ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Thursday, April 7, 2011

ಲವ್ ಅಟ್ ಫಸ್ಟ್ ಸೈಟ್..

ನನ್ನ ಹುಡುಗಿಯನ್ನ ಮೊದಲಸಲ ನೋಡಲು ಹೋದದ್ದು ೧೧ನೇ ಏಪ್ರಿಲ್ ೨೦೧೦. ಆಕೆಯನ್ನು ಕಂಡು ಬಂದಾಗ ಆಕೆಗೆಂದು ಬರೆದ ನಾಲ್ಕು ಸಾಲುಗಳು ಇವು. :)

ಲವ್ ಅಟ್ ಫಸ್ಟ್ ಸೈಟ್..


ಅದು ನನ್ನ ಮೊಟ್ಟ ಮೊದಲ ಖಾಸಗೀ ಇಂಟರ್ವ್ಯು :) ನಮ್ಮ ಜಾತಕ ಕೂಡಿಬಂದು ಮನೆಯವರೆಲ್ಲ ಒಪ್ಪಿದ ಮೇಲೆ ನಿನ್ನನ್ನು ನೋಡಲು ಬಂದಿದ್ದು ನಾನು. ಬಿಸಿಲಿನ ತಾಪದಿಂದ ಬಳಲಿದ್ದ ನಮಗೆ ನಿಮ್ಮ ಮನೆಯಲ್ಲಿ ಕೊಟ್ಟ ಪಾನಕ ದಣಿದಿದ್ದ ದೇಹಕ್ಕೆ ತಂಪನ್ನು ತಂದಿತ್ತು. ನಿನ್ನ ಮನೆಯವರೊಂದಿಗೆ ಮಾತನಾಡಿದ ನಂತರ ನನ್ನ ಕಣ್ಗಳು ನಿನ್ನ ನೋಡುವ ತವಕದಿಂದ ಕಾತರಿಸಿದ್ದವು. ಅದೇ ನನ್ನ ಮೊಟ್ಟ ಮೊದಲ ಇಂಟರ್ವ್ಯೂ ಆದ್ದರಿಂದ ಒಂದುರೀತಿಯ ನಾಚಿಕೆ, ಸಂಕೋಚ ಮತ್ತೊಂದು ಸ್ವಲ್ಪ ಗಡಿಬಿಡಿ.... ಎಲ್ಲವೂ ಒಮ್ಮೆಲೇ ಆಗಿತ್ತು. ಅಂತೂ ಇಂತೂ ನೀನು ಬಂದೇ ಬಿಟ್ಟೆ. ಬಂದವಳೇ ಅನತಿ ದೂರದಲ್ಲಿದ್ದ ಕೆಂಪುಬಣ್ಣದ ಕುರ್ಚಿಯಮೇಲೆ ಕುಳಿತು ಒಮ್ಮೆ ನೆಲವನ್ನೇ ನೋಡುತ್ತಾ, ಮತ್ತೊಮ್ಮೆ ನನ್ನ ಅಣ್ಣನ ಮಗಳು ವಿಸ್ಮಯಳನ್ನು ಮಾತನಾಡಿಸುತ್ತಾ ಇದ್ದೆ.

ನಿನ್ನ ತಂದೆಯವರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ನಾನು ತತ್ತರಿಸಿದ್ದೆ. ನಿನ್ನೊಡನೆ ಇಂದು ಮಾತನಾಡುತ್ತೇನಾ ? ಇಲ್ಲವಾ ? ಅನುಮಾನಗಳಹುತ್ತ ನನ್ನನ್ನು ಆವರಿಸಿತ್ತು. ಅಂತೂ ಇಂತೂ ನಿಮ್ಮ ತಂದೆಯವರ ಗ್ರೀನ್ ಸಿಗ್ನಲ್ ಸಿಕ್ಕೇ ಬಿಟ್ಟಿತು :)


ನಮ್ಮಿಬ್ಬರನ್ನೂ ಒಂದು ಕೊಠಡಿಗೆ ಕಳುಹಿಸಲಾಗಿತ್ತು, ಕೊಠಡಿಯ ಹೊರಗಡೆ ನನ್ನ ಅಣ್ಣ ಅತ್ತಿಗೆ ಮೊದಲಾದವರಿದ್ದರೆ ಕೊಠಡಿಯ ಒಳಗೆ ನಾವಿಬ್ಬರೂ ಕುಳಿತು ಮಾತನಾಡುತ್ತಿದ್ದೆವು. ನನಗೋ ಮನಸ್ಸಲ್ಲೇ ಏನೋ ಒಂದು ರೀತಿಯ ಸಂಕೋಚ. ಆಡಂಭರದ ಸೀರೆಯಿಲ್ಲದಿದ್ದರೂ ಸರಳವಾದ ಚೂಡೀದಾರಿನಲ್ಲಿ ಚೆಂದವಾಗಿ ಕಾಣ್ತಾ ಇದ್ದೆ ನೀನು :) ಆ ನಿನ್ನ ಸರಳತೆ ನನಗೆ ಇಷ್ಟವಾಯ್ತು. ನಾಚುತ್ತಾ ನಗುತ್ತಾ ನೀನು ಮಾತನಾಡುತ್ತಿದ್ದ ಶೈಲಿ... ಅಲೆಗಳಂತೆ ತೇಲಿ ಬಿಡುತ್ತಿದ್ದ ಆ ನಿನ್ನ ನಗು ಎಲ್ಲವೂ ನಾ ಮೇಲು ತಾ ಮೇಲು ಎಂದು ಪೈಪೋಟಿಗಿಳಿದಂತಿದ್ದವು. ಆ ಮಾತಿನ ನಡುವೆಯೂ ನಿನ್ನ ಕಣ್ತುಂಬಾ ನೋಡಿದೆ... ನೋಡಿದ್ರೆ ಹಾಗೇ ನೋಡ್ತಾನೇ ಇರಬೇಕು ಅನ್ನಿಸ್ತಿತ್ತು. ಆ ನೋಟದಲ್ಲಿ, ಆ ಗಡಿಬಿಡಿಯಲ್ಲಿ ಅದೇನೇನು ಮಾತಾಡಿದ್ನೋ ನನಗೇ ಗೊತ್ತಿಲ್ಲ. ನಿನ್ನ ಕಣ್ ಗಳಲ್ಲಿ ಏನೋ ಹೊಳಪಿತ್ತು. ಆ ನಗುವಲ್ಲಿ ಏನೋ ಒಂದು ತುಂಟತನವಿತ್ತು. ಪ್ರತೀ ಸಲವೂ ನಾಚಿ ನಕ್ಕು ನೀನು ನೆಲ ನೋಡುವಾಗ ನಿನ್ನ ನೀಳ ಕೂದಲುಗಳು ಹೊಳೆಯುತ್ತಿದ್ದವು. ಹೌದು... ಬಹುಶಃ ಇದನ್ನೇ ಲವ್ ಅಟ್ ಫಸ್ಟ್ ಸೈಟ್ ಅನ್ನೋದೇನೋ.... ನಿನ್ನೊಡನೆ ಮಾತನಾಡುತ್ತಿದ್ದಾಗ ನನ್ನ ಮನದಲ್ಲಿದ್ದ ನನ್ನ ಕಲ್ಪನೆಯ ಕನ್ಯೆಗೆ ಮತ್ತೆ ನಿನಗೆ ಸ್ಪರ್ಧೆ ಏರ್ಪಟ್ಟಿತ್ತು. ಕಲ್ಪನೆಯ ಕನ್ಯೆಗೆ ನಿರ್ಧಿಷ್ಟವಾದ ರೂಪವಿಲ್ಲದಿದ್ದರಿಂದ ನಿನ್ನ ರೂಪವೇ ಮೇಲ್ಪಂಕ್ತಿಯಲ್ಲಿ ಸಾಗಿತ್ತು. ಸರಿ ಸುಮಾರು ಹತ್ತು ನಿಮಿಷಗಳ ನಂತರ ನಮ್ಮ ಮಾತು ಮುಗಿದಿತ್ತು. ಸಾಮಾನ್ಯವಾಗಿ ಉಪ್ಪಿಟ್ಟು ಮತ್ತು ಕೇಸರೀ ಭಾತಿನಲ್ಲಿ ಎಲ್ಲರ ಇಂಟರ್ವ್ಯು ನಡೆದರೆ ನನಗೆ ಆಲೂಗಡ್ಡೆಯ ಚಿಪ್ಸ್ ಮತ್ತು ಸೋನ್ ಪಾಪಡಿಯಲ್ಲೇ ಅಡ್ಜಸ್ಟ್ ಮಾಡ್ಕೊಳ್ಬೇಕಾಯಿತು. ನಂತರ ನಿಮ್ಮಲ್ಲಿಂದ ಹೊರಡುವಾಗ ಕೊನೇ ಘಳಿಗೆಯಲ್ಲಿ ಎಲ್ಲರ ನಡುವೆ ನೀನು ನನ್ನನ್ನು ಇಣುಕಿನೋಡಿದ ನೋಟ ನನಗೆ ಹಿಡಿಸಿತು :) ಆಗಲೆ ನನ್ನ ಮನಸ್ಸು ಗಟ್ಟಿಯಾಗಿ ಹೇಳುತ್ತಿತ್ತು..... ಕದ್ದು ಕದ್ದು ನನ್ನ ನೋಡೋ ತುಂಟ ಕಣ್ಣು ನಿಂದೇನಾ ಅಂತ.

ನಮ್ಮ ಆ ಭೇಟಿಯ ನಂತರ ಸುಮಾರು ಒಂದು ತಿಂಗಳು ನಿನ್ನನ್ನು ನೋಡಲಾಗಲಿಲ್ಲ. ಆದರೆ ಆ ಮೊದಲ ನೋಟದ ಸವಿ ನೆನಪು ಮನಸ್ಸಿನಿಂದ ಎಂದೂ ಮಾಸುವುದಿಲ್ಲ. ನಂತರ ನಮ್ಮಿಬ್ಬರ ಮನೆಯವರಿಗೂ ಈ ಸಂಭಂಧ ಒಪ್ಪಿಗೆಯಾದಬಳಿಕ ನಿನ್ನ ಜನ್ಮದಿನದಂದು ನಿನಗೆ ಫೋನ್ ಮಾಡುವ ಧೈರ್ಯ ತಂದುಕೊಂಡೆ. ನಿನ್ನ ಮೊಬೈಲಿಗೇ ಹೇಗೆ ಕರೆಮಾಡುವುದು ??? ಮಾಡಲು ನನ್ನ ಬಳಿ ನಿನ್ನ ನಂಬರ್ ಆದರೂ ಇಲ್ಲವಲ್ಲಾ... ಆದಿನ ಎಷ್ಟು ಹೆಣಗಾಡಿದ್ದೆ ಗೊತ್ತಾ??? ಕಡೆಗೆ ಸ್ವಲ್ಪ ಆಲೋಚಿಸಿ ನಿಮ್ಮ ಸ್ಥಿರದೂರವಾಣಿಗೇ ಕರೆನೀಡಿದೆ.

ಅಯ್ಯೋ ಗ್ರಹಚಾರವೇ !!! ಆ ದೂರವಾಣಿ ಅವತ್ತೇ ಕೆಟ್ಟುಹೋಗಬೇಕಿತ್ತೇ... ಮತ್ತೆ ದಾರಿ ಕಾಣದೇ ನಿಮ್ಮ ದೊಡ್ಡಪ್ಪನ ಮೊಬೈಲಿಗೇ ಕರೆನೀಡಿದ್ದೆ. ಆಗ ತಾನೆ ಸವಿ ನಿದ್ರೆಯಿಂದೆದಿದ್ದ ನಿನಗೆ ನನ್ನ ಫೋನ್ ಕಾಲ್ ನಿಂದ ಸ್ವಲ್ಪ ಆಶ್ಚರ್ಯವಾರಿರಬೇಕು!!! ಸರಿಯಾಗಿ ಮಾತನಾಡಲೂ ಬರದೆ ಏನೇನೋ ಬಡಬಡಾಯಿಸಿ ನಿನ್ನ ಮೊಬೈಲ್ ನಂಬರ್ರನ್ನು ಪಡೆದುಕೊಂಡು ಕಾಲ್ ಮುಗಿಸಿದ್ದೆ ನಾನು :)

ಅಂದಿನಿಂದ ನಮ್ಮ SMS ಗಳ ವಿನಿಮಯ ಪ್ರಾರಂಭವಾಯಿತು. ಮೊದ ಮೊದಲು ನಿನಗೆ ಬರೀ SMS ಮಾಡ್ತಾ ಇದ್ದ ನಾನು ನಿಮ್ಮ ತಂದೆ ನನ್ನ ಮನೆಗೆ ಬಂದು ಹೋದ ನಂತರ ಕಾಲ್ ಮಾಡೋ ಧೈರ್ಯ ತಂದುಕೊಂಡೆ. ಪ್ರತೀ ದಿನ ನನ್ನ ಅಮ್ಮನಿಗೆ ತಪ್ಪದೇ ಕರೆ ಮಾಡುತ್ತಿದ್ದ ನಾನು ಅಂದಿನಿಂದ ನಿನಗೂ ನನ್ನ ದಿನಚರಿಯಲ್ಲಿ ಸಮಯ ಮೀಸಲಿಡಲಾರಂಭಿಸಿದೆ. ಅಂದು ನೀನು "ಅಮ್ಮ ಹೇಳ್ತಾ ಇದ್ರು, ಒಂದು ದಿನ ಬರ್ಬೇಕಂತೆ" ಅಂದ್ಯಲ್ಲಾ... ನನ್ಗೆ ತುಂಬಾ ಖುಷಿ ಆಯ್ತು. ನಿನ್ನ ಜೊತೆ ದಿನಾ ನನ್ನ ವೋಡಾಫೋನ್ ನಿಂದ ಕರೆ ಮಾಡಿ ಮಾಡೀ ಯಾವ ತಿಂಗಳೂ ಬಾರದಷ್ಟು ದೊಡ್ಡ ಮೊತ್ತದ ಬಿಲ್ ಬಂದಿತ್ತು. ಅದನ್ನ ಕಷ್ಟ ಆದ್ರೂ ಇಷ್ಟ ಪಟ್ಕೊಂಡು ಎತ್ತಿ ಹಿಡಿದೆ ;) ಆವತ್ತೇ ನನ್ನ ನೆಟ್ವರ್ಕನ್ನ ಬದಲಾಯಿಸ್ಬೇಕು ಅಂತ ನಾವಿಬ್ಬರೂ ಪ್ರಯತ್ನ ಪಟ್ವಿ ಅಲ್ವ... ಅಂತೂ ಇಂತೂ ಐಡಿಯ ನೆಟ್ವರ್ಕನ್ನ ಸೇರಿಕೊಳ್ಳೋದು ಅಂತ ತೀರ್ಮಾನಿಸಿದ್ವಿ. ನಾನೇನೋ ಇಲ್ಲಿ ಒಂದು ಸಿಮ್ ತೊಗೊಂಡು ಅದನ್ನ Active ಮಾಡ್ಕೊಂಡ್ಬಿಟ್ಟೆ. ಆದ್ರೆ ನೀನು ಸಿಮ್ ತೊಗೊಂಡ್ರೂ ಅದು Active ಮಾತ್ರ ಆಗ್ಲಿಲ್ಲ ನೋಡು. ಕೊನೇಗೂ ನಾನೇ ನನ್ನ ಹೆಸರಲ್ಲೇ ಮತ್ತೊಂದು ಸಿಮ್ ತೊಗೊಂಡು ಅದನ್ನ Active ಮಾಡಿಸ್ದೆ.....

ಮಾಡಿಸ್ಬಿಟ್ರೆ ಸಾಕಾ ??? ಅದನ್ನ ನಿನ್ಗೆ ತಲುಪಿಸೋದು ಹೇಗೆ ? ಆ ಸಿಮ್ಮಿಗೆ ಬೇರೇ ಫೋನ್ ಕೂಡಾ ಬೇಕಲ್ವಾ ??

ಅದಿಕ್ಕೇ ಅಂತಾನೇ ನೋಕಿಯ ೫೧೩೦ ಹೊಸಾ ಫೋನ್ ತಂದಿದ್ದಾಯ್ತು. ನಾನು ನಿನ್ನ ಸಿಮ್ Active ಆಗಿದ್ರೂ ಆಗಿಲ್ಲ ಅಂದೆ. ಯಾಕೆ ಹೇಳು... ಅದು ನಿನ್ನ ಕೈ ಸೇರಿದ ಮೇಲೆ ಅದು Active ಆಗಿದೆ ಅಂತ ಗೊತ್ತಾದಾಗ ನಿನ್ನ ಮೊಗದಲ್ಲಿ ಮೂಡುವ ಸಂತಸ ನೋಡ್ಬೇಕು ಅನ್ಸಿತ್ತು. ಅದಿಕ್ಕೆ :)

ಅದೆರಡನ್ನೂ ನಾನೇ ತಂದು ನಿನ್ಗೆ ಕೊಡ್ಬೇಕು ಅಂತ ನಿರ್ಧರಿಸಿದಮೇಲೆ ನಿನ್ನ ಮನೆಗೆ ಗುರುವಾರ ಬರುವುದಾಗಿ ತಿಳಿಸಿದೆ. ಅವತ್ತೋ ಜೋರು ಮಳೆ, ವಿಪರೀತ ಗಾಳಿ. ಆದರೂ ಅದನ್ನ ಲೆಕ್ಕಕ್ಕೆ ಇಡದೇ ನನ್ನ ಕುದುರೆಯನ್ನೇರಿ ಬಂದಿದ್ದೆ :) ನೀನು ಕೆಂಪು ಮತ್ತೆ ಬಿಳಿಯ ಬಣ್ಣದ ಚೂಡೀದಾರಿನಲ್ಲಿ ಅದೇ ಸರಳತೆಯಿಂದ ಸುಂದರವಾಗಿ ಕಾಣ್ತಾ ಇದ್ದೆ. ಬಂದ ತಕ್ಷಣಾ ಒಂದು ತಟ್ಟೆಯಲ್ಲಿ ಶ್ಯಾವಿಗೆ ಉಪ್ಪಿಟ್ಟನ್ನ ನಿನ್ನ ಕೈಯಾರೆ ತಂದು ಕೊಟ್ಟಿದ್ದೆ.

ಅಬ್ಬಾ!!! ಅದೂ ತಟ್ಟೆ ಭರ್ತಿ !!! ಅದಾದ ನಂತರ ಬಿಸಿ ಬಿಸಿ ಹಾರ್ಲಿಕ್ಸ್. ಒಂದು ಕ್ಷಣ ನಾನು ಇದನ್ನ ಯಾವಾಗಪ್ಪಾ ಮುಗಿಸೋದು ಅನ್ನಿಸ್ಬಿಟ್ಟಿತ್ತು. ಹಾಗೋ ಹೀಗೋ ತಿಂದು ಮುಗಿಸಿದ್ದೆ. ಆಮೇಲಷ್ಟೆ ನಮಗೆ ಮಾತನಾಡಲು ಅವಕಾಶ ಸಿಕ್ಕಿದ್ದು. ಮಹಡಿಯ ಮೇಲಿನ ರೂಮಿನಲ್ಲಿ ನಿನ್ನ ತಮ್ಮ, ತಂಗಿಯರ ಪರಿಚಯವಾದಮೇಲೆ ನಾವಿಬ್ಬರೂ ಒಂದು ರೂಮಿನಲ್ಲಿ ಹರಟೆ ಹೊಡೆಯಲು ಬಂದಿದ್ದೆವು. ಅಲ್ಲೂ ಅದೇ ನಾಚಿಕೆ, ಅದೇ ತುಂಟಾಟ, ಅದೇ ನಾಚಿ ರಂಗೇರಿದ ಕೆನ್ನೆ, ಅದೇ ನಗು :) ನಮ್ಮ ಮಾತಿನ ಮಧ್ಯೆ ಸಮಯ ಜಾರಿದ್ದು ಪರಿವೆಗೇ ಬಾರದೇ ಹೋಯಿತು. ಅದರ ಮಧ್ಯೆ ನಿನ್ನ ಬಾಲ್ಯದ ಫೋಟೋ ಗಳನ್ನ ನೋಡ್ತಾ, ನಿನ್ನೊಡನೆ ಹರಟೆ ಹೊಡೆಯುತ್ತಾ ಕಳೆದ ಸಮಯ ಮನಸ್ಸಿನ ಎರಕಕ್ಕೆ ಹೊಯ್ದ ಅಚ್ಚಳಿಯದೇ ಉಳಿದಿದೆ.

ನಿನ್ನೊಂದಿಗೆ ಹಂಚಿಕೊಂಡ ನನ್ನವೇ ಆದ ಕನಸುಗಳಿಗೆ ನಿನ್ನ ಸಹಕಾರ ಇದ್ದೇ ಇರುತ್ತದೆ ಎಂಬ ಅಚಲ ನಂಬಿಕೆ ನನ್ನದು. ನಾನವನ್ನು ಯಾರೊಡನೆಯೂ ಹಂಚಿಕೊಂಡಿಲ್ಲ. ನಿನ್ನೊಂದಿಗೆ ಪ್ರತೀ ದಿನವೂ ಮಾತನಾಡುವಾಗ ನನ್ನದೇ ಆದ ಲೋಕವನ್ನ ಕೊಂಚ ಕೊಂಚವಾಗೇ ತೆರೆದಿಡುತ್ತಿದ್ದೇನೆ. ಆ ಲೋಕಕ್ಕೆ ಬೇರಾರಿಗೂ ಪ್ರವೇಶವಿಲ್ಲ... ಅದು ಕೇವಲ ನನ್ನ ಮತ್ತು ನಿನ್ನ ಪ್ರಪಂಚ :) ನಾನು ನಿನ್ನೊಡನೆ ಅದೆಲ್ಲವನ್ನೂ ಹಂಚಿಕೊಂಡಾಗಲೆಲ್ಲಾ ನಿನ್ನಿಂದ ಸಿಕ್ಕುವ ಪ್ರತಿ ಸ್ಪಂದನದಿಂದ ನನ್ನಲ್ಲಿ ಒಂದು ರೀತಿಯ ಆತ್ಮವಿಶ್ವಾಸ ಹೆಚ್ಚುತ್ತದೆ.

ಇಷ್ಟೆಲ್ಲಾ ಆದದ್ದು ಬರೀ ಒಂದೂವರೆ ತಿಂಗಳಿನಲ್ಲ? ನನ್ನ ಕೈ ನಾನೇ ಚಿವುಟುತ್ತಿದ್ದೇನೆ, ನಾನು ಕನಸು ಕಾಣುತ್ತಿಲ್ಲ ತಾನೇ ?? ಬಹುಶಃ ನಿನ್ನನ್ನು ಮತ್ತೊಮ್ಮೆ ಕಂಡ ಮೇಲೆಯೇ ಈ ಭಾವದಲೆಗೆ ತೃಪ್ತಿಯೇನೋ.. ಆ ದಿನಕ್ಕೆ ಎದುರು ನೋಡುತ್ತಿದ್ದೇನೆ.. ಅದು ಇನ್ನೇನು ಹತ್ತಿರದಲ್ಲೇ ಇದೆ :)

ನೋಡು, ನಿನ್ನ ಯೋಚನೆ ಮನದಲ್ಲಿ ಮೂಡುತ್ತಿದ್ದಂತೇ ಮೊಬೈಲಿನಲ್ಲಿ ನಿನ್ನದೇ ಆ ನಗುಮೊಗ ಮೂಡುತ್ತಿದೆ, ನಿನ್ನದೇ ಸಂದೇಶ... ಇದನ್ನೆಲ್ಲಾ ನಾನು ನಿನಗೆ ಮೊಬೈಲಿನಲ್ಲಿ ಹೇಳಿದರೆ ಮಧುರವಾಗಿತ್ತಾ ??? ಗೊತ್ತಿಲ್ಲ... ಒಮ್ಮೆ ಅಕಸ್ಮಾತ್ ನೀನೇನಾದರೂ "ಅಯ್ಯೋ ಕೊರೀಬೇಡ್ರೀ" ಅಂದ್ರೆ ??? ನಿನಗೆ ತೊಂದರೆ ಕೊಡಲು ನನ್ನ ಮನಸ್ಸು ಒಪ್ಪುವುದಿಲ್ಲ ನನ್ನ ಹುಡುಗೀ :) ಇದನ್ನ ಮುಂದಿನ ಭಾನುವಾರ.. ನಿನ್ನ ಕೈಯಲ್ಲೇ ಕೊಡುತ್ತೇನೆ.. ಅದೇನಾದರೂ ಹೇಳಬೇಕೆಂದಿದ್ದರೆ ಅಲ್ಲೇ ಹೇಳಿಬಿಡು... ನಿನ್ನ ಪಡೆದ ಧನ್ಯತೆಯಲ್ಲಿ ನನ್ನ ಈ ಕೊರೆತವನ್ನ ಸಧ್ಯಕ್ಕೆ ನಿಲ್ಲಿಸುತ್ತೇನೆ :)

ಖಾಲಿ ನೆಲದಲ್ಲಿ ರಂಗು ರಂಗಿನ ರಂಗೋಲಿ

ಮನ ಮಂದಿರದಿ ಉಲ್ಲಾಸದ ಜೋಕಾಲಿ

ಮನದಂಗಳದಿ ಚಿತ್ತಾರ ಮೂಡುತಿದೆ

ಆ ನಿನ್ನ ಹೆಜ್ಜೆ ಗುರುತುಗಳು ಕಾಣತೊಡಗಿವೆ


ಇಂತಿ ನಿನ್ನ,
ಪ್ರಶಾಂತ ಜಿ ಉರಾಳ

No comments: