ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Thursday, June 5, 2008

ಹೈದರಾಬಾದಿನ ದಿನಗಳು....

ಹೈದರಾಬಾದಿನ ಆಫೀಸಿನಲ್ಲಿ ಜಾಸ್ತಿಏನೂ ಕೆಲಸ ಇಲ್ಲದೇ ಇದ್ದಿದ್ರಿಂದ ನಾನು ಅಂತರ್ಜಾಲದಲ್ಲಿ ನನ್ನ ಗೆಳೆಯರಜೊತೆ ಮಾತಾಡೊ ಅಭ್ಯಾಸ ಇತ್ತು. ಹಾಗೇ ನನಗೆ ತುಂಬಾಜನ ಗೆಳೆಯರಾದ್ರು. ನನ್ನ ನಿಜಜೀವನದಲ್ಲಿ ಪಡಿದೇಇರೋ ತಮ್ಮ, ತಂಗಿಯರ ಪ್ರೀತಿ ಇಲ್ಲಿಂದ ಪಡ್ಕೊಂಡೆ. ಇಷ್ಟರ ಮಧ್ಯದಲ್ಲಿ ವಿಜಯ್ ನನ್ಗೆ ತುಂಬಾ ಆಪ್ತನಾದ. ದಿನಾ ಅಲ್ದಿದ್ದ್ರೂ ವಾರಂತ್ಯದಲ್ಲಿ ಅವನ ಪುಟ್ಟ ಗೂಡಿಗೆ ಹೂಗಿ ಬರ್ತಾ ಇದ್ದೆ. ಹಾಗೆ ನಮ್ಮ ಸ್ನೇಹ ಗಾಡವಾಯ್ತು... ಶಿಲ್ಪಾ ಕೂಡಾ ಕನ್ನಡದವಳು. ಸ್ನೇಹಕ್ಕೆ ಬೆಲೆ ಕೊಡೋ ಹುಡುಗಿ. ನಮ್ಮ ಆಫೀಸ್ ಹತ್ತಿರದಲ್ಲೇ ಇತ್ತು. ಹಾಗಾಗಿ ಒಮೊಮ್ಮೆ ಹರಟೆ ಹೊಡಿಯೊದಿಕ್ಕೆ ಭೇಟಿಯಾಗ್ತಾ ಇರ್ತಿದ್ವಿ. ನಾನು ವಿಜಯ್ ಶಿಲ್ಪ... ಮೂರೂಜನ ತುಂಬಾನೇ ಒಳ್ಳೆ ಗೆಳೆಯರಾದ್ವಿ.

ಗೆಳೆತನ ನನ್ನ ಯಾವ ರೀತಿಯಲ್ಲಿ ಪ್ರೋತ್ಸಾಹಿಸತ್ತೆ ಅನ್ನೊದನ್ನ ನಾನು ತಿಳಿದಿರಲಿಲ್ಲ. ಯಾವ ಕ್ಷಣದಲ್ಲಿ ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ನೋ... ಗೊತ್ತಾಗ್ಲಿಲ್ಲ (ಕವಿ ಅಂತ ನನ್ನ ನಾನೇ ಕರ್ಕೊಬೇಕು ಅಲ್ವ !!!!). ಆವತ್ತಿನ ದಿನ ಹೈದರಾಬಾದಿನ ಮೊದಲ ಮಳೆ ಬೀಳ್ತಾಇತ್ತು. ನಾನು ವಿಜಯ್ ಜೊತೆ ಫೋನಿನಲ್ಲಿ ಮಾತಾಡ್ತಾ ಅವನಿಗೆ ಹಾಗೇ ಒಂದು ಕವನದ ರೂಪದಲ್ಲಿ ಏನೋ ಹೇಳಿದೆ. ತಕ್ಷಣ ಅವನು ನನ್ನ ಪ್ರೋತ್ಸಾಹಿಸಿ ನೀನು ಇದನ್ನ ಬರೀ ಚೆನ್ನಾಗಿದೆ ಅಂತ ಹುರಿದುಂಬಿಸಿದ. ಆವತ್ತು ಹೊರಗೆ ಬಂದದ್ದೇ ನನ್ನ ಮೊದಲ ಕವನ "ಭಾವನೆಗಳ ಸಾಗರದಲ್ಲಿ". ಮೊದಲ ಪ್ರಯತ್ನ ಸಫಲವಾಗದಿದ್ದರೂ ವಿಫಲವಾಗಲಿಲ್ಲ... ನಾನು ಬರೆದ ಸಾಲುಗಳನ್ನ ನನ್ನ ಗೆಳೆಯರೊಡನೆ ಹಂಚಿಕೊಂಡೆ, ಏಲ್ಲ ನನಗೆ ಪ್ರೋತ್ಸಾಹಿಸಿದ್ರು. ಹೀಗೇ ಕೇವಲ ಒಂದು ತಿಂಗಳಿನಲ್ಲಿ ಹೆಚ್ಚೂಕಮ್ಮೀ ೩೦ ಕವನಗಳು ಹೊರಗೆ ಬಂದ್ವು. ಅವು ಕವನಗಳಲ್ಲ, ನನ್ನ ಮನಸ್ಸಿನ ಭಾವನೆಗಳು. ಕೆಲವು ಸಲ ರಾತ್ರಿ ೪ ಘಂಟೆಯಲ್ಲಿ ೪ ಸಾಲು ನೆನಪಾಗಿ ಆ ಅರ್ಧ ರಾತ್ರಿಯಲ್ಲಿ ಎದ್ದು ಬರೆದದ್ದೂ ಇದೆ. ವಿಜಯ್ ನನಗೆ ನಾನು ಬರೆದ ಕವನಗಳನ್ನ ನನ್ನದೇ ಆದ ಬ್ಲಾಗ್ ನಲ್ಲಿ ಹಾಕೋದಕ್ಕೆ ಹೇಳಿ ನಾನು ಅದನ್ನ ಅಂತರ್ಜಾಲದಲ್ಲಿ ಪ್ರಕಟಗೊಳಿಸಿದೆ. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಚೆನ್ನಾಗೇ ಇತ್ತು. ನನ್ನ ಕವನವನ್ನ ಓದಿ ನನ್ನಗೆ ಕೆಲವು ಮಿತ್ರರು ಆಪ್ತರಾದರು. ನನ್ನ ಬಾಳಿನಲ್ಲಿ ಅಳಿಸಿಹೋಗದ ಮೈಲಿಗಲ್ಲಾದರು. ಅವರಿಗೆಲ್ಲಾ ಇಲ್ಲಿ ಒಂದು ಅಭಿನಂದನೆ ಸಲ್ಲಿಸ್ತಾಇದ್ದೆನೆ.

ಹೀಗೇ ನಡಿತಾ ಇರೋವಾಗ ನನ್ನ ಹಳೇ ಕಂಪನಿಯ ಸಹೋದ್ಯೋಗಿ, ಮಿತ್ರರೂ ಆದ ಶಂಕರಮೂರ್ತಿ ಹೈದರಾಬಾದಿಗೆ ಬರೋವಿಚಾರ ತಿಳಿಸಿದ್ರು. ನಾನು ಹೇಗಿದ್ರೂ ಒಬ್ಬನೇ ಇದ್ದದ್ದರಿಂದ ನನ್ನ ಜೊತೆ ಬಂದು ಉಳಿದುಕೊಳ್ಳಬಹುದು ಅಂತ ಹೇಳಿ ನನ್ನದೇ ಆದ ಕೆಲವು ಕರಾರುಗಳನ್ನ ಅವರಿಗೆ ಹೇಳಿದೆ :) . ಅದಕ್ಕೆಲ್ಲಾ ಒಪ್ಪಿ ಶಂಕರ್ ನನ್ನ ಮನೆಗೆ ಬಂದರು.
ಅಲ್ಲಿಂದ ನಮ್ಮ ಅಡುಗೆ ಮಾಡೋ ಕಾರ್ಯಕ್ರಮ ಸ್ವಲ್ಪ ಜಾಸ್ತಿ ಆಯ್ತು. ನಾವಿಬ್ಬರೂ ಸೇರಿ ಅಡುಗೆ ಮಾಡ್ಕೋತಿದ್ವಿ. ಜೊತೆ ನಲ್ಲಿ ಊಟಮಾಡಿ ಪಾತ್ರೆ ತೊಳೆದಿಡ್ತಿದ್ವಿ. ಬೇಸರ ಆದ್ರೆ ಅಲ್ಲೇ ಮನೆಸುತ್ತಾಮುತ್ತಾ ಹೊಗಿ ತಿರುಗಾಡ್ಕೊಂಡು ತರಕಾರಿ, ಮೊಸರು ತಂದು ರಾತ್ರಿ ಅದನ್ನ ಮಜ್ಜಿಗೆ ಅಥವಾ ಲಸ್ಸಿ ಮಾಡಿಕೊಂಡು ಕುಡಿದು ಹೊತ್ತು ಕಳೀತಾ ಇದ್ವಿ.

ನನ್ನ ಮಿತ್ರ ಮಂಡಳಿಯಿಂದ ನನಗೆ ಬಹಳಷ್ಟು ಸಹಾಯ ಸಿಕ್ಕಿದೆ. ಹಾಗೆ ನಾನು ಕೂಡಾ ನನ್ನ ಕೈಲಾದ ಸಹಾಯವನ್ನ ಮಾಡಿದ್ದೇನೆ ಎಂದು ನನ್ನ ಅನಿಸಿಕೆ. ಅದೆಷ್ಟು ನಿಜಾನೋ ಎಷ್ಟು ಸುಳ್ಳೋ ನನ್ಗಂತೂ ಗೊತ್ತಿಲ್ಲ. ಈ ವಿಚಾರ ಬರ್ತಾ ಇದ್ದಹಾಗೇ ನನಗೆ ನನ್ನ ಗೆಳೆಯ ಅಮಿತ್ ಮತ್ತೆ ದೀಪ್ತಿ ನೆನಪಾಗ್ತಾ ಇದಾರೆ, ಸ್ವಲ್ಪ ಅವರಬಗ್ಗೆ ನಿಮಗೆ ಹೇಳ್ತೀನಿ.

ಅಮಿತ್ ಬಗ್ಗೆ ಹೇಳ್ಬೇಕು ಅಂದ್ರೆ ಅವನು ನನ್ನ ಆರ್ಕುಟ್ ಗೆಳತಿ ದೀಪ್ತಿ ಯಿಂದ ಪರಿಚಯ ಆದದ್ದು. ಇನ್ನು ದೀಪ್ತಿ ಯಾರು ಅಂತ ಹೇಳ್ಬೆಕು ಅಲ್ವಾ ???? ಆಯ್ತು ಆಯ್ತು... ಅವಳು ನನ್ನಗೆ ಅದೇ ಆರ್ಕುಟ್ಟಿನಮೂಲಕ ಪರಿಚಯವಾದ ಮತ್ತೊಬ್ಬಗೆಳತಿ. ಹೈದರಾಬಾದಿನಲ್ಲಿ ನನಗೆ ಬೇರೆಬೇರೇ ಅಡುಗೆಯ ಪಾಕರುಚಿ ಕಲಿಸೋದಕ್ಕೆ ಅದರ ವಿಧಾನಗಳನ್ನ ಕಳಿಸಿಕೊಟ್ಟವಳು. ಅವಳ ಗೆಳೆಯನೇ ಈ ಅಮಿತ್. ನಾನು ಹೈದರಾಬದಿನಲ್ಲಿ ವಾಸವಾಗಿದ್ದಾಗ ನನ್ನ ಜೊತೆ ಕೆಲವು ತಿಂಗಳು ನನ್ನ ಅತಿಥಿಯಾಗಿದ್ದವನು. ಅವನಿಗೆ ಹೈದರಾಬಾದಿನಲ್ಲಿ ಕೆಲವು ತಿಂಗಳು ಕೆಲಸವಿದ್ದಿದ್ದರಿಂದ ಉಳಿದುಕೊಳ್ಳೋದಿಕ್ಕೆ ನನ್ನ ಜೊತೆ ಇದ್ದ. ಸೀದಾ ಸಾದಾ ಹುಡುಗ, ಆದರೆ ಬತ್ತಿ ಹೊಡಿಯೋದು, ಎಣ್ಣೇ ಹಾಕೊದು ಬಿಟ್ರೆ ಮತ್ತೆಲ್ಲಾ ಒಳ್ಳೇ ಅಭ್ಯಾಸಗಳೆ ಇತ್ತು. ನನ್ನ ಮೊದಲ ಉಪ್ಪಿಟ್ಟಿನ ಪ್ರಯೋಗಕ್ಕೆ ಸಿಕ್ಕಿದ್ದೇ ಅಮಿತ್. ಬೆಳಿಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ವಾಪಾಸ್ ಬಂದು ನಮ್ಮಜೊತೆ ಹರಟೆ ಹೊಡ್ಕೊಂಡು ಮಲ್ಕೊತಾ ಇದ್ದ. ವಾರಾಂತ್ಯದಲ್ಲಿ ಅಮಿತ್ ಮತ್ತೆ ಶಂಕರ್ ಜೋಡಿ ಮನೆ ಬಿಟ್ಟು ಹೊರಗೆ ತಿರುಗಾಡ್ಕೊಂಡು ಬರ್ತಾಇದ್ರು. ಈಗ ಅಮಿತ್ ಮತ್ತೆ ದೀಪ್ತಿ ಇಬ್ಬರೂ ದಂಪತಿಗಳು. ಅವರನ್ನ ಒಂದುಮಾಡಿದ ಹಿರಿಮೆ ಆರ್ಕುಟ್ ಗೆ ಸೇರಬೇಕು.

ಹೈದರಾಬಾದಿಗೆ ಬಂದಾಗಿನಿಂದಾ ನಾನು ಎಲ್ಲೂ ಹೋಗಿರಲಿಲ್ಲ, ಆದ್ದರಿಂದ ನಾನು, ಶಂಕರ್, ಅಮಿತ್, ವಿಜಯ್ ಮತ್ತೆ ಶಿಲ್ಪಾ ಎಲ್ಲಾ ಸೇರಿ ಒಂದು ಸಿನಿಮಾಕ್ಕೆ ಹೋಗೋದು ಅಂತ ತೀರ್ಮಾನಿಸ್ಕೊಂಡು ಡೈಹಾರ್ಡ್ ಭಾಗ-೪ ಕ್ಕೆ ಮಲ್ಟಿಪ್ಲಕ್ಸ್ ಗೆ ಹೋದ್ವಿ. ಸಿನಿಮಾಏನೋ ಚೆನ್ನಾಗೇ ಇತ್ತು, ಆದರೆ ಇವತ್ತಿಗೂ ನನಗೆ ಸಿನಿಮಾಗಿಂತಾ ನನ್ನ ಗೆಳೆಯರೊಡನೆ ಕಳೆದ ಸಮಯ ನೆನಪಾಗತ್ತೆ. ನಾನು ವಿಜಯ್ ಒಟ್ಟಿಗೇ ವಿರಾಮದಲ್ಲಿ ಹೋಗಿ ಪಾಪ್ ಕರ್ನ್ ತಂದಿದ್ದು, ಕತ್ತಲ ಸಿನಿಮಾ ಹಾಲ್ನಲ್ಲಿ ಎಡವಿ ತಡವರಿಸಿದ್ದು... ಹೀಗೆ... ಸಿನಿಮಾ ಮುಗಿದ ನಂತರ ಇನ್ನೂ ಸಮಯವಿದ್ದದ್ದರಿಂದ ಮತ್ತೆ ನಮ್ಮ ಪ್ರಯಾಣ ಹುಸೇನ್ ಸಾಗರ್ ಕಡೆ ಹೊರಡ್ತು. ಅಲ್ಲಿ ನಾವು ಎಲ್ಲಾ ಸೇರಿ ಜೋಳ, ಐಸ್ಕ್ರೀಮ್ ತಿಂದು ಸಕ್ಕತ್ ಮಜಾ ಮಾಡಿದ್ವಿ. ನಾನು ಇಲ್ಲಿ ನನ್ನ ಎಲ್ಲಾ ದಿನಗಳನ್ನ ನನ್ನ ದಿನಚರಿಯಲ್ಲಿ ಬರೀಬೇಕು ಅಂತ ಅಂದುಕೊಂಡಿದ್ದೆ. ಆದರೆ ಬರೀತಾ ಇಲ್ಲ, ಯಾಕೇ ಅಂದ್ರೆ ಅದನ್ನ ಬರೀತಾ ಹೋದ್ರೇ ನನ್ನದೇ ಒಂದು ಕಾದಂಬರಿ ಬಿಡುಗಡೆ ಮಾಡ್ಬೇಕಾಗತ್ತೇನೋ...

ನಾನು ಅಲ್ಲಿ ಯಾವ ಪ್ರೇಕ್ಷಣೀಯ ಸ್ಥಳಗಳಿಗೂ ಹೋಗಿರಲಿಲ್ಲ. ಹೀಗಿರೋವಾಗ ಇದ್ದಕ್ಕಿದ್ದಂತೇ ನಾನು, ಶಂಕರ್ ಮತ್ತೆ ಅಮಿತ್ ಸೇರಿ ಮತ್ತೊಂದು ವಾರಾಂತ್ಯದಲ್ಲಿ ಮಂತ್ರಾಲಯಕ್ಕೆ ಹೊಗೋ ಕಾರ್ಯಕ್ರಮ ಹಾಕ್ಕೋಂಡ್ವಿ. ಅಮಿತ್ ತನ್ನ ಊರಿಗೆ ಹೋಗಬೇಕಿದ್ದಿದ್ದರಿಂದ ನಮ್ಮಜೊತೆ ಬರಲಿಲ್ಲ. ನಾನು ಮತ್ತೆ ಶಂಕರಮೂರ್ತಿ ಮಂತ್ರಾಲಯಕ್ಕೆ ಹೊರಡುವುದು ನಿಶ್ಚಯವಾಯ್ತು ಮತ್ತೆ ಏ.ಪಿ.ಸ್.ಟಿ.ಡಿ.ಸಿ ಯ ಮೂಲಕ ಮಂತ್ರಾಲಯ ಪ್ರವಾಸದ ಕಾರ್ಯಕ್ರಮ ಶುರುವಾಯ್ತು. ಶನಿವಾರದಂದು ಅವರದೇ ಆದ ಒಂದು ಮಿನಿ ಬಸ್ ನಲ್ಲಿ ನಾನು ಮತ್ತೆ ಶಂಕರ್ ಇಬ್ಬರೂ ಹೊರಟಿದ್ವಿ, ನಮ್ಮ ಜೊತೆ ನಮ್ಮ ಗುಂಪಿನ ಮಿಕ್ಕ ಸದಸ್ಯರಿಲ್ಲದ ಕಾರಣ ಪ್ರಯಾಣ ಬಹಳ ಬೇಸರ ಬರಿಸ್ತಾಇತ್ತು. ಆದ್ದರಿಂದ ನಮ್ಮ ಸಹಪ್ರಯಾಣಿಗರ ಬಗ್ಗೆ ನಾವು ಮಾತಾಡಿಕೊಳ್ತಾ ನಗುನಗುತ್ತಾ ಪ್ರಯಾಣ ಮುಂದುವರಿಸ್ತಾ ಇದ್ವಿ. ಅದೊಂದು ಪ್ಯಾಕೇಜ್ ಟೂರ್ ಆದದ್ದರಿಂದ ಕೇವಲ ಮಂತ್ರಾಲಯವಲ್ಲದೇ ಮತ್ತಿತರ ಸ್ಥಳಗಳನ್ನೂ ನೋಡ್ಕೊಂಡು ವಾಪಾಸ್ ಬಂದ್ವಿ.

ನನಗೆ ಅಲ್ಲಿವಾತಾವರಣ ದಿನ ಕಳೆದಂತೆ ಬೇಸರ ತರಲಾರಂಭಿಸಿತ್ತು. ಕೆಲಸಮಾಡಲು ಅಲ್ಲಿ ಹೆಚ್ಚಿನ ಅವಕಾಶವಿಲ್ಲದ ಕಾರಣ ನಾನು ಅಲ್ಲಿಂದ ಹೊರಟು ಮರಳಿ ಬೆಂಗಳೂರಿಗೆ ಬರುವ ಯೋಜನೆ ಹಾಕತೊಡಗಿದೆ. ನಾನು ಅಲ್ಲಿ ಇನ್ನೂ ಕೆಲವು ದಿನ ಇರಬಹುದು ಅನ್ನೋಒಂದು ಲೆಕ್ಕಾಚಾರದ ಮೇಲೆ ನಾನು ಅಲ್ಲಿಯ ಒಂದು ಕಂಪ್ಯೂಟರ್ ಕ್ಲಾಸಿಗೆ ಶಿಲ್ಪಜೊತೆ ಹೋಗಿ ಸೇರಿದ್ದೆ, ನಿಮಗೆ ಶಿಲ್ಪಾಳ ಪರಿಚಯ ಮಾಡಿಕೊಟ್ಟಿಲ್ಲ ಅಲ್ವಾ !!! ಆಮೇಲೆ ಅವಳನ್ನ ಇಲ್ಲಿ ಪರಿಚಯಿಸ್ತೀನಿ. ಹಾಗಾಗಿ ನಾನು ಬೆಂಗಳೂರಿಗೆ ಮರಳಿಬರೊ ವಿಚಾರನ್ನ ಸ್ವಲ್ಪ ತಿಂಗಳಮಟ್ಟಿಗೆ ಮುಂದೂಡಿದ್ದೇ ಈ ಕ್ಲಾಸಿನ ವಿಚಾರಕ್ಕಾಗಿ. ಇದೆಲ್ಲದರ ನಡುವೆ ನನ್ನ ಸಹೋದ್ಯೋಗಿ ಮತ್ತೆ ಮಿತ್ರರೂ ಆದ ಶಿವರಾಜ್ ಅವರಿಗೆ ಕಂಕಣಭಾಗ್ಯ ಕೂಡಿಬಂದಿತ್ತು. ಹೌದು, ಅವರಿಗೆ ಮದುವೆ... ಆ ಸಂಭ್ರಮದಲ್ಲಿ ನಾನೂ ಭಾಗಿಯಾಗುವ ಉತ್ಸಾಹದಲ್ಲಿ ಅವರಿಗೆ ಮದುವೆಯ ಆಮಂತ್ರಣಪತ್ರವನ್ನ ನಾನೆ ತಯಾರಿಸಿ ಕೊಟ್ಟಿದ್ದೆ, ನನ್ನ ಬಳಿ ಮುದ್ರಣಯಂತ್ರ ಇಲ್ಲ ಸ್ವಾಮೀ, ಅಂತರ್ಜಾಲದಲ್ಲಿ ಹುಡುಕಿ ಯಾವುದೋ ಒಂದು ಒಳ್ಳೆಯ ಚಿತ್ರವನ್ನ ಕದ್ದು ಅದರಮೇಲೆ ಕನ್ನಡದಲ್ಲಿ ಆಮಂತ್ರಣ ಪತ್ರವನ್ನ ಬರೆದುಕೊಟ್ಟಿದ್ದೆ. ೧೩-ಮೆ-೨೦೦೮ ಈ ತಾರೀಖು ಶಿವರಾಜ್ ಮತ್ತು ಶಿವಲೀಲ ಅವರ ಮದುವೆ ಸಮಾರಂಭ ಧಾರವಾಡದಲ್ಲಿ ಎಂದು ನಿಶ್ಚಯವಾಯಿತು. ಅದಕ್ಕೆಂದೇ ನಾನು ಮತ್ತೆ ನಮ್ಮ ಮ್ಯಾನೇಜರ್ ಹೈದರಾಬಾದಿನಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ವಿ. ದಾರಿಯ ಖರ್ಚಿನಲ್ಲಿ ಅರ್ಧ ನನ್ನ ಮ್ಯಾನೇಜರ್ರೇ ಹಾಕಿಕೊಂಡ್ರು. ಹವಾನಿಯಂತ್ರಿತ ರೈಲ್ವೇಬೋಗಿಯಲ್ಲಿ ಧಾರವಾಡಕ್ಕೆ ಬಂದು ಸೇರಿದ್ವಿ. ಶಿವರಾಜ್ ಅವರ ಮನೆಯವರಿಂದ ಆಥಿತ್ಯ ಪಡೆದುಕೊಂಡು ನನ್ನ ಮ್ಯಾನೇಜರ್ ಕಾದಿರಿಸಿದ್ದ ಹೋಟೇಲ್ ರೂಮಿಗೆ ಬಂದೆ. ಅಲ್ಲಿ ನಾನು ಕರುನಾಡಿಗೆ ಬಂದ ಖುಷಿ ಒಂದುಕಡೆಯಾದರೆ ನನ್ನ ಮನೆಯವರೊಂದಿಗೆ, ಗೆಳೆಯರೊಡನೆ ಹೆಚ್ಚುಹೊತ್ತು ಮಾತನಾಡಬಹುದು ಅನ್ನೋದು ಮತ್ತೊಂದು ಸಂಭ್ರಮ. ಮದುವೆ ಮುಗಿಸಿ ನಂತರ ಮರಳಿ ನನ್ನ ಬೆಂಗಾಡು ಹೈದರಾಬಾದಿಗೆ ಮರಳಿ ಬಂದೆ.

ಈಗ ಸ್ವಲ್ಪ ಶಿಲ್ಪಾಳ ಪರಿಚಯ ಮಾಡಿಕೊಳ್ಳೋಣ, Charming, innocent and decent girl ನನ್ನ ಗೆಳತಿ ಶಿಲ್ಪ. ಒಬ್ಬಳೇ ಕರ್ನಾಟಕದಿಂದ ಇಷ್ಟುದೂರದ ಹೈದರಾಬಾದಿಗೆ ಬಂದಿದ್ದರೂ ಜೀವನದಲ್ಲಿ ಏನಾದರೊಂದು ಸಾಧಿಸಲೇಬೇಕು ಎಂದು ಪಣತೊಟ್ಟಿದ್ದ ಛಲಗಾತಿಆಕೆ. ಸ್ವಲ್ಪ ವಿದೇಷೀತಿಂಡಿಗಳ ವ್ಯಾಮೋಹ ಜಾಸ್ತಿನೇ ಇತ್ತು ಅವಳಿಗೆ, ಆದರೂ ಕೋಮಲ ಮನಸ್ಸು. ಭವಿಷ್ಯದ ಕನಸನ್ನ ಕಟ್ಟಿ ಅದನ್ನು ಸಾಕಾರಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟವಳು. ಕಂಪ್ಯೂಟರ್ ಕೋರ್‍ಸಿಗೆ ಅವಳಜೊತೆಯಲ್ಲಿ ಹೋಗಬೇಕಿದ್ದ ನಾನು ಅನಿವಾರ್ಯಕಾರ್‍ಅಣಗಳಿಂದ ಆ ಅವಕಾಶವನ್ನ ಕಳೆದುಕೊಂಡೆ. ತನ್ನ ಗೆಳತಿಯರೊಡನೆ ಮನೆ ಮಾಡ್ಕೊಂಡು ತಾನೇ ಅಡುಗೆಕೂಡಾ ಮಾಡ್ತಾ, ಕೆಲಸಕ್ಕೂ ಬಂದು, ಕ್ಲಾಸಿಗೂ ಹೋಗ್ತಾ ಇದ್ಳು. ಅವಳ ಗೆಳೆತನದ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೀತೀನಿ, ಯಾಕಂದ್ರೆ ಇಲ್ಲಿ ಅವಳ ಮತ್ತೆ ವಿಜಯ್ ನ ಪರಿಚಯ ಮಾಡಿಕೊಡ್ತಾಇದ್ರೆ ಪುಟಗಳೇ ಸಾಲೋದಿಲ್ಲ.

ಹೀಗೇ ನಾನು ನನ್ನ ಜೀವನದ ಪಯಣ ಸಾಗುತ್ತಾ ಇರೋವಾಗ ಒಂದುದಿನ ನಮ್ಮ ಮ್ಯಾನೇಜರ್ ಮತ್ತೆ ನಮ್ಮ ಆಫೀಸಿನ ಹೆಚ್ ಆರ್ ಆದ ಕಾರ್ತಿಕ್ಗೂ ಮಾತಿನ ಚಕಮಕಿ ನಡೆದು ನಮ್ಮ ಮ್ಯಾನೇಜರ್ ತಮ್ಮ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ್ರು. ಅಲ್ಲಿಂದ ಮುಂದೆ ನಡೆಯುವ ಬೆಳವಣಿಗೆಯನ್ನ ಊಹಿಸಿಕೊಂಡು ನನಗೆ ಮತ್ತೆ ಶಿವರಾಜಿಗೆ ನಡುಕ ಶುರು ಆಗಿತ್ತು. ಮೊದಲೇ ಹೈದರಾಬಾದಿನಿಂದ ಹೆಚ್ಚಿಗೆ ಏನೂ ವಹಿವಾಟು ಆಗುತ್ತಿರಲಿಲ್ಲ, ಅದರ ಜೊತೆಗೆ ಈ ಘಟನೆ... ನಾವು ಮನಸ್ಸಿನಲ್ಲೇ ಮುಂದಿನ ಬೆಳವಣಿಗೆ ಬಗ್ಗೆ ಊಹಿಸಿಕೊಂಡಿದ್ವಿ.


ಹೈದರಾಬಾದಿನಲ್ಲಿ ಸಂತಸ ತಂದ ಮಳೆ:
ಆವತ್ತೊಂದು ದಿನ ನಾನು ಮತ್ತೆ ಶಿಲ್ಪಾ ನಮ್ಮ ಕಂಪ್ಯೂಟರ್ ಸೆಂಟರ್ನಿಂದ ಮನೆಗೆ ಹೊರಟಿದ್ವಿ, ದಾರಿಮೇಲೆ ದಟ್ಟವಾದ ಮೋಡ ಇದಿದ್ದ್ರಿಂದ ಮಳೆ ಬಂದೇ ಬರತ್ತೆ ಅಂತ ಗೊತ್ತಿತ್ತು. ಆದರೂ ಮಳೆ ಬರೋದಕ್ಕೆ ಮುಂಚೆ ಹೋಗಿ ಮನೆ ಸೇರ್ಕೊಳ್ಳೊಣ ಅಂತ ಭಂಡಧೈರ್ಯ ಮಾಡಿ ಮನೇಕಡೆಗೆ ಹೊರಟಿದ್ವಿ. ನಾವಂದುಕೊಂಡಿದ್ದ ಹಾಗೇ ದಾರಿಯಲ್ಲಿ ಮಳೆ ಬಂದೇ ಬಿಡ್ತು. ಮಳೆಯ ಪ್ರಾರಂಭದಲ್ಲಿ ವಿಧಿಯಿಲ್ಲದೇ ನೆನೆದ್ವಿ, ಆದರೆ ಆಮೇಲೆ ಆ ಮಳೆಹನಿಗಳಲ್ಲೂ ಒಂದು ರೀತಿಯ ಖುಷಿ ಸಿಕ್ತು. ಆ ಕ್ಷಣದಲ್ಲಿ ನಾವಿಬ್ಬರೂ ಚಿಕ್ಕ ಮಕ್ಕಳಾಗ್ಬಿಟ್ಟಿದ್ವಿ... ದಾರಿಯಲ್ಲಿ ಮ್ಯಕ್ಡೋನಾಲ್ಡ್ಸ್ ಗೆ ಹೋಗಿ ವಿದೇಷೀ ತಿಂಡಿ(ಬರ್ಗರ್) ತಿಂದು ಹರಟೆ ಹೊಡಿತಾ ಮತ್ತೆ ನಮ್ಮ ಪ್ರಯಾಣ ಮುಂದುವರಿಸಿದ್ವಿ, ಜೊತೆ ಜೊತೆಯಲ್ಲೇ ಮಳೆಕೂಡಾ ತನ್ನ ರೌದ್ರ ರೂಪವನ್ನ ತೋರಿಸ್ತಾನೇ ಇತ್ತು. ಹಾಗೂ ಹೀಗೂ ಶಿಲ್ಪನ್ನ ಅವಳ ಮನೆಗೆ ಬಿಟ್ಟು ನಾನು ನನ್ನ ಮನೆ ದಾರಿ ಹಿಡಿದು ಹೊರಟೆ. ಮನೆಗೆಬಂದು ಬೆಚ್ಚನೆಯ ನೀರಿನಲ್ಲಿ ಸ್ನಾನಮಾಡಿ ರಾಗಿ ಅಂಬಲಿ ಕುಡಿದು ನನ್ನ ಹೊದಿಕೆ ಹೊದ್ದುಕೊಂಡು ಮಲಗಿದಾಗ ಸಿಕ್ಕ ಸಂತೋಷ... ಅಬ್ಭಾ !!! ಅದನ್ನ ಇಲ್ಲಿ ವಿವರಿಸೊದಕ್ಕೆ ಪದಗಳು ಸಿಕ್ತಾ ಇಲ್ಲ.

ಮನಸ್ಸಿನಲ್ಲಿ ನಾನು ಹೈದರಾಬಾದಿನಲ್ಲಿ ಉಳಿವ/ ಮರಳಿ ಹಿಂದಿರುಗುವ ಪ್ರಶ್ನೆಗಳ ಸರಮಾಲೆ ಸುಳಿತಾಇರೋ ಹಾಗೇ ನನ್ನ ಸಹೋದ್ಯೋಗಿ ಬಂದು ನಮ್ಮ ಮೇಡಂ ಮೀಟಿಂಗೆ ಕರೀತಾ ಇದಾರೆ, ಸೋಮವಾರ ನಾವಿಬ್ಬ್ರೂ ಬೆಂಗಳೂರಿಗೆ ಹೋಗಬೇಕು ಅಂತ ಹೇಳಿದ್ರು. ಆ ವಿಚಾರ ಕೇಳಿ ಮನ್ಸಲ್ಲಿ ಏನೊ ಖುಷಿಆದ್ರೂ ಹಾಗೇ ಒಂದ್ ಸ್ವಲ್ಪ ಭಯ ಆಯ್ತು. ಖುಷಿ ನಾನು ಮರಳಿ ನನ್ನ ನಾಡಿಗೆ ಹೋಗ್ತಾಇದೀನಿ ಅಂತ, ಭಯ ಎಲ್ಲಿ ಏನಾಗತ್ತೋ ಅಂತ. ನನ್ಗೆ ನನ್ನ ಸಹೋದ್ಯೋಗಿ ಸಮಾಧಾನ ಹೇಳಿದ್ರೆ ನಾನು ನನ್ನ ಸಹೋದ್ಯೋಗಿಗೆ ಸಮಾಧಾನ ಹೇಳ್ತಾಇದ್ವಿ. ಆದ್ರೆ ಇಬ್ಬರ ಮನಸ್ಸಲ್ಲೂ ಎಲ್ಲೊ ಒಂದು ರೀತಿ ಆತಂಕ ಇದ್ದೇ ಇತ್ತು.

ನಾನು ಮಿಕ್ಕ ಎರಡುದಿನ ತಡಮಾಡೋದು ಬೇಡ ಅಂತ ಆವತ್ತೇ ರಾತ್ರಿ ಟಿಕೇಟ್ ಬುಕ್ಮಾಡ್ಸಿ ರಾತ್ರಿ ಹೊರಡೋಕ್ಕೆ ಸಿದ್ಧತೆ ಮಾಡ್ಕೊಂಡೆ. ರಾತ್ರಿ ಪ್ರಯಾಸದಾಯಕವಾದ ಪ್ರಯಾಣ ಮಾಡಿ, ಬೆಳಿಗ್ಗೆ ನಮ್ಮ ಕನ್ನಡವನ್ನ ಕರುನಾಡನ್ನ ನೋಡಿದ್ಮೇಲೇ ನನ್ಗೆ ಸ್ವಲ್ಪ ಸಮಾಧಾನ, ಸಂತೋಷ ಆಗಿದ್ದು. ನನ್ನ ಅಪಾರ ಮಿತ್ರಮಂಡಳಿಗೆ ಮೆಸ್ಸೇಜ್ ಮಾಡಿ ನಾನು ಬಂದಿರೋದನ್ನ ಹೇಳಿದೆ. ಎರಡುದಿನ ಅದು ಹ್ಯಾಗೆ ಹೋಯ್ತೂ ಗೊತ್ತೇ ಆಗ್ಲಿಲ್ಲ...

ಇನ್ನು ನಾನು ಕಾಯ್ತಾ ಇದ್ದ ದಿನ ಬಂದೇ ಬಿಡ್ತು, ಸೋಮವಾರ ನಮ್ಮ ಹೊಸಾ ಡೈರೆಕ್ಟರ್ ಮತ್ತೆ ಹೊಸಾ ಹೆಡ್ ಜೊತೆ ಇದ್ದ ಮೀಟಿಂಗೊಸ್ಕರ ನಾನು ನನ್ನ ಸಹೋದ್ಯೋಗಿ ಇಬ್ಬರೂ ನಮ್ಮ ಬೆಂಗಳೂರಿನ ಕಾರ್ಯಾಲಯಕ್ಕೆ ಬಂದ್ವಿ. ಮೊದಲನೇ ಸುತ್ತಿನಲ್ಲಿ ನಮ್ಮ ಹೊಸಾ ಡೈರೆಕ್ಟರ್ (ಖಂಡಿತಾ ಇದು ಸಿನಿಮಾ ಅಲ್ಲ ರೀ...) ಪಾಪ ಶಿವರಾಜ್ ಅವರಿಗೆ ಸಕ್ಕತ್ತಾಗಿ ಕ್ಲಾಸ್ ತೊಗೋಂಡಿದ್ರು. ಶಿವರಾಜಿಗೇ ಹಾಗಾದ್ರೆ ಇನ್ನು ನನ್ನ ಕಥೆಏನಪ್ಪಾ ಅಂತ ಹೆದರಿಕೊಂಡೇ ಮಾತಾಡಿಸೊಕೆ ಹೋದೆ. ಅಲ್ಲಿ ನಾನು ಅಂದುಕೊಂಡಿದ್ದ ಹಾಗೇ ಮೂರುಜನ ದಿಗ್ಗಜರು ಆಸೀನರಾಗಿದ್ರು. ನನಗೆ ಅಲ್ಲಿ ಮತ್ತೊಮ್ಮೆ ಸಂದರ್ಶನ ಮಾಡಿದ್ರು. ಇಲ್ಲಿ ಆ ದಿಗ್ಗಜರು ಯಾರು ಅನ್ನೋದನ್ನ ಹೇಳ್ತಾಇಲ್ಲ. ನನ್ನ ಸಂದರ್ಶನದ ಮುಂದಿನ ಬೆಳವಣಿಗೆ ಬಗ್ಗೆ ನನಗೆ ಸ್ವಲ್ಪ ಅನುಮಾನ ಮೊದಲಿಂದಲೇ ಇತ್ತು. ಅದಕ್ಕೆ ಸರಿಯಾಗಿ ನಾನು ಮರಳಿ ಬೆಂಗಳೂರಿಗೆ ಬರಬೇಕಾಯಿತು. ಅಲ್ಲಿ ನನಗೆ ಹೈದರಾಬಾದಿನ ಬ್ರ್ಯಾಂಚನ್ನ ಮುಚ್ಚಲಿರುವ ನಿರ್ಧಾರದಬಗ್ಗೆ ಸ್ಪಷ್ಟವಿವರ ಸಿಕ್ಕಿತು.

ಮೀಟಿಂಗ್ ಮುಗಿಸಿ ಅಲ್ಲಿ ನಾನು ಮರಳಿ ಬೆಂಗಳೂರಿಗೆ ಬರೋ ವಿಚಾರ ಕೇಳಿ ಒಂದು ರೀತಿ ಖುಷಿ ಆದ್ರೆ ಮತ್ತೋಂದುಕಡೆ ನನ್ಗೇ ತಿಳಿದೇಇರೋಹಾಗೆ ಬೇಜಾರಾಗ್ತಾ ಇತ್ತು. ಮರಳಿ ಬೆಂಗಳೂರಿಗೆ ಬರೋ ವಿಚಾರ ಏನೋ ಖುಷಿನೇ, ಆದ್ರೂ ನಾನು ನನ್ನ ಹೈದರಾಬಾದಿನ ದಿನಗಳನ್ನ, ಜನಗಳನ್ನ, ಆಪ್ತಮಿತ್ರರನ್ನ, ಆ ಕ್ಷಣಗಳನ್ನ, ನಾನೇ ಬಾಡಿಗೆಗೆ ಪಡೆದ ಮನೆಯನ್ನ, ಇದೆಲ್ಲಾ ಬಿಟ್ಟು ಮರಳಿಬರೋ ವಿಚಾರ ಕೇಳಿ ನನ್ಗೆ ಜೀರ್ಣಿಸ್ಕೊಳೊಕ್ಕೆ ಕಷ್ಟ ಆಗ್ತಾ ಇತ್ತು.

ನಾನು ಹುಟ್ಟಿ ಬೆಳೆದ ಊರನ್ನ ಬಿಟ್ಟು ಕೆಲಸಕ್ಕೆ ಅಂತ ಬೆಂಗಳೂರನ್ನ ಸೇರಿ ಮತ್ತೆ ಅಲ್ಲಿಂದ ಕೆಲಸದ್ಮೇಲೇ ಹೈದರಾಬಾದಿಗೆ ಬಂದು ಇಲ್ಲಿ ಕೇವಲ ೫ ತಿಂಗಳೋ ಅಥವ ೬ ತಿಂಗಳೋ ಇದ್ದರೂ... ನಾನು ನನ್ನ ಇಡೀ ಜೀವನ ಮರೀದೇ ಇರೋಹಾಗೆ ನನ್ನ ಹೈದರಾಬಾದಿನ ದಿನಗಳು ನನ್ನನ್ನ ಆವರಿಸಿಬಿಟ್ಟಿದ್ವು.

ಒಂದು ಕ್ಷಣದಲ್ಲಿ ಆ ಸುದ್ದಿ ಕೇಳಿ ಸಂತಸಪಟ್ಟರೂ ಮರುಘಳಿಗೆಯಲ್ಲಿ ಅಷ್ಟೇ ಬೇಸರವಾಯ್ತು. ನನ್ನ ಆ ೫ ತಿಂಗಳ ಒಂಟಿತನವನ್ನ ದೂರ ತಳ್ಳಿದ್ದ ನನ್ನ ಗೆಳೆಯರನ್ನ ಬಿಟ್ಟು ಬರೋಕೆ ತುಂಬಾ ಬೇಸರವಾಗ್ತಾ ಇತ್ತು. ಅಲ್ಲಿ ನಾನೇ ಮಾಡಿದ್ದ ಬಾಡಿಗೆ ಮನೆ, ನನ್ನದೇ ಆದ ಸಾಮ್ರಾಜ್ಯವನ್ನ ಬಿಟ್ಟು ಬರಬೇಕಲ್ಲಾ, ನನಗಿದ್ದ ಸ್ವಾತಂತ್ರ್ಯವನ್ನ ಕಳೆದುಕೊಳ್ಳಬೇಕಲ್ಲಾ, ಎಂದೆಲ್ಲಾ ನನ್ನ ಮನಸ್ಸು ನನಗೆ ಹೇಳುತ್ತಲೇ ಇತ್ತು.

ಆದರೂ ಬೇರೆ ದಾರಿ ಇಲ್ಲದೇ ತುರಾತುರಿಯಲ್ಲಿ ಮನೆ ಖಾಲಿ ಮಾಡೋ ಕಾಯಕಕ್ಕೆ ಕೈ ಹಾಕಿದೆ. ಶಿವರಾಜ್ ಕೂಡಾ ಇದರಲ್ಲಿ ತಮ್ಮ ಸಹಾಯ ಹಸ್ತ ನೀಡಿದ್ರು ಅನ್ನೊದನ್ನ ವಿಷೇಶವಾಗಿ ಹೇಳಬೇಕಿಲ್ಲ.

No comments: