ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, September 22, 2010

ನಿಮ್ಮ ಪ್ರಯಾಣ ಸುಖಕರವಾಗಿರಲಿ

ಜೀವನವೆಂಬುದು ನಂಬಿಕೆಯೆಂಬ

ಹಳಿಗಳಮೇಲಿನ ರೈಲು ಪಯಣ

ಹಳಿತಪ್ಪಿದರದು ಭಾರೀ ದುರಂತ,

ಭಾಂದವ್ಯಗಳ ಸಾವು

ಮನದ ತುಂಬಾ ನೋವು

ಪ್ರತಿಕ್ಷಣವೂ ಹೊಸಾ ಪಯಣಿಗರ ಸೇರ್ಪಡೆ

ಹಳೆ ಪಯಣಿಗರ ಬೀಳ್ಗೊಡುಗೆ

ಹೊಸ ಪಯಣಿಗನ ಆಗಮನದ ಸಂತಸ

ಹಳೆ ಪಯಣಿಗನ ನಿರ್ಗಮನದ ಬೇಸರ

ಪರಿಚಿತ, ಅಪರಿಚಿತ ಮೊಗದ ಸಹಪಯಣಿಗರ ನಡುವೆ

ನಮ್ಮ ನಿಮ್ಮ ಪಯಣ ನಿರಂತರ

ನಿಂತಲ್ಲೇ ನಿಂತು ಬರುವ ರೈಲಿಗಾಗಿ ಕಾದಿರುವ ನಿಲ್ದಾಣಗಳು

ನಿಂತ ಕೆಲ ನಿಮಿಷದ ನಂತರ ಮುಂದಿನ ನಿಲ್ದಾಣದ ನಿರೀಕ್ಷೆ

ಪಯಣದ ನಡುವಲ್ಲಿ ಸಿಗುವ ಅಪರಿಚಿತ ಮುಖಗಳಲ್ಲಿ

ಪರಿಚಯದ ಹುಡುಕಾಟ, ನಡು ನಡುವೆ ಹುಡುಗಾಟ

ಮುಂಬರುವ ನಿಲ್ದಾಣದ ಅರಿವು ಯಾರಿಗುಂಟು, ಯಾರಿಗಿಲ್ಲ

ನಮ್ಮ ನಿಲ್ದಾಣ ಬಂದಾಗ ರೈಲಿನಿಂದಿಳಿಯಲೇ ಬೇಕು

ಸಹ ಪಯಣಿಗರ ಪಯಣ ಸಾಗಲೇ ಬೇಕು

ದೇವನೆಂಬ ಚಾಲಕನ ವೇಗ ಬಲ್ಲವರಾರು

ಪಯಣವನೆಲ್ಲಿ ನಿಲ್ಲಿಸುವನೋ ಅರಿತವರು ಯಾರು

ಸಹ ಪಯಣಿಗನಾಗಿ ನಾ ಕೋರುವುದಿಷ್ಟೇ...



ನಿಮ್ಮ ಪ್ರಯಾಣ ಸುಖಕರವಾಗಿರಲಿ.... :)

Thursday, September 16, 2010

ಮದುವೆ ಯಾವಾಗ ಮಾಡ್ಕೋತೀಯ ???

ಮದುವೆ ಯಾವಾಗ ಮಾಡ್ಕೋತೀಯ, ನಮ್ಗೆಲ್ಲಾ ಮದ್ವೆ ಊಟ ಯಾವಾಗ ಹಾಕಿಸ್ತೀಯ....??? ಇದು ಮದುವೆಯಾಗದ ಹುಡುಗ ಮತ್ತು ಹುಡುಗಿಯರನ್ನು ಮಿಕ್ಕವರು ಕೇಳುವ ಸಾಮಾನ್ಯ ಪ್ರಶ್ನೆ.

"ಅಲ್ಲಾ ಸ್ವಾಮೀ.... ನಿಮಗೆ ಭರ್ಜರಿ ಊಟ ಬೇಕಾದ್ರೆ ನನ್ನೇ ಕೇಳಿ, ಮಾಡಿ ಹಾಕ್ತೀನಿ. ಅದಿಕ್ಕೆ ನನ್ ಮದುವೇನೇ ಆಗಬೇಕಾ ? ಬೇರೆ ಏನೂ ಕಾರಣನೇ ಸಿಕ್ಲಿಲ್ವಾ ??? ನಾನು ಒಂಟಿಯಾಗಿ ಇರೋದು ಕಂಡು ನಿಮ್ಗೆ (ಮದುವೆ ಆದವರಿಗೆ) ಹೊಟ್ಟೆ ಉರಿ ಬರತ್ತಾ??? ಅಥವಾ ನೀವು ಖೆಡ್ಡಾಗೆ ಬಿದ್ದಾಯ್ತು ಅಂತ ನನ್ನ ಮೇಲೆ ಹೊಟ್ಟೆಕಿಚ್ಚಾ???" ಹೀಗೆಲ್ಲಾ ಕೇಳೋಣಾ ಅನ್ಸತ್ತೆ. ಆದ್ರೆ ಸಮಾಜದಲ್ಲಿ ಸಭ್ಯ.. ಅಂತ ಅನ್ನಿಸ್ಕೊಂಡಿರೋದ್ರಿಂದ.... "ಅಯ್ಯೋ ಅದಕ್ಕೇನಂತೆ.... ಮೊದಲು ಒಳ್ಳೇ ಹುಡುಗಿ ಸಿಕ್ಲಿ.... ಆಮೇಲೆ ಮದುವೆ ಆಗ್ತೀನಿ" ಅಂತ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡ್ತಾ ಇದ್ದೆ.

ಇನ್ನು ಅದಕ್ಕೆಲ್ಲಾ ಅವಕಾಶ ಇಲ್ಲ ಬಿಡಿ. ಅಂತೂ ಇಂತೂ ನಮ್ಮ ಮನೆಯವರೆಲ್ಲಾ ಸೇರಿ ನನಗೂ ಒಂದು ಖೆಡ್ಡಾನ ತೋಡಿ ಆಗಿದೆ. ಅದರ ಹತ್ತಿರ ಕರ್ಕೊಂಡು ಬಂದದ್ದೂ ಆಗಿದೆ... ಇನ್ನೇನು ಅದಕ್ಕೆ ತಳ್ಳೋದೊಂದೇ ಬಾಕಿ ನೋಡಿ. ಇಷ್ಟು ದಿನ ನನ್ನ ಸ್ನೇಹಿತರಿಗೆ ಸಿಕ್ಕಾಪಟ್ಟೆ ಗೋಳುಕೊಡ್ತಾ ಇದ್ದೆ. ಇನ್ನು ಆ ಸರದಿಯಲ್ಲಿ ನಾನೇ ನಿಲ್ಲಬೇಕು. ನನ್ನ ಸಹೋದ್ಯೋಗಿ ಅವನ ಶ್ರೀಮತಿಯೊಂದಿಗೆ ಪ್ರತೀ ದಿನ ೧ ಘಂಟೆ ಫೋನಿನಲ್ಲಿ ಮಾತನಾಡೋವಾಗ ರೇಗಿಸ್ತಾ ಇದ್ದ ನಾನು ಇವತ್ತು ಗಪ್ ಚುಪ್... ಆಗೆಲ್ಲಾ ಕೇಳ್ತಾ ಇದ್ದೆ.... "ಅಷ್ಟು ಹೊತ್ತು ಮಾತಾಡೋಕೆ ಅದೇನಿರತ್ತೆ ನಿನ್ಗೆ ವಿಷ್ಯಗಳೂ??? ಪ್ರಪಂಚದ ಸುದ್ದೀ ಎಲ್ಲಾ ನಿನ್ ಹತ್ರಾನೇ ಇರತ್ತಾ???" ಇತ್ಯಾದಿ ಇತ್ಯಾದಿ.... ಆದ್ರೆ ಸತ್ಯವಾಗ್ಲೂ ಇವತ್ತು ನನ್ನ ಹತ್ರ ಆ ರೀತಿಯ ಪ್ರಶ್ನೆಗಳಿಗೆ ಉತ್ತರ ಇಲ್ಲ :)

ಮದುವೆಗೆ ಹುಡುಗಿಯ ಹುಡುಕಾಟ ಶುರುವಾದ್ರೆ ಗೆಳೆಯರು ಕೇಳೋ ಪ್ರಶ್ನೆ: "ಏನಮ್ಮಾ.... ಏಷ್ಟು ಉಪ್ಪಿಟ್ಟು+ಕೇಸರೀ ಭಾತು ಆಯ್ತು ಇಲ್ಲೀವರ್ಗೇ ???" ಅಂತ. ನಿಜ ಹೇಳಬೇಕು ಅಂದ್ರೆ ನನ್ನ ಜೀವನದಲ್ಲಿ ನಾನು ಉಪ್ಪಿಟ್ಟು+ಕೇಸರೀ ಭಾತು ತಿಂದೇ ಇಲ್ಲ :) ಇವಳನ್ನ ನೋಡಲು ಹೋದಾಗಲೂ ಕೊಟ್ಟದ್ದು ಆಲೂಗಡ್ಡೆ ಚಿಪ್ಸ್ ಮತ್ತೆ ಸೋನ್ ಪಾಪಡಿ.... ಅದೇ ನನ್ನ ಮೊದಲ ಮತ್ತು ಕೊನೆಯ ಇಂಟರ್ವ್ಯು ಆಗೋಯ್ತು. ಅದೇನೋಪ್ಪ.... ಪ್ರಪಂಚದಲ್ಲಿ ಹುಡುಗಿಯರು ಕಡಿಮೆ ಅಂತಾರೆ, ಆದ್ರೆ ನನ್ಗೆ ಯಾವುದೇ ಸಮಸ್ಯೆ ಆಗ್ಲಿಲ್ಲ ನೋಡಿ. ಮೊದಲ್ನೇ ಸಲ ನೋಡಿದ ಹುಡುಗೀನೇ ಕ್ಲಿಕ್ ಆಗೋದ್ಳು. ಇವತ್ತಿಗೂ ಅವಳಿಗೆ ರೇಗಿಸ್ತಾ ಇರ್ತೀನಿ ನಂಗೆ ಜೀವನದಲ್ಲಿ ಒಂದೇ ಒಂದ್ ಸಾರೀನೂ ಉಪ್ಪಿಟ್ಟು+ಕೇಸರೀ ಭಾತು ತಿನ್ನೋ ಅವಕಾಶ ಸಿಕ್ಕ್ಲೇ ಇಲ್ಲ ಅಂತ ;)

ಅವಳನ್ನ ನೋಡಿಕೊಂಡು ಬಂದ ಕೆಲವೇ ದಿನಗಳಲ್ಲಿ ಅವಳ ಹುಟ್ಟಿದ ಹಬ್ಬ ಇತ್ತು. ಹೇಗಾದ್ರೂ ಮಾಡಿ ಶುಭಾಷಯ ತಿಳಿಸ್ಬೇಕು, ಆ ನೆಪದಲ್ಲಿ ಅವಳಜೊತೆ ಮಾತಾಡ್ಬೇಕು ಅಂತ ಒದ್ದಾಡ್ತಾ ಇದ್ದೆ. ಅವಳ ಮೊಬೈಲ್ ನಂಬರ್ ಕೂಡಾ ನನ್ನ ಹತ್ತಿರ ಇರಲಿಲ್ಲ. ಇದ್ದದ್ದು ೨ ಬೇರೆ ಬೇರೆ ನಂಬರ್ ಗಳು. ಒಂದು ಅವರ ಮನೆಯ ಸ್ಥಿರದೂರವಾಣಿದು, ಮತ್ತೊಂದು ಅವಳ ದೊಡ್ಡಪ್ಪನ ಮೊಬೈಲ್ ನಂಬರ್. ಅಂತೂ ಇಂತೂ ನಾನು ಅವಳಿಗೆ ಹುಟ್ಟಿದ ಹಬ್ಬಕ್ಕೆ ಶುಭಾಷಯ ಕೋರಲೇ ಬೇಕು ಅಂತ ಅವಳ ಹುಟ್ಟಿದ ದಿನದಂದೇ ಆ ಸ್ಥಿರದೂರವಾಣಿ ಗೆ ಕರೆಮಾಡಿದೆ.

ನನ್ನ ಗ್ರಹಚಾರ ಕಣ್ರಿ.... ಆ ದಿನಾನೇ ಆ ಸ್ಥಿರದೂರವಾಣಿ ಕೈ ಕೊಟ್ಟಿತ್ತು. ನಾನೂ ಇತ್ತಕಡೆಯಿಂದ ಪ್ರಯತ್ನ ಪಟ್ಟಿದ್ದೂ ಪಟ್ಟಿದ್ದೇ... ಆದ್ರೆ ಪ್ರಯೋಜನ ಮಾತ್ರ ಆಗ್ಲಿಲ್ಲ. ಕೊನೇಗೆ ಧೈರ್ಯ ಮಾಡ್ಕೊಂಡು ಅವಳ ದೊಡ್ಡಪ್ಪನ ಮೊಬೈಲಿಗೇ ಕರೆ ಮಾಡಿದ್ದೆ :) ಕರೆ ಮಾಡಿ ನಂತರ ಆಕೆಯ ಮೊಬೈಲ್ ನಂಬರ್ ಪಡ್ಕೊಂಡಿದ್ದೆ.

ಮನೆಯಲ್ಲಿ ನಿಶ್ಛಿತ್ತಾರ್ಥದ ದಿನವೆಲ್ಲಾ ನಿಗದಿಯಾದಮೇಲೆ ಶುರುವಾಯ್ತು ನಮ್ಮ ಮೊಬೈಲ್ ಸಂಭಾಷಣೆ ಅದರ ಜೊತೆಯಲ್ಲೇ ನನ್ನ ಮೊಬೈಲ್ ಬಿಲ್ಲಿನ ಸ್ಪರ್ಧೆ ಕೂಡಾ!!! ನನ್ನ ಮೊಬೈಲ್ ಬಿಲ್ಲು ತಿಂಗಳಿಂದ ತಿಂಗಳಿಗೆ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತಿತ್ತು. ಮೊದ ಮೊದಲು ವೋಡೋಫೋನಿನವರಿಗೆ ಧಾರಾಳವಾಗಿ ಹಣ ಕಟ್ಟಿದ್ದಾಯ್ತು.... ಆಮೇಲೆ ಹೊಸಾ"ಐಡಿಯಾ" ಹೊಳೆದದ್ದರಿಂದ ಈಗ ತಿಂಗಳಿಗೆ ಕೇವಲ ೨೦೦/- ರೂಪಾಯಿಯಲ್ಲಿ ನಮ್ಮ ಮಾತೆಲ್ಲಾ ಸಾಗುತ್ತಲಿದೆ. ಹೆಚ್ಚಿನ ಖರ್ಚಿಲ್ಲದೇ ನಾವಿಬ್ಬರೂ ಆರಾಮವಾಗಿ ಮಾತನಾಡುವ ಸದವಕಾಶವನ್ನ "ಐಡಿಯ" ದವರು ನಮಗೆ ಒದಗಿಸಿಕೊಟ್ಟಿದ್ದಾರೆ. ನಿಮ್ಮಲ್ಲಿ ಯಾರಾದರೂ ನನ್ನ ಪರಿಸ್ಥಿತಿಯಲ್ಲೇ ಇದ್ದರೆ ನಿಮಗೂ "ಐಡಿಯ" ಚೆನ್ನಾಗಿ ಉಪಯೋಗಕ್ಕೆ ಬರಬಹುದು ಅಂತ ನನ್ನ ಅನಿಸಿಕೆ ;)

ನಿಶ್ಛಿತ್ತಾರ್ಥಕ್ಕೆ ಮೈಸೂರಿನಿಂದ ಒಂದು ಖಾಸಗೀ ವಾಹನದಲ್ಲಿ ಹೊರಟನಾವೆಲ್ಲಾ (ನಾನು ಮತ್ತು ನಮ್ಮ ಕುಟುಂಬದವರು) ಬೆಂಗಳೂರಿಗೆ ಬಂದ್ವಿ. ಬರುವಾಗ ಎಲ್ಲಾ ಸೇರ್ಕೊಂಡು ನನಗೆ ರೇಗ್ಸಿದ್ದೋ ರೇಗ್ಸಿದ್ದು. ಮದುವೆ ನಿಶ್ಛಿತ್ತಾರ್ಥದ ದಿನ ಎಲ್ಲರ ಹದ್ದಿನ ಕಣ್ಣೂ ನನ್ನನ್ನೇ ಹುಡುಕುತ್ತಿದ್ದವು. ಏನೋ ಒಂದುರೀತಿಯ ಮುಜುಗರ ನನ್ನಲ್ಲಿ. ಒಳ್ಳೆ ಮೃಗಾಲಯದಲ್ಲಿ ಪ್ರಾಣಿಯನ್ನ ನೋಡಿ ಖುಷಿ ಪಡೋರೀತಿ ನನ್ನ ನೋಡ್ತಾ ಅವರವರಲ್ಲೇ ಏನೇನೋ ಮಾತಾಡ್ಕೊತಾ ಇದ್ರು. ಅವಳ ಮನೆಯ ಮಂದಿಗೆ ನಾನು ಹೊಸಬ. ಹಾಗಾಗಿ ಎಲ್ಲರ ಕಣ್ಣೂ ನನ್ನ ಮೇಲೇ. ಹಲವು ಅಪರಿಚಿತ ಮುಖಗಳು ನನ್ನನ್ನೇ ನೋಡ್ತಾ ಇದ್ರೆ ಏನ್ ಮಾಡ್ಬೇಕು ಅಂತನೇ ಗೊತ್ತಾಗ್ತಾ ಇರ್ಲಿಲ್ಲ. ನನ್ಗೂ Full tension ಆಗ್ತಾ ಇತ್ತು. ಬರೀ ಎಲ್ಲಾರಿಗೂ ಒಂದು ಸ್ಮೈಲ್ ಮಾತ್ರ ಕೊಡ್ತಾ ಇದ್ದೆ. ಬೇರೆ ಮಾಡೋದಾದ್ರೂ ಏನು ಹೇಳಿ... :(

ನಾನು ಅವಳನ್ನ ನೋಡೋಕೆ ನಿಶ್ಛಿತ್ತಾರ್ಥಕ್ಕಿಂತಾ ಸುಮಾರು ೩ ತಿಂಗಳ ಹಿಂದೆ ಹೋಗಿದ್ದು. ನಂತರದ ನಮ್ಮ ಭೇಟಿ ನಿಶ್ಛಿತ್ತಾರ್ಥ ದ ದಿನದಂದೇ ಆದದ್ದು. ಚೆಂದದ ಸೀರೆ ಉಟ್ಕೊಂಡು ನನ್ನವಳು ಚೆನ್ನಾಗಿ ಕಾಣ್ತಾ ಇದ್ಳು. ಎಲ್ಲಾ ಕೇಳೋದು ಒಂದೇ ಪ್ರಶ್ನೆ, "ಯಾಕೆ ಇಷ್ಟು ಸಣ್ಣ ಆಗಿದ್ದೀರ ? ಪಾಪ ಅವ್ಳ್ದೇ ಯೋಚ್ನೇನಾ?? ಇನ್ನು ಸ್ವಲ್ಪ ತಿಂಗ್ಳು ವೈಟ್ ಮಾಡಿ... ಮನೆಗೇ ಬರ್ತಾಳೆ... ಅಲ್ಲಿವರ್ಗೇ ಸ್ವಲ್ಪ ಚೆನ್ನಾಗಿ ತಿಂದು ದಪ್ಪ ಆಗಿ, ಆಮೇಲೆ ಅವ್ಳು ಬಂದು ನಿಮ್ಮನ್ನ ಚೆನ್ನಾಗಿ ನೋಡ್ಕೋತಾಳೆ" ಅಂತ. ಎಲ್ಲರಿಗೂ ಉತ್ತರ ಕೊಟ್ಟೂ ಕೊಟ್ಟೂ ಸಾಕಾಯ್ತು. ಬಂದವರಿಗೆಲ್ಲಾ ನಮ್ಮ ಜೋಡಿ ಮೆಚ್ಚುಗೆ ಆಯ್ತು.

ಅಲ್ಲಾ.... ನಾನು ಅವ್ಳು ಬಂದಿಲ್ಲಾ ಅಂತ ಯೋಚ್ನೆ ಮಾಡ್ತಾ ಸಣ್ಣ ಆದ್ನಂತೆ. ಅವ್ರಿಗೇನ್ ಗೊತ್ತು, ದಿನಾಬೆಳಿಗ್ಗೆ ೪ ಘಂಟೆಗೇ ಎದ್ದು ತಿಂಡಿ ಮಾಡ್ಕೊಂಡು ಕೆಲ್ಸಕ್ಕೂ ಹೋಗಿ ಮತ್ತೆ ಮನೆಗೆ ಬಂದು ಅಡುಗೆ ಮಾಡ್ಕೊಂಡು ಮಲ್ಗೋವ್ರ ಕಷ್ಟ :P ಅದರ ಮಜವನ್ನ ಅನುಭವಿಸಿದವನೇ ಬಲ್ಲ ;) ಬೆಳಿಗ್ಗೆ ಆದ್ರೆ ತಿಂಡಿ ಮಾಡೋ ಗಡಿಬಿಡಿ, ಸಂಜೆ ಆದ್ರೆ ಅಡುಗೆ ಮಾಡೋ ಗಡಿಬಿಡಿ, ಇದರ ಜೊತೆಯಲ್ಲೇ ನಾಳೆಗೇನು ತಿಂಡಿ ಮಾಡೋದಪ್ಪಾ ಅನ್ನೋ ಯೋಚನೆ.... ಉಸ್ಸ್ಸಪ್ಪಾ... ಒಂದೋ ಎರಡೋ.... ಆದ್ರೂ ಸಧ್ಯಕ್ಕೆ ಈ ಜೀವನ ಮಸ್ತ್ ಆಗೇ ಇದೆ :) ಮುಂದೆ ಮದುವೆಯಾದಮೇಲೆ ಹೇಗಾಗತ್ತೋ ಗೊತ್ತಿಲ್ಲ :)

ಸಧ್ಯಕ್ಕೆ ನನ್ನ ಮದುವೆ ನಿಶ್ಛಿತ್ತಾರ್ಥಮುಗಿದಿದೆ. ಇನ್ನು ಮದುವೆ ಕಾರ್ಯ ಹೇಗೆ ಆಗತ್ತೋ ಅನ್ನೋ ಭಯ ಮನಸ್ಸಲ್ಲಿ ಕಾಡ್ತಾ ಇದೆ. ನಿಶ್ಛಿತ್ತಾರ್ಥ ಏನೋ ಯಾವ ತೊಂದರೆಯೂ ಇಲ್ಲದೇ ನಡೆದುಹೋಯ್ತು. ಮುಂದೆನೂ ಹಾಗೇ ಎಲ್ಲಾ ಸರಾಗವಾಗಿ ಆಗತ್ತೆ ಅಂತ ಅಂದ್ಕೊಂಡಿದೀನಿ. :)

Tuesday, September 14, 2010

ಬಾಲ್ಯ....

ಬಾಲ್ಯ ಎಷ್ಟು ಸುಂದರ ಅಲ್ವಾ ? ನಾವೆಲ್ಲಾ Miss ಮಾಡ್ಕೊಳೋ ಬಹು ದೊಡ್ಡ ಆಸ್ತಿ. ನಾವು ಕಳ್ಕೊಂಡ ಬಾಲ್ಯವನ್ನ ನಮ್ಮ ಮಕ್ಕಳಲ್ಲಿ ಅಥವಾ ನಮ್ಮ ಸುತ್ತ ಮುತ್ತ ಕಾಣ ಸಿಗುವ ಮಕ್ಕಳಲ್ಲಿ ಕಂಡು ಸಂತಸ ಪಡುತ್ತೇವೆ. ನಾವು ಚಿಕ್ಕವರಾಗಿದ್ದಾಗಿನ ನೆನಪು ನಮ್ಮ ನನಪಿನಂಗಳದಲ್ಲಿ ಬಂದು ಒಮ್ಮೊಮ್ಮೆ ನಲಿದು, ಕುಣಿದು ಹೋಗುವುದು ಸಾಮಾನ್ಯವೇ.

ಮೊನ್ನೆ ನಾನು ನನ್ನ ಅಜ್ಜನ ಮನೆಯಾದ ಬಾರಕೂರಿಗೆ ಹೋಗಿದ್ದೆ. ಅಲ್ಲಿ ಕಂಡಾಪಟ್ಟೆ ಮಳೆ ಬಂದು ಅಲ್ಲಿನ ತೋಡು (ಗದ್ದೆಗಳ ನಡುವೆ ನೀರು ಹರಿಯುವ ಜಾಗ) ತುಂಬಿ ಹರಿಯುತ್ತಿತ್ತು. ಅದರಲ್ಲಿ ನಡೆದಾಡುತ್ತಾ ಇದ್ದೆ. ಅಲ್ಲಿಗೆ ನನ್ನ ಅಣ್ಣ ಮತ್ತು ಅವನ ೩ ವರ್ಷದ ಮಗಳು ವಿಸ್ಮಯ ಬಂದರು. ಅಣ್ಣ ಅವಳಿಗೆ "ಪೇಪರ್ ದೋಣಿ ಮಾಡಿಕೊಡ್ತೀನಿ, ಅದನ್ನ ನೀರಲ್ಲಿ ಬಿಡೋಣ" ಅಂತಾ ಇದ್ದ. ಆಗಲೇ ನನಗೆ ನಮ್ಮ ಬಾಲ್ಯದ ನೆನಪು ಬಹಳ ಕಾಡಿದ್ದು. ಅವುಗಳಲ್ಲಿ ಕೆಲವನ್ನು ಪಟ್ಟಿ ಮಾಡಿದ್ದೇನೆ :) ನೀವೂ ಓದಿ ನಿಮ್ಮ ಬಾಲ್ಯವನ್ನ ನೆನಪುಮಾಡಿಕೊಳ್ಳಿ :)

• ನಾವೆಲ್ಲಾ ಚಿಕ್ಕವರಾಗಿದ್ದಾಗ ಹಳೇ ಪೇಪರಿನಲ್ಲಿ (ಒಮ್ಮೊಮ್ಮೆ ಹೊಸಾ ನೋಟ್ ಬುಕ್ಕಿನಿಂದ ಹರಿದದ್ದೂ ಇದೆ) ದೋಣಿ, ರಾಕೇಟ್, ವಿಮಾನ ಇನ್ನೂ ಮುಂತಾದವನ್ನ ಮಾಡಿ ಶಾಲೆಯ ಬಿಡುವಿನಲ್ಲಿ ತರಗತಿಗಳಲ್ಲೇ ಆಟ ಆಡಿದ್ದುಂಟು.

• ಎರೆಡು ಪುಸ್ತಕಗಳ ಹಾಳೆಗಳನ್ನು ಒಂದರಮೇಲೊಂದರಂತೆ ಜೋಡಿಸಿ ನಂತರ ಅದನ್ನ ಉಲ್ಟಾ ಮಾಡಿ ಸಿನಿಮ ನೋಡುವ ಆಟ ಆಡಿದ್ದುಂಟು.

• ಆಟದ ಸಮಯದಲ್ಲಿ ಲಗೋರಿ, ಜೂಟಾಟ, ಐಸ್ ಪೈಸ್ ಎಲ್ಲಾ ಆಡಿದ್ದನ್ನು ನೆನಸಿಕೊಂಡರೆ ಏನೋ ಒಂದು ರೀತಿ ಖುಷಿಯಾಗತ್ತೆ. :)

• ಆಗೆಲ್ಲಾ ನಮಗೆ ತೆಂಗಿನ ಗರಿಯ ಬುಡವೇ (ಹೆಡೆಮಂಡೆ) ಬ್ಯಾಟು, ಖಾಲಿಯಾದ ಪ್ಲಾಸ್ಟಿಕ್ ಕವರಿನ ಗಂಟೇ ಬಾಲು. ಅದರಲ್ಲೇ ಕ್ರಿಕೇಟನ್ನು ಮ್ಯಾಚ್ ಫಿಕ್ಸಿಂಗ್ ಇಲ್ಲದೇ ಆಡಿ ಖುಷಿಪಟ್ಟಿದ್ವಿ.

• ಪುಸ್ತಕದ ಕೊನೆಯ ಹಾಳೆಯಲ್ಲಿ ಮೂರುಕಲ್ಲಿನ ಆಟದ ಮನೆಗಳು ಇದ್ದೇ ಇರುತ್ತಿದ್ದವು. ಚೌಕಾಬಾರ, ಚನ್ನೇಮಣೆ, ಕಳ್ಳಾ ಪೊಲೀಸ್ ಆಟ, ಪಠ್ಯಪುಸ್ತಕದಿಂದ ಆಡಿದ ಬುಕ್ ಕ್ರಿಕೇಟ್ ಮತ್ತು ಇನ್ನೂ ಹಲವು ಆಟಗಳು ನಮ್ಮ ಮೆಚ್ಚಿನ ಆಟಗಳಾಗಿರುತ್ತಿದ್ದವು.

• ರಜೆ ಬಂತೆಂದರೆ ನಾನು ಕ್ರಿಕೇಟ್ ಆಡಲು ಅಕ್ಕನಹಿಂದೆ ದುಂಬಾಲು ಬೀಳುತ್ತಿದ್ದೆ. ಅದಕ್ಕವಳು ತನ್ನ "ಅಮ್ಮ ಆಟಕ್ಕೆ" ಬಂದರೆ ಮಾತ್ರಾ ಕ್ರಿಕೇಟನ್ನು ಆಡುವುದಾಗಿ ಶರತ್ತು ಇಡುತ್ತಿದ್ದಳು. ವಿಧಿ ಇಲ್ಲದೇ ಒಲ್ಲದ ಮನಸ್ಸಿನಿಂದ ಒಪ್ಪಿ ಕ್ರಿಕೇಟಿನ ಆಟ ಆಡಲು ಕಾಯುತ್ತಿದ್ದೆ.

• ಸ್ವಿಚ್ ಆನ್ ಮಾಡಿರದ ಪ್ಲಗ್ಗಿಗೆ ಪಿನ್ನನ್ನು ಚುಚ್ಚಿ ಕರೆಂಟ್ ಹೊಡೆಸಿಕೊಂಡದ್ದು ನೆನಸಿಕೊಂಡರೆ ಈಗಲೂ ನಗು ಬರುತ್ತದೆ.

• ಪುಟ್ಟ ಪುಟ್ಟ ಮೋರಿಗಳಲ್ಲಿ ಮೀನು ಹಿಡಿದು ಹಾರ್ಲಿಕ್ಸ್ ಬಾಟಲಿಗೆ ಹಾಕಿ ಸಾಕಲು ಮಾಡುತ್ತಿದ್ದ ವಿಫಲಯತ್ನ ಗಳು, ಏರೋಪ್ಲೇನ್ ಚಿಟ್ಟೆಯನ್ನು ಹಿಡಿಯಲು ಹೋಗಿ ಎಡವಿ ಕೆಳಬಿದ್ದದ್ದು.

• ಅಪ್ಪನೊಡನೆ ಪೇಟೆಗೆ ಹೋದಾಗ ಹಠಮಾಡಿ ಕೊಂಡ ಪ್ಲಾಸ್ಟಿಕ್ ಲಾರಿಯ ಗಾಲಿ ಮುರಿದಾಗ ಬೇಸರದಿಂದ ಸಪ್ಪೆಮುಖ ಮಾಡಿಕೊಂಡದ್ದು.

• ಶಾಲೆ ಮುಗಿಸಿ ಮನೆಗೆ ಬಂದು ಅಮ್ಮನಿಗೆ ಏನಾದರೂ ತಿನ್ನಲಿಕ್ಕೆ ಕೊಡು ಅಂತ ತಲೆ ತಿಂದದ್ದು.

• ಸುಳ್ಳು ಸುಳ್ಳಾಗೇ ಹೊಟ್ಟೇ ನೋವು ಬರಿಸಿಕೊಂಡು ಶಾಲೆಗೆ ಹೋಗದೇ ಚಕ್ಕರ್ ಹೊಡೆದು ಮನೆಯಲ್ಲಿ ಮಜವಾಗಿ ಸಮಯ ಕಳೆದದ್ದು.

• ಐಯೋಡೆಕ್ಸ್ ಬಾಟಲಿಯಲ್ಲಿ ನಲ್ಲಿ ಗಿಡ ನೆಟ್ಟು ಪ್ರೀತಿಯಿಂದ ೫ ವರುಷ ಸಾಕಿದ್ದು.

• ಅಪ್ಪ ಪೇಟೆಯಿಂದ ತಂದಿದ್ದ ಕಡಲೇ ಕಾಯಿಯನ್ನ ಎಲ್ಲರೊಂದಿಗೆ ಹಂಚಿ ತಿಂದದ್ದು.

• ಅಪ್ಪನ ಸೈಕಲ್ಲಿನ ಚಕ್ರವನ್ನು ಜೋರಾಗಿ ತಿರುಗಿಸಿ ಅದಕ್ಕೆ ಕಡ್ಡಿ ಇಟ್ಟು ಅಪ್ಪನಿಂದ ಬೈಸಿಕೊಂಡದ್ದು.

• ಊಟ ಮಾಡಲು ಮನಸ್ಸಿಲ್ಲದಾಗ ಅಮ್ಮನ ಕೈ ತುತ್ತಿಗೆ ಕಾಡಿದ್ದು, ಕೈ ತುತ್ತು ತಿಂದು ನಿದ್ರೆಗೆ ಜಾರಿದ್ದು.

ಸಧ್ಯಕ್ಕೆ ಇಷ್ಟು ಸಾಕು, ಮಿಕ್ಕವನ್ನು ಪಟ್ಟಿ ಮಾಡುತ್ತಾ ಹೋದರೆ ಅದು ನಿಲ್ಲುವುದೇ ಇಲ್ಲ... :)

Monday, September 6, 2010

ಅವಳು ನನ್ನವಳು

ಅವಳು ನನ್ನವಳು ಬಲು ಚೆಂದದವಳು

ಮೋಹಕ ನಗೆ ಬೀರಿ ಸಂತಸವ ತಂದವಳು

ಮಧುರ ಮಾತನು ನುಡಿದು ನೋವ ಮರೆಸಿದವಳು

ಹೃದಯ ಬಡಿತದಿ ಬೆರೆತು ಉಸಿರಾಗಿ ನಿಂದವಳು

ಮುಗ್ದ ಮನಸಿನ ಚಲುವೆ, ಈಕೆ ನನ್ನವಳು

ಎನ್ನೆಡೆಗೆ ಪ್ರೀತಿಯ ಧಾರೆ ಹರಿಸಿದವಳು

ನನ್ನ ಬಾಳ ಪಯಣದ ಸಹ ಪಯಣಿಗಳು

ಬಾಳಬಂಡಿಯ ನೊಗವ ಹೊತ್ತು ಜೊತೆ ಸಾಗುವವಳು :)