ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Friday, June 24, 2011

ಹಾಯ್ ಅಣ್ಣಾ.... ಹೇಗಿದ್ದೀಯ ?

ಹಾಯ್ ಅಣ್ಣಾ.... ಹೇಗಿದ್ದೀಯ ?


"ಜನ್ಮದಿನದ ಹಾರ್ಧಿಕ ಶುಭಾಷಯಗಳು"

ಹಳೆಯ ನೆನಪುಗಳನ್ನ ಸವಿಯೋ ಮುನ್ನ..... ನಿನಗೆ ದೇವರು ನೀನು ಬಯಸಿದ್ದೆಲ್ಲಾ ಕೊಡ್ಲಿ ಅಂತ ಹಾರೈಸ್ತೀನಿ :) ಇವತ್ತು ಯಾಕೋ ಗೊತ್ತಿಲ್ಲ... ನಮ್ಮ ಬಾಲ್ಯದ ಕೆಲವು ಘಟನೆಗಳು ತುಂಬಾ ನೆನಪಾಗ್ತಾ ಇದೆ ಅಣ್ಣಾ....

ವಿ. ಸೂ: ಇಲ್ಲಿ ಕಾಡುವ ನೆನಪುಗಳಿಗೆ ಒಂದಕ್ಕೊಂದು ಸಂಬಂಧ ಇರುವುದಿಲ್ಲ... ಹಾಗೇನಾದರೂ ಇದ್ದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ ;)

ನಾನು ನಿನ್ನೊಡನೆ ಕಳೆದ ಬಾಲ್ಯ ಅಷ್ಟಾಗಿ ನನ್ನ ನೆನಪಿಗೇ ಬರ್ತಾ ಇಲ್ಲ ಮಾರಾಯ.... ಅದ್ ಯಾಕೋ ಗೊತ್ತಿಲ್ಲ..... ಬಹುಷಃ ನಾನು ನನ್ನ ಬಾಲ್ಯವನ್ನ ಅಪ್ಪಯ್ಯನ ಜೊತೆಯೇ ಹೆಚ್ಚಾಗಿ ಕಳೆದೆನೇನೋ...

ನನಗೆ ಅಪ್ಪನಜೊತೆ ಪೇಟೆ ಸುತ್ತಿದ್ದು, ಲುಡೋ ಆಡಿದ್ದು, ಚೌಕಾಬಾರ ಆಡಿದ್ದೇ ನೆನಪಾಗತ್ತೆ. ಮತ್ತೆ ನಿನ್ನೊಡನೆ ಕಳೆದ ಸಮಯಗಳಲ್ಲಿ ಕೆಲವೊಂದೇ ಆಚ್ಚಳಿಯದೇ ಉಳಿದುರುವುದು. ನನಗೆ ಸೈಕಲ್ ಕಲಿಸಿಕೊಟ್ಟದ್ದು, ಅದು ಬಿಟ್ಟರೆ ನಾನು ಮತ್ತೆ ನೀನು ಪಣಿಶೇಖರ್ ಮನೆಯಿಂದ ತಂದ ಅಕ್ವೇರಿಯಂ, ಮತ್ತೆ ಅದರಲ್ಲಿ ಮೀನು ಮರಿ ಹಾಕಿದಾಗ ಅದನ್ನ ಐಯೋಡೆಕ್ಸ್ !!! ಬಾಟಲಿನಲ್ಲಿ ಇಟ್ಟು ಅದು ಸತ್ತು ಹೋದದ್ದು, ಮತ್ತೆ ನಿನ್ನಿಂದ ನನಗೆ ಬೆಳೆದುಬಂದ ಗಿಡಗಳನ್ನು ಬೆಳೆಸುವ ಹವ್ಯಾಸ!!!!

ನೆನಪಿದ್ಯಾ ಅಣ್ಣಾ.... ನಾವು ಆಗ ಹುಣಸೇ ಗಿಡಗಳನ್ನು ಐಯೋಡೆಕ್ಸ್ ಮತ್ತೆ ಸಿಕ್ಕ ಸಿಕ್ಕ ಸಣ್ಣ ಬಾಟಲಿಗಳಲ್ಲೆಲ್ಲಾ ಬೆಳೆಸುತ್ತಿದ್ದದ್ದು ? ನನಗೆ ಗಿಡಗಳಬಗ್ಗೆ ಪ್ರೀತಿ ಮೂಡಿಸಿದ್ದು ನೀನೇ :) ನಾವೆಲ್ಲಾ ಅಂದ್ರೆ ನಾನು, ನೀನು ಮತ್ತೆ ಅಕ್ಕ ಮಹಡಿಯಮೇಲೆ ಕಬ್ಬಿಣದ ಡ್ರಂ ಇಟ್ಟುಕೊಂಡು ಕ್ರಿಕೆಟ್ ಆಡ್ತಾ ಇದ್ದದ್ದು ನೆನ್ಪಿದ್ಯಾ ಅಣ್ಣಾ ? ಆಗಂತೂ ನೀನೇ ಅಂಪೈರ್.... ನಿನ್ನ ನಿರ್ಧಾರಕ್ಕೆ ನಾವು "ನೋ" ಅನ್ನೊಹಾಗೇ ಇರ್ಲಿಲ್ಲ. :)

ಆದರೆ ನನಗೆ ಜೀವನ ಅನ್ನೋದು ಅರ್ಥಾ ಆಗೋಕೆ ಶುರು ಆದಮೇಲೆ ನಡೆದ ಎಲ್ಲಾ ಘಟನೆಗಳು ನನ್ನ ಕಣ್ ಮುಂದೆನೇ ಇದೆ.... ಅಪ್ಪನ ಕಾರ್ಖಾನೆ ಮುಚ್ಚಿದಾಗ ನಮ್ಮ ಸಂಸಾರದ ದೋಣಿಯನ್ನ ಮುನ್ನಡೆಸುವ ಹೊಣೆ ಹೊತ್ಯಲ್ಲ.... ಆ ವಿಷಯಕ್ಕೆ ನಿನಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು. ನಿನ್ನ ಬಗ್ಗೆ ನನಗೆ ಬಹಳ ಅಭಿಮಾನವಿದೆ.


ಅಪ್ಪ ನಮ್ಮ ಓದು ಬರಹಕ್ಕೆಂದು ಸಾಲ ಮಾಡಿದ್ರೆ ನೀನು ನಿನ್ನ ಖರ್ಚನ್ನು ನೋಡಿಕೊಳ್ಳುವ ಸಲುವಾಗಿ ಮನೆಪಾಠ ಶುರುಮಾಡಿದ್ದೆ. ನಾನು ನಿನ್ನ ವಿಧ್ಯಾರ್ಥಿಬಳಗದಲ್ಲೊಬ್ಬ :) ಯಾವಾಗ ನೋಡಿದ್ರೂ ಮಹಡಿ ಮೇಲಿನ ರೂಮಿನಲ್ಲಿ ಬಾಗಿಲು ಹಾಕ್ಕೊಂಡು ಒಬ್ಬನೇ ಇರ್ತಾ ಇದ್ಯಲ್ಲ.... ಎಷ್ಟು ಶ್ರಮ ಪಟ್ಟಿರಬಹುದು ಅಂತ ಈಗ ಅರ್ಥ ಆಗತ್ತೆ :) ಆಗೆಲ್ಲಾ ನಿನ್ನ ಟ್ಯೂಷನ್ ಮಾಡೋದಕ್ಕೆ ಕೆಲವು ಕರಪತ್ರಗಳನ್ನ ಮುದ್ರಿಸಿದ್ದೆ.... ನೆನ್ಪಿದ್ಯಾ ??? ಅದನ್ನ ನಾನು ಮತ್ತೆ ನೀನು ಹರೀಶನ ಸಹಾಯದಿಂದ ಎಲ್ಲಾ ಪೇಪರ್ ಗಳ ಒಳಗೆ ಬೆಳ್ಳಂಬೆಳಿಗ್ಗೆ ಹೋಗಿ ಹಾಕಿ ಬಂದಿದ್ವಿ. ನಂತರ ನೀನು ಮತ್ತೊಬ್ಬ ಟ್ಯೂಷನ್ ಮಾಡೋ ಮೇಷ್ಟರ ಮನೆ ಹತ್ತಿರ ಹಂಚು ಅಂದಿದ್ದೆ..... ನಾನು ಹೋಗಿ ಕೆಲವರಿಗೆ ಹಂಚಿ ಮತ್ತೆ ಅದ್ಯಾರ್ ಹತ್ರನೋ ಬೈಸ್ಕೊಂಡು ಬಂದಿದ್ದೆ. ನಿನ್ನ ಆ ದಿನಗಳ ಶ್ರಮದ ಫಲವೇ ಇಂದು ನೀನು ಮೈಸೂರಿನಲ್ಲಿ "ಬೇರು" ಬಿಡಲು ಕಾರಣ ಮತ್ತು ಆ ನಿನ್ನ ಎರೆಡಕ್ಷರದ ಹೆಸರು ಹಬ್ಬಲು ಕಾರಣ. ನಾನು ನನ್ನ ಜೀವನದಲ್ಲಿ ಎಡವಿದಲ್ಲೇಲ್ಲಾ ನನ್ನ ಹಿಂದೆಯೇ ನೀನಿದ್ದು ನನಗೆ ಪ್ರೂತ್ಸಾಹ ಕೊಟ್ಯಲ್ಲ.... ಅದೇ ನಾನು ಇಂದು ರಾಜಧಾನಿಯಲ್ಲಿ ನೆಲೆಸಲು ಕಾರಣ.

ನಾನು ಚಿಕ್ಕವನಾಗಿದ್ದಾಗ ನಿಜಕ್ಕೂ ನಿನ್ನ ಮೇಲೆ ಹೊಟ್ಟೆ ಕಿಚ್ಚು ಬರ್ತಾ ಇತ್ತು. ಅಮ್ಮ ಅಪ್ಪ ನಿನಗೆ ಮಾತ್ರ ಮೀಸಲಾಗಿ ಇಡ್ತಾ ಇದ್ದ ಕೆಲವು ವಸ್ತುಗಳು, ನಮಗೆ (ನಾನು ಮತ್ತೆ ನನ್ನ ಅಕ್ಕ) ಇಲ್ಲದೇ ನಿನಗೆ ಮಾತ್ರಾ ಓದಿಕೊಳ್ಳಲು ಇದ್ದ ಕೋಣೆ, ಟೆಬಲ್ಲು, ಎಲ್ಲವನ್ನ ನೋಡಿ ಅಪ್ಪ ಮತ್ತೆ ಅಮ್ಮ ಯಾಕೆ ಹೀಗೆ ತಾರತಮ್ಯ ಮಾಡ್ತಾರೆ ಅಂತ ಅನಿಸಿದ್ದು ಸುಳ್ಳಲ್ಲ. ಈ ವಿಷಯವಾಗಿ ನಾನು ಅಪ್ಪ ಮತ್ತೆ ಅಮ್ಮನೊಂದಿಗೆ ಕೆಲವೊಮ್ಮೆ ಕೇಳಿದ್ದೂ ಉಂಟು. "ಅವನು ಹಿರೀ ಮಗ... ನಿನ್ ಹಾಗಲ್ಲ ಸುಮ್ನಿರು.... " ಅಂತ ಬೈಸಿಕೊಂಡದ್ದೂ ಉಂಟು. ಅಪ್ಪ ಸೊಸೈಟಿಯಿಂದ ಅಕ್ಕಿ, ಗೋಧಿ ತಂದ್ರೆ ಅದನ್ನ ಆರಿಸೋ ಕೆಲಸಕ್ಕೂ ನಿನ್ನ ಕರೀತಾ ಇರ್ಲಿಲ್ಲ, ಅದೆಲ್ಲಾ ನಮ್ಮ ಪಾಲಿಗೇ ಮೀಸಲು. ಅಪ್ಪ, ಅಮ್ಮನಜೊತೆ ಅಕ್ಕಿ ಆರಿಸ್ತಾ ಇದ್ವಿ. ಮನೆಗೆ ಹಾಲು ತರ್ಬೇಕಾದ್ರೆ ಒಂದೋ ನಾನು ಇಲ್ಲ ಅಕ್ಕ ಹೋಗ್ತಾ ಇದ್ವಿ. ಮನೆಯಲ್ಲಿ ಬಟ್ಟೆ ಬರೆಗಳಿಂದ ಹಿಡಿದು ಎಲ್ಲದಕ್ಕೂ ನಿನಗೇ ಮೊದಲ ಪ್ರಾಶಸ್ತ್ಯ. ನೀನು ಬಿಟ್ಟದ್ದು ನಮಗೆ.... ಅದು ನೀನು ಸಣ್ಣ ಮಗುವಿದ್ದಾಗಿನಿಂದ ಇದ್ದೇ ಇತ್ತು. ಇಂದಿಗೂ ನಾವು ಸಣ್ಣ ಮಕ್ಕಳಾಗಿದ್ದಾಗಿನ ಚಿತ್ರಗಳಿಗಿಂತಾ ನಿನ್ನ ಚಿತ್ರಗಳೇ ಹೆಚ್ಚು ಇವೆ. ನಾಮಕರಣ, ಉಪನಯನ ಹೀಗೆ ಎಲ್ಲದರಲ್ಲೂ ನಾನು ಕಡೆಯ ಮಗ.... ಹಾಗಾಗಿ ಎಲ್ಲದರಲ್ಲೂ ಕಡೆಯವನೇ ಆದೆ.

ಆದರೆ ಆ ಎಲ್ಲಾ ನೋವನ್ನ ಮೀರಿಸೋ ಹಾಗೆ ನೀನು ನಮ್ಮನ್ನ ನೋಡಿಕೊಂಡಿದ್ದೀಯ. ನಿನ್ನ ಮೇಲೆ ನನಗೆ ಹೆಚ್ಚು ಪ್ರೀತಿ ಮೂಡಿದ್ದು ನಾನು ಬೆಳೆದು ಹೈ ಸ್ಕೂಲಿಗೆ ಬಂದನಂತರವೇ ಇರಬೇಕು. ನೀನು ನನಗೆ ನಿನ್ನ ಬಿ.ಎಸ್.ಏ ಸೈಕಲ್ಲನ್ನು ಓಡಿಸಲು ಕಲಿಸಿದ್ಯಲ್ಲ.... ಆಮೇಲೆ ಒಮ್ಮೊಮ್ಮ ಅದನ್ನ ಬೇಕಾದ್ರೆ ತೊಗೊಂಡ್ ಹೋಗು ಅಂತಾ ಇದ್ಯಾಲ್ಲ... ಆಗಂತೂ ಎಷ್ಟು ಖುಷಿ ಆಗೋದು ಗೊತ್ತಾ ???? ಈಗಲೂ ನೀನು ಒಮ್ಮೊಮ್ಮೆ "ಪಲ್ಸರ್ ತೊಗೊಂಡ್ ಹೋಗು ಅಂತ್ಯಲ್ಲಾ, ಅದೂ ಖುಷಿ ಕೊಡತ್ತೆ" ನಿನ್ನ ಬಗ್ಗೆ ಹೇಳಲು ಪದಗಳು ಸಾಲೋದಿಲ್ಲ ಅಣ್ಣ.... ನನ್ಗೆ ನೀನಂದ್ರೆ ತುಂಬ ತುಂಬಾ ತುಂಬಾ ಇಷ್ಟ!!!

ನಾನು ಈಗಲೂ ನನ್ನ ಆಪ್ತರಲ್ಲಿ ನಿನ್ನ ಗುಣಗಾನ ಮಾಡದೇ ಇರುವುದಿಲ್ಲ, ಯಾಕೆಂದ್ರೆ ಒಂದು ಹಂತದಲ್ಲಿ ಜೀವನದ ಬಗ್ಗೆ ಬೇಸರಿಕೆ ಮೂಡಿದ್ದ ನನಗೆ ಅದರಲ್ಲಿ ಹೊಸ ಉತ್ಸಾಹ ತುಂಬಲು ನೀನು ಕಾರಣನಾದೆ. ಹೊಸ ಕನಸುಗಳನ್ನ ಕಟ್ಟಿಕೊಟ್ಟೆ.... ಅದನ್ನ ಸಾಕಾರಗೊಳಿಸಲು ನನ್ನ ಬೆನ್ನೆಲುಬಾದೆ.... ಮುಂಗೋಪಿಯಾಗಿದ್ದ ನನಗೆ ಜೀವನ ಎದುರಿಸುವ ಕಲೆಯನ್ನು ಹೇಳಿಕೊಟ್ಟೆ. ಸಮಾಧಾನದಿಂದ ಪರಿಸ್ಥಿತಿಯನ್ನ ಎದುರಿಸುವ ಪಾಠ ಹೇಳಿಕೊಟ್ಟೆ. ನಮ್ಮ ಮನೆಗೆ ನೀ ತಂದ ಆ ಪುಟ್ಟ ಹಳೆಯದಾದ ಗಣಕಯಂತ್ರದಿಂದ ನಾನು ಇಂದು ಐದಂಕಿಯ ಸಂಪಾದನೆಯಲ್ಲಿದ್ದೇನೆ. ನಿನ್ನ ಗೆಳೆಯರ ಬಳಗದಿಂದಲೇ ಅಣ್ಣ ನಾನು ಮೇಲೆ ಬಂದದ್ದು. ನಿನಗೆ ನೆನಪಿದ್ಯಾ ? ಅವತ್ತು ನಾವೆಲ್ಲಾ ಬೆಟ್ಟಕ್ಕೆ ಹೋಗಿ ನಮ್ಮ "ಜಿ.ಟಿ.ಆರ್" ನಲ್ಲಿ ತಿಂಡಿ ತಿಂದು ಹೊರಡುವಾಗ ನನಗೆ ಬೆಂಗಳೂರಿನ ಕೆಲಸದ ಬಗ್ಗೆ ಅಣ್ಣಯ್ಯ ಹೇಳಿದ್ದ. ಅಲ್ಲಿಂದ ಮನೆಗೆ ಬಂದಮೇಲೆ ನನ್ನ ಮನಸ್ಸು ಬಹಳ ಗೊಂದಲದಲ್ಲಿತ್ತು. ಬೆಂಗಳೂರಿಗ ಹೋಗುವುದೋ, ಬೇಡವೋ... ಹೋದರೆ ಎಲ್ಲಿ ಉಳಿಯುವುದು ? ಯಾರ ಮನೆ ? ಅವರೊಂದಿಗೆ ಹೇಗೆ ಹೊಂದಿಕೊಳ್ಳುವುದು ???? ಇನ್ನೂ ಸಾವಿರ ಪ್ರಶ್ನೆಗಳು.......... ಅದೆಲ್ಲಕ್ಕೂ ಉತ್ತರ ನೀನಾದೆ. "ಬೆಂಗ್ಗ್ಳೂರಲ್ಲಿ ಮನೆಮಾಡ್ಕೊ, ಆಗ ನಮಗೂ ಊರಿಂದ ಬಂದ್ರೆ ಉಳ್ಕೊಳ್ಳೋಕೆ ಒಂದು ಮನೆ ಇರತ್ತೆ" ಎಂದೆಲ್ಲಾ ಹೇಳಿ ಹುರಿದುಂಬಿಸಿದ್ದೆ. ಆ ನಿನ್ನ ಸ್ಪೂರ್ಥಿ ತುಂಬಿದ ಮಾತುಗಳೇ ನನ್ನ ಕಾಲಿನ ಮೇಲೆ ನಾನು ನಿಲ್ಲುವ ಹಾಗೆ ಮಾಡಿದೆ. ನಿನ್ನ ಸಹಾಯದಿಂದಲೇ ಖರೀದಿಸಿದ್ದ "ಟಿ.ವಿ.ಎಸ್-ಎಕ್ಸ್ ಎಲ್ ಸೂಪರ್" ಗಾಡಿಯಲ್ಲಿ ನಾನು ಮತ್ತು ನೀನು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೆವು. ಆ ಕ್ಷಣಗಳನ್ನ ಎಂದಿಗೂ ನಾನು ಕಳೆದುಕೊಳ್ಳುವುದಿಲ್ಲ. ನೀನು ನನ್ನ ಮುದ್ದಿನ ಗುರು, ಮಾರ್ಗದರ್ಶಿ :)

ಕಳೆದ ಕೆಲವು ವರ್ಷಗಳ ಹಿಂದೆ ನಾನು ಮೈಸೂರಿನಲ್ಲಿ ನನ್ನ Ligament tear ಮಾಡಿಕೊಂಡಾಗ ನೀನು ಮತ್ತೆ ಅತ್ತಿಗೆ ನನ್ನ ನೋಡಿಕೊಂಡದ್ದನ್ನು ಮರೆಯೋದಿಕ್ಕೆ ಆಗೋದಿಲ್ಲ. ಪುಟಾಣಿ ವಿಸ್ಮಯ ಕೂಡಾ ನನ್ನ ಅಷ್ಟೇ ಕಾಳಜಿ ಇಂದ ನೋಡ್ಕೊಂಡ್ಳು. ಆ ಸಮಯದಲ್ಲಿ ಧೈರ್ಯಗೆಟ್ಟು ಕೂತಿದ್ದ ನನಗೆ ಧೈರ್ಯ ಹೇಳಿದವನು ನೀನು..... ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದವನು ನೀನು. ಏನಾದರೂ ಹೆದರದೇ ಮುನ್ನಡೆಯಬೇಕು ಅನ್ನೋದನ್ನ ಹೇಳಿದವನು ನೀನು.... :)

ಇನ್ನೂ ಬಹಳಷ್ಟು ವಿಚಾರಗಳು ನಿನ್ನೊಡನೆ ಮಾತನಾಡುವುದಿದೆ. ಆದರೆ ಸಧ್ಯಕ್ಕೆ ಬೇಡ :) ಮತ್ತೆ ಯಾವಾಗಲಾದರೂ ಕುಳಿತು ಮಾತನಾಡೋಣ :)

ಅಂತೂ ಇಂತೂ ನೋಡ್ತಾ ನೋಡ್ತಾ ಜೀವನದ ಅರ್ಧ ಆಯಸ್ಸು ಕಳದೇ ಹೋಯ್ತಲ್ಲಾ ? ನಾನು ನನ್ನ ಮೊದಲಿನ ಅಣ್ಣನ್ನ, ಆ ದಿನಗಳನ್ನ ತುಂಬಾ ಮಿಸ್ ಮಾಡ್ಕೊತಾ ಇದ್ದೀನಿ ಕಣೋ.... ಜೀವನ ಅಂದ್ ಮೇಲೆ ಎಲ್ಲಾರೂ ಸಮಯಕ್ಕೆ ತಕ್ಕ ಹಾಗೆ ಮತ್ತೆ ತಮಗೆ ತಕ್ಕ ಹಾಗೆ ಬದಲಾಗಲೇ ಬೇಕು ಅನ್ನೋ ಕಟು ಸತ್ಯ ತಿಳಿದೂ ನಾನು ನಿನ್ನಲ್ಲಿ ನನ್ನ ಮೊದಲಿನ ಅಣ್ಣನ್ನ ನೋಡೋಕೆ ಇಷ್ಟ ಪಡ್ತಾ ಇದೀನಿ.... ಆದರೂ ಒಳ ಮನಸ್ಸಿನಲ್ಲಿ ಪದೇ ಪದೇ ಒಂದು ಮಾತು ಮರುಕಳಿಸತ್ತೆ.... "ಬದಲಾವಣೆ ಜಗದ ನಿಯಮ" ಅಲ್ವಾ ??? :)



ಇಂತೀ ನಿನ್ನ ನಲ್ಮೆಯ... ಪ್ರೀತಿಯ.... ತಮ್ಮ.....

ಪ್ರಶಾಂತ ಜಿ ಉರಾಳ (ಪಚ್ಚು)

Thursday, April 7, 2011

ಅಣ್ಣನ ಕೊಡುಗೆ

ನನ್ನ ಜನ್ಮದಿನಕ್ಕೆ ನನ್ನ ಅಣ್ಣನ ಕೊಡುಗೆ :)



ಮುಪ್ಪಿನ ಸುಳಿಯಲಿ ಉಪ್ಪು ಗಂಜಿಯೂ ಸಿಗದ ಸುಳಿವಲಿ
ಮೂರನೇ ಹೂ ಅರಳಿತ್ತು ಮನೆಯಂಗಳದಲಿ

ಹೂವಿನ ದಳದ ಮೃದು ಸ್ಪರ್ಶಕ್ಕಿಂತಾ
ಮಾಲಿಗೆ ಹಠ ಕೋಪವೆಂಬ ಮುಳ್ಳಿನ ಮೇಲೇ ಕೋಪ

ಮಾರಿಗೆ ಸಾಲದು ಮೂರು ಕಟ್ಟಿಗೆ ಸಿಗದು
ತಿಳಿವು ಹೊಳಹು ಕಡಿಮೆ ಎಂಬೆಲ್ಲಾ ಮೂದಲಿಕೆ

ಉಳಿಪೆಟ್ಟು ನೂರಾರು ಶಿಲೆಯ ಮೇಲೆ ಅಟ್ಟಹಾಸದ್ದೇ ಕಾರುಬಾರು
ವಾಸ್ತವದ ಬೆಂಕಿಯಲ್ಲಿ ಹೂವಿಗೆ ಕಳೆಯಿತು ಇಪ್ಪತ್ಮೂರು

ಮಾಲಿ ಮಾರಿದ ಹೂವಿಗೆ ಪರವೂರಲಿ ಬೇಡಿಕೆ
ಅಂತರ್ಜಾಲದ ಲೋಕಕೆ ಅದರ ಒಡಂಬಡಿಕೆ

ಈಗ ಮಾಲಿ ಇಲ್ಲ; ಮೂದಲಿಕೆ ಇಲ್ಲ ಬೇರುಗಳು ಅಲ್ಲೇ; ಬಳ್ಳಿ ಹಬ್ಬಿದೆ ಊರಗಲ
ಹೂ ಶ್ರೇಷ್ಠ ಎಲ್ಲರಿಗೂ ಇಷ್ಟ ನಮ್ಮ ಮನೆಯ ಮಲ್ಲಿಗೆ ಘಮ ಘಮಿಸುತಿದೆ ಮೆಲ್ಲಗೆ

ಬಾಲ್ಯದ ಪೊರೆ ಕಳಚಿದೆ ಯೌವ್ವನ ಕಾಲಿಕ್ಕಿದೆ ಹಳೆನನಪು ಹೊಸಜೀವನಕೆ ಹುರುಪು
ಬೆಳಕು ಚೆಂದ ಹೂವಿಗೆ ಬಿಸಿಲು ಬೇಡ ಒಂಟಿ ಜೀವನ ಚೆಂದ ನೋಡುವವರಿಗಲ್ಲ

ಸಫಲತೆಯ ಜಾಡಲ್ಲಿ ಹಾರಿಸು ಪರಾಗ ಹಾಡು ಹೊಸರಾಗ
ನಿನಗೆ ಸಿಗದ ಬಾಲ್ಯ, ಸುಂದರ ಕನಸುಗಳು ಕಟ್ಟಿಕೊಡು ನಿನ್ನ ಕರುಳ ಬಳ್ಳಿಗೆ

ಹೆಜ್ಜೆ ಇದೆ ನೂರಾರು ಎಡರು ತೊಡರುಗಳು ಸಾವಿರಾರು
ಮರೆಯಬೇಡ, ನೀ ತಬ್ಬಿದ ಆಲದ ಮರ ನಾನೇ

ಆ ನಿಟ್ಟುಸಿರಲ್ಲಿ ನೋವನೆಲ್ಲಾ ಹೊರಗೆ ಬಿಡು, ಕೋಪವದು ನಿನಗೆ ಇಂಗಾಲ
ನಿನ್ನ ಸೌಂದರ್ಯಕ್ಕೆ ಆ ದೃಷ್ಟಿಬೊಟ್ಟೇಕೆ? ಕೋಪಿಸಿಕೊಳ್ಳುವವರಿಗಲ್ಲ ಈ ಕಾಲ

ಬಾಲ್ಯ ನಿನ್ನೆಯಂತೆ, ಭವಿಷ್ಯ ಸುಂದರವಂತೆ
ಬಾಳು ನೀ ಸಾರ್ಥಕದಿ ಧೃವತಾರೆಯಂತೆ

ಜೊತೆಯಿರದೆ ಕಳೆದೆವೆಷ್ಟೋ ದಿನ
ನೆನಪು ಪ್ರತಿ ಕ್ಷಣ ಪ್ರತಿ ದಿನ
ಇಂದು ನಿನ್ನ ಜನುಮದಿನ
ನಿನಗಿದೋ ನನ್ನ ನುಡಿ ನಮನ

-ಜಿ. ಕೃಷ್ಣ (೧೪-೦೨-೨೦೦೯)
ಬರೆದ ಸಮಯ ಮುಂಜಾನೆ ೩.೪೫

ಲವ್ ಅಟ್ ಫಸ್ಟ್ ಸೈಟ್..

ನನ್ನ ಹುಡುಗಿಯನ್ನ ಮೊದಲಸಲ ನೋಡಲು ಹೋದದ್ದು ೧೧ನೇ ಏಪ್ರಿಲ್ ೨೦೧೦. ಆಕೆಯನ್ನು ಕಂಡು ಬಂದಾಗ ಆಕೆಗೆಂದು ಬರೆದ ನಾಲ್ಕು ಸಾಲುಗಳು ಇವು. :)

ಲವ್ ಅಟ್ ಫಸ್ಟ್ ಸೈಟ್..


ಅದು ನನ್ನ ಮೊಟ್ಟ ಮೊದಲ ಖಾಸಗೀ ಇಂಟರ್ವ್ಯು :) ನಮ್ಮ ಜಾತಕ ಕೂಡಿಬಂದು ಮನೆಯವರೆಲ್ಲ ಒಪ್ಪಿದ ಮೇಲೆ ನಿನ್ನನ್ನು ನೋಡಲು ಬಂದಿದ್ದು ನಾನು. ಬಿಸಿಲಿನ ತಾಪದಿಂದ ಬಳಲಿದ್ದ ನಮಗೆ ನಿಮ್ಮ ಮನೆಯಲ್ಲಿ ಕೊಟ್ಟ ಪಾನಕ ದಣಿದಿದ್ದ ದೇಹಕ್ಕೆ ತಂಪನ್ನು ತಂದಿತ್ತು. ನಿನ್ನ ಮನೆಯವರೊಂದಿಗೆ ಮಾತನಾಡಿದ ನಂತರ ನನ್ನ ಕಣ್ಗಳು ನಿನ್ನ ನೋಡುವ ತವಕದಿಂದ ಕಾತರಿಸಿದ್ದವು. ಅದೇ ನನ್ನ ಮೊಟ್ಟ ಮೊದಲ ಇಂಟರ್ವ್ಯೂ ಆದ್ದರಿಂದ ಒಂದುರೀತಿಯ ನಾಚಿಕೆ, ಸಂಕೋಚ ಮತ್ತೊಂದು ಸ್ವಲ್ಪ ಗಡಿಬಿಡಿ.... ಎಲ್ಲವೂ ಒಮ್ಮೆಲೇ ಆಗಿತ್ತು. ಅಂತೂ ಇಂತೂ ನೀನು ಬಂದೇ ಬಿಟ್ಟೆ. ಬಂದವಳೇ ಅನತಿ ದೂರದಲ್ಲಿದ್ದ ಕೆಂಪುಬಣ್ಣದ ಕುರ್ಚಿಯಮೇಲೆ ಕುಳಿತು ಒಮ್ಮೆ ನೆಲವನ್ನೇ ನೋಡುತ್ತಾ, ಮತ್ತೊಮ್ಮೆ ನನ್ನ ಅಣ್ಣನ ಮಗಳು ವಿಸ್ಮಯಳನ್ನು ಮಾತನಾಡಿಸುತ್ತಾ ಇದ್ದೆ.

ನಿನ್ನ ತಂದೆಯವರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ನಾನು ತತ್ತರಿಸಿದ್ದೆ. ನಿನ್ನೊಡನೆ ಇಂದು ಮಾತನಾಡುತ್ತೇನಾ ? ಇಲ್ಲವಾ ? ಅನುಮಾನಗಳಹುತ್ತ ನನ್ನನ್ನು ಆವರಿಸಿತ್ತು. ಅಂತೂ ಇಂತೂ ನಿಮ್ಮ ತಂದೆಯವರ ಗ್ರೀನ್ ಸಿಗ್ನಲ್ ಸಿಕ್ಕೇ ಬಿಟ್ಟಿತು :)


ನಮ್ಮಿಬ್ಬರನ್ನೂ ಒಂದು ಕೊಠಡಿಗೆ ಕಳುಹಿಸಲಾಗಿತ್ತು, ಕೊಠಡಿಯ ಹೊರಗಡೆ ನನ್ನ ಅಣ್ಣ ಅತ್ತಿಗೆ ಮೊದಲಾದವರಿದ್ದರೆ ಕೊಠಡಿಯ ಒಳಗೆ ನಾವಿಬ್ಬರೂ ಕುಳಿತು ಮಾತನಾಡುತ್ತಿದ್ದೆವು. ನನಗೋ ಮನಸ್ಸಲ್ಲೇ ಏನೋ ಒಂದು ರೀತಿಯ ಸಂಕೋಚ. ಆಡಂಭರದ ಸೀರೆಯಿಲ್ಲದಿದ್ದರೂ ಸರಳವಾದ ಚೂಡೀದಾರಿನಲ್ಲಿ ಚೆಂದವಾಗಿ ಕಾಣ್ತಾ ಇದ್ದೆ ನೀನು :) ಆ ನಿನ್ನ ಸರಳತೆ ನನಗೆ ಇಷ್ಟವಾಯ್ತು. ನಾಚುತ್ತಾ ನಗುತ್ತಾ ನೀನು ಮಾತನಾಡುತ್ತಿದ್ದ ಶೈಲಿ... ಅಲೆಗಳಂತೆ ತೇಲಿ ಬಿಡುತ್ತಿದ್ದ ಆ ನಿನ್ನ ನಗು ಎಲ್ಲವೂ ನಾ ಮೇಲು ತಾ ಮೇಲು ಎಂದು ಪೈಪೋಟಿಗಿಳಿದಂತಿದ್ದವು. ಆ ಮಾತಿನ ನಡುವೆಯೂ ನಿನ್ನ ಕಣ್ತುಂಬಾ ನೋಡಿದೆ... ನೋಡಿದ್ರೆ ಹಾಗೇ ನೋಡ್ತಾನೇ ಇರಬೇಕು ಅನ್ನಿಸ್ತಿತ್ತು. ಆ ನೋಟದಲ್ಲಿ, ಆ ಗಡಿಬಿಡಿಯಲ್ಲಿ ಅದೇನೇನು ಮಾತಾಡಿದ್ನೋ ನನಗೇ ಗೊತ್ತಿಲ್ಲ. ನಿನ್ನ ಕಣ್ ಗಳಲ್ಲಿ ಏನೋ ಹೊಳಪಿತ್ತು. ಆ ನಗುವಲ್ಲಿ ಏನೋ ಒಂದು ತುಂಟತನವಿತ್ತು. ಪ್ರತೀ ಸಲವೂ ನಾಚಿ ನಕ್ಕು ನೀನು ನೆಲ ನೋಡುವಾಗ ನಿನ್ನ ನೀಳ ಕೂದಲುಗಳು ಹೊಳೆಯುತ್ತಿದ್ದವು. ಹೌದು... ಬಹುಶಃ ಇದನ್ನೇ ಲವ್ ಅಟ್ ಫಸ್ಟ್ ಸೈಟ್ ಅನ್ನೋದೇನೋ.... ನಿನ್ನೊಡನೆ ಮಾತನಾಡುತ್ತಿದ್ದಾಗ ನನ್ನ ಮನದಲ್ಲಿದ್ದ ನನ್ನ ಕಲ್ಪನೆಯ ಕನ್ಯೆಗೆ ಮತ್ತೆ ನಿನಗೆ ಸ್ಪರ್ಧೆ ಏರ್ಪಟ್ಟಿತ್ತು. ಕಲ್ಪನೆಯ ಕನ್ಯೆಗೆ ನಿರ್ಧಿಷ್ಟವಾದ ರೂಪವಿಲ್ಲದಿದ್ದರಿಂದ ನಿನ್ನ ರೂಪವೇ ಮೇಲ್ಪಂಕ್ತಿಯಲ್ಲಿ ಸಾಗಿತ್ತು. ಸರಿ ಸುಮಾರು ಹತ್ತು ನಿಮಿಷಗಳ ನಂತರ ನಮ್ಮ ಮಾತು ಮುಗಿದಿತ್ತು. ಸಾಮಾನ್ಯವಾಗಿ ಉಪ್ಪಿಟ್ಟು ಮತ್ತು ಕೇಸರೀ ಭಾತಿನಲ್ಲಿ ಎಲ್ಲರ ಇಂಟರ್ವ್ಯು ನಡೆದರೆ ನನಗೆ ಆಲೂಗಡ್ಡೆಯ ಚಿಪ್ಸ್ ಮತ್ತು ಸೋನ್ ಪಾಪಡಿಯಲ್ಲೇ ಅಡ್ಜಸ್ಟ್ ಮಾಡ್ಕೊಳ್ಬೇಕಾಯಿತು. ನಂತರ ನಿಮ್ಮಲ್ಲಿಂದ ಹೊರಡುವಾಗ ಕೊನೇ ಘಳಿಗೆಯಲ್ಲಿ ಎಲ್ಲರ ನಡುವೆ ನೀನು ನನ್ನನ್ನು ಇಣುಕಿನೋಡಿದ ನೋಟ ನನಗೆ ಹಿಡಿಸಿತು :) ಆಗಲೆ ನನ್ನ ಮನಸ್ಸು ಗಟ್ಟಿಯಾಗಿ ಹೇಳುತ್ತಿತ್ತು..... ಕದ್ದು ಕದ್ದು ನನ್ನ ನೋಡೋ ತುಂಟ ಕಣ್ಣು ನಿಂದೇನಾ ಅಂತ.

ನಮ್ಮ ಆ ಭೇಟಿಯ ನಂತರ ಸುಮಾರು ಒಂದು ತಿಂಗಳು ನಿನ್ನನ್ನು ನೋಡಲಾಗಲಿಲ್ಲ. ಆದರೆ ಆ ಮೊದಲ ನೋಟದ ಸವಿ ನೆನಪು ಮನಸ್ಸಿನಿಂದ ಎಂದೂ ಮಾಸುವುದಿಲ್ಲ. ನಂತರ ನಮ್ಮಿಬ್ಬರ ಮನೆಯವರಿಗೂ ಈ ಸಂಭಂಧ ಒಪ್ಪಿಗೆಯಾದಬಳಿಕ ನಿನ್ನ ಜನ್ಮದಿನದಂದು ನಿನಗೆ ಫೋನ್ ಮಾಡುವ ಧೈರ್ಯ ತಂದುಕೊಂಡೆ. ನಿನ್ನ ಮೊಬೈಲಿಗೇ ಹೇಗೆ ಕರೆಮಾಡುವುದು ??? ಮಾಡಲು ನನ್ನ ಬಳಿ ನಿನ್ನ ನಂಬರ್ ಆದರೂ ಇಲ್ಲವಲ್ಲಾ... ಆದಿನ ಎಷ್ಟು ಹೆಣಗಾಡಿದ್ದೆ ಗೊತ್ತಾ??? ಕಡೆಗೆ ಸ್ವಲ್ಪ ಆಲೋಚಿಸಿ ನಿಮ್ಮ ಸ್ಥಿರದೂರವಾಣಿಗೇ ಕರೆನೀಡಿದೆ.

ಅಯ್ಯೋ ಗ್ರಹಚಾರವೇ !!! ಆ ದೂರವಾಣಿ ಅವತ್ತೇ ಕೆಟ್ಟುಹೋಗಬೇಕಿತ್ತೇ... ಮತ್ತೆ ದಾರಿ ಕಾಣದೇ ನಿಮ್ಮ ದೊಡ್ಡಪ್ಪನ ಮೊಬೈಲಿಗೇ ಕರೆನೀಡಿದ್ದೆ. ಆಗ ತಾನೆ ಸವಿ ನಿದ್ರೆಯಿಂದೆದಿದ್ದ ನಿನಗೆ ನನ್ನ ಫೋನ್ ಕಾಲ್ ನಿಂದ ಸ್ವಲ್ಪ ಆಶ್ಚರ್ಯವಾರಿರಬೇಕು!!! ಸರಿಯಾಗಿ ಮಾತನಾಡಲೂ ಬರದೆ ಏನೇನೋ ಬಡಬಡಾಯಿಸಿ ನಿನ್ನ ಮೊಬೈಲ್ ನಂಬರ್ರನ್ನು ಪಡೆದುಕೊಂಡು ಕಾಲ್ ಮುಗಿಸಿದ್ದೆ ನಾನು :)

ಅಂದಿನಿಂದ ನಮ್ಮ SMS ಗಳ ವಿನಿಮಯ ಪ್ರಾರಂಭವಾಯಿತು. ಮೊದ ಮೊದಲು ನಿನಗೆ ಬರೀ SMS ಮಾಡ್ತಾ ಇದ್ದ ನಾನು ನಿಮ್ಮ ತಂದೆ ನನ್ನ ಮನೆಗೆ ಬಂದು ಹೋದ ನಂತರ ಕಾಲ್ ಮಾಡೋ ಧೈರ್ಯ ತಂದುಕೊಂಡೆ. ಪ್ರತೀ ದಿನ ನನ್ನ ಅಮ್ಮನಿಗೆ ತಪ್ಪದೇ ಕರೆ ಮಾಡುತ್ತಿದ್ದ ನಾನು ಅಂದಿನಿಂದ ನಿನಗೂ ನನ್ನ ದಿನಚರಿಯಲ್ಲಿ ಸಮಯ ಮೀಸಲಿಡಲಾರಂಭಿಸಿದೆ. ಅಂದು ನೀನು "ಅಮ್ಮ ಹೇಳ್ತಾ ಇದ್ರು, ಒಂದು ದಿನ ಬರ್ಬೇಕಂತೆ" ಅಂದ್ಯಲ್ಲಾ... ನನ್ಗೆ ತುಂಬಾ ಖುಷಿ ಆಯ್ತು. ನಿನ್ನ ಜೊತೆ ದಿನಾ ನನ್ನ ವೋಡಾಫೋನ್ ನಿಂದ ಕರೆ ಮಾಡಿ ಮಾಡೀ ಯಾವ ತಿಂಗಳೂ ಬಾರದಷ್ಟು ದೊಡ್ಡ ಮೊತ್ತದ ಬಿಲ್ ಬಂದಿತ್ತು. ಅದನ್ನ ಕಷ್ಟ ಆದ್ರೂ ಇಷ್ಟ ಪಟ್ಕೊಂಡು ಎತ್ತಿ ಹಿಡಿದೆ ;) ಆವತ್ತೇ ನನ್ನ ನೆಟ್ವರ್ಕನ್ನ ಬದಲಾಯಿಸ್ಬೇಕು ಅಂತ ನಾವಿಬ್ಬರೂ ಪ್ರಯತ್ನ ಪಟ್ವಿ ಅಲ್ವ... ಅಂತೂ ಇಂತೂ ಐಡಿಯ ನೆಟ್ವರ್ಕನ್ನ ಸೇರಿಕೊಳ್ಳೋದು ಅಂತ ತೀರ್ಮಾನಿಸಿದ್ವಿ. ನಾನೇನೋ ಇಲ್ಲಿ ಒಂದು ಸಿಮ್ ತೊಗೊಂಡು ಅದನ್ನ Active ಮಾಡ್ಕೊಂಡ್ಬಿಟ್ಟೆ. ಆದ್ರೆ ನೀನು ಸಿಮ್ ತೊಗೊಂಡ್ರೂ ಅದು Active ಮಾತ್ರ ಆಗ್ಲಿಲ್ಲ ನೋಡು. ಕೊನೇಗೂ ನಾನೇ ನನ್ನ ಹೆಸರಲ್ಲೇ ಮತ್ತೊಂದು ಸಿಮ್ ತೊಗೊಂಡು ಅದನ್ನ Active ಮಾಡಿಸ್ದೆ.....

ಮಾಡಿಸ್ಬಿಟ್ರೆ ಸಾಕಾ ??? ಅದನ್ನ ನಿನ್ಗೆ ತಲುಪಿಸೋದು ಹೇಗೆ ? ಆ ಸಿಮ್ಮಿಗೆ ಬೇರೇ ಫೋನ್ ಕೂಡಾ ಬೇಕಲ್ವಾ ??

ಅದಿಕ್ಕೇ ಅಂತಾನೇ ನೋಕಿಯ ೫೧೩೦ ಹೊಸಾ ಫೋನ್ ತಂದಿದ್ದಾಯ್ತು. ನಾನು ನಿನ್ನ ಸಿಮ್ Active ಆಗಿದ್ರೂ ಆಗಿಲ್ಲ ಅಂದೆ. ಯಾಕೆ ಹೇಳು... ಅದು ನಿನ್ನ ಕೈ ಸೇರಿದ ಮೇಲೆ ಅದು Active ಆಗಿದೆ ಅಂತ ಗೊತ್ತಾದಾಗ ನಿನ್ನ ಮೊಗದಲ್ಲಿ ಮೂಡುವ ಸಂತಸ ನೋಡ್ಬೇಕು ಅನ್ಸಿತ್ತು. ಅದಿಕ್ಕೆ :)

ಅದೆರಡನ್ನೂ ನಾನೇ ತಂದು ನಿನ್ಗೆ ಕೊಡ್ಬೇಕು ಅಂತ ನಿರ್ಧರಿಸಿದಮೇಲೆ ನಿನ್ನ ಮನೆಗೆ ಗುರುವಾರ ಬರುವುದಾಗಿ ತಿಳಿಸಿದೆ. ಅವತ್ತೋ ಜೋರು ಮಳೆ, ವಿಪರೀತ ಗಾಳಿ. ಆದರೂ ಅದನ್ನ ಲೆಕ್ಕಕ್ಕೆ ಇಡದೇ ನನ್ನ ಕುದುರೆಯನ್ನೇರಿ ಬಂದಿದ್ದೆ :) ನೀನು ಕೆಂಪು ಮತ್ತೆ ಬಿಳಿಯ ಬಣ್ಣದ ಚೂಡೀದಾರಿನಲ್ಲಿ ಅದೇ ಸರಳತೆಯಿಂದ ಸುಂದರವಾಗಿ ಕಾಣ್ತಾ ಇದ್ದೆ. ಬಂದ ತಕ್ಷಣಾ ಒಂದು ತಟ್ಟೆಯಲ್ಲಿ ಶ್ಯಾವಿಗೆ ಉಪ್ಪಿಟ್ಟನ್ನ ನಿನ್ನ ಕೈಯಾರೆ ತಂದು ಕೊಟ್ಟಿದ್ದೆ.

ಅಬ್ಬಾ!!! ಅದೂ ತಟ್ಟೆ ಭರ್ತಿ !!! ಅದಾದ ನಂತರ ಬಿಸಿ ಬಿಸಿ ಹಾರ್ಲಿಕ್ಸ್. ಒಂದು ಕ್ಷಣ ನಾನು ಇದನ್ನ ಯಾವಾಗಪ್ಪಾ ಮುಗಿಸೋದು ಅನ್ನಿಸ್ಬಿಟ್ಟಿತ್ತು. ಹಾಗೋ ಹೀಗೋ ತಿಂದು ಮುಗಿಸಿದ್ದೆ. ಆಮೇಲಷ್ಟೆ ನಮಗೆ ಮಾತನಾಡಲು ಅವಕಾಶ ಸಿಕ್ಕಿದ್ದು. ಮಹಡಿಯ ಮೇಲಿನ ರೂಮಿನಲ್ಲಿ ನಿನ್ನ ತಮ್ಮ, ತಂಗಿಯರ ಪರಿಚಯವಾದಮೇಲೆ ನಾವಿಬ್ಬರೂ ಒಂದು ರೂಮಿನಲ್ಲಿ ಹರಟೆ ಹೊಡೆಯಲು ಬಂದಿದ್ದೆವು. ಅಲ್ಲೂ ಅದೇ ನಾಚಿಕೆ, ಅದೇ ತುಂಟಾಟ, ಅದೇ ನಾಚಿ ರಂಗೇರಿದ ಕೆನ್ನೆ, ಅದೇ ನಗು :) ನಮ್ಮ ಮಾತಿನ ಮಧ್ಯೆ ಸಮಯ ಜಾರಿದ್ದು ಪರಿವೆಗೇ ಬಾರದೇ ಹೋಯಿತು. ಅದರ ಮಧ್ಯೆ ನಿನ್ನ ಬಾಲ್ಯದ ಫೋಟೋ ಗಳನ್ನ ನೋಡ್ತಾ, ನಿನ್ನೊಡನೆ ಹರಟೆ ಹೊಡೆಯುತ್ತಾ ಕಳೆದ ಸಮಯ ಮನಸ್ಸಿನ ಎರಕಕ್ಕೆ ಹೊಯ್ದ ಅಚ್ಚಳಿಯದೇ ಉಳಿದಿದೆ.

ನಿನ್ನೊಂದಿಗೆ ಹಂಚಿಕೊಂಡ ನನ್ನವೇ ಆದ ಕನಸುಗಳಿಗೆ ನಿನ್ನ ಸಹಕಾರ ಇದ್ದೇ ಇರುತ್ತದೆ ಎಂಬ ಅಚಲ ನಂಬಿಕೆ ನನ್ನದು. ನಾನವನ್ನು ಯಾರೊಡನೆಯೂ ಹಂಚಿಕೊಂಡಿಲ್ಲ. ನಿನ್ನೊಂದಿಗೆ ಪ್ರತೀ ದಿನವೂ ಮಾತನಾಡುವಾಗ ನನ್ನದೇ ಆದ ಲೋಕವನ್ನ ಕೊಂಚ ಕೊಂಚವಾಗೇ ತೆರೆದಿಡುತ್ತಿದ್ದೇನೆ. ಆ ಲೋಕಕ್ಕೆ ಬೇರಾರಿಗೂ ಪ್ರವೇಶವಿಲ್ಲ... ಅದು ಕೇವಲ ನನ್ನ ಮತ್ತು ನಿನ್ನ ಪ್ರಪಂಚ :) ನಾನು ನಿನ್ನೊಡನೆ ಅದೆಲ್ಲವನ್ನೂ ಹಂಚಿಕೊಂಡಾಗಲೆಲ್ಲಾ ನಿನ್ನಿಂದ ಸಿಕ್ಕುವ ಪ್ರತಿ ಸ್ಪಂದನದಿಂದ ನನ್ನಲ್ಲಿ ಒಂದು ರೀತಿಯ ಆತ್ಮವಿಶ್ವಾಸ ಹೆಚ್ಚುತ್ತದೆ.

ಇಷ್ಟೆಲ್ಲಾ ಆದದ್ದು ಬರೀ ಒಂದೂವರೆ ತಿಂಗಳಿನಲ್ಲ? ನನ್ನ ಕೈ ನಾನೇ ಚಿವುಟುತ್ತಿದ್ದೇನೆ, ನಾನು ಕನಸು ಕಾಣುತ್ತಿಲ್ಲ ತಾನೇ ?? ಬಹುಶಃ ನಿನ್ನನ್ನು ಮತ್ತೊಮ್ಮೆ ಕಂಡ ಮೇಲೆಯೇ ಈ ಭಾವದಲೆಗೆ ತೃಪ್ತಿಯೇನೋ.. ಆ ದಿನಕ್ಕೆ ಎದುರು ನೋಡುತ್ತಿದ್ದೇನೆ.. ಅದು ಇನ್ನೇನು ಹತ್ತಿರದಲ್ಲೇ ಇದೆ :)

ನೋಡು, ನಿನ್ನ ಯೋಚನೆ ಮನದಲ್ಲಿ ಮೂಡುತ್ತಿದ್ದಂತೇ ಮೊಬೈಲಿನಲ್ಲಿ ನಿನ್ನದೇ ಆ ನಗುಮೊಗ ಮೂಡುತ್ತಿದೆ, ನಿನ್ನದೇ ಸಂದೇಶ... ಇದನ್ನೆಲ್ಲಾ ನಾನು ನಿನಗೆ ಮೊಬೈಲಿನಲ್ಲಿ ಹೇಳಿದರೆ ಮಧುರವಾಗಿತ್ತಾ ??? ಗೊತ್ತಿಲ್ಲ... ಒಮ್ಮೆ ಅಕಸ್ಮಾತ್ ನೀನೇನಾದರೂ "ಅಯ್ಯೋ ಕೊರೀಬೇಡ್ರೀ" ಅಂದ್ರೆ ??? ನಿನಗೆ ತೊಂದರೆ ಕೊಡಲು ನನ್ನ ಮನಸ್ಸು ಒಪ್ಪುವುದಿಲ್ಲ ನನ್ನ ಹುಡುಗೀ :) ಇದನ್ನ ಮುಂದಿನ ಭಾನುವಾರ.. ನಿನ್ನ ಕೈಯಲ್ಲೇ ಕೊಡುತ್ತೇನೆ.. ಅದೇನಾದರೂ ಹೇಳಬೇಕೆಂದಿದ್ದರೆ ಅಲ್ಲೇ ಹೇಳಿಬಿಡು... ನಿನ್ನ ಪಡೆದ ಧನ್ಯತೆಯಲ್ಲಿ ನನ್ನ ಈ ಕೊರೆತವನ್ನ ಸಧ್ಯಕ್ಕೆ ನಿಲ್ಲಿಸುತ್ತೇನೆ :)

ಖಾಲಿ ನೆಲದಲ್ಲಿ ರಂಗು ರಂಗಿನ ರಂಗೋಲಿ

ಮನ ಮಂದಿರದಿ ಉಲ್ಲಾಸದ ಜೋಕಾಲಿ

ಮನದಂಗಳದಿ ಚಿತ್ತಾರ ಮೂಡುತಿದೆ

ಆ ನಿನ್ನ ಹೆಜ್ಜೆ ಗುರುತುಗಳು ಕಾಣತೊಡಗಿವೆ


ಇಂತಿ ನಿನ್ನ,
ಪ್ರಶಾಂತ ಜಿ ಉರಾಳ

Thursday, February 3, 2011

ನೆನಪು

ಇವತ್ತು ಅವಳನ್ನ ಆನ್-ಲೈನ್ ನೋಡಿದೆ. ಮತ್ತೆ ನೆನಪುಗಳಿಗೆ ಜೀವ ಬಂದಂತೆ ಆಯಿತು. ನಮ್ಮ ಆಕಸ್ಮಿಕ ಭೇಟಿ, ಮಾಡುತ್ತಿದ್ದ ಆ ಎಸ್ ಟಿ ಡಿ ಕಾಲ್ ಗಳು, ಚಾಟಿಂಗ್, ಪರಸ್ಪರ ಶುಭಾಷಯ ವಿನಿಮಯ ಎಲ್ಲವೂ ನಾಮುಂದು ತಾಮುಂದು ಅಂತ ನೆನಪಿನ ಪರದೆಯಮೇಲೆ ಸರಿದು ಹೋದವು.

ಒಳ್ಳೆಯ ಸ್ನೇಹಿತರಾಗಿರೋಣ ಅಂದವಳು ಇವತ್ತು ನನ್ನ ಮಾತನಾಡಿಸ್ತಾ ಇಲ್ಲ. ಕಾರಣ ??? ನನಗೆ ತಿಳಿದಿಲ್ಲ ಅಥವಾ ತಿಳಿದೂ ಸುಮ್ಮನಿದ್ದೇನೆ. ನಾಲ್ಕುತಿಂಗಳ ಕೆಳಗೆ ನಾವು ಮಾತನಾಡಿದ್ದೇ ಕಡೆ. ಮತ್ತೊಮ್ಮೆ ಆಕೆಯ ದನಿ ಕೇಳಿಲ್ಲ, ಆಕೆಯ ಮೆಸ್ಸೇಜ್ ಓದಿಲ್ಲ. ಹಿಂದಿನದೆಲ್ಲಾ ಒಂದು ಮಧುರ ಸಿಹಿ ಸ್ವಪ್ನದಂತ ಭಾಸವಾಗುತ್ತಿದೆ. ಜೀವನ ನಿಲ್ಲದ ಪಯಣ, ನಿರಂತರ. ಹಿಂದಿನ ದಿನಗಳಿಗೆ ಹೋಗುವ ಟೈಮ್ ಮಷೀನ್ ನನ್ನ ಬಳಿ ಇದ್ದಿದ್ದರೆ ಎಷ್ಟು ಚೆಂದ ಅಂತ ಅನ್ನಿಸ್ತು.

Thursday, January 6, 2011

ಅಮೇದಿಕೇಲ್ ಚಾರಣ

ಕಳೆದ ಮೂರು ವರ್ಷ ಅನಿವಾರ್ಯ ಕಾರಣಗಳಿಂದ ನಾನು ಚಾರಣಕ್ಕೆ ಹೋಗಲಾಗಿರಲಿಲ್ಲ. ಈ ಬಾರಿ ಖಂಡಿತವಾಗಿ ಹೋಗಲೇಬೇಕೆಂದು ಮೊದಲೇ ನಿರ್ಧರಿಸಿದ್ದೆ. ಈ ಬಾರಿ ನಮ್ಮ ಚಾರಣ ಧರ್ಮಸ್ಥಳದ ಕೊಕ್ಕಡದ ಬಳಿಯ ಒಂದು ಪರ್ವತ "ಅಮೇದಿಕೇಲ್" ಅನ್ನುವ ಬೆಟ್ಟಕ್ಕೆ ಎಂದು ನಮ್ಮ ತಂಡದ ನಾಯಕ ಸೀತಾರಾಮು ಹೇಳಿದ್ದರು.

ನಮ್ಮತಂಡದಲ್ಲಿ ಒಟ್ಟು ೧೫ ಮಂದಿ ಇದ್ದೆವು. ೧೬ನೇಯವನಾಗಬೇಕಿದ್ದ ಬಾಲಾಜಿ ಕಡೇ ಕ್ಷಣದವರೆಗೂ suspense Maintain ಮಾಡಿ ಕೈ ಕೊಟ್ಟರು. ನಮ್ಮ ತಂಡದ ಸದಸ್ಯರು (ನನ್ನನ್ನೂ ಒಳಗೊಂಡಂತೆ):
ಸೀತಾರಾಮು, ಅಲಮೇಲು (ಅಮ್ಮಿ), ಸೌಮ್ಯ, ಸೌರಭ್, ಕೃಷ್ಣ, ಪ್ರಶಾಂತ, ಪ್ರೀತಮ್, ಯಜ್ಞನಾರಾಯಣ ಶರ್ಮ (ಅಣ್ಣಯ್ಯ), ಶ್ರೀನಿಧಿ, ಭರತ್, ರಾಜೇಶ, ಮೋಹನ, ಜ್ಯೋತಿ, ಪ್ರವೀಣ್ ಮತ್ತು ವಿನಯ್.

ರಾತ್ರಿ ೧೧ಕ್ಕೆ ಧರ್ಮಸ್ಥಳಕ್ಕೆ ಹೋಗುವ ಬಸ್ಸಿಗಾಗಿ ರಾಜೇಶ್ ಟಿಕೇಟ್ ಕಾದಿರಿಸಿದ್ದರು. ನಾನು ೨೨-೧೨-೨೦೧೦ರ ರಾತ್ರಿ ಬೆಂಗಳೂರಿನ ಟ್ರಾಫಿಕ್ ಅನ್ನು ಗಮನದಲ್ಲಿಟ್ಟುಕೊಂಡೇ ೮.೩೦ಕ್ಕೇ ಬೆಂಗಳೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಹೊರಟೆ. ನನ್ನ ಊಹೆಗೆ ತಕ್ಕಂತೆ ನಿಲ್ದಾಣ ತಲುಪುವಾಗ ಸಮಯ ಸುಮಾರು ೧೦.೧೫ ಆಗಿತ್ತು. ಧರ್ಮಸ್ಥಳಕ್ಕೆ ಹೊರಡುವ ವೋಲ್ವೋಬಸ್ ರೆಡಿಯಾಗೇ ನಿಂತಿತ್ತು ಆದರೆ ಟಿಕೆಟ್ ಮೋಹನರ ಬಳಿ ಇದ್ದದ್ದರಿಂದ ಮುಂಗೋಪಿ ಕಂಡಕ್ಟರ್ ನನ್ನನ್ನು ಬಸ್ ಹತ್ತಲು ಬಿಡಲಿಲ್ಲ. ಸ್ವಲ್ಪಹೊತ್ತು ಕಳೆದ ನಂತರ ಮೋಹನ ಮತ್ತಿತರರು ಬಂದಮೇಲೆ ಐರಾವತ ರಾತ್ರಿ ೧೦.೫೫ಕ್ಕೆ ನಿಲ್ದಾಣ ಬಿಟ್ಟು ಹೊರಟಿತು.

ದಾರಿಯಲ್ಲಿ ನಾನು ರಾಜೇಶ ಹರಟೆ ಹೊಡೆಯುತ್ತಾ ಹಾಗೇ ನಿದ್ದೆಗೆ ಜಾರಿದೆವು. ಶಿರಾಡಿ ಘಾಟಿಯ ಅಂಕು ಡೊಂಕಾದ ಏರಿಳಿತಗಳಿಂದ ಕೂಡಿದ ರಸ್ತೆಯ ಮೇಲೆ ಐರಾವತ ಸರಾಗವಾಗಿ ಸಾಗುತ್ತಿತ್ತು. ಮುಂಜಾವು ಸುಮಾರು ೫.೩೫ಕ್ಕೆ ಮೋಹನ ನಮ್ಮನ್ನೆಲ್ಲಾ ಎಬ್ಬಿಸಿದಾಗ ನಾವು ಕೊಕ್ಕಡದ ಸಮೀಪವಿರುವುದು ತಿಳಿಯಿತು. ನಾವೆಲ್ಲಾ ನಮ್ಮ ನಮ್ಮ Trekking Bag ಗಳನ್ನ ಇಳಿಸಿಕೊಂಡಮೇಲೆ ಐರಾವತ ಧರ್ಮಸ್ಥಳದಕಡೆಗೆ ಹೊರಟಿತು. ಅಲ್ಲಿ ನಮಗಾಗಿ ಗೋಪು ಗೋಖಲೆಯವರು ಕಳಿಸಿಕೊಟ್ಟಿದ್ದ ಎರೆಡು ಮಹಿಂದ್ರ ಜೀಪುಗಳು ಕಾಯುತ್ತಾ ಇದ್ದವು. ಗೋಪು ಗೋಖಲೆಯವರು ನಮ್ಮಂತೆ ಚಾರಣಕ್ಕೆ ಬರುವ ಚಾರಣಿಗರಿಗೆ ಅಲ್ಪಾವಧಿಯ ವಸತಿಯನ್ನು ನಿರ್ಧಾರಿತ ಮೊತ್ತಕ್ಕೆ ಹೊಂದಿಸಿಕೊಡುವವರು. ಆಗಲೇ ಜ್ಯೋತಿಗೆ ತಮ್ಮ Trekking Shoes ಧರ್ಮಸ್ಥಳದ ಕಡೆಗೆ ಹೊರಟಿರುವ ಅರಿವಾದದ್ದು. ತಕ್ಷಣ ಮೋಹನ ಮತ್ತು ಜ್ಯೋತಿ ಜೀಪು ಹತ್ತಿ ಐರಾವತವನ್ನು ಬೆನ್ನಟ್ಟಿ ಹೋದರು. ಕಡೆಗೆ ಅದನ್ನು ಮರಳಿ ತರುವಲ್ಲಿ ಯಶಸ್ವಿಯೂ ಆದರು.

ಕೊಕ್ಕಡಕ್ಕೆ ಅಣ್ಣಯ್ಯ ಮೊದಲೇ ಮೈಸೂರಿನಿಂದ ಬಂದಿಳಿದಿದ್ದರು. ನಾನು, ಅಣ್ಣಯ್ಯ, ಪ್ರೀತಮ್, ರಾಜೇಶ, ನಿಧಿ, ಭರತ್, ಪ್ರವೀಣ್ ಮತ್ತು ವಿನಯ್ ಕೊಕ್ಕಡದ ಬಸ್ ನಿಲ್ದಾಣದ ಬಳಿಯ ಹೋಟೇಲೊಂದರಲ್ಲಿ ಟೀ ಕುಡಿದು ಮೊದಲೇ ತಯಾರಿದ್ದ ಜೀಪಿನಲ್ಲಿ ಶಿಶಿಲದಲ್ಲಿರುವ ಗೋಪು ಗೋಖಲೆ ಅನ್ನುವವರ ಮನೆಯಕಡೆಗೆ ಹೊರಟೆವು. ಮತ್ತೊಂದು ಜೀಪಿನಲ್ಲಿ ಹಾಸನದಿಂದ ಹೊರಟಿದ್ದ ಸೀತಾರಾಮ್, ಅಮ್ಮಿ, ಸೌಮ್ಯ, ಸೌರಭ, ಕೃಷ್ಣ ಮತ್ತು ತಂಡ ಅವರೂ ಗೋಖಲೆಯವರ ಮನೆಗೆ ಬಂದಿಳಿದರು.
ನಮ್ಮಂತೆ ಈ ಮೊದಲೇ ಹಲವಾರು ಚಾರಣಿಗರು ಗೋಖಲೆಯವರ ಮನೆಗೆ ಬಂದು ಹೋದದ್ದುಂಟು. ಆ ರೀತಿ ಬರುವವರಿಗಾಗೇ ಗೋಖಲೆಯವರು ಒಂದು ವಿಶ್ರಾಂತಿ ಕೊಠಡಿಯನ್ನು ಕಟ್ಟಿಸಿಟ್ಟಿದ್ದಾರೆ. ಅಲ್ಲಿ ಬಿಸಿನೀರಿನ ವ್ಯವಸ್ಥೆ ಕೂಡಾ ಇತ್ತು. ನಾವೆಲ್ಲಾ ನಮ್ಮ ಬೆಳಗಿನ ಕೆಲಸಗಳನ್ನು ಮುಗಿಸಿ ಅವರ ಮನೆಯಲ್ಲೇ ತಿಂಡಿ ತಿಂದು ಅವರು ಮಾಡಿಕೊಟ್ಟ ಚಪಾತಿಯನ್ನು ನಮ್ಮ ಜೊತೆಗೆ ಕೊಂಡು ಶಿಶಿಲದಿಂದ ಕೆಂಬಾರದ ಕಡೆಗೆ ಸುಮಾರು ೯.೩೦ಕ್ಕೆ ಸಣ್ಣಪ್ಪ ಅನ್ನುವ ಒಬ್ಬ Guideಅನ್ನು ಕರೆದುಕೊಂಡು ಜೀಪಿನಲ್ಲಿ ಹೊರಟೆವು.

ನಮ್ಮ ಚಾರಣ ಸುಮಾರು ೧೦.೦೦ಘಂಟೆಗೆ ಕೆಂಬಾರದಿಂದ ಪ್ರಾರಂಭವಾಯಿತು. ಕೆಂಬಾರ ಸಮುದ್ರಮಟ್ಟದಿಂದ ಸುಮಾರು ೧೧೬ ಮೀಟರ್ ಎತ್ತರದಲ್ಲಿದೆ. ಇಲ್ಲಿಂದ ಎತ್ತಿನ ಭುಜವೂ ಸ್ಪಷ್ಟವಾಗಿ ಕಾಣುತ್ತದೆ. ಚಾರಣದ ಮೊದಲ ಹಂತದಲ್ಲಿ ನಾವೆಲ್ಲಾ ಉತ್ಸಾಹಿಗಳಾಗಿ ಹೆಜ್ಜೆ ಹಾಕುತ್ತಲಿದ್ದೆವು. ಅಲ್ಲಿಂದ ಸುಮಾರು ೬೦ ಮೀಟರ್ ಎತ್ತರ ಏರಿದಮೇಲೆ ಹತ್ತಿರದಲ್ಲಿ ಹರಿಯುತ್ತಿದ್ದ ಒಂದು ಝರಿಯಿಂದ ನಮ್ಮೆಲ್ಲರ ಜೊತೆಯಿದ್ದ ಖಾಲಿ ಬಾಟಲಿಗಳಿಗೆ "Original" ಮಿನರಲ್ ವಾಟರ್ ತುಂಬಿಸಿಕೊಂಡೆವು.

ಈ ಬಾರಿ ನೀರಿನ ಭಾರ ಪ್ರತಿಯೊಬ್ಬರಿಗೂ ಸಮನಾಗಿ ಹಂಚಿಕೆಯಾಗುವಂತೆ ಸೀತಾರಾಂ ಪ್ರತಿಯೊಬ್ಬರಿಗೂ 200mlಮತ್ತು 500ml ನ ಬಾಟಲ್ಗಳಿಗೆ ಒಂದು Clip ಹಾಕಿ ಕೊಟ್ಟಿದ್ದರು. ಹಾಗಾಗಿ ಪ್ರತಿಯೊಬ್ಬರಿಗೂ ಅನುಕೂಲವಾಯಿತು. ತಕ್ಷಣ ನೀರಡಿಕೆಯಾದಾಗ ಭಾರದ ಚೀಲವನ್ನು ಕೆಳಗಿಳಿಸಿ ಅದರಲ್ಲಿ ಹುದುಗಿರುವ ಬಾಟಲಿಯನ್ನು ತೆಗೆದು ನೀರುಕುಡಿಯುವ ತೊಂದರೆ ಒಂದು ಕಡೆ ತಪ್ಪಿದರೆ, ಒಬ್ಬರ ಎಂಜಲು ಮತ್ತೊಬ್ಬರು ಕುಡಿಯುವುದೂ ತಪ್ಪಿತು.



ಇದುವರೆವಿಗೂ ಚಳಿಯಿಂದ ಕಾಪಾಡಿಕೊಳ್ಳಲು ನಾವು ಹಾಕಿಕೊಂಡಿದ್ದ ಸ್ವೆಟರ್ಗಳು ನಮ್ಮ ಟ್ರಕ್ಕಿಂಗ್ ಬ್ಯಾಗ್ ಸೇರಿಕೊಂಡವು. ಚಾರಣದ ಪ್ರಾರಂಭದಲ್ಲೇ ನನಗೆ ಜಿಗಣೆಯಿಂದ ಸ್ವಾಗತ ಸಿಕ್ಕಿತು.

ಸುಮಾರು ೧.೦೦ ಘಂಟೆಗೆ ನಾವೆಲ್ಲಾ ಸಮುದ್ರ ಮಟ್ಟದಿಂದ ೫೨೧ ಮೀಟರ್ ಎತ್ತರದಲ್ಲಿ ಸಿಕ್ಕ ಒಂದು ಝರಿಯಬಳಿಯಲ್ಲಿ ಚಪಾತಿ ಮತ್ತು ಸಿಹಿ ಕುಂಬಳಕಾಯಿಯ ಪಲ್ಯವನ್ನು ತಿಂದು ಝರಿಯ ನೀರು ಕುಡಿದು ಸ್ವಲ್ಪಮಟ್ಟಿಗೆ ನಮ್ಮ Energy level ಹೆಚ್ಚಿಸಿಕೊಂಡೆವು. ಚಪಾತಿ ತಿನ್ನುವಾಗ ಪ್ರವೀಣ್ ಅವರ ಸುಶ್ರಾವ್ಯ ಕಂಠಸಿರಿಯಿಂದ "ಪ್ರಿಯತಮೇ.... " ಹಾಡು ಕೇಳಿ ಬರುತ್ತಿತ್ತು. ಅಲ್ಲಿ ಸ್ವಲ್ಪ ವಿರಾಮದ ನಂತರ ಸುಮಾರು ೧.೩೦ಕ್ಕೆ ನಮ್ಮ ಪಯಣ ಅಮೇದಿಕಲ್ ಶೃಂಗದೆಡೆಗೆ ಹೊರಟಿತು.
ದಾರಿಯಲ್ಲಿ ಸುಡುಬಿಸಿಲು ನಮ್ಮ ಬೆಂಬಿಡದೇ ಜೊತೆಯಲ್ಲೇ ಬರುತ್ತಿತ್ತು. ದಾರಿಯಲ್ಲಿ ನಾವೆಲ್ಲಾ ನೆರಳಿಗಾಗಿ ಹುಡುಕುತ್ತಾ ಕಡಿದಾದ ಹಾದಿಯನ್ನು ಸವೆಸುತ್ತಿದ್ದೆವು. ಸುಮಾರು ೩.೧೫ರ ಸಮಯಕ್ಕೆ ಒಂದು ತಂಪಾದ ಸ್ಥಳದಲ್ಲಿ ನಮ್ಮ ಲಗೇಜುಗಳನ್ನು ಹೊತ್ತಿದ್ದ ದೇಹವನ್ನು ಚೆಲ್ಲಿ ಆ ನೆರಳಿನಲ್ಲಿ ಕುಳಿತೆವು. ಅಲ್ಲಿ ನಮ್ಮನ್ನು ಆದರದಿಂದ ಬರಮಾಡಿಕೊಂಡ ಸೊಳ್ಳೆಗಳು ಎಲ್ಲರಿಂದಲೂ ರಕ್ತ ಹೀರತೊಡಗಿದವು. ಈ ಬಾರಿ ಹೊಸದಾಗಿ ರಾಜೇಶನಿಂದ ಪರಿಚಯಿಸಲ್ಪಟ್ಟ ಮೊಳಕೆ ಬರಿಸಿದ ಹೆಸರಿನ ಕಾಳು ಮತ್ತು ದಾಳಿಂಬೆ ಕಾಳುಗಳು ಚೆನ್ನಾಗಿದ್ದವು.

ಅಲ್ಲಿಂದ ಸುಮಾರು ೪.೦೦ರ ಹೊತ್ತಿಗೆ ನಮ್ಮ ಪಯಣ ಮುಂದುವರಿಯಿತು. ಮೊದಲೇ ಇದ್ದ ಕಾಲುದಾರಿ ತಪ್ಪಿದ್ದರಿಂದ ನಾವೆಲ್ಲಾ ನಮ್ಮದೇ ದಾರಿಯನ್ನು ಮಾಡಿಕೊಂಡು ಒಂದು ಘಂಟೆಯನಂತರ ಒಂದು ಸಮತಟ್ಟಾದ ಸ್ಥಳಕ್ಕೆ ಬಂದು ತಲುಪಿದೆವು. ಮೇಲೆ ಒಂದು ಹೆಬ್ಬಂಡೆ ಚಾಚಿಕೊಂಡು ಬಿಸಿಲಿನಿಂದ ನಮಗೆಲ್ಲಾ ತಂಪನ್ನೀಯುತ್ತಿತ್ತು. ಅಲ್ಲಿ ಈ ಮೊದಲೇ ಬಂದಿದ್ದ ತಂಡ ತಂಗಿದ್ದ ಕುರುಹಾಗಿ ಎರಡು ಬೂದಿಗುಡ್ಡೆಗಳಿಂದ ಕೂಡಿದ ಒಲೆಗಳಿದ್ದವು. ಆ ಪ್ರದೇಶ ಸಮುದ್ರಮಟ್ಟದಿಂದ ಸುಮಾರು ೮೫೫ ಅಡಿ ಎತ್ತರದಲ್ಲಿತ್ತು.
ಅಲ್ಲಿಂದ ಮುಂದೆ ದಟ್ಟವಾದ ಹುಲ್ಲು ಬೆಳೆದಿದ್ದರಿಂದ ದಾರಿಗಾಗಿ ಸ್ವಲ್ಪ ಹುಡುಕಾಡಬೇಕಾಯಿತು. ಅಷ್ಟರಲ್ಲಾಗಲೇ ಕತ್ತಲಾವರಿಸತೊಡಗಿತ್ತು. ನಮ್ಮೆಲ್ಲರ ಬ್ಯಾಗಿನಲ್ಲಿ ಇಷ್ಟುಹೊತ್ತು ಬೆಚ್ಚಗೆ ಕುಳಿತಿದ್ದ ಬ್ಯಾಟರಿಗಳು ಈಗ ಹೊರಬಂದಿದ್ದವು. ಕತ್ತಲಾದಮೇಲೆ ಬ್ಯಾಟರಿಯ ಸಹಾಯದಿಂದ ಬೆಟ್ಟಹತ್ತಿದ ನನ್ನ ಮೊಟ್ಟ ಮೊದಲ ಅನುಭವ ಇದು, ಬಹಳ ರೋಚಕವೆನಿಸಿತು. ಚಪಾತಿ ಮತ್ತು ನೆನಸಿದ ಹೆಸರುಕಾಳನ್ನು ಬಿಟ್ಟರೆ ಮತ್ತೇನು ತಿನ್ನದ ಕಾರಣ ನಮಗೆಲ್ಲಾ ಬಹಳವಾಗಿಯೇ ದಣಿವಾಗಿತ್ತು. ನಮ್ಮಲ್ಲಿ ನಿಧಿ, ಅಣ್ಣಯ್ಯ, ಪ್ರವೀಣ ಮತ್ತು ಸೌರಭ ಮುಂದಾಳತ್ವ ವಹಿಸಿ ಸಮತಟ್ಟಾದ ಪ್ರದೇಶದ ಶೋಧ ಮಾಡಿ ಅದರಲ್ಲಿ ಯಶಸ್ಸು ಕಂಡರು. ನಾವೆಲ್ಲಾ ಕತ್ತಲಲ್ಲಿ ಎಡವುತ್ತಾ ತೆವಳುತ್ತಾ ಅಂತೂ ಇಂತೂ ಆ ಸಮತಟ್ಟಾದ ಪ್ರದೇಶಕ್ಕೆ ಸುಮಾರು ೭.೩೦ಕ್ಕೆ ಬಂದೆವು. ಸಮುದ್ರಮಟ್ಟದಿಂದ ೧೨೦೦ ಮೀಟರ್ ಎತ್ತರದ ಆ ಪ್ರದೇಶದಲ್ಲಿ ನಾವೆಲ್ಲಾ ಉಸ್ಸಪ್ಪಾ ಅಂತ ಕುಳಿತು ಸ್ವಲ್ಪ ಸುಧಾರಿಸಿಕೊಂಡು ನಂತರ ಟೆಂಟ್ ಹಾಕುವ ಕೆಲಸದಲ್ಲಿ ತೊಡಗಿದೆವು. ಈ ಬಾರಿ ಒಟ್ಟು ೪ ಟೆಂಟ್ಗಳು ಮತ್ತು ಒಂದು Open Tent ಹಾಕಿದ್ದೆವು.
ಸಾಮಾನ್ಯವಾಗಿ ಟೆಂಟ್ ಹಾಕಿದಮೇಲೆ ನಮ್ಮ ಅಡುಗೆ ಕಾರ್ಯಕ್ರಮ ಇರುತಿತ್ತು. ಆದರೆ ಈ ಬಾರಿ ನಮ್ಮಲ್ಲಿ ನೀರಿನ ಕೊರತೆ ಇದ್ದದ್ದರಿಂದ ನಾವೆಲ್ಲಾ ತಲಾ ಅರ್ಧ ಸೌತೇಕಾಯಿ, ಬಿಸ್ಕತ್ತು ಮತ್ತು ಕಿತ್ತಲೆ ಹಣ್ಣನ್ನು ತಿಂದು ಸುಮಾರು ೯.೦೦ ಘಂಟೆಗೆ ಮಲಗಿದೆವು. ಟೆಂಟ್ ಹಾಕಿದ ಸ್ಥಳ ಸಮತಟ್ಟಾಗಿರದೇ ಕೆಳಗಿನ ಕಲ್ಲು ಒಂದುರೀತಿ ಕಾಡುತ್ತಿದ್ದರೆ ಪಕ್ಕದ ಟೆಂಟ್ಗಳಿಂದ ಬರುತ್ತಿದ್ದ ವಿಧವಿಧವಾದ ಗೊರಕೆಗಳಸದ್ದು ಮತ್ತೊಂದುಕಡೆ. ಆದರೆ ದೇಹ ದಣಿದಿದ್ದ ಕಾರಣ ನಿದ್ದೆ ಚೆನ್ನಾಗಿಯೇ ಬಂದಿತ್ತು.
ಮುಂಜಾವು ಸುಮಾರು ೬.೩೦ಕ್ಕೆ ಎದ್ದ ನಾವುಗಳು ನಮ್ಮೊಂದಿಗೆ ತಂದಿದ್ದ ಕ್ಯಾಮರಗಳನ್ನೂ ಎಬ್ಬಿಸಿ ಸೂರ್ಯೋದಯದ ಅಂದವನ್ನು ಕ್ಯಾಮರಗಳಲ್ಲಿ ಸೆರೆಹಿಡಿಯಲಾರಂಭಿಸಿದೆವು. ನಂತರ ನಮ್ಮ ಬಳಿ ಉಳಿದಿದ್ದ ನೀರನ್ನು ಎಲ್ಲರೂ ಸಮನಾಗಿ ಹಂಚಿಕೊಂಡು, ಬಿಸ್ಕತ್ತು, ಸೌತೇಕಾಯಿ ಮತ್ತು ಕಿತ್ತಲೆಹಣ್ಣುಗಳನ್ನು ತಿಂದು, ಟೆಂಟ್ಗಳನ್ನು ತೆಗೆದುಕೊಂಡು ಸುಮಾರು ೮.೧೫ಕ್ಕೆ ಅಮೇದಿಕಲ್ ಬೆಟ್ಟವನ್ನು ಇಳಿಯಲಾರಂಭಿಸಿದೆವು.



ಹತ್ತುವಾಗಿನ ಶ್ರಮ ಇಳಿಯುವಾಗ ಬೇಕಿಲ್ಲವಾದ್ದರಿಂದ ಎಲ್ಲರೂ ಬೇಗ ಬೇಗ ನಿರಾತಂಕವಾಗಿ ಇಳಿಯಲಾರಂಭಿಸಿದೆವು. ಸುಮಾರು ೨ ಘಂಟೆಗಳನಂತರ ನಾವು ಹಿಂದಿನದಿನ ಕಂಡಿದ್ದ ಹೆಬ್ಬಂಡೆಯ ಬಳಿ ಬಂದು ಸ್ವಲ್ಪ ವಿಶ್ರಮಿಸಿದನಂತರ ಮುಂದೆಸಾಗಿದೆವು. ಸುಮಾರು ೧೧.೦೦ಕ್ಕೆ ನೀರಿನ ಝರಿಯಬಳಿ ಕುಳಿತು Maagi ಮಾಡಲು ತಯಾರಿನಡೆಸಿದೆವು. ಅಮ್ಮಿ, ಜ್ಯೋತಿ ಇಬ್ಬರೂ ಈರುಳ್ಳಿ ಹೆಚ್ಚಿದರೆ ಮಿಕ್ಕವರು ನೀರುಕುಡಿಯುತ್ತಾ ದಣಿವಾರಿಸಿಕೊಳ್ಳುತ್ತಿದ್ದೆವು. ಪ್ರತೀ ಚಾರಣಕ್ಕೂ Match Boxನ್ನು ತಪ್ಪದೇ ತರುತ್ತಿದ್ದ ನಾವು ಈ ಬಾರಿ ಅದನ್ನು ಮರೆತು ಬಂದಿದ್ದೆವು. ಹಾಗಾಗಿ ಮ್ಯಾಗಿ ಮಾಡುವ ಕೆಲಸ ಕೈಬಿಡಬೇಕಾಯಿತು. ಸಧ್ಯಕ್ಕೆ ತಿನ್ನಲು ಚುರುಮುರಿಯನ್ನು ಬಿಟ್ಟು ಬೇರೇನು ಇರಲಿಲ್ಲ.

ನಾವು ಸೂರ್ಯನ ಬಿಸಿಲಿನಿಂದ Lenseನ ಸಹಾಯ ಪಡೆದು ಬೆಂಕಿ ಹೊತ್ತಿಸುವ ಪ್ರಯತ್ನ ಮಾಡಿ ಅದು ಸಮಯಕ್ಕೆ ಸರಿಯಾಗಿ ಉಪಯೋಗವಾಗದ ಕಾರಣ ಆ ಪ್ರಯತ್ನವನ್ನು ಕೈ ಬಿಟ್ಟೆವು. ಚುರುಮುರಿಯನ್ನು ತಿಂದು ನಂತರ ಅಲ್ಲಿಂದ ನಮ್ಮ ಪಯಣ ಮುಂದುವರೆಸಿದ ನಾವು ಸುಮಾರು ೧.೩೦ಕ್ಕೆ ಮತ್ತೊಂದುಕಡೆ ನೆರಳಿನಲ್ಲಿ ಕುಳಿತೆವು. ಈ ವಿರಾಮದಲ್ಲಿ ಕೃಷ್ಣ ಹಣ ಉಳಿತಾಯದ ಬಗ್ಗೆ 50 ದಾರಿ ಗಳನ್ನು ನಮ್ಮೆಲ್ಲರೊಡನೆ ಹಂಚಿಕೊಂಡರು. ಅಲ್ಲಿಂದ ಮತ್ತೆ ಕಾಡಿನಹಾದಿ ದೊರಕಿದ್ದರಿಂದ ಹೆಚ್ಚಿನ ವಿಶ್ರಾಮವಿಲ್ಲದೇ ನಮ್ಮಲ್ಲಿ ಕೆಲವರು ಕೆಂಬಾರಕ್ಕೆ ಸುಮಾರು ೪.೩೦ಕ್ಕೆ ಬಂದು ಹತ್ತಿರದಲ್ಲೇ ಹರಿಯುತ್ತಿದ್ದ ಝರಿಯಲ್ಲಿ ಸ್ನಾನಮಾಡಿದೆವು. ಎರಡನೇ ಗುಂಪು ಬಂದದ್ದು ಸ್ವಲ್ಪ ತಡವಾದ್ದರಿಂದ ಸ್ನಾನ ಮಾಡಲು ಸಮಯವಿರಲಿಲ್ಲ. ಕೆಂಬಾರದಿಂದ ಮತ್ತೆ ೨ ಜೀಪನ್ನು ಗೊತ್ತುಮಾಡಿದೆವು. ಅದರಲ್ಲಿ ಒಂದು ಹಾಸನದ ಕಡೆಗೂ ಹಾಗು ಮತ್ತೊಂದು ಧರ್ಮಸ್ಥಳದ ಕಡೆಗೂ ಹೊರಟವು.


ಇಲ್ಲಿಗೆ ನಮ್ಮ ೨೦೧೦ರ ಅಮೇದಿಕಲ್ ಚಾರಣ ಪುರಾಣ ಸಮಾಪ್ತವಾಯಿತು. :)