ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Thursday, April 7, 2011

ಅಣ್ಣನ ಕೊಡುಗೆ

ನನ್ನ ಜನ್ಮದಿನಕ್ಕೆ ನನ್ನ ಅಣ್ಣನ ಕೊಡುಗೆ :)ಮುಪ್ಪಿನ ಸುಳಿಯಲಿ ಉಪ್ಪು ಗಂಜಿಯೂ ಸಿಗದ ಸುಳಿವಲಿ
ಮೂರನೇ ಹೂ ಅರಳಿತ್ತು ಮನೆಯಂಗಳದಲಿ

ಹೂವಿನ ದಳದ ಮೃದು ಸ್ಪರ್ಶಕ್ಕಿಂತಾ
ಮಾಲಿಗೆ ಹಠ ಕೋಪವೆಂಬ ಮುಳ್ಳಿನ ಮೇಲೇ ಕೋಪ

ಮಾರಿಗೆ ಸಾಲದು ಮೂರು ಕಟ್ಟಿಗೆ ಸಿಗದು
ತಿಳಿವು ಹೊಳಹು ಕಡಿಮೆ ಎಂಬೆಲ್ಲಾ ಮೂದಲಿಕೆ

ಉಳಿಪೆಟ್ಟು ನೂರಾರು ಶಿಲೆಯ ಮೇಲೆ ಅಟ್ಟಹಾಸದ್ದೇ ಕಾರುಬಾರು
ವಾಸ್ತವದ ಬೆಂಕಿಯಲ್ಲಿ ಹೂವಿಗೆ ಕಳೆಯಿತು ಇಪ್ಪತ್ಮೂರು

ಮಾಲಿ ಮಾರಿದ ಹೂವಿಗೆ ಪರವೂರಲಿ ಬೇಡಿಕೆ
ಅಂತರ್ಜಾಲದ ಲೋಕಕೆ ಅದರ ಒಡಂಬಡಿಕೆ

ಈಗ ಮಾಲಿ ಇಲ್ಲ; ಮೂದಲಿಕೆ ಇಲ್ಲ ಬೇರುಗಳು ಅಲ್ಲೇ; ಬಳ್ಳಿ ಹಬ್ಬಿದೆ ಊರಗಲ
ಹೂ ಶ್ರೇಷ್ಠ ಎಲ್ಲರಿಗೂ ಇಷ್ಟ ನಮ್ಮ ಮನೆಯ ಮಲ್ಲಿಗೆ ಘಮ ಘಮಿಸುತಿದೆ ಮೆಲ್ಲಗೆ

ಬಾಲ್ಯದ ಪೊರೆ ಕಳಚಿದೆ ಯೌವ್ವನ ಕಾಲಿಕ್ಕಿದೆ ಹಳೆನನಪು ಹೊಸಜೀವನಕೆ ಹುರುಪು
ಬೆಳಕು ಚೆಂದ ಹೂವಿಗೆ ಬಿಸಿಲು ಬೇಡ ಒಂಟಿ ಜೀವನ ಚೆಂದ ನೋಡುವವರಿಗಲ್ಲ

ಸಫಲತೆಯ ಜಾಡಲ್ಲಿ ಹಾರಿಸು ಪರಾಗ ಹಾಡು ಹೊಸರಾಗ
ನಿನಗೆ ಸಿಗದ ಬಾಲ್ಯ, ಸುಂದರ ಕನಸುಗಳು ಕಟ್ಟಿಕೊಡು ನಿನ್ನ ಕರುಳ ಬಳ್ಳಿಗೆ

ಹೆಜ್ಜೆ ಇದೆ ನೂರಾರು ಎಡರು ತೊಡರುಗಳು ಸಾವಿರಾರು
ಮರೆಯಬೇಡ, ನೀ ತಬ್ಬಿದ ಆಲದ ಮರ ನಾನೇ

ಆ ನಿಟ್ಟುಸಿರಲ್ಲಿ ನೋವನೆಲ್ಲಾ ಹೊರಗೆ ಬಿಡು, ಕೋಪವದು ನಿನಗೆ ಇಂಗಾಲ
ನಿನ್ನ ಸೌಂದರ್ಯಕ್ಕೆ ಆ ದೃಷ್ಟಿಬೊಟ್ಟೇಕೆ? ಕೋಪಿಸಿಕೊಳ್ಳುವವರಿಗಲ್ಲ ಈ ಕಾಲ

ಬಾಲ್ಯ ನಿನ್ನೆಯಂತೆ, ಭವಿಷ್ಯ ಸುಂದರವಂತೆ
ಬಾಳು ನೀ ಸಾರ್ಥಕದಿ ಧೃವತಾರೆಯಂತೆ

ಜೊತೆಯಿರದೆ ಕಳೆದೆವೆಷ್ಟೋ ದಿನ
ನೆನಪು ಪ್ರತಿ ಕ್ಷಣ ಪ್ರತಿ ದಿನ
ಇಂದು ನಿನ್ನ ಜನುಮದಿನ
ನಿನಗಿದೋ ನನ್ನ ನುಡಿ ನಮನ

-ಜಿ. ಕೃಷ್ಣ (೧೪-೦೨-೨೦೦೯)
ಬರೆದ ಸಮಯ ಮುಂಜಾನೆ ೩.೪೫

No comments: