ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, March 31, 2010

ನನ್ನ ಚಲುವೆ..

ನನ್ನವಳು ಈ ಚಲುವೆ ಬಲು ಅಂದಗಾತಿ
ಸಾಗರದ ಅಲೆಯಂತೆ ನೀ ತೋರುವಾ ಪ್ರೀತಿ…

ಒಮ್ಮೆ ಬಲು ಮೃದುವಾಗಿ ಬಂದೆನ್ನ ಸೋಕಿ
ಮತೊಮ್ಮೆ ರಭಸದಿ ಬಂದೆನ್ನ ತಾಕಿ…

ಕಂಡೆನಾ ಏರಿಳಿತ ನನ್ನವಳ ಪ್ರೀತಿಯಲಿ
ಏನು ಗೊಂದಲವೊ ಏನೊ ಆಕೆಯಾ ಮನಸಿನಲಿ…

ಒಮ್ಮೊಮ್ಮೆ ಸಂತಸದಿ ಬಳಿನನ್ನ ಬರುವಳು
ಮತ್ತೊಮ್ಮೆ ಬೇಸರದಿ ದೊರದಲಿ ಇರುವಳು…

ಚೆಂದುಟಿಯ ಚೆಲುವೆ ಈ ಮೌನ ಬೇಕೇ
ಬಾಯ್ದೆರೆದು ಸವಿನುಡಿಯೆ ಈ ಮೌನ ಸಾಕೇ…

ಮಕ್ಕಳಾಟವು ಚೆನ್ನ ಜಿಂಕೆ ಓಟವು ಚೆನ್ನ
ಓ ನನ್ನ ಚೆಲುವೆ ನೀ ಮಾತಾಡೆ ಬಲುಚೆನ್ನ…

ಮಾತಾಡು ಎನಕೊಡ ಈಗಲಾದರೂ ನಗುತಲಿ
ಕಾದಿಹುದು ಈ ಹೃದಯ ನಿನಗಾಗಿ ತವಕದಲಿ…

Tuesday, March 30, 2010

ನನ್ನ ಕನಸಿನ ಕೂಸಿಗೆ ೩ ವರುಷಗಳು ತುಂಬಲಿದೆ

ನಾನು ಹೈದರಾಬಾದಿನಲ್ಲಿದ್ದಾಗ ಗೆಳೆಯ ವಿಜಯ್ನೊಡನೆ ಮಾತನಾಡುತ್ತಾ ಇದ್ದಾಗ ತಮಾಶೆಗೆಂದು ನಾಲ್ಕು ಸಾಲು ಕವನದರೀತಿಯಲ್ಲಿ ಹೇಳಿದೆ. ಅವನ ಪ್ರೇರೇಪಣೆಯೊಂದಿಗೆ ಬರೆಯಲು ಪ್ರಾರಂಭಿಸಿದ್ದು ಇಂದು ಕೊಂಚ ಬೆಳೆದು ಕವನದ ಜೊತೆಗೆ ಲೇಖನದ ರೂಪವನ್ನೂ ಪಡೆದಿದೆ. ಆ ದಿನಗಳಲ್ಲಿ ಬಹುಶಃ ನನ್ನ ಕವನಗಳು ಹೊರಬರಲು ನನ್ನ ಒಂಟಿತನವೇ ಮೂಲಕಾರ್‍ಅಣವೇನೋ. ಕವನಗಳನ್ನು ಬ್ಲಾಗಿನ ಮುಖಾಂತರ ಗೆಳೆಯರ ಬಳಿ ತಲುಪಿಸಲೂ ಗೆಳೆಯರೇ ಕಾರಣ.

ಕೇವಲ ತಮಾಷೆಗೆಂದು ಪ್ರಾರಂಭಿಸಿದ ಬ್ಲಾಗಿನಗೀಳು ಇಂದು ನನ್ನ ಅವಿಭಾಜ್ಯ ಅಂಗವಾಗಿದೆ. ಬರವಣಿಗೆ ನನ್ನ ಕನಸು. ಹಾಗಾಗಿ ನನ್ನ ಕನಸಿನ ಕೂಸಿಗೆ ಅದೇ ಸರಿಯಾದ ಹೆಸರೆಂದು ನಾಮಕರಣ ಮಾಡಲು ಪ್ರಯತ್ನ ಪಟ್ಟೆ. ಆದರೆ ನನ್ನಂತೆಯೇ ಬೇರೆಯವರಿಗೂ ಆಲೋಚನೆ ಇದ್ದಿದ್ದರಿಂದ "ನನ್ನಕನಸು" ಹೆಸರಿನ ಬ್ಲಾಗೊಂದು ಮೊದಲೇ ಅವತರಿಸಿತ್ತು. ನನ್ನ ಕನಸು ಆಗತಾನೆ ಚಿಗುರೊಡೆದಿದ್ದರಿಂದ ನನ್ನ ಕನಸಿನ ಕೂಸಿಗೆ "ನನ್ನಕನಸು-ಚಿಗುರು" ಎಂದು ನಾಮಕರಣ ಮಾಡಿದೆ. ಮೊದ ಮೊದಲು ಮೂಡಿದ ಚಿಗುರು ಬಂಪರ್ ಬೆಳೆಯನ್ನೇ ತಂದಿತ್ತು. ಕೇವಲ ಕೆಲವೇ ದಿನಗಳಲ್ಲಿ ನನಗೇ ಅರಿಯದಂತೆ ನನ್ನೊಳಗಿನಿಂದ ೪೧ ಕವನ ಹೊರಹೊಮ್ಮಿತ್ತು. ಬರೆದದ್ದೆಲ್ಲವನ್ನೂ ಕವನ ಎನ್ನಲಾಗುವುದಿಲ್ಲ.

ಆ ದಿನಗಳಲ್ಲಿ ಕಣ್ಣಿಗೆ ಕಾಣುವ ದೃಷ್ಯಗಳೆಲ್ಲವೂ ಕವನಗಳಿಗೆ ಸ್ಪೂರ್ತಿ ತಂದುಕೊಡುತ್ತಿತ್ತು. ಜೊತೆಯಲ್ಲಿ ಗೆಳೆಯರ ಪ್ರೋತ್ಸಾಹ, ಪ್ರೀತಿ ತುಂಬಿದ ತಿದ್ದುವಿಕೆ, ಆಕ್ಷೇಪಣೆ ಎಲ್ಲಾ ಮತ್ತಷ್ಟು ಬರೆಯಬೇಕೆಂಬ ಬಯಕೆಯನ್ನ ಹೆಚ್ಚಿಸುತ್ತಿದ್ದವು. ನನ್ನ ಹಲವಾರು ಕವನಗಳನ್ನು ಇಷ್ಟಪಟ್ಟುಕೊಂಡು ಕೆಲವರು ತಮ್ಮ ಬ್ಲಾಗಿಗೂ ಹಾಕಿಕೊಂಡಿದ್ದುಂಟು. ಅದಕ್ಕೆ ನಾನು ಕೂಡಾ ಆಕ್ಷೇಪಣೆ ಮಾದಿದ ನೆನಪು. ಆದರೀಗ ಅದನ್ನು ನೆನಪಿಸಿಕೊಂಡರೆ ನಗು ಬರುತ್ತದೆ. ಹಲವರು ನನಗೆ ಬೇಸರಿಸಬಾರದೆಂದು ನಾ ಬರೆದ ಕವನಗಳೆಲ್ಲಾ ಉತ್ತಮವಾಗಿದೆಯೆಂದರೆ ಮತ್ತೆ ಕೆಲವರು ಕಟುವಾಗಿ ಟೀಕಿಸಿದರು, ತಪ್ಪುಗಳನ್ನು ಎತ್ತಿ ಹಿಡಿದರು. ಅವರೆಲ್ಲರಿಗೂ ನನ್ನ ನಮನಗಳು.

ಮೊದ ಮೊದಲು ಅರ್ಧ ರಾತ್ರಿ ೨ ಘಂಟೆಗೆ ಎದ್ದು ಕವನ ಬರೆದದ್ದುಂಟು. ಕನಸಿನಲ್ಲೂ ಕವನಗಳೇ, ದಾರಿಯಲ್ಲಿ ಕಾಣಸಿಗುವ ಪ್ರತೀ ಮುಖದಲ್ಲಿ ಹುದುಗಿರುವ ಆಲೋಚನೆಗಳನ್ನು ಅರಿಯಲೆತ್ನಿಸುತ್ತಿದ್ದೆ. ನಾನು ಅವರ ಸ್ಥಾನದಲ್ಲಿದ್ದಿದ್ದರೆ ಏನಾಗುತ್ತಿತ್ತು? ಅದನ್ನೇ ಯೋಚಿಸುತ್ತಿದ್ದೆ. An Empty mind is Devil's Workshop ಅನ್ನುವಹಾಗೆಯೇ ಆಗಿತ್ತು ನನ್ನ ಕಥೆ :) ಆಫೀಸಿನಿಂದ ಹೆಚ್ಚು ಒತ್ತಡವಿರಲಿಲ್ಲ, ಮಾತನಾಡಲು ನಾನು ಎಲ್ಲರಿಂದ ದೂರವಿದ್ದೆ. ನಾನು ಆ ಸಮಯದಲ್ಲಿ ನನ್ನೊಂದಿಗೆ ಸದಾಕಾಲ ಒಂದು ಪೇಪರ್ ಮತ್ತು ಒಂದು ಪೆನ್ ಇಲ್ಲದೇ ಎಲ್ಲಿಗೂ ಹೋದ ನೆನಪಿಲ್ಲ. ನನ್ನ ಆ ಪಾಡನ್ನುಕಂಡು ನನ್ನ ಮಿತ್ರರು ಛೇಡಿಸಿದ್ದೂ ಉಂಟು. ಆದರೂ ಬರವಣಿಗೆಯ ಭೋರ್‍ಗರೆತ ನಿಲ್ಲಲಿಲ್ಲ. ಆದರೆ ಕಾರಣಾಂತರಗಲಿಂದ ಕ್ರಮೇಣ ಕಡಿಮೆಯಾಗುತ್ತಾ ಬಂತು.

ಆದರೀಗ ಮತ್ತೊಮ್ಮೆ ವಸಂತ ಬಂದಿದೆ. ಮನದಲ್ಲಿ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿವೆ. ಒಂದು ವೆತ್ಯಾಸವೆಂದರೆ ಈ ಬಾರಿ ನಾನು ಹಿಂದಿನಂತೆ ಎಲ್ಲರಲ್ಲು ನನ್ನ ಬರವಣಿಗೆಯನ್ನು ಓದಿ ಎಂದು ದುಂಬಾಲು ಬೀಳುವುದಿಲ್ಲ :) ಆಸಕ್ತರು ತಾವಾಗೇ ಬರುತ್ತಾರೆ, ಯಾರದರೂ ನನ್ನ ಬ್ಲಾಗಿಗೆ ಬಾರದಿದ್ದರೆ, ನಾ ಬರೆದ ಬರವಣಿಗೆ ಓದಲಿಲ್ಲವೆನ್ನುವುದಕ್ಕೆ ನನಗೆ ಬೇಸರವಿಲ್ಲ. ಈ ಬಾರಿಯೂ ನಾನು ಕಾಗದ ಮತ್ತು ಲೇಖನಿಯನ್ನು ಹಿಡಿದೇ ಹೊರಟಿದ್ದೆ. ಆದರೆ ನನ್ನೊಡನೆ ಮುನಿಸಿಕೊಂಡಿದ್ದ ಲೇಖನಿ ಮೌನವಾಗಿತ್ತು. ಹಾಗಾಗಿ ನಾನು ಈ ಎಲ್ಲಾ ವಿಚಾರವನ್ನೂ ಬರೆಯಲು ಕಾಗದ ಬಳೆಸಲಿಲ್ಲ, ಬದಲಿಗೆ ನನ್ನ ಮೊಬೈಲಿನ ಸಹಾಯ ಪಡೆದುಕೊಂಡೆ. ಮನದ ಆಲೋಚನೆಗಳನ್ನೆಲ್ಲಾ ಅದರಲ್ಲಿ ದಾಖಲಿಸುತ್ತಾ ಹೋದೆ, ನಂತರ Computer ನನ್ನ ಸಹಾಯಕ್ಕೆ ಕಾಯುತ್ತಲಿತ್ತು. ಹಾಗಾಗಿ ಕಾಗದವನ್ನೂ ಮತ್ತು ಕಾಗದಕ್ಕಗಿ ಕತ್ತರಿಸುವ ಮರವನ್ನೂ ಉಳಿಸಿದೆ ;) ಏಪ್ರಿಲ್ ತಿಂಗಳಿಗೆ ನನ್ನ ಕನಸಿನ ಕೂಸಿಗೆ ೩ ವರುಷಗಳು ತುಂಬಲಿದೆ.... ಈ ಮೂರು ವರುಷಗಳಲ್ಲಿ ಅಂದಾಜು 3900 Hits ನನ್ನ ಬ್ಲಾಗಿಗೆ!!! ನನ್ನ ಪಾಲಿಗೆ ಅದೇ ಸಂತೋಷದ ವಿಷಯ.

ನಿಮ್ಮೆಲ್ಲರ ಪ್ರೀತಿಯ ಹಾರೈಕೆ ನನ್ನೊಂದಿಗೆ, "ನನ್ನಕನಸೊಂದಿಗೆ" ಇದ್ದರೆ ಸಾಕು....

Thursday, March 25, 2010

bg******@ rediffmail. com ಗೆ ಒಂದು ಪತ್ರ

ಸುಮಾರು ಎಂಟೊಂಭತ್ತು ವರುಷಗಳ ಹಿಂದಿನ ಮಾತು.. ಕಂಪ್ಯೂಟರ್ ಕೋರ್ಸಿಗಾಗಿ ಸೇರಿದ್ದ ನನಗೆ ನಿನ್ನ ಪರಿಚಯವಾಯ್ತು. ಮೊದಲೇ ಕೆಲಸದಲ್ಲಿದ್ದ ನಾನು ಕಂಪ್ಯೂಟರಿನ ಬಗ್ಗೆ ನಿನಗಿಂತಾ ತುಸು ಹೆಚ್ಚೇ ತಿಳಿದಿದ್ದೆ. ನಮ್ಮೊಡನೆ ಕಲಿಯಲು ಬಂದವರಲ್ಲಿ ನೀನು ನಿನ್ನ ಅನುಮಾನಗಳ ಪರಿಹಾರಕ್ಕೆ ನನ್ನನೇ ಏಕೆ ಆಯ್ಕೆ ಮಾಡಿದೆಯೋ, ಗೊತ್ತಿಲ್ಲ. ನಮ್ಮ ಪರಿಚಯವಾಯ್ತು. ನಾನು ಅಂದು ಬಹಳ ಸಂಕೋಚದ ಹುಡುಗ. ಹೆಚ್ಚಿಗೆ ಯಾರೊಡನೆಯೂ ಬೆರೆಯುತ್ತಿರಲಿಲ್ಲ. ಅದರಲ್ಲೂ ಹುಡುಗಿಯರನ್ನು ಕಂಡರೆ ಮಾರು ದೂರ ಹೋಗಿ ನಿಲ್ಲುತ್ತಿದ್ದೆ.

ನಮ್ಮ ಕೋರ್ಸಿಗಾಗಿ ಮೀಸಲಿದ್ದದ್ದು ಕೇವಲ ೬ ತಿಂಗಳು ಮಾತ್ರ. ಅದೂ ನಾನು ಕೆಲಸ ಮುಗಿಸಿ ನನ್ನ ಮೊದಲ ದ್ವಿಚಕ್ರವಾಹನ TVS-XL ನಲ್ಲಿ ಮಾನಸ ಗಂಗೋತ್ರಿಗೆ ಬರುತ್ತಿದ್ದೆ. ಮೊದ ಮೊದಲು ಮುಖ ಪರಿಚಯವಾಗಿ ಕೇವಲ ನಗುವಿನಲ್ಲೇ ನಮ್ಮ ಸಂಭಾಷಣೆ ನಡೆಯುತ್ತಿತ್ತು. ನಿನ್ನೊಡನೆ ಸದಾಕಾಲವೂ ಇರುತ್ತಿದ್ದ ನಿನ್ನ ಗೆಳತಿ ರಷ್ಮಿ ಯೊಡನೆ ನೀನು ಏನು ಮಾತನಾಡಿಕೊಳ್ಳುತ್ತಿದ್ದೆಯೋ ನನಗದು ತಿಳಿಯುತ್ತಿರಲಿಲ್ಲ. ಆದರೆ ಸದಾ ಹಸನ್ಮುಖಿಯಾಗಿ ಗೆಲುವಿನಿಂದ ಕೂಡಿರುತ್ತಿದ್ದ ನಿನ್ನೊಡನೆ ಎಲ್ಲರೂ ಸ್ನೇಹಬೆಳೆಸಬಯಸುವವರೇ ಆಗಿರುತ್ತಿದ್ದರು.

ಕ್ರಮೇಣ ನಗುವಿನ ಸಂಭಾಷಣೆ ಮಾತು ಕಲಿಯತೊಡಗಿತು. ಕಳೆದದಿನದಂದು ಮಾಡಿದ ಪಾಠದಲ್ಲಿನ ಅನುಮಾನ ನಿನ್ನನ್ನು ನನ್ನಹತ್ತಿರಕ್ಕೆ ತರುತ್ತಿತ್ತು. ಕೇವಲ ಅದನ್ನು ನೆಪವಾಗಿಟ್ಟುಕೊಂಡು ನಮ್ಮ ಗೆಳೆತನವನ್ನು ಪ್ರೀತಿ ಎಂದೆನಿಸಿಕೊಳ್ಳುವ ಹುಚ್ಚು ಮನಸ್ಸು ನನ್ನದಲ್ಲವಾದ್ದರಿಂದ ನನ್ನ ನಿನ್ನ ಗೆಳೆತನ ಮೊಳಕೆಯೊಡೆದಿತ್ತು. ತರಗತಿಯಲ್ಲಿ ನಾವಿಬ್ಬರೂ ಮತ್ತೆ ರಷ್ಮಿ ಒಟ್ಟಿಗೇ ಕುಳಿತು ಅಭ್ಯಾಸಿಸುತ್ತಿದ್ದೆವು. ಲ್ಯಾಬ್ ಗಳಲ್ಲಿ ನಾವೆಲ್ಲಾ ಒಟ್ಟಿಗೇ ಸೇರಿ ಕೊಟ್ಟ ಅಸೈಮೆಂಟ್ ಗಳನ್ನು ಮುಗಿಸುತ್ತಿದ್ದೆವು. ನನ್ನಲ್ಲಿ ನನ್ನ ಜೀವನದ ಕನಸುಗಳು ಮೊಳೆಯುವ ಕಾಲವದು. ಅಂದು ನಾನು ಕನಸಿನಲ್ಲಿಯೂ ಬೆಂಗಳೂರಿಗೆ ಬರುವೆನೆಂದು ಅನಿಸಿರಲಿಲ್ಲ. ನನ್ನದೇ ಒಂದು ಪುಟ್ಟ ಗೂಡನ್ನು ಕಟ್ಟುವ ತವಕವಿರಲಿಲ್ಲ. ಕೇವಲವಿದ್ದದ್ದು ಮುಗ್ದ ಹೃದಯ ಮತ್ತು ತನ್ಮಯತೆ.

ನಮ್ಮ ತರಗತಿಗಳು ೪ತಿಂಗಳ ಅವಧಿಯನ್ನು ಮುಗಿಸಿದ್ದವು. ಇನ್ನು ಬಾಕಿ ಉಳಿದದ್ದು ಕೇವಲ ೨ ತಿಂಗಳುಗಳು ಮಾತ್ರ. ಅಷ್ಟರಲ್ಲಾಗಲೇ ನಾವೆಲ್ಲಾ (ಅದರಲ್ಲೂ ನಾವಿಬ್ಬರು) ಒಳ್ಳೆಯ ಸ್ನೇಹಿತರಾಗಿದ್ದೆವು. ಅಂದು ವಾರಾಂತ್ಯ- ನಾನು ನನ್ನ ಅಣ್ಣ, ಮತ್ತವನ ಸ್ನೇಹಿತರು ಎಲ್ಲಾ ಸೇರಿ ಬೆಳಗ್ಗೆ ಚಾಮುಂಡಿ ಬೆಟ್ಟವನ್ನು ಹತ್ತಿಳಿದು ಗಾಯತ್ರಿ ಟಿಫನ್ ರೂಂ ನಲ್ಲಿ ತಿಂಡಿ ತಿಂದು ಇನ್ನೇನು ಹೊರಡಬೇಕೆನಿಸುವಷ್ಟರಲ್ಲಿ ಬೆಂಗಳೂರಿನಿಂದ ಅಣ್ಣನ ಸ್ನೇಹಿತನ ಕರೆ ಮೊಬೈಲಿನಲ್ಲಿ ಮೊಳಗಿತ್ತು. ಅಣ್ಣನ ಸ್ನೇಹಿತ ನನಗೆ ಬೆಂಗಳೂರಿನಲ್ಲಿ ಕೆಲಸ ಖಾಲಿ ಇರುವ ಬಗ್ಗೆ ತಿಳಿಸಿದ್ದ. ಅಂದಿನಿಂದ ನನಗೆ ಮೈಸೂರಿನ ಸೆಳೆತ ಜೋರಾಗತೊಡಗಿತು. ಮೈಸೂರನ್ನು ಬಿಟ್ಟು ಹೋಗಬೇಕಾ ? ಅಪ್ಪ, ಅಮ್ಮ, ಅಣ್ಣ, ಅಕ್ಕ ಎಲ್ಲರನ್ನೂ ಬಿಟ್ಟು ಹೋಗಬೇಕಾ.... ನಿನ್ನಿಂದ ದೂರ ಹೋಗಬೇಕಾ ???

ಈ ವಿಚಾರವನ್ನು ನಿನ್ನೊಡನೆ ಸೋಮವಾರ ಚರ್ಚಿಸಿದೆ. ಮನೆಯವರ ಧೈರ್ಯದೊಡನೆ ನಿನ್ನ ಧೈರ್ಯವೂ ಬೆರೆತು ಮನಸ್ಸು ಗಟ್ಟಿಯಾಗತೊಡಗಿತು. ತರಗತಿಗಳು ಇನ್ನೂ ೨ ತಿಂಗಳು ಬಾಕಿ ಇದ್ದವು. ನಾನು ಧೈರ್ಯಗೆಡಲಿಲ್ಲ, ಕಾರಣ ನನ್ನವರ ಪ್ರೋತ್ಸಾಹ ನನ್ನೊಡನಿತ್ತು. ನೀನೂಕೂಡ ಓದುವ ಸಲುವಾಗೇ ನಿನ್ನೂರಾದ ಮಂಡ್ಯವನ್ನು ಬಿಟ್ಟು ಬಂದು ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದ Working Women's hostel ನಲ್ಲಿ ತಂಗಿದ್ದೆ.

ಆದಿನ ಯಾವ ಕಾರಣಕ್ಕೋ ತಿಳಿಯದು.. ಬಹುಷಃ ಕೆಲಸಕ್ಕೆಂದು ಅರ್ಜಿ ಕಳಿಸಲಿರಬಹುದು ಮೊದಲ ಸಲ ನನ್ನ ಸಹಾಯ ಕೇಳಿದ್ದೆ ನೀನು. ರಾಯರ ಮಠಕ್ಕೆ ನಾವಿಬ್ಬರೂ ಒಟ್ಟಿಗೇ ನನ್ನ TVS-XL ನಲ್ಲಿ ಹೋಗಿ ನಮಸ್ಕರಿಸಿ ಹೊರಾಂಗಣದಲ್ಲಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಿದ್ದೆವು. ಅಂದು ನೀ ಹೇಳಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಹೇಳಿದಂತೆ ಅಚ್ಚಳಿಯದೇ ಉಳಿದಿದೆ. "ನಾನು ಇದೇ First time ಕಣೋ ಒಬ್ಬ ಹುಡುಗನ ಜೊತೇಲಿ ದೇವಸ್ಥನಕ್ಕೆ ಬಂದಿರೋದು. ಯಾಕೋ ಗೊತ್ತಿಲ್ಲ, ನಿನ್ನ ಮೇಲೆ ನನ್ಗೆ ಅಷ್ಟು ನಂಬಿಕೆ" ಹೌದು... ಅದೇ ನಂಬಿಕೆಯನ್ನ ನಾನು ಇಂದಿಗೂ ಉಳಿಸಿಕೊಂಡಿದ್ದೇನೆ. ನಿಜವಾಗಲೂ ನನಗೂ ಅದು ಫಸ್ಟ್ ಟೈಮೇ... ಸಂಕೋಚದ ಹುಡುಗನಾದ ನಾನು ಒಬ್ಬ ಹುಡುಗಿಯನ್ನ ಗಾಡಿಯಲ್ಲಿ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿದ್ದಕ್ಕೆ ಇಂದಿಗೂ ನನ್ನಮೇಲೇ ನನಗೆ ಅಚ್ಚರಿಇದೆ. ಅಲ್ಲಿಂದ ನಾವು ನಿನ್ನ ಕೆಲಸದ ಅರ್ಜಿಯ ವಿಚಾರವಾಗಿ ಕುವೆಂಪು ನಗರದ ಕೊರಿಯರ್ ಆಫೀಸಿಗೆ ಹೋಗಿದ್ದೆವು. ಅಲ್ಲಿಂದ ನಾನು ನಿನ್ನನ್ನು ನಿನ್ನ Working Women's hostel ಗೆ ಬಿಟ್ಟು ಮನೆಗೆ ಮರಳಿದ್ದೆ.

ನನ್ನ ಜನ್ಮದಿನದಂದು ನೀ ಕೊಟ್ಟ ಉಡುಗೊರೆ ಇಂದಿಗೂ ನನ್ನ ಜೊತೆಯಲ್ಲೇ ಇದೆ. ನೀಕೊಟ್ಟ Wallet, ಅದರೊಳಗಿದ್ದ ೫ ರೂಪಾಯಿ Coin, ರಷ್ಮಿ ಕೊಟ್ಟ Key chain, ನೀವಿಬ್ಬರೂ ಸೇರಿ ನಿನ್ನ ಹಸ್ತಾಕ್ಷರದಿಂದ ಬರೆದ ಆ "To Dear Friend From, Appi and Rashu" ಸಾಲು ಇಂದಿಗೂ ನನ್ನೊಡನೆ ಭದ್ರವಾಗಿವೆ. ಬಹುಷಃ ನೀನು ನನ್ನ ಪಾಲಿನ "Crush" ಆಗಿದ್ದೆ. ಅಂದು ನಿಮ್ಮಲ್ಲಿಂದ ಪಡೆದುಕೊಂಡ ಉಡುಗೊರೆ ನನಗೆ ನಿಮ್ಮ ನೆನಪಿನ ಕಾಣಿಕೆಯಾಗಿದೆ. ಸಂಜೆ ತರಗತಿ ಮುಗಿದ ಬಳಿಕ ನಾನು ನಿಮ್ಮಿಬ್ಬರನ್ನೂ ನನ್ನ TVS-XL ನಲ್ಲಿ Working Women's hostel ಗೆ ಬಿಟ್ಟು ಮನೆಗೆ ಮರಳಿದ್ದೆ. ದಾರಿಯಲ್ಲಿ ನನ್ನ ಗಮನವೆಲ್ಲಾ ನಿನ್ನಮೇಲಿತ್ತು. ಅಪ್ಪಿತಪ್ಪಿ ನಾನೆಲ್ಲಿ ನಿನ್ನನ್ನು ಸ್ಪರ್ಶಿಸಿ ನಿನ್ನ ದೃಷ್ಟಿಯಲ್ಲಿ ಕೆಟ್ಟವನಾಗಿ ಸ್ನೇಹವನ್ನು ಕಳೆದುಕೊಳ್ಳುವೆನೋ ಎಂಬ ಭಯ.

ನಮ್ಮ ತರಗತಿಗಳು ಮುಗಿದಿದ್ದವು, ನನ್ನ ಪಯಣ ಬೆಂಗಳೂರಿನ ಕಡೆಗೆ ಸಾಗಿತ್ತು. ಬೆಂಗಳೂರಿಗೆ ಬಂದು ೨ ತಿಂಗಳ ನಂತರ ನಾ ಮತ್ತೆ ನಿನ್ನನ್ನು ನಿನ್ನ Working Women's hostel ಗೆ ಬಂದು ಭೇಟಿ ಮಾಡಿದ್ದೆ. ನಿನ್ನ ಈ-ಮೈಲ್ ವಿಳಾಸವನ್ನು ಖುದ್ದಾಗಿ create ಮಾಡಿ ಅದನ್ನು ಉಪಯೋಗಿಸುವ ವಿಧಾನವನ್ನೂ ಕಲಿಸಿದ್ದೆ. ಆದರೀಗ ಅದು ಕೆಲಸ ಮಾಡುತ್ತಿಲ್ಲ. ಮೊದ ಮೊದಲು ನಿನ್ನಿಂದ ನನ್ನ ಈ-ಅಂಚೆಗೆ ಉತ್ತರ ಬಂದರೂ ನಂತರದ ದಿನಗಳಲ್ಲಿ ಅದು ಸಂಪೂರ್ಣವಾಗಿ ನಿಂತುಹೋಯಿತು. ನಿನಗೆ ಮೈಲ್ ಮಾಡಲೆಂದೇ ನಾನು Browsing Center ಗಳಿಗೆ ಬರುತ್ತಿದ್ದೆ. ಆಗಿನ ದಿನಗಳಲ್ಲಿ ಮೊಬೈಲ್ ಫೋನ್ ಎಂಬುದು ಆಕಾಶದಲ್ಲಿನ ನಕ್ಷತ್ರದಷ್ಟೇ ದೂರವಾಗಿತ್ತು ನನಗೆ. ಇದ್ದ ಒಂದೇ ಒಂದು ಸಂಪರ್ಕ ಕೊಂಡಿ ಆ ಈ-ಮೈಲ್.

ನಂತರದ ದಿನಗಳಲ್ಲಿ ನಿನ್ನ ಸಂಪರ್ಕ ಸಾಧ್ಯವಾಗಲಿಲ್ಲ. ನಿನಗೂ ನಿನ್ನದೇ ಆದ ಜವಾಬ್ದಾರಿಗಳಿದ್ದಿರಬೇಕು. ಪರಿಸ್ಥಿತಿಯ ಒತ್ತಡಕ್ಕೆ ನೀನೂ ಸಿಲುಕಿರಬೇಕು. ನಿನ್ನ ಮಾತನಾಡಿಸಲು ಮತ್ತೊಮ್ಮೆ ನಿನ್ನ hostel ಗೆ ಫೊನಾಯಿಸಿದಾಗ ನೀನು ಅಲ್ಲಿಂದ ಬೇರೆಡೆಗೆ ಹೋಗಿರುವ ವಿಷಯ ತಿಳಿಯಿತು.

ಕಡೆಯದಾಗಿ ನೀನು ಬಳಿಬಂದು ಕೇಳಿದ ಪ್ರಶ್ನೆ: "ಬೆಂಗಳೂರಿಗೆ ಹೋಗ್ತಾ ಇದೀಯ... ನಾವೆಲ್ಲಾ ನಿನ್ಗೆ ನೆನ್ಪಿರ್ತೀವೇನೋ ?" ಹೌದು ಖಂಡಿತಾ ನೆನಪಿದೆ ಗೆಳತಿ ಆದರೆ ನಿನಗೆ ನನ್ನ ನೆನಪಿಲ್ಲ ಅನ್ನುವುದು ವಿಪರ್ಯಾಸ.

ಇಂದಿಗೂ ನಾನು ಆ ದಿನಗಳನ್ನ ಮರೆತಿಲ್ಲ. ಕುವೆಂಪು ನಗರಕ್ಕೆ ಹೋದಲ್ಲಿ ಆ ಕೊರಿಯರ್ ಆಫೀಸಿನೆಡೆಗೆ ನೋಡುತ್ತೇನೆ, ನಿನ್ನನ್ನು ಕಾಣುತ್ತೇನೆ... ಗೌರವದಿಂದ :)

Wednesday, March 24, 2010

ವಿಸ್ಮಯ


ಚಿತ್ರ ಕೃಪೆ: google dot com

ವಿಸ್ಮಯ ನನ್ನ ಅಣ್ಣ ಮತ್ತು ಅತ್ತಿಗೆ ಕನಸನ್ನು ಸಾಕಾರ ಗೊಳಿಸಿ ಧರೆಗೆ ಬಂದ ಕೂಸು. ಹೌದು ವಿಸ್ಮಯ ನನ್ನ ಅಣ್ಣನ ಮಗಳು. ಮುದ್ದು ಮುದ್ದಾಗಿ ತೊದಲುಮಾತನಾಡುತ್ತಿರುವ ಅವಳಿಗೆ ಈಗ ೨ ವರುಷಗಳು ತುಂಬಿವೆ. ಆಕೆಗೋಸ್ಕರ ಬರೆದ ನನ್ನ ಕೆಲವು ಸಾಲುಗಳಿವು.

ಪುಟ್ಟ ಕಂದ ಜಗಕೆ ಬರಲು ತಾಯ್ತಂದೆಗೆ ಹರುಷವು
ನವಮಾಸದ ನೋವುಗಳಲೂ ಅವರಿಗಾನಂದವು

ಮುದ್ದುಕಂದ ನೀತಂದೆ ಸಂತಸದ ದಿನಗಳ
ಮುಗ್ದ ನಗುವ ಬೀರಿ ನೀನು ತೊಯ್ದೆ ತಾಯ ಕಂಗಳ

ಕಣ್ಣಂಚಿನ ಕಣ್ಣೀರು ದುಃಖಕಲ್ಲ ಕಂದನೇ
ಆನಂದಕೆ ಮಾತಿಲ್ಲ, ಆನಂದಭಾಷ್ಪದರ್ಪಣೆ

ಹೊಟ್ಟೆಯೆಳೆದು ರಚ್ಚೆ ಹಿಡಿದು ತಾಯ ಹುಡುಕುತಾ ನೀನು
ಅಂಬೆಗಾಲನಿಟ್ಟು ಬರಲು ತಾಯ ಮೊಗದಿ ಹಾಲ್ಜೇನು

ವರುಷಕಳೆದು ವರುಷತುಂಬಿ ವಸಂತಗಳು ಉರುಳಿವೆ
ನಿನ್ನ ತೊದಲು ಮಾತ ಕೇಳ್ವುದಕೆ ಕಿವಿಗಳೆಲ್ಲಾ ಕಾದಿವೆ

ಎಂಥಾ ಬೆರಗು ಎಂಥಾ ಮೆರಗು ತಂದೆ ನೀನು ಬಾಳಿಗೆ
ನೀನು ಬಂದ ಕ್ಷಣದಿ ತಂದ ಆನಂದವು ನಾಳಿಗೆ

ನಿನ್ನ ಆಟ ಓಡಾಟದಿ ತಾಯಿ ತಂದೆ ತನ್ಮಯ
ಅದಕಾಗಿ ಹೆಸರಿಟ್ಟರು ನಿನಗಂದು ವಿಸ್ಮಯ :)

Monday, March 22, 2010

ಸಂಭ್ರಮದ ಶನಿವಾರ

ವಾರವೆಲ್ಲಾ ಬೆಳ್ಳಂಬೆಳಿಗ್ಗೆ ೪.೩೦ಕ್ಕೆ ಎದ್ದು ಎದ್ದೂ ಸಾಕಾಗಿ ಹೊಗಿತ್ತು. ವಾರಾಂತ್ಯಕ್ಕೆ ಕಾಯ್ತಾ ಇದ್ದೆ. ಅಂತೂ ಇಂತೂ ಶನಿವಾರ ಬಂದೇಬಿಡ್ತು. :) ಶನಿವಾರದ ಮೊದಲ ಕೆಲಸ ಅಂದ್ರೆ 10:00 ಘಂಟೇತನಕ ನಿದ್ದೆ ಮಾಡೋದು ;) ಆಮೇಲೆ ಮಿಕ್ಕಿದ ಕೆಲಸಗಳೆಲ್ಲಾ... ನನ್ನ ಅನಿಸಿಕೆಯಂತೇ ಬೆಳಗ್ಗೆ 9:30ರ ತನಕ ಗಡದ್ದಾಗಿ ನಿದ್ದೆ ಮಾಡ್ದೆ. ಆಮೇಲೆ ಮಾಮೂಲಿ ಯೋಚನೆ... ಇವತ್ತು ತಿಂಡಿ ಏನು ಮಾಡೋದು ಅಂತ. ಆಗ ನೆನ್ಪಾಗಿದ್ದೇ ನನಗೆ ಇಷ್ಟವಾದ ಮಾಡಲು ಸುಲಭವಾದ ತಿಂಡಿ- "ಗಂಜಿ". ಗಂಜಿಯ ಜೊತೆಗೆ ಮಿಡಿ ಉಪ್ಪಿನಕಾಯಿ, ಸ್ವಲ್ಪ ಮೊಸರು, ಸ್ವಲ್ಪ ಕುತ್ತುಂಬರಿ ಚಟ್ನಿ, ಇಷ್ಟಿದ್ಬಿಟ್ರೇ... ಸ್ವರ್ಗಕ್ಕೆ 3ರೇ ಗೇಣು... ಮಾಡುವುದು ಅತಿ ಸುಲಭ, So ಅದನ್ನೆ ಮಾಡಲು ಒಲೇಮೇಲೆ cooker ಇಟ್ಟು ಮನೆಗೆಲಸ ಶುರು ಮಾಡ್ಕೊಂಡೆ. ಮೊದಲನೇದು ಬಟ್ಟೆ ಒಗೆಯೋದು. ವಾರದಲ್ಲಿ ಬೆಂಗಳೂರಿನ ಕೊಳೆ, ಧೂಳು ಹೊತ್ಕೊಂಡು ತಂದಿದ್ದನ್ನ ಬ್ರಷ್ ಉಜ್ಜಿ ಉಜ್ಜಿ ತೆಗೆಯೋದು.

ಅಬ್ಬಬ್ಬಾ!!! ಬೆನ್ನೆಲ್ಲಾ ಲಟ ಲಟಾ ಅಂತು ಅದನ್ನ ಒಗೆಯೋಷ್ಟ್ರಲ್ಲಿ. ಒಲೆಯಮೇಲಿಟ್ಟಿದ್ದ ನನ್ನ ಕುಕ್ಕರ್ ಕೂಗಿ ಕೂಗಿ ಗಂಜಿ ಆಗಿರೋದನ್ನ ಇಡೀ ಬೀದಿಗೇ ಸಾರಿ ಹೆಳ್ತಾ ಇತ್ತು. ಅದನ್ನ ಒಲೆಮೇಲಿಂದ ಕೆಳಗಿಳಿಸಿ, ಒಗೆದ ಬಟ್ಟೆಗಳನ್ನ ಒಣಗಿಸಿ ಮನೆಯನ್ನೆಲ್ಲಾ ಒಮ್ಮೆ ಗುಡಿಸಿ ಬಂದು ಇನ್ನೇನು ಗಂಜಿಯ ಸವಿರುಚಿ ಅನುಭವಿಸಬೇಕು... ನನ್ನ ಮಿತ್ರನ ಕರೆ ನನ್ನ ಮೊಬೈಲಿನಲ್ಲಿ ಮೊಳಗಿತು. ನಮ್ಮ ಸಂಭಾಷಣೆ ಕಡಿಮೆ ಅಂದ್ರೂ 30 ನಿಮಿಷ ನಡೀತು. ಅಷ್ಟರಲ್ಲಿ ನಾನು ಬಿಸಿ ಬಿಸಿಯಾಗಿ ತಿನ್ನಬೇಕೆಂದಿದ್ದ ಗಂಜಿ ತಣ್ಣಗೆ ಕುಳಿತಿತ್ತು. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಅದನ್ನು ಹಾಗೇ ಕೊತ್ತಂಬರಿ ಚಟ್ನಿ, ಉಪ್ಪಿನ ಕಾಯಿಯ ಜೊತೆ ಹೊಟ್ಟೆಗೆ ಇಳಿಸ ತೊಡಗಿದೆ... ಅಹಾ... ತಣ್ಣಗಿದ್ದರೂ ಅದರ ರುಚಿಗೆ ಬೇರಾವ ತಿಂಡಿಯೂ ಸಾಟಿಯಿಲ್ಲ...

ನನ್ನ ಬೆಳಗಿನ ಕಾರ್ಯಕ್ರಮಗಳೆಲ್ಲಾ ಮುಗಿದು ಸುಮಾರು 1:00 ಘಂಟೆಯ ಹೊತ್ತಿಗೆ ಕಣ್ಣು ಜೊಂಪು ಹತ್ತ ತೊಡಗಿತು. ಒಂದು ಅರ್ಧ ಘಂಟೆ ಮಲಗಿ ಏಳೋಣ ಅಂತ ಮಲಗಿದವನಿಗೆ ಎಚ್ಚರವಾದದ್ದು 4 ಘಂಟೆಗೇ... ಸೋಮಾರಿ ತನದಿಂದ ಎದ್ದು ಗಿಡಗಳ ಬಳಿಗೆ ಬಂದೆ... ಪಾಪ, ಅವಕ್ಕೆ re-poting ಮಾಡೋ ಕಾರ್ಯಕ್ರಮ ಕಳೆದ ಒಂದು ತಿಂಗಳಿಂದಾ ಮುಂದೂಡಲ್ಪಡುತಿತ್ತು... ಅದಕ್ಕೆ ಇವತ್ತು ಕಾಲ ಕೂಡಿಬಂದಿತ್ತು. ಎಲ್ಲಾ ಕುಂಡಗಳ ಹಳೆಯ ಮಣ್ಣನ್ನು ತೆಗೆದು ತರಕಾರಿ ಸಿಪ್ಪೆಯ ಗೊಬ್ಬರವನ್ನ ಸೇರಿಸಿ ಮತ್ತೆ ಅದೇ ಕುಂಡಗಳಿಗೆ ತುಂಬುವ ಹೊತ್ತಿಗೆ ಸಂಜೆ 6:15 ನಿಮಿಷ. ಮನೆಯೊಳಗೆ ಬಂದು Freshಆಗಿ IPL match ನೋಡ್ಕೊಂಡು ತರಕಾರಿ ತರಲು ನಡೆದು ಹೊರಟೆ. ದಾರಿಯುದ್ದಕ್ಕೂ ತಂಗಾಳಿ ನನ್ನ ಜೊತೆ ಜೊತೆಯಲ್ಲೇ ಬಂದಿತ್ತು. ಹಿತವಾದ ಆ ಗಾಳಿಯಲ್ಲಿ ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖವೇನಾದರೂ ಕಂಡೀತೇನೋ ಎಂಬಂತೆ ಹುಡುಕುತ್ತಾ ಹೊರಟೆ. ದಾರಿಯಲ್ಲಿ ಹೋಗುವಾಗ ಅಮ್ಮನಿಗೆ ಫೋನಾಯಿಸಿ ಕ್ಷೇಮ ಸಮಾಚಾರ ವಿಚಾರಿಸಿ ಮಾತನಾಡುತ್ತಿದ್ದಾಗ ಆಕೆ ಪಡವಲಕಾಯಿಯ ತೊವ್ವೆ ಮಾಡ್ಕೊ... ಚೆನ್ನಗಿರತ್ತೆ ಅಂದಿದ್ದು ನೆನಪಾಯಿತು. ಮನೆಯ ಬಳಿಯಿದ್ದ Safal ತರಕಾರಿ ಅಂಗಡಿಗೆ ಹೋಗಿ 2 ಪಡವಲಕಾಯಿಗಳನ್ನು ತಂದೆ.

ಮನೆಗೆ ಮರಳುವ ಮಾರ್ಗದಲ್ಲಿ ಕೆಂಪು ಕೆಂಪು ಕಲ್ಲಂಗಡಿ ನನ್ನನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿತ್ತು. ವ್ಯಾಪಾರಿಯೊಂದಿಗೆ ಮಾತನಾಡಿ ಒಂದು ಹಣ್ಣನ್ನು ಖರೀದಿ ಮಾಡುವಾಗ ಪಕ್ಕದಲ್ಲಿ ಯಾವುದೋ ಚಿರಪರಿಚಿತ ಮುಖ ನನ್ನನ್ನೇ ನೋಡುತ್ತಿರುವಂತೆ ಭಾಸವಾಯಿತು. ಹೌದು... ಅದು ಪರಿಚಿತ ಮುಖವೇ ಹೌದು, ಗೌರವವರ್ಣ ವಲ್ಲದಿದ್ದರೂ ನೋಡಲು ಆಕೆ ಲಕ್ಷಣವಾಗಿದ್ದಳು. ಆಕೆ ನಮ್ಮ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದವಳು ನನ್ನಕಡೆ ನೆಟ್ಟದೃಷ್ಟಿ ಬೀರಿದ್ದಳು. ಹೆಚ್ಚಾಗಿ ಆಕೆಯ ಪರಿಚಯವಿಲ್ಲದ ಕಾರಣದಿಂದ ದಾರಿಯೆಡೆಗೆ ದೃಷ್ಟಿ ನೆಟ್ಟು ಮನೆಯಕಡೆ ಪಯಣ ಬೆಳೆಸಿದೆ. ಮನಸ್ಸಿನಿಂದ ಹಾಡು ಹೊರಹೊಮ್ಮಿತ್ತು... ಚಲುವೆ ಎಲ್ಲಿರುವೇ... ಮನವ ಕಾಡುವ ರೂಪಸಿಯೇ.....

ಮನೆಗೆ ಬಂದು ತಂದಿದ್ದ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾ Royal challenger's ನ ಗೆಲುವನ್ನು ನೋಡುತ್ತಾ ನನ್ನ ಕನಸಿನ ಕನ್ಯೆಯನ್ನ ಭೇಟಿಮಾಡಲು ಸ್ವಪ್ನಲೋಕಕ್ಕೆ ಹೊರಡುವ ಹೊತ್ತಿಗೆ ಸಂಭ್ರಮದ ಶನಿವಾರ ಮುಕ್ತಾಯ ವಾಗಿತ್ತು :)

Friday, March 12, 2010

ಇವತ್ತು ಏನ್ ತಿಂಡಿ ಮಾಡ್ಲೀ....

ಇವತ್ತು ಏನ್ ತಿಂಡಿ ಮಾಡ್ಲೀ....

ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು. ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ... ಅವಲಕ್ಕಿ ಮಾಡೋಣ ಅಂದ್ರೆ ಒಬ್ಬರಿಗೆ ಹುಳಿಯವಲಕ್ಕಿಯೇ ಆಗಬೇಕು. ಮತ್ತೊಬ್ಬರಿಗೆ ಅವಲಕ್ಕಿ ಒಗ್ಗರಣೆಯೇ ಆಗಬೇಕು. ಚಪಾತಿ ಮಾಡಿದರೆ ಒಬ್ಬರಿಗೆ ತೆಂಗಿನ ಚಟ್ನಿಯೇ ಬೇಕಾದರೆ ಮತ್ತೊಬ್ಬರಿಗೆ ತರಕಾರಿ ಸಾಗುವೇ ಸೊಗಸು.

ಅಬ್ಬಬ್ಬಾ!!!! ಅದಿರಲಿ ಬಿಡಿ, ಮೊದಲು ಏನು ತಿಂಡಿ ಮಾಡೋದು ಅಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೇ ಸಮಯ ಬೇಕು. ಪೊಂಗಲ್ ಮಾಡೋಣಾ ಅಂದ್ರೆ ಮನೇಲಿ ಹೆಸರುಬೇಳೆನೇ ಇರೋಲ್ಲ. ಚಟ್ನಿ ಮಾಡೋಣ ಅಂದ್ರೆ ತೆಂಗಿನ ಕಾಯಿ ಖಾಲಿ!!! ಉಪ್ಪಿಟ್ಟು ಮಾಡೋಣ ಅಂದ್ರೆ ಅದು ಕಾಂಕ್ರೀಟ್ ಯಾರು ತಿಂತಾರೆ ಅನ್ನೋ ಧೋರಣೆ. ದೋಸೆ ಮಾಡಿದ್ರೆ ಅಯ್ಯೋ!!! ಇವತ್ತೂ ದೋಸೇನಾ... ಅನ್ನೋ ರಾಗ....

ಇಂತಾ ಸಮಸ್ಯೆ ಬಂದಾಗ ನೀವೇನು ಮಾಡ್ತೀರಾ ????

ನಾನು ಒಂದು ಪರಿಹಾರ ಕಂಡುಕೊಂಡಿದ್ದೇನೆ. ಅದೇ ತಿಂಡಿಯ ವೇಳಾಪಟ್ಟಿ ;)

ಮೊದಲು ನಿಮಗೆ ತಿಳಿದಿರುವ ತಿಂಡಿಗಳ ಪಟ್ಟಿ ಮಾಡಿ, ನಂತರ ಅದಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಮಾಡಿ. ಯಾವ ತಿಂಡಿ ಪದೇ ಪದೇ ಮಾಡಿ ನಿಮಗೆ ಬೋರ್ ಆಗಿರತ್ತೋ ಅದನ್ನ ಒಂದು ವಾರಗಳ ಮಟ್ಟಿಗೆ ಮುಂದೂಡಿ. ಒಂದು ವಾರ ಕಳೆದ ನಂತರ ಅದಕ್ಕೆ ಹೊಸತನ ಹೇಗೆ ಕೊಡಬಹುದು ಎಂದು ಆಲೋಚನೆ ಮಾಡಿ ನಂತರ ಮುಂದಿನ ವಾರ ಅದನ್ನೇ ಹೊಸದಾಗಿ ಮಾಡಿದರಾಯ್ತು.

ನನ್ಗೆ ಗೊತ್ತು ಸ್ವಾಮೀ ನಿಮ್ಮ ತಲೇಲಿ ಎನು ಹೊಳಿತಾ ಇದೆ ಅಂತಾ. ಹೊಸಾ ಬಟ್ಟೆ ತೊಡಿಸಿದರೆ ಮನುಷ್ಯ ಬದಲಾಗೋಲ್ಲ ಅಂತ ತಾನೆ ??? ಅದು ನಿಜ, ಆದರೆ ಹಳೇ ಮನುಷ್ಯನ್ನ ನೋಡಲು ಹೊಸತನ ಇರತ್ತೆ, ಅಲ್ವಾ ;).

ಇದು ಸಧ್ಯಕ್ಕೆ ನಾನು ಕಂಡುಕೊಂಡಿರೋ ಪರಿಹಾರ... ನಿಮಗೇನಾದ್ರೂ ಬೇರೆ ಪರಿಹಾರ ಗೊತ್ತಿದ್ರೆ ದಯವಿಟ್ಟೂ ನನ್ಗೂ ಹೇಳ್ರೀ....