ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Friday, May 28, 2010

ಭಾವನೆಗಳ ಬುತ್ತಿ

ಭಾವನೆಗಳ ಬುತ್ತಿಯ ಬಿಚ್ಚಿಡುತ್ತಿದ್ದೇನೆ

ನೂರೆಂಟು ಬಗೆಯ ಖಾದ್ಯಗಳು ಅದರಲ್ಲಿ

ಒಮ್ಮೆ ಅದರ ಘಮಲು ಮನಸಿಗೆ ಹಿತವಾದರೆ

ಮತ್ತೊಮ್ಮೆ ಅದರದ್ದೇ ಘಾಟು

ಯಾವುದನ್ನು ಪುರಸ್ಕಾರಿಸುವುದು

ಯಾವುದನ್ನು ತಿರಸ್ಕರಿಸುವುದು

ಒಮ್ಮೊಮ್ಮೆ ಸವಿಯಾದ ಭಾವನೆ

ಮತ್ತೊಮ್ಮೆ ಕಹಿಯಾದ ಭಾವನೆ

ಎರಡಕ್ಕೂ ಸರಿ ಸಮಾನ ಪೈಪೋಟಿ

ಸಕಲ ರುಚಿಗಳ ಸಮ್ಮೇಳನ

ಬುತ್ತಿಯ ಹಂಚಿಕೊಳ್ಳಲು ನನ್ನವರಿಲ್ಲ

ಸಕಲ ಖಾದ್ಯಗಳೂ ನನ್ನವೇ

ಅತ್ತ ಇತ್ತ ಎತ್ತನೋಡಿದರೂ ಯಾರ ಸುಳಿವಿಲ್ಲ

ಆದರೂ ಬುತ್ತಿಯ ಬಿಡಲು ಮನಸ್ಸಿಲ್ಲ

ಭಾವನೆಗಳ ಬುತ್ತಿಯಿಲ್ಲದೇ ಬದುಕಿಲ್ಲ

ದೂರದಿಂದ ಒಂದು ಅಸ್ಪಷ್ಟ ಆಕೃತಿ ನನ್ನೆಡೆಗೆ ಬರುತ್ತಿದೆ

ಬುತ್ತಿಯನ್ನೋಮ್ಮೆ ಅದರೊಡನೆ ಹಂಚಿಕೊಳ್ಳಲಾ?

Thursday, May 6, 2010

ನೀನಾರೇ...

ನೀಳಕೂದಲು, ಹೊಳೆವ ಕಣ್ಗಳು

ಬಂದು ನೆಲೆಸಿಹೆ ಎನ್ನ ಮನದೊಳು

ಬಿಂಕದ ವೈಯಾರಿ, ನೀನಾರೇ...



ಮಿಂಚಿನ ನೋಟ, ಸೊಬಗಿನ ಮೈ ಮಾಟ

ತುಂಟತನದಿ ಆಡುವ ಹುಡುಗಾಟ

ಬೈತಲೆಯ ಸೊಬಗಿ, ನೀನಾರೇ...



ಸರಳ ಸೌಂದರ್ಯ, ತುಸು ಗಾಂಭೀರ್ಯ

ದನಿಯ ಮಧುರ ಮಾಧುರ್ಯ

ನಾಚಿ ನೀರಾದ ಬಾಲೆ, ನೀನಾರೇ...



ಮನದ ಮುಗಿಲಿನಲಿ ಹೂ ಮಳೆಯ ಸುರಿಸಿದಾಕೆ

ಕಣ್ಣಂಚಿನಲೇ ಮಾತನಾಡಿ ಪುಳಕಗೊಂಡಾಕೆ

ಅಕ್ಕರೆಯ ಸಕ್ಕರೆ ಗೊಂಬೆ, ನೀನಾರೇ...