂದ್ರು. ನಾನು ಅಲ್ಲಿ ಕೆಲವು ತಿಂಗಳು ಇರ್ಬೆಕು ಅಂತ ನನ್ಗೆ ತಿಳಿದಿತ್ತು, ಹಾಗಾಗಿ ಅಲ್ಲೇ ಒಂದು ಮನೆ ಬಾಡಿಗೆಗೆ ಹುಡುಕ್ತಾ ಇದ್ವಿ ನಾನು ಮತ್ತೆ ಶಿವರಾಜ್. ತಿರುಮಲಗಿರಿಯಲ್ಲಿ ಒಂದು ಮನೆ ಇರೊ ವಿಚಾರ ನಮ್ಗೆ ಗೊತ್ತಾಯ್ತು. ಆಗ ಅಲ್ಲಿಗೆ ಹೋಗಿ ಮನೆ ಯಜಮಾನಿಜೊತೆ ಮಾತಾಡಿ ಮನೆ ಬಾಡಿಗೆಗೆ ಪಡ್ಕೊಂಡು ನಾನು ಇದ್ದ ಹೋಟೇಲನ್ನ ಖಾಲಿಮಾಡಿ ನನ್ನ ಹೊಸಾ ಮನೆಕಡೆಗೆ ಶಿವರಾಜ್ ಸಹಾಯದಿಂದ ಹೋದೆ.

ಇನ್ನು ನಾನು ನನ್ನ ಬಾಡಿಗೆ ಪಡೆದ ಮನೆ ಬಗ್ಗೆ ಹೇಳಬೇಕು ಅಂದ್ರೆ ಅದೇನು ದೊಡ್ಡ ಅರಮನೆಯಲ್ಲ, ಒಂದು ಪುಟ್ಟ ಸೂರು. ವಿಶಾಲವಾದ ಕಾಂಪೌನ್ಡ್ ಹೊಂದಿದ್ದ ಆ ಸೂರಿನಲ್ಲಿ ಒಟ್ಟು ೫ ಮನೆಗಳಿದ್ದವು. ನನ್ನಮನೆ ಮತ್ತೆ ಮಿಕ್ಕ ೩ ಮನೆಗಳನ್ನ ಬಿಟ್ಟು ನಮ್ಮ ಮನೆ ಯಜಮಾನಿ ಸಾಕಿದ ನಾಯಿಯನ್ನ ನೋಡಿಕೊಳ್ಳಲೆಂದೇ ಒಬ್ಬ ವಾಚ್ಮೆನ್ ಮನೆ ನನ್ನ ಮನೆ ಹಿಂದೆ ಇತ್ತು. ಆ ಪುಟ್ಟ ಮನೆಯಲ್ಲಿ ೫ ಜನರ ಸಂಸಾರ !!! ಅಂದರೆ ಆ ಕಾಂಪೌನ್ಡ್ ನ ಒಳಗೆ ಒಟ್ಟು ೫ ಮನೆಗಳು... ಅವುಗಳಲ್ಲಿ ಒಂದು ಮನೆ ಸದಾ ಬಾಗಿಲಿಗೆ ಬೀಗಾಹಾಕಿಕೊಂಡು ನಿದ್ದೆ ಮಾಡುತ್ತಿತ್ತು. ಮತ್ತೊಂದರಲ್ಲಿ ಒಂದು ಪುಟ್ಟ ಕುಟುಂಬ- ಅಪ್ಪ ಅಮ್ಮ ಮತ್ತೆ ಅವರಿಗಿದ್ದ ಎರೆಡು ಮಕ್ಕಳು. ಒಂದು ಗಂಡು ಮತ್ತೊಂದು ಹೆಣ್ಣು. ಆ ಪುಟ್ಟ ಹುಡುಗಿ ಹೆಸರು ಸಿಂಧು. ನನ್ನ ಮನೆಮೇಲೆ ಮತ್ತೊಬ್ಬ ಮಹಾರಾಷ್ಟ್ರದ ಹುಡುಗ ವಾಸಕ್ಕಿದ್ದ. ಅವನ ಹವ್ಯಾಸಗಳಬಗ್ಗೆ ಇಲ್ಲಿ ಹೇಳೋದು ಬೇಡ, ಒಟ್ಟಿನಲ್ಲಿ ಜಗತ್ತಿನ ಎಲ್ಲಾ ಕೆಟ್ಟ ಹವ್ಯಾಸಗಳೂ ಅವನಲ್ಲಿ ಮನೆ ಮಾಡಿತ್ತು.

ನಾನು ಮನೆ ಬಾಡಿಗೆ ಪಡೆದಾಗ ಮನೆ ನೋಡೊಕ್ಕೂ ಸಾಧ್ಯ ಆಗದೇ ಇರೋ ಸ್ಥಿತಿಯಲ್ಲಿತ್ತು. ಮನೆ ಯಜಮಾನಿಗೆ ೩.೦೦೦ ಹಣವನ್ನ ಮುಂಗಡವಾಗಿ ಕೊಟ್ಟು ಮನೆಗೆ ಬಣ್ಣ ಹೊಡಿಸಿ ತಯಾರು ಮಾಡಿಸಿದೆ. ಹಾಗೆ ನೋಡಿದ್ರೆ ನನಗೆ ಒಂದು ರೀತಿಯಲ್ಲಿ ಹವಾನಿಯಂತ್ರಿತ ಮನೆ ಸಿಕ್ಕುತ್ತು ಅನ್ನಿ. ಮನೆಯಲ್ಲಿದ್ದ ಕಿಟಕಿಗಳ ಗಾಜುಗಳು ಒಡೆದು ಅಲ್ಲಿಂದ ಹೇರಳವಾಗಿ ಗಾಳಿ ಬೀಸುತಿತ್ತು. ಇದರಿಂದ ಹಲವು ರೀತಿಯ ಅನುಕೂಲ ಇದೆ ನೋಡಿ- ಹೈದರಾಬಾದಿನ ಆ ಬೇಸಿಗೆಯಲ್ಲೂ ನನ್ನ ಮನೆ ತಂಪಗಿರುತಿತ್ತು.... ಇದರಿಂದ ಆಗೋ ವಿದ್ಯುತ್ ಉಳಿತಾಯದ ಲಾಭ ನನಗೇ ಅಲ್ವಾ ??? ಗಾಳಿ ಮನೆ ತುಂಬಿರ್ತಾ ಇದ್ದಿದ್ರಿಂದ ಒದ್ದೇ ಬಟ್ಟೆಗಳು ಬಹಳ ಬೇಗ ಒಣಗಿಬಿಡುತ್ತಿದ್ದವು. ರಾತ್ರಿ ನನ್ನ ಕಿವಿಗಳಿಗೆ ಇಂಪಾದ ಸಂಗೀತ ಕೇಳಿ ಬರುತ್ತಿತ್ತು... (ಅದು ಮೋಹಿನಿ ಕಾಟ ಅಲ್ಲ ಸ್ವಾಮೀ... ಸೊಳ್ಳೆಗಳ ಸಂಗೀತ).

ನಾನು ಇದ್ದ ನನ್ನ ಬಾಡಿಗೆ ಮನೇನಲ್ಲಿ ನನ್ನ ವಾಸ್ತವ್ಯದ ಮೊದಲು ಎರಡುತಿಂಗಳು ನನ್ನ ಮಿತ್ರರು ಅಂದ್ರೆ ನನ್ನಜೊತೆಗೆ ನಾನು ತಂದಿದ್ದ ನನ್ನ ಬೋನ್ಸಾಯ್, ಕಂಪ್ಯೂಟರ್ ಮತ್ತೆ ಅದರಲ್ಲಿ ಕೇಳಿ ಬರುತ್ತಿದ್ದ ಕನ್ನಡಮಾತು ಮತ್ತೆ ಹಾಡು. ಮನೆಯಿಂದ ಹೊರಗೆ ಬಂದರೆ ಬರೀ ತೆಲುಗು ಮತ್ತೆ ಹಿಂದಿ. ನನಗೆ ಹಿಂದಿ ಭಾಷೆತಿಳಿದಿದ್ದರಿಂದ ಹ್ಯಾಗೂ ನಿಭಾಯಿಸಿಕೊಂಡು ಹೊಗ್ತಾ ಇದ್ದೆ. ಇಲ್ಲಿಗೆ ಬಂದಮೇಲೆ ನಾನು ಅಪಾರ ಸ್ನೇಹಪಡೆದೆ, ಮಿತ್ರರನ್ನ ಪಡೆದೆ, ಒಂಟಿತನ ಏನೂ ಅನ್ನೊದನ್ನ ತಿಳ್ಕೊಂಡೆ, ನಮ್ಮ ಭಾಷೆ, ನಮ್ಮ ನಾಡಿನ ಮಹತ್ವನ್ನ ಇನ್ನೂ ಚೆನ್ನಾಗಿ ಅರಿತೆ. ಇನ್ನೂ ಹೇಳ್ಬೇಕು ಅಂದ್ರೆ ಉಪ್ಪಿಟ್ಟು ಮಾಡೊದು, ಅಡುಗೆ ಮಾಡೊದು, ಇದ್ದ ಒಂದೇ ಒಂದು ಕರೆಂಟ್ ಸ್ಟೊವ್ ಮತ್ತೆ ೪ ಪಾತ್ರೆಗಳಲ್ಲಿ ದಿನಾ ಅಡುಗೆ ಮಾಡ್ಕೊಂಡು, ಅದನ್ನೇ ತಿಂದ್ಕೊಂಡೂ, ಮನೆನ ಚೊಕ್ಕವಾಗಿ ಇಟ್ಕೊಳ್ಳೊಕೆ ಕಲ್ತೆ. ಹಾಗೇಂತ ನನ್ಗೆ ಇದೆಲ್ಲಾ ಮೊದ್ಲು ಬರ್ತಾಇರ್ಲಿಲ್ಲ ಅಂತ ಅಲ್ಲ, ಆದ್ರೂ ಅಡುಗೆ ಮಾಡೊದು ಕಮ್ಮಿನೇ ಇತ್ತು.

ಗೆಳೆಯರಿಲ್ಲ್ದೇ ನಾನು ಆ ಅಪರಿಚಿತ ಪ್ರದೇಶದಲ್ಲಿ ಇರೋದಿಕ್ಕೆ ಸಾಧ್ಯಾನೇ ಇರ್ಲಿಲ್ಲ. ಈ ಗೆಳೆತನ ಅನ್ನೋದು ತುಂಬಾ ವಿಚಿತ್ರವಾದದ್ದು. ನಾವೆಲ್ಲೋ ಇರ್ತೀವಿ, ಅವ್ರೆಲ್ಲೋ ಇರ್ತಾರೆ ಆದ್ರೂ ಅದು ಹೇಗೋ ಗೆಳೆತನ ಬೆಳೆದುಬಿಡತ್ತೆ. ಒಂದು ರೀತಿಯ ಬಾಂಧವ್ಯ ಬೆಳೆದುಬಿಡತ್ತೆ. ನಾನು ಅಲ್ಲಿ ಇದ್ದ ಆ ಕೆಲವು ದಿನಗಳಲ್ಲಿ ಪಡೆದ ಮಿತ್ರರ ಗಣನೆ ಅಪರಿಮಿತವಾದದ್ದು... ಆದರೂ ಶಿವರಾಜ್ ಬಿಟ್ಟು ಮರಿಯೋದಕ್ಕೇ ಆಗದೇ ಇರೋ ಗೆಳೆಯರು ಅಂದ್ರೆ ನನ್ನ ಮತ್ತಿಬ್ಬ ಸ್ನೇಹಿತರು- ವಿಜಯ್ ಮತ್ತೆ ಶಿಲ್ಪ. ವಿಜಯ್ ನನ್ನ್ಗೆ ಮತ್ತೊಬ್ಬ ಆರ್ಕುಟ್ ಮಿತ್ರ ಅಮರನಿಂದ ಪರಿಚಯವಾದ್ರೆ, ಶಿಲ್ಪ ವಿಜಯ್ ಮೂಲಕ ಪರಿಚಯವಾದ್ಳು. ನನ್ನ ಮುಂದಿನ ಭವಿಷ್ಯವನ್ನ ಅಲ್ಲಿ ರೂಪಿಸಿಕೊಳ್ಳೋಣ ಎಂದು ಲೆಕ್ಕಾಚಾರ ಹಾಕಿ ಅಲ್ಲಿಗೆ ಪ್ರಯಾಣ ಬೆಳೆಸಿದ್ದ ನನಗೆ ಅಲ್ಲಿನ ಜೀವನ ಬೇಸರ ತರಿಸುತ್ತಿತ್ತು.

ಅದನ್ನ ಹೋಗಲಾಡಿಸಿಕೊಳ್ಳಲು ಮತ್ತೆ ನನ್ನ ವೃತ್ತಿಜೀವನದಲ್ಲಿ ನನ್ನ ಕನಸನ್ನ ನನಸು ಮಾಡಿಕೊಳ್ಳಲು ಶಿಲ್ಪಜೊತೆ ಒಂದು ಕಂಪ್ಯೂಟರ್ ಕ್ಲಾಸಿಗೆ ಸೇರಿಕೊಂಡೆ. ನನ್ನ ಕಂಪ್ಯೂಟರ್ ಕ್ಲಾಸ್ ಇನ್ನೂ ಪ್ರಾರಂಭವಾಗಿರಲಿಲ್ಲ ನನಗೆ ನನ್ನ ಕಾರ್ಯಾಲಯದಿಂದ ಒಂದು ಮೈಲ್ ಬಂದಿತ್ತು. You are requested to visit bangalore office in 2 days ಮೊದಲೇ ಮನಸ್ಸಿಗೆ ಸಮಾಧಾನ ಸಿಕ್ಕಿರಲಿಲ್ಲ ಅದರ ನಡುವೆ ನನಗೆ ಬಂದ ಆ ಮೈಲ್ ಮನಸ್ಸಿನಲ್ಲಿ ಒಂದುರೀತಿಯ ಗೊಂದಲ ಉಂಟುಮಾಡಿತ್ತು. ನಮ್ಮ ಆಫೀಸಿನಲ್ಲಿ Boss ನ ಅನಿಸಿಕೆಯಂತೆ ಸೇಲ್ಸ್ ಆಗಿರಲಿಲ್ಲದ ಕಾರಣದಿಂದ ಈ ಮೀಟಿಂಗ್ ಅನ್ನೋದು ನನಗೆ ಮತ್ತೆ ಶಿವರಾಜ್ ಅವರಿಗೆ ಖಚಿತವಾಗಿ ಗೊತ್ತಿತ್ತು. ನಾವು ಬೆಂಗಳೂರಿಗೆ ಬಂದು, ನಮ್ಮ Boss ನ ಜೊತೆ ಮೀಟಿಂಗ್ ಮುಗಿಸಿದ ಮೇಲೆ ನಮ್ಮ ಅನುಮಾನಕ್ಕೆ ಪರಿಹಾರ ಸಿಕ್ಕಿತು. "ಹೈದರಾಬಾದಿನ ಬ್ರಾಂಚನ್ನು ಮುಚ್ಚಲಿದ್ದೇವೆ, ನೀವು ಮರಳಿ ಬೆಂಗಳೂರಿಗೆ ಇನ್ನುಳಿದ ೫ ದಿನದಲ್ಲಿ ಬರಬೇಕು" ಇದು ನನಗೆ ನನ್ನ ಮೇಲಿನವರಿಂದ ಬಂದ ಸೂಚನೆ. ಕೇವಲ ೫ ದಿನಗಳ ಸಮಯದಲ್ಲಿ ನನ್ನ ಆ ಮನೆಯನ್ನ ಖಾಲಿಮಾಡಿ ಬರುವುದು ಹುಡುಗಾಟವಲ್ಲ, ಆದರೂ ಬರಲೇ ಬೇಕಾಯಿತು. ನನ್ನ ಮನೆಯ ಯಜಮಾನಿ ತಕರಾರು ತೆಗೆದು ನನ್ನ ಮನೆಯ Advance ಅನ್ನು ಮರಳಿ ಹಿಂದಿರುಗಿಸಲಿಲ್ಲ.

ಕೊನೆಯದಾಗಿ ಹೈದರಾಬಾದಿನಲ್ಲಿ ಏನನ್ನೋ ಸಾದಿಸ ಹೊರಟಿದ್ದ ನಾನು ಮರಳಿ ನನ್ನ ಕರುನಾಡಿಗೆ ಪ್ರಯಾಣ ಬೆಳೆಸಿದ್ದೆ, ಹೈದರಾಬಾದಿನಲ್ಲಿ ನನಗೆ ಸಿಕ್ಕ ಅಪಾರ ಮಿತ್ರವೃಂದವನ್ನ ಜೊತೆಯಲ್ಲಿ ಕರುನಾಡಿಗೆ ತಂದಿದ್ದೆ.

Tuesday, April 29, 2008

ಪ್ರೇಮ



ಹೃದಯದೊಳು ಮೂಡಿ
ರಕ್ತದೊಳು ಹರಿದು
ಉಸಿರಿನಲಿ ಬೆರೆತು
ಮನಸ್ಸಿನಿಂದ ಹೊರಹೊಮ್ಮಿದ
ಮನದನ್ನೆಯ ಹೆಸರು...

Monday, April 28, 2008

ಹಕ್ಕಿಯೊಂದು ಗೂಡು ಕಟ್ಟಿತ್ತು...




ನಾನು ಹೈದರಾಬಾದಿನಲ್ಲಿ ವಾಸವಿದ್ದ ಕೆಲವೇ ತಿಂಗಳುಗಳಲ್ಲಿ ನಾನು ನನ್ನ ಜೀವನದ ಪುಟಗಳಲ್ಲಿ ಮರೆಯೋದಕ್ಕೇ ಸಾಧ್ಯವಾಗದೇ ಇರೋ ಅಂಥಾ ಕೆಲವು ಸುಂದರ ನೆನಪುಗಳು ನನ್ನಲ್ಲಿ ಮನೆಮಾಡಿವೆ. ನಾನು ಪ್ರತೀದಿನ ನನ್ನ ಕೆಲಸವನ್ನ ಮುಗಿಸಿಕೊಂಡು ಮಧ್ಯಾನ್ನ ಅಲ್ಲೇ ಇದ್ದ ಒಂದು ಉಡುಪಿ ಹೋಟೇಲಿನಲ್ಲಿ ಊಟ ಮುಗಿಸಿ ಸಂಜೆ ಎಲ್ಲಿ ಟ್ರಾಫಿಕ್ ಪೋಲೀಸು ನನ್ನ ನೋಡಿ ನನ್ನ ಬೈಕನ್ನ ಹಿಡಿದುಬಿಡುತ್ತಾನೋ ಅನ್ನೋ ಭಯದಿಂದ ಮನೆಕಡೆ ಹೋಗುತ್ತಿದ್ದೆ.

ಆ ಟ್ರಾಫಿಕ್ಕೋ, ಅಲ್ಲಿಯ ಜನರೋ !!! ಅಭ್ಭಾ !!! ಬಲಗಡೆಯ ಇಂಡಿಕೇಟರ್ ಹಾಕಿ ಎಡಕ್ಕೆ ತಿರುಗುವ ಮಹಾನುಭಾವರು. ಪುರುಷ, ಮಹಿಳೆಯ ತಾರತಮ್ಯ ಅಲ್ಲಿ ಕಾಣೋದಿಲ್ಲ. ಜೀವ ಕೈನಲ್ಲಿ ಹಿಡಿದುಕೊಂಡು ಗಾಡಿ ಓಡಿಸಿಕೊಂಡು ಮನೆ ತಲುಪಿದರೆ ನನ್ನಲ್ಲೇ ಏನೋ ಒಂದು ಯುದ್ದದಲ್ಲಿ ಗೆಲುವು ಸಾಧಿಸಿದ ಹಾಗೆ ಸಂತಸ. ದಾರಿಮಧ್ಯೆ ಏನಾದರೂ ಕರ್ನಾಟಕದ ನೊಂದಣಿಯ ಯಾರಾದರೂ ಸಿಕ್ಕಿಬಿಟ್ಟರೆ ಅದಕ್ಕಿಂತಾ ಸಂತಸ ಮತ್ತೊಂದಿಲ್ಲ. ಹೇಗಾದರೂ ನಾನು ಅವರ ಮುಂದೆ ಹೋಗಿ ನಾನೂ ಕರುನಾಡಿನವನೇ ಎಂದು ಅವರಿಗೆ ಕಾಣಿಸುವಹಾಗೆ ನನ್ನ ಗಾಡಿಯನ್ನ ಅವರ ಮುಂದೆ ಕೊಂಡೊಯ್ದು ಅದರ ಕನ್ನಡಿಯಲ್ಲಿ ತಿರುಗಿನೋಡ್ತಾ ಇದ್ದೆ. ನನ್ನ ಹಾಗೇ ಅವರೂ ಕರ್ನಾಟಕದ ನೊಂದಣಿಯ ವಾಹನದ ನಿರೀಕ್ಷೆಮಾಡ್ತಾ ಇದ್ರೆ !!! ಅವರಿಗೂ ಸಮಾಧಾನ ಸಿಕ್ಕಲಿ ಅನ್ನೋ ಭಾವನೆ.

ನಾನಿದ್ದ ಮನೆಯಲ್ಲಿ ನನ್ನ ಮನೆಯ ಮುಂದೆ ಕೆಲವು ಗಿಡಗಳಿದ್ದರೆ ಮನೆಯ ಕಾಂಪೌಂಡಿನ ಮೂಲೆಯಲ್ಲಿ ಒಂದು ಸೀತಾಫಲದ ಮರ ಇತ್ತು. ಯಾವುದೋ ಕಾರಣಕ್ಕಾಗಿ ಅದನ್ನ ಕತ್ತರಿಸಿಹಾಕಿದ್ದರೂ ಅದು ಮತ್ತೆ ಚಿಗುರಿ ನಾನು ಸೋಲುವುದಿಲ್ಲವೆಂಬಂತೆ ಬೆಳೆಯುತ್ತಿತ್ತು. ಪ್ರತಿಸಂಜೆ, ಬೆಳಗಿನ ಹೊತ್ತಿನಲ್ಲಿ ಮತ್ತೆ ರಜೆಯದಿವಸ ನಾನು ಆ ಮರವನ್ನ ನೋಡ್ತಾ ಇರ್ತಿದ್ದೆ. ನನ್ನ ಮನೆಇದ್ದ ಜಾಗದಲ್ಲಿ ಸ್ವಲ್ಪ ಪ್ರಶಾಂತತೆ ನೆಲಸಿತ್ತು. ಅದು ಮುಖ್ಯರಸ್ತೆಗಿಂತಲೂ ಸ್ವಲ್ಪ ದೂರದಲ್ಲಿ ಇದ್ದದ್ದರಿಂದ ಅಲ್ಲಿ ಪಕ್ಷಿಗಳ ಕಲರವ ಆಗಾಗ ಕೇಳಿಬರುತ್ತಲಿತ್ತು. ಅಂದೊಂದು ದಿನ ನಾನು ನಮ್ಮ ಸೀತಾಫಲದಮರದಲ್ಲಿ ಕೆಲವು ಪುಟ್ಟ ಪುಟ್ಟ ಪಕ್ಷಿಗಳು ಹಾರಿ ಬಂದು ಕುಳಿತು ತಮ್ಮಲ್ಲೇ ಏನೋ ಮಾತನಾಡಿಕೊಳ್ಳುತ್ತಿರುವುದನ್ನ ಕಂಡೆ. ಅದಾದ ಕೆಲವು ದಿನಗಳ ನಂತರ ಅದೇ ಮರದಲ್ಲಿ ಆ ಎರಡೂ ಪಕ್ಷಿಗಳು ತಮ್ಮ ಪುಟ್ಟ ಗೂಡೊಂದನ್ನ ಕಟ್ಟಲು ಪ್ರಾರಂಭಿಸಿದವು. ದೂರದಿಂದ ಹೆಕ್ಕಿತರುತ್ತಲಿದ್ದ ಆ ಕಸ ಕಡ್ಡಿಗಳನ್ನ ನಾಜೂಕಾಗಿ ಜೋಡಿಸಿ ತಮ್ಮ ಗೂಡನ್ನ ಸಿಂಗರಿಸತೊಡಗಿದವು. ಅದನ್ನು ನೋಡುವುದೇ ಒಂದು ಖುಷಿ.

ದಿನದಿಂದ ದಿನಕ್ಕೆ ಆ ಜೋಡಿಗಳು ಕಟ್ಟುತ್ತಿದ್ದ ಪುಟ್ಟ ಗೂಡು ಪೂರ್ಣವಾಗ್ತಾ ಬಂದಿತ್ತು. ನಾನು ಆ ಪುಟ್ಟ ಗೂಡಿನಲ್ಲಿ ಪುಟಾಣಿ ಮರಿಗಳ ಕಲರವ ಕೇಳಿಬರಬಹುದು ಅದರ ಫೋಟೋ ತೆಗಿಯಬಹುದು ಅಂತೆಲ್ಲಾ ಲೆಕ್ಕಾಚಾರ ಹಾಕ್ತಾಇದ್ದೆ. ಅಪರೂಪಕ್ಕೆಂದು ಆಗಸದಿಂದ ಸುರಿದ ಮಳೆ ಎಲ್ಲಿ ಆ ಪುಟ್ಟ ಗೂಡನ್ನ ನುಚ್ಚು ನೂರುಮಾಡಿರತ್ತೋ ಅಂತ ಆತಂಕದಿಂದ ಅಂದು ಸಂಜೆ ನನ್ನ ಆಫೀಸಿನಿಂದ ಮನೆಗೆ ಬಂದೆ. ಬಂದವನೇ ಆ ಸೀತಾಫಲದ ಮರದಬಳಿ ಹೋಗಿ ನೋಡಿದಾಗ ಅಲ್ಲಿ ಮುದ್ದಾದ ಕೆಮ್ಮಣ್ಣಿನಬಣ್ಣದ ೪ ಮೊಟ್ಟೆಗಳನ್ನ ಚೆಂದವಾಗಿ ಜೋಡಿಸಿಟ್ಟ ಹಕ್ಕಿ ಮೇಲಿನ ಕೇಬಲ್ಲಿನಲ್ಲಿ ಕುಳಿತು ಜೋರಾಗಿ ಕೂಗಲಾರಂಭಿಸಿತು. ಅದಕ್ಕೆ ತೊಂದರೆ ಮಾಡಬಾರದೆಂಬ ಕಾರಣದಿಂದ ನಾನು ಒಂದು ಛಾಯ ಚಿತ್ರವನ್ನ ಸೆರೆ ಹಿಡಿದು ಮರಳಿ ನನ್ನ ಗೂಡಿಗೆ ಸೇರ್ಕೊಂಡೆ.

ಈ ಘಟನೆಯಾದ ೨ದಿನದ ನಂತರ ನನಗೆ ಆ ಹಕ್ಕಿಗಳ ಕಲರವವಾಗಲೀ, ಅವುಗಳ ಹಾರಾಟವಾಗಲೀ ಆ ಮರದ ಹತ್ತಿರ ಕಾಣಲಿಲ್ಲ. ಏನಾಗಿರಬಹುದೆಂಬ ಗೊಂದಲದೊಂದಿಗೇ ನಾನು ಗೂಡಿನತ್ತ ಹೊರಟೆ. ಅಲ್ಲಿದ್ದ ಆ ಮೊಟ್ಟೆಗಳು ಬರಿದಾಗಿತ್ತು. ಖಾಲಿಯಾಗಿದ್ದ ಆ ಗೂಡಿನಲ್ಲಿ ಹಕ್ಕಿಗಳು ಹೇಗೆತಾನೆ ಇದ್ದಾವು ??? ಆ ಗೂಡಿನಿಂದ ಕೊಂಚ ದೂರದಲ್ಲಿ ಅದರ ಒಡೆದ ಒಂದು ಮೊಟ್ಟೆ ಕಾಣಿಸಿತು.

ಮನೆಯ ಮುಂದಿನ ಪುಂಡ ಹುಡುಗರು ಆ ಗೂಡಿನೊಳಗಿನಿಂದ ಆ ಮೊಟ್ಟೆಗಳನ್ನು ಹೊರತೆಗೆದು ಅದನ್ನು ಒಡೆದು ಹಾಕಿದ್ದರು. ಪುಟ್ಟ ಪುಟ್ಟ ಮರಿಗಳೊಂದಿಗೆ ಹಾರಬೇಕಿದ್ದ ಆ ಪಕ್ಷಿಯ ಸಂಸಾರ ಅಂದು ಬರಿದಾಗಿತ್ತು, ಮನುಷ್ಯನ ಕ್ರೂರತನಕ್ಕೆ ಮೂಕ ಸಾಕ್ಷಿಯಾಗಿತ್ತು.

Friday, April 25, 2008

ನೊಡಿದ್ಯಾ !!!

ನೊಡಿದ್ಯಾ !!! ನಾನು ಬರ್ದಿರೋ ಕವನ (ಅದು ಕವನ ಅಂತ ಅಂದ್ಕೋಬೇಕು ಅಷ್ಟೇ) ಅದು, ಯಾರೋ ಕಾಪಿಮಾಡಿ ಅವರ ಬ್ಲಾಗಿನಲ್ಲಿ ಹಾಕಿದಾರೆ !!! ನೋಡೋ !!!!

ಈ ಮೇಲಿನ ಸಾಲುಗಳು ಬೇರೆಯಾರೂ ಹೇಳಿದ್ದಲ್ಲ ಸ್ವಾಮೀ, ನಾನೇ ಹೇಳಿದ್ದು. ಹೌದು, ಕೆಲವು ತಿಂಗಳ ಹಿಂದೆ ನನ್ನ ಬ್ಲಾಗಿನಿಂದ ಕೆಲವು ಕವನ?? ಗಳು ಬೇರೆಯವರ ಪಾಲಾಗಿತ್ತು, ಅಷ್ಟಕ್ಕೇ ರಾಧ್ಧಾಂತ ಮಾಡಿ ಗಲಾಟೆ ಮಾಡ್ಕೊಂಡು ನನ್ನ ಬ್ಲಾಗ್ ನನ್ನ ಸರ್ವಸ್ವ ಅಂತ ನನ್ನ ಬ್ಲಾಗನ್ನ ಯಾರೂ ನೋಡದ ಹಾಗೆ ನಾನೇ ಲಾಕ್ ಮಾಡಿದ್ದೆ. ಕೆಲವು ತಿಂಗಳ ಹಿಂದೆ ನನ್ನ ಜೀವನದಲ್ಲಿ ನಾನು ಊಹಿಸಲಾಗದ ಕೆಲವು ಕಹಿ ಘಟನೆಗಳು ಜರುಗಿದವು. ಅದು ನನ್ನ ಪ್ರೀತಿಯ ಅಪ್ಪನ ಅಗಲಿಕೆ. ಆಗ ನನಗನ್ನಿಸಿದ್ದು "ಈ ಪ್ರಪಂಚದಲ್ಲಿ ನಾವು ಹುಟ್ಟಿದಾಗ ಬರಿಗೈಯಲ್ಲಿ ಬಂದು ಬರಿಗೈಯಲ್ಲಿ ಹೋಗ್ತೀವಿ, ಅದರ ನಡುವೆ ನಾನು ನನ್ನದು ಅನ್ನುವ ಅಹಂ ಏತಕ್ಕೆ???" ಜೀವನದಲ್ಲಿ ಒಂದುರೀತಿಯ ನಿರಾಸಕ್ತಿ ಮೂಡಿತ್ತು. ಕಾಲಾಯ ತಸ್ಮೈ ನಮಃ ಅನ್ನೋಹಾಗೆ ಕ್ರಮೇಣವಾಗಿ ನಾನು ನನ್ನ ಇಂದಿನ ಜೀವನಕ್ಕೆ ಹೊಂದಿಕೊಂಡು ಬದುಕುವುದನ್ನ ರೂಢಿಸಿಕೊಂಡಿದ್ದೇನೆ.

ಬೇರೆಯವರಿಗೆ ಏನಾದರೂ ಕೊಟ್ಟರೆ ಅದು ಅವರಿಗೆ ಸಂತಸ ಅಥವ ಸಮಾಧಾನ ತರುವಂತದ್ದಾಗಿರಬೇಕು. ನನ್ನ ಆ ಬರಹ ಕೂಡಾ ಕೆಲವು ಮಂದಿಗೆ ಸಮಾಧಾನ ತಂದಿತ್ತೇನೋ !!! ಆದಕಾರಣದಿಂದಲೇ ಅವರು ಅದನ್ನ ತಮ್ಮ ಬ್ಲಾಗಿಗೆ ಸೇರಿಸಿಕೊಂಡಿದ್ದರು ಅಂತ ನಂತರ ತಿಳಿಯಿತು. ಆಗ ಏನೋ ಒಂದುರೀತಿಯ ಕಸಿವಿಸಿಯಾಗ್ತಾ ಇತ್ತು. ಆದರೆ ಮಾನವ ಸಹಜಗುಣ ಎಲ್ಲಿ ಹೋಗತ್ತೆ !!! "ನಾನು, ನನ್ನದು ಅನ್ನೋ ಅಹಂ" ನಂತರ ನಾನು ಆ ವ್ಯಕ್ತಿಯಿಂದ ಬಂದ ಸ್ನೇಹದ ಕೋರಿಕೆಯನ್ನ ಒಪ್ಪಿಕೊಂಡು ಅವರ ಸ್ನೇಹಿತನಾದೆ.

ಆ ಘಟನೆಯ ನಂತರ ನನ್ನ ಮನದಲ್ಲೇ ನಾನು ನೂರಾರುಬಾರಿ ಯೋಚನೆ ಮಾಡಿದ್ದೇನೆ, ಯಾವುದೇ ವ್ಯಕ್ತಿಯಲ್ಲಿ ಇರುವ ಕಲೆ ಹೊರಬರಬೇಕಾದರೆ ಆ ಕಲೆಗೆ ತಕ್ಕ ಪ್ರೋತ್ಸಾಹ ಸಿಕ್ಕಲೇಬೇಕು. ಯಾವುದೇ ಒಂದು ಗಿಡವು ಬೆಳೆದು ನಿಲ್ಲಬೇಕಾದರೆ ಅದಕ್ಕೆ ತಕ್ಕ ಪೋಷಣೆ ಅತ್ಯಗತ್ಯ. ನನ್ನ ಬ್ಲಾಗನ್ನು ನೋಡಿ ಅದನ್ನು ಮೆಚ್ಚಿದಾಗ ತಾನೆ ನನಗೆ ಮತ್ತೊಮ್ಮೆ ಬರೆಯುವ ಪ್ರಯತ್ನ ಪಡಲಿಕ್ಕೆ ಸಾಧ್ಯ ??? ನಾನು ಬರೆದದ್ದನ್ನ ಯಾರೊಂದಿಗೂ ಹಂಚಿಕೊಳ್ಳದಿದ್ದರೆ ನಾನು ಬರೆದದ್ದಾದರೂ ಯಾವ ಕಾರಣಕ್ಕೆ ??? ಇದೆಲ್ಲಾ ವಿಚಾರಮಂಥನವಾದ ನಂತರ ನನ್ನ ಬ್ಲಾಗನ್ನು ಬಂಧಮುಕ್ತಗೊಳಿಸಿದೆ.