ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, October 7, 2009

ಮುಳ್ಳಯ್ಯನ ಗಿರಿ-ಕೆಮ್ಮಣ್ಣುಗುಂಡಿ ಚಾರಣ

ನವೆಂಬರ್ ೨೯,೩೦ ೨೦೦೮

ದಿನಪೂರ್ತಿ ಕಂಪ್ಯೂಟರಿನ ಮುಂದೆ ಕೆಲ್ಸಮಾಡಿ, ಮನೆಗೆ ಹೋಗಿ ಮನೆಲೂ ಕೆಲ್ಸ ಮಾಡಿ ಸಕತ್ ಬೇಜಾರಾಗೋಗಿತ್ತು. ಇದರ ನಡುವೆ ಒಂದು ಪುಟ್ಟ Break ಬೇಕಾಗಿತ್ತು. ಯಾವರೀತಿ Timepass ಮಾಡಿದ್ರೆ ಚೆನ್ನಾ ಅಂತ ಲೆಕ್ಕಾಚಾರ ಹಾಕ್ತಾ ಇರೋಹಾಗೇ ಮನೋಹರ ನಂಗೆ call ಮಾಡಿದ್ದ. ಒಂದು Trekking ಇದೆ, ಬರ್ತೀಯಾ ? ಬರೋಹಾಗಿದ್ರೆ ನನ್ನ Accountಗೆ ದುಡ್ಡು Transfer ಮಾಡ್ಬಿಡು ಅಂದ. ನಿಸರ್ಗದ ನಡುವೆ ಇರೋ ಅವಕಾಶ ತಾನಾಗೇ ಸಿಕ್ಕಿರೋವಾಗ ತಡಮಾಡದೇ ಮನೋಹರನಿಗೆ ಈ ಚಾರಣದ ವಿಷಯ ತಿಳಿಸಿದ್ದಕ್ಕೆ ಮನದಲ್ಲೇ Thanks ಹೇಳ್ತಾ ಚಾರಣಕ್ಕೆ ಬೇಕಾಗುವ ಮೊತ್ತವನ್ನ ಮುಂಗಡವಾಗಿ ಇಂಟರ್ನೆಟ್ಟಿನಿಂದ ಸುಲಭವಾಗಿ ಮನೋಹರನ ಖಾತೆಗೆ ಜಮಾ ಮಾಡಿ ನಾನು ಚಾರಣಕ್ಕೆ ಬರುವುದನ್ನ ಖಾತ್ರಿ ಪಡಿಸಿಕೊಂಡೆ.

ಮನೋಹರ್ ಮತ್ತೆ ಹರ್ಷ ಗುಂಪಿನೊಡನೆ ಇದು ನನ್ನ ಎರಡನೇ ಚಾರಣ. ಚಾರಣಕ್ಕೆ ಹೋಗಬೇಕಾಗಿದ್ದ ಜಾಗ "ಮುಳ್ಳಯ್ಯನ ಗಿರಿ", ಅಲ್ಲಿಂದ ನಾವು ಕೆಮ್ಮಣ್ಣುಗುಂಡಿಗೆ ಬಂದು ನಮ್ಮ ಚಾರಣವನ್ನ ಅಂತ್ಯಗೊಳಿಸೋದು ಅಂತ ಅವರಿಬ್ಬರೂ Plan ಮಾಡಿದ್ರು.

ಮೊದಲಿಗೇ ಚಾರಣದ ಸಿದ್ದತೆಯನ್ನು ಮಾಡಿಕೊಂಡಿದ್ದವರು ನಮ್ಮ ಗುಂಪಿನ ನಾಯಕರಾದ ಹರ್ಷ ಮತ್ತು ಮನೋಹರ. ಚಾರಣದ ಆಸಕ್ತಿ ಇರೋ ೧೧ ಚಾರಣಿಗರನ್ನ ಒಟ್ಟುಸೇರಿಸಿ, ಅವರಿಂದ ಮುಂಗಡ ಹಣ ಪಡೆದು KSRTC ಯಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಮುಂಗಡ ಟಿಕೇಟ್ ಖರೀದಿ ಮಾಡಿ, ಬೀರೂರಿನಿಂದ ಬೆಂಗಳೂರಿಗೆ Return Journey ಯನ್ನ ಕಾದಿರಿಸಿದ್ರು. ನಾನು ಸಾಮಾನ್ಯವಾಗಿ ಚಾರಣಕ್ಕೆ ಹೋಗುವಾಗೆಲ್ಲಾ ನಮ್ಮ ಊಟ ಕಾಡಿನಲ್ಲೇ ತಯಾರಾಗುತ್ತಿತ್ತು. ಆದರೆ ಇಲ್ಲಿ ಅದು ಸ್ವಲ್ಪ ಬದಲಾಗಿತ್ತು. ಕಾಡಿನಲ್ಲಿ ಅಡುಗೆ ಮಾಡಿ ಊಟಮಾಡುವಬದಲಿಗೆ MTRನ Ready To Eat Packetsನ ತಂದಿದ್ದರು. ಅದರ ಜೊತೆಯಲ್ಲಿ ಕಾಡಿನಲ್ಲಿ Campingಗೆ ಬೇಕಾಗುವ Tent ಮತ್ತೆ sleeping bag ಗಳು, Tentನ ಒಳಗೆ ಹಾಸಲು ಬೇಕಾಗುವ Matಗಳ ಪೂರ್ವ ಸಿದ್ದತೆ ಆಗಿತ್ತು. ಈ ಸಲದ ಚಾರಣದಲ್ಲಿ ನನಗೆ ಹೊಸದೆನಿಸಿದ್ದು ಹರ್ಷ ತಂದಿದ್ದ GPS. ಅದರಲ್ಲಿ Google earth ನಿಂದ ಮೊದಲೇ ನಾವು ಚಾರಣ ಮಾಡುವ ಮಾರ್ಗವನ್ನ ಸಿದ್ಧಪಡಿಸಿ ತಂದಿದ್ದರು, ಅದಿಲ್ಲದಿದ್ದಲ್ಲಿ ದಟ್ಟವಾಗಿ ಮಂಜು ಕವಿದಿದ್ದರಿಂದ ನಮಗೆ ಚಾರಣ ಮಾಡಲು ದಿಕ್ಕು ದಾರಿ ತಿಳಿಯುತ್ತಿರಲಿಲ್ಲ.

ಚಾರಣಿಗರ ಪಟ್ಟಿ ಇಂತಿದೆ:


Harsha
Manohar D.C ಅವರ ಇನ್ನೊಂದು ಹೆಸರು Manu
Vishwanath ಅವರ ಇನ್ನೊಂದು ಹೆಸರು Choodi
Anees K.A
Santhosh
Dilip
Linson Jose ಅವರ ಇನ್ನೊಂದು ಹೆಸರು Linsa
Arun Sadasivan ಅವರ ಇನ್ನೊಂದು ಹೆಸರು Sadasiva
Praveen ಅವರ ಇನ್ನೊಂದು ಹೆಸರು SNMP
Joephin


ಶನಿವಾರ: ಚಿಕ್ಕಮಗಳೂರು-ಮುಳ್ಳಯ್ಯನ ಗಿರಿ-ಬಾಬಾ ಬುಡನ್ ಗಿರಿ-ಗಾಳಿಕೆರೆ ಚಾರಣ

ಶುಕ್ರವಾರ ರಾತ್ರಿ ನಾವೆಲ್ಲಾ ಬೆಂಗಳೂರಿನಿಂದ ವೋಲ್ವೋ ಬಸ್ಸಿನಲ್ಲಿ ಹೊರಟು ಶನಿವಾರ ಬೆಳಗಿನಜಾವ ಸುಮಾರು ೪:೩೦ಕ್ಕೆ ನಮ್ಮ ಐರಾವತದಲ್ಲಿ ಚಿಕ್ಕಮಗಳೂರಿಗೆ ಬಂದು ತಲುಪಿದೆವು. ಬೆಳ್ಳಂಬೆಳಿಗ್ಗೆ ಆ ಚುಮು ಚುಮು ಚಳಿಯಲ್ಲಿ ಎಲ್ಲಾ ಐರಾವತದಿಂದ ಧರೆಗಿಳಿದೆವು :D . ಇಳಿಯುತ್ತಿದ್ದಂತೇ ಎಲ್ಲರ ಕಣ್ಣೂ ಹುಡುಕಿದ್ದು ಟೀ ಅಂಗಡಿಯನ್ನ. ನಾವೆಲ್ಲಾ ಬಿಸಿ ಬಿಸಿ ಟೀ ಆಸ್ವಾಧಿಸುತ್ತಿದ್ದರೆ ಹರ್ಷ ಮತ್ತೆ ವಿಶ್ವನಾಥ್ ನಮಗಾಗಿ Lodge ವ್ಯವಸ್ಥೆ ಮಾಡಲು ಹೋಗಿದ್ದರು. ಒಟ್ಟಿಗೇ ಅಷ್ಟುಜನ ಬಸ್ಸಿನಿಂದ ಇಳಿದದ್ದನ್ನು ನೋಡಿದ Wollen Cap ಮಾರುವವನು ತನ್ನ ಅಂಗಡಿಯನ್ನೇ ನಾವು ನಿಂತಿದ್ದ ಸ್ಥಳಕ್ಕೆ ತಂದಿದ್ದ. ನಮ್ಮಲ್ಲಿ ಕೆಲವರು ಅವನಿಂದ Cap ಖರೀದಿಸಿದ ನಂತರ ಹರ್ಷ ಅವರು Book ಮಾಡಿದ್ದ Lodgeನತ್ತ ಪಯಣ ಬೆಳೆಸಿದ್ವಿ.


ಹರ್ಷ ಮತ್ತೆ ವಿಶ್ವನಾಥ್ ಬಹಳಹೊತ್ತು ಹುಡುಕಿದ ನಂತರ Naveen-Lodge ಎಂಬಲ್ಲಿ ನಮಗೆ ಕೊಠಡಿಯ ವ್ಯವಸ್ಥೆಯಾಯಿತು. ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿದ ನಂತರ ಹತ್ತಿರದಲ್ಲೇ ಇದ್ದ ಹೊಟೇಲ್ ಒಂದರಲ್ಲಿ ಇಡ್ಲಿ, ವಡೆ ತಿಂಡಿ ತಿಂದು ಸುಮಾರು ೭:೪೫ ಕ್ಕೆ ಅಲ್ಲಿಯೇ ಒಂದು ಜೀಪು ಮತ್ತೊಂದು ಮಾರುತಿ ಆಮ್ನಿ ಯನ್ನ ಬಾಡಿಗೆ ಪಡೆದು ಸುಮಾರು ೧೫ ಕಿ.ಮೀ ದೂರದ ನಮ್ಮ ಚಾರಣ ಪ್ರಾರಂಭವಾಗುವ ಸ್ಥಳಕ್ಕೆ ೮:೩೦ ರ ಹೊತ್ತಿಗೆ ಎಲ್ಲಾ ಚಾರಣಿಗರು ಬಂದಿಳಿದೆವು.


ಆ ಎರಡೂ ವಾಹನಗಳಿಗೆ ೬೦೦ ರೂಪಾಯಿ ಹಣ ನೀಡಿ, ಮೊದಲೇ ಚಿಕ್ಕಮಗಳೂರಿನ ಕಾಮತ್ ಹೋಟೇಲಿನಿಂದ ಕಟ್ಟಿಸಿಕೊಂಡು ಬಂದಿದ್ದ ತಿಂಡಿಯ ಪೊಟ್ಟಣಗಳನ್ನ (೨ ಚಪಾತಿ + ಖಾರಾ ಭಾತ್) ಪ್ರತಿಯೊಬ್ಬರು ಪಡೆದು, ನಮ್ಮ ಕಾಲಿಗೆ ಜಿಗಣೆಗಳು ಹತ್ತದಂತೆ ಮನೋಹರ ತಂದಿದ್ದ Body sprayಯನ್ನ ಹಾಕಿಸಿಕೊಂಡು ಚಾರಣದ ಹಾದಿಯಲ್ಲಿ ನಡೆದೆವು.


ಈ ಸ್ಥಳಕ್ಕೆ ಸರ್ಪಹಾದಿ ಎಂದು ಹೆಸರು. ಇಲ್ಲಿಂದಲೇ ನಮ್ಮ ಚಾರಣದ ಆರಂಭ. ಚಾರಣದ ಹಾದಿ ಹಾವಿನ ಮಾದರಿಯಲ್ಲಿ ಇದ್ದದ್ದರಿಂದಲೇ ಆ ಹೆಸರು ಬಂದಿರಬೇಕು. ನಮ್ಮ ಹಾದಿ ಸರ್ಪಹಾದಿಯ ಕಮಾನಿನಿಂದ ಪ್ರಾರಂಭವಾಯ್ತು. ಹಾದಿ ಸ್ವಲ್ಪ ಕಡಿದಾಗಿದ್ದರೂ ಬಹಳ ಕಠಿಣವಾಗಿರಲಿಲ್ಲ. ಪಕ್ಕಾ ಹಾವಿನ ಹಾದಿಯಂತೆ Zig-zag ಆಗಿತ್ತು. ಹಾದಿಬದಿಯಲ್ಲಿ ಹಲವಾರು ಪದರಗಳೊಳಗೊಂಡ ಬಂಡೆಗಲ್ಲುಗಳು ಸುಂದರವಾಗಿದ್ದವು. ಚಾರಣದ ಆರಂಭದಲ್ಲಿ ಸಾಧಾರಣ ಕ್ಯಾಮರಾ ತಂದಿದ್ದ ನನಗೆ ನಮ್ಮನ್ನ ಸುತ್ತುವರೆದಿದ್ದ ಮಂಜಿನಿಂದ ಹೆಚ್ಚು Photoಗಳನ್ನ ತೆಗೆಯಲಾಗಲಿಲ್ಲ :(


ಚಾರಣದ ಪ್ರಾರಂಭದಿಂದ ಅಂತ್ಯದವರೆಗೂ ನಮ್ಮೊಡನೆ "ನಿಷ" ಇದ್ದದ್ದು ಒಂದುರೀತಿಯಲ್ಲಿ ಸಂತಸದ ವಿಷಯವಾದರೂ ಮತ್ತೊಂದೆಡೆ ಬೇಸರ ತರಿಸಿತ್ತು. ಅಂದಹಾಗೆ ಈ "ನಿಷ" ಯಾರೆಂದು ಕುತೂಹಲವಿದ್ದಲ್ಲಿ ಹೇಳಿಬಿಡುತ್ತೇನೆ. ೨೦೦೮ರ ನವೆಂಬರಿನ ಕೊನೆಯವಾರದಲ್ಲಿ ತಮಿಳುನಾಡಿಗೆ ಅಪ್ಪಳಿಸಿದ್ದ ಚಂಡಮಾರುತದ ಹೆಸರೇ "ನಿಷ" ಇದರಿಂದ ನಮಗಾದ ಉಪಯೋಗ ಅಂದರೆ ಚಾರಣದಲ್ಲಿ ಎಲ್ಲಿಯೂ ನಾವು ಬಿಸಿಲಿನ ತಾಪದಿಂದ ಬಳಲಲಿಲ್ಲ ಆದ್ದರಿಂದ ಸಂತಸ :). ಬೇಸರದ ವಿಷಯ ಎಂದರೆ ನಿಸರ್ಗದ ಸೊಬಗನ್ನು ನಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲಾಗಲಿಲ್ಲ ಎಂಬುದು :|. ಚಂಡಮಾರುತದ ಪ್ರಭಾವ ಎಷ್ಟಿತ್ತೆಂದರೆ ದಟ್ಟವಾದ ಮಂಜು ನಮ್ಮ ದೃಷ್ಟಿ ೧೦ಮೀಟರ್ ಮೀರಿ ಹೋಗದಂತೆ ತಡೆ ಹಿಡಿದಿತ್ತು. ನನ್ನ ಹಿಂದಿನ ಕೆಲವು ಚಾರಣದಲ್ಲಿ ವರುಣನ ಜೊತೆಯಾದರೆ ಇಲ್ಲಿ ಮಂಜಿನ ಜೊತೆಗೇ ನಮ್ಮ ಚಾರಣ ಮುಂದುವರೆದಿತ್ತು.


ನಮ್ಮಂತೆಯೇ ಹಲವು ಚಾರಣಿಗರು ಇಲ್ಲಿ ಆಗಾಗ ಬರುವುದುಂಟು, ಹಾಗಾಗಿ ಕಾಲುದಾರಿ ನಮಗೆ ಸ್ಪಷ್ಟವಾಗೇ ಕಾಣುತ್ತದೆ. ಇದು ಆರಂಭದ ಹಂತ ಮಾತ್ರ. ಮಂಜಿನ ಕಾರಣದಿಂದ ನಮಗೆ ಬೆಟ್ಟದಮೇಲಿನ ದೊಡ್ಡ ಬಂಡೆ ಕಾಣಲಿಲ್ಲ, ಸೂರ್ಯನ ಬೆಳಕಿದ್ದಲ್ಲಿ ಅದು ಗೊಚರಿಸುತ್ತದೆ ಎಂದು ಹರ್ಷನಿಂದ ತಿಳಿದುಬಂತು. ಹಾದಿಯುದ್ದಕ್ಕೂ ಹುಲ್ಲು ಹಾಸಿನ ಮೇಲೆ ಮಂಜಿನ ಹನಿಗಳು ಮುತ್ತಿನ ಮಾಲೆಯಂತೆ ಕಾಣಿಸುತ್ತಿತ್ತು. ಸಾಧ್ಯವಾದಷ್ಟೂ ಅವುಗಳನ್ನ ನನ್ನ ಕ್ಯಾಮರದಲ್ಲಿ ಸೆರೆ ಹಿಡಿದೆ. ಮಾರ್ಗಮಧ್ಯದಲ್ಲಿ ಸ್ವಲ್ಪ ಹಾದಿ ತಪ್ಪಿ ಬೇರೆ ಹಾದಿ ಹಿಡಿದು ಹೊರಟಿದ್ದೆವು, ನಂತರ ಮರಳಿ ಸರಿಯಾದ ದಾರಿಯಲ್ಲಿ ನಮ್ಮ ಪಯಣ ಮುಂದುವರೆಯಿತು.





ಅಂದಾಜು ಅರ್ಧ ದಾರಿಯಾದಮೇಲೆ ಒಂದು ನಂದಿಯ ವಿಗ್ರಹವನ್ನು ಕಾಣಬಹುದು. ಸೂರ್ಯನ ಬೆಳಕಿದ್ದಲ್ಲಿ ಇಲ್ಲಿಂದಲೇ ದೇವಸ್ಥಾನದ ಗೋಪುರವನ್ನ ನೋಡಬಹುದಂತೆ. ಅಲ್ಲಿಂದ ಸುಮಾರು ೧೦-೧೫ ನಿಮಿಷಗಳ ಚಾರಣದ ನಂತರ ನಮಗೆ ಒಂದು ಗುಹೆ ಕಾಣಿಸಿತು.


ನಮ್ಮಲ್ಲಿ ಕೆಲವರು ಆಲ್ಲಿಗೆ ಹೋಗಿ ಅದರ ಒಳಹೊಕ್ಕು ಕೆಲವು Photoಗಳನ್ನ ಕ್ಲಿಕ್ಕಿಸಿ ಮತ್ತೆ ದೇವಸ್ಥಾನದ ದಾರಿ ಹಿಡಿದೆವು. ದೇವಸ್ಥಾನ ತಲುಪುವ ಹೊತ್ತಿಗೆ ಸಮಯ ಅಂದಾಜು ೧೦:೧೫ ಆಗಿತ್ತು.



ಮೊದಲಿದ್ದ ದೇವಸ್ಥಾನವನ್ನ "ಜೀರ್ಣೊದ್ಧಾರ" ಮಾಡುತ್ತಿದ್ದರು, ಹಾಗಾಗಿ ಅಲ್ಲಿ ಹಲವು ಕಾರ್ಮಿಕರು ಮತ್ತು ಹತ್ತಿರದ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳು ಇದ್ದರು. ನಮ್ಮನ್ನೆಲ್ಲಾ ನೋಡಿ ಮಂಜಿನ ನಡುವೆ ನಮ್ಮ ಚಾರಣಮಾಡುವ ಉತ್ಸಾಹ ಕಂಡು ಅಚ್ಚರಿ ಪಟ್ಟರು. ಅಲ್ಲಿಯ ಪ್ರಧಾನ ಅರ್ಚಕರಿಂದ ನೆನ್ನೆ ಬಾಬಾಬುಡನ್ ಗಿರಿ ಮತ್ತು ಸುತ್ತಲ ಪ್ರದೇಶಗಳಲ್ಲಿ ಧರಾಕಾರವಾಗಿ ಮಳೆಯಾಗಿ ಮಣ್ಣು ಕುಸಿದಿರುವುದು ತಿಳಿದುಬಂತು. ಅಲ್ಲಿಯೇ ಸ್ವಲ್ಪ ಹೊತ್ತು ಕೂತಿದ್ದು ಅರ್ಚಕರ ಮನೆಯಲ್ಲಿ ನಾವು ಕೊಂಡೊಯ್ದಿದ್ದ ಹಾಲನ್ನು ಅವರಿಗೆ ನೀಡಿ ಅವರಿಂದ ಕಾಫೀ ಮಾಡಿಸಿಕೊಂಡು ಕುಡಿದು ಅವರು ಸಾಕಿದ್ದ ಬೆಕ್ಕಿನ Photoಗಳನ್ನ ಸೆರೆ ಹಿಡಿದು ಪರ್ವತದಂಚಿನ ಕಡೆಗೆ (Ridge) ನಮ್ಮ ಪಯಣಬೆಳೆಸಿದೆವು.





ನಾವು ಮುಳ್ಳಯ್ಯನ ಗಿರಿಯಿಂದ ಬಾಬಾ ಬುಡನ್ ಗಿರಿಯನ್ನು ತಲುಪಲು ಪರ್ವತಗಳ ಅಂಚಿನಲ್ಲೇ ಸಾಗಬೇಕಿತ್ತು.




ಆ ದಟ್ಟವಾಗಿ ಕವಿದಿದ್ದ ಮಂಜಿನ ನಡುವೆ GPSನ ಸಹಾಯದಿಂದ ಸರಿಯಾದ ದಾರಿಯಲ್ಲೇ ಹೋಗುತ್ತಿದ್ದೆವು. ನಮ್ಮ ಸಧ್ಯದ ಗುರಿಯಿದ್ದದ್ದು ನಮ್ಮ Lunch point ನೆಡೆಗೆ. ನಾವು ದೇವಸ್ಥಾನದಿಂದ ಹೊರಟಾಗ ಅಂದಾಜು ೧೧:೧೫ ರ ಸಮಯ. ನಮ್ಮ Lunch point ತಲುಪಲು ನಾವು ಪರ್ವತದಿಂದ ಇಳಿದು ಮತ್ತೆ ನಮ್ಮ ಊಟದ ಕಾರ್ಯಕ್ರಮವನ್ನ ಮುಗಿಸಿ ಮುಂದೆ ಸಾಗಬೇಕಿತ್ತು. ಇಂತಹಾ ಸ್ಥಳಗಳಲ್ಲಿ ಸಂಜೆಯ ಹೊತ್ತಿಗೆ ಸುರಿಯುವ ಮಳೆ ಸಾಮಾನ್ಯ. ಮಳೆಯನಡುವೆ ಪರ್ವತದ ಅಂಚಿನಲ್ಲಿ ಚಾರಣ ಮಾಡುವುದು ಕಷ್ಟವಾದ್ದರಿಂದ ಅಲ್ಲಿದ್ದ ಅನುಭವಿ ಚಾರಣಿಗರು ಎಲ್ಲರನ್ನೂ ಸಾಧ್ಯವಾದಷ್ಟು ಬೇಗ ಗುರಿ ಮುಟ್ಟಿಸಲು ನಮ್ಮೆಲ್ಲರನ್ನು ಹುರಿದುಂಬಿಸುತ್ತಿದ್ದರು. ಅಂದಾಜು ಒಂದು ಘಂಟೆಯ ಚಾರಣದ ನಂತರ ಸ್ವಲ್ಪ ಸ್ವಲ್ಪವಾಗಿ ಸೂರ್ಯಕಿರಣ ಕಾಣಲಾರಂಭಿಸಿತು. :) ಆದರೆ ಅದು ಇದ್ದದ್ದು ಕೇವಲ ೫ ನಿಮಿಷಗಳು ಮಾತ್ರ. ಆದರೂ ಆ ನಡುವೆಯೇ ನಮಗೆ ಛಾಯಾಗ್ರಹಣಕ್ಕೆ ಸಮಯ ಸಿಕ್ಕಿತ್ತು. ಮೋಡಗಳು ನಮ್ಮ ಕಾಲಕೆಳಗೆ ತೇಲಾಡುತ್ತಿದ್ದವು. ಇದುವರೆವಿಗೂ ಮೋಡದ ಒಳಗೇ ಚಾರಣ ಮಾಡುತ್ತಿದ್ದ ನಮಗೆ ಪ್ರಕೃತಿಯ ಸೊಬಗು ಕಂಡಿದ್ದು ಆ ೫ ನಿಮಿಷಗಳಲ್ಲೇ ಹೆಚ್ಚು. ಪರ್ವತಗಳ ನಡುವೆ ಕಂಡುಬರುವ ಕಣಿವೆಗಳ ನೋಟ, ಮೋಡಗಳ ತೇಲಾಟ ಎಲ್ಲವೂ ನಯನ ಮನೋಹರವಾಗಿತ್ತು.

ಇದುವರೆವಿಗೂ ತಮ್ಮ ಬ್ಯಾಗಿನಲ್ಲಿ ಬೆಚ್ಚಗೆ ಕುಳಿತಿದ್ದ ಎಲ್ಲಾ ಕ್ಯಾಮರಗಳೂ ಆ ಸೊಬಗನ್ನು ನೋಡಲು ಹೊರಗೆ ಬಂದಿದ್ದವು. ಅಲ್ಲಿ ಕ್ಯಾಮರ ಹೊಂದಿದ್ದ ಪ್ರತಿಯೊಬ್ಬರೂ ಆಗ ಅತ್ಯುತ್ತಮ ಛಾಯಾಗ್ರಾಹಕರೇ !!!! :D




ನಾವೆಲ್ಲಾ ಸುಮಾರು ೧೨:೪೦ ರ ಹೊತ್ತಿಗೆ Lunch point ತಲುಪಿದ್ದೆವು. ನಮ್ಮ Lunch point ಒಂದು Tar-roadನ ಹತ್ತಿರವಿದ್ದ View point. ಅಲ್ಲಿಂದ ಸುತ್ತಮುತ್ತಣ ಪರ್ವತ ಶ್ರೇಣಿಗಳು, ನಿಸರ್ಗದ ಹಸಿರಿನ ಸಿರಿ ಎಲ್ಲಾ ರಮಣೀಯವಾಗಿ ಕಾಣುತ್ತಿತ್ತು. ನಾವು ಊಟಮಾಡಲು ಆಯ್ಕೆಮಾಡಿದ ಸ್ಥಳದಲ್ಲಿಯೇ ಚಿಕ್ಕಮಗಳೂರಿನ ಕೆಲವು ಪ್ರಾಧ್ಯಾಪಕರು, ಮತ್ತೆ ಕೆಲವು Business men ಗಳೂ ಸೇರಿ ಅಲ್ಲಿ ತಮ್ಮ Party ಆಚರಿಸಲು ಬಂದಿದ್ದರು :P. ಅವರೊಡನೆ ಸ್ವಲ್ಪ ಮಾತುಕತೆಯಾದ ನಂತರ ನಮಗೆ ಅವರಿಂದ ಸ್ವಲ್ಪ ತಿಂಡಿ ಮತ್ತು ಹಣ್ಣುಗಳು ಸಿಕ್ಕಿತು. ಸುಮಾರು ೧೨:೪೦ ರ ಹೊತ್ತಿಗೆ ನಮ್ಮ ಊಟದ ಕಾರ್ಯಕ್ರಮ ಸಂಪನ್ನ ಗೊಂಡಿತ್ತು.




ಅಲ್ಲಿ ಬಂದವರೊಂದಿಗೆ ಕೆಲವು Photo ತೆಗೆಸಿಕೊಂಡು ಅಲ್ಲಿಂದ ಸುಮಾರು ೧೩:೩೦ರ ಹೊತ್ತಿಗೆ ನಮ್ಮ ಚಾರಣವನ್ನು ಮುಂದುವರೆಸಿದೆವು. ನಮ್ಮ ಮುಂದಿನ ಗುರಿ ಇದ್ದದ್ದು BSNLನ tower ಬಳಿಗೆ. ಸಾಮಾನ್ಯ ದಿನಗಳಂದು ಬರಿಗಣ್ಣಿಗೆ ಕಾಣುವ ಈ tower ಅಂದು ಮುಸುಕಿದ್ದ ಮಂಜಿನ ಕಾರಣದಿಂದ ನಮಗೆ ಕಾಣಿಸಲಿಲ್ಲ. GPSನ ಸಹಾಯ ಪಡೆದು ಪರ್ವತದ ಮತ್ತೊಂದು ತುದಿಯಲ್ಲಿದ್ದ ಆ towerನೆಡೆಗೆ ನಾವೆಲ್ಲಾ ಪರ್ವತದ ಅಂಚಿನಲ್ಲಿ ಹೆಬ್ಬಂಡೆಗಳ ನಡುವೆ ಸಾಹಸ ಪಡುತ್ತಾ ನಡೆಯುತ್ತಿದ್ದೆವು. ನಮ್ಮ ಗುರಿಯಿದ್ದದ್ದು ಆ ಟವರ್ರಿನ ಬಳಿಯಿರುವ ರಸ್ತೆ ಸೇರಿ ಅಲ್ಲಿಂದ ಅಂದಾಜು ೭ ಕಿ.ಮೀ ದೂರವನ್ನ ಕ್ರಮಿಸಿ ಬಾಬಾ ಬುಡನ್ ಗಿರಿಯನ್ನು ತಲುಪಬೇಕೆನ್ನುವುದು. ಅದಕ್ಕಾಗಿ ನಾವು ಹುಲ್ಲುಗಾವಲುಗಳು ಮತ್ತು ಹೆಬ್ಬಂಡೆಯಿಂದ ಕೂಡಿದ ಪರ್ವತಗಳನ್ನ ದಾಟಿ ಹೋಗಬೇಕಿತ್ತು.



ನಾವು ನಡೆಯುತ್ತಿದ್ದ ಹಾದಿಯಲ್ಲಿ ಯಾವುದೇ ಕಾಲುದಾರಿಯ ಕುರುಹುಗಳಿರದ ಕಾರಣ ನಮ್ಮ ದಾರಿಯನ್ನು ನಾವೇ ಕಂಡುಕೊಂಡು ಮುನ್ನಡೆಯಬೇಕಿತ್ತು. ಹೀಗಿರುವಾಗ ಮಾರ್ಗಮಧ್ಯದಲ್ಲಿ ನಮಗೆ ಹೆಬ್ಬಂಡೆಯೊಂದು ಎದುರಾಗಿ ಎತ್ತಕಡೆ ಹೋಗುವುದು ಎಂದು ಯೋಚಿಸುವಂತಾಯಿತು. ಸ್ವಲ್ಪ ವಾಲಿಕೊಂಡಿದ್ದ ಆ ಬಂಡೆಯನ್ನು ದಾಟಿ ಹೋಗಲು ಒಂದೋ ಅದರ ಕೆಳಗಿನಿಂದ ಇದ್ದ ಸ್ವಲ್ಪವೇ ಜಾಗದಲ್ಲಿ ನುಸುಳಿಕೊಂಡು ಹೋಗಬೇಕು, ಇಲ್ಲವಾದಲ್ಲಿ ಅದನ್ನ ಜಾಗ್ರತೆಯಿಂದ ಹತ್ತಿ ದಾಟಬೇಕಾಗಿತ್ತು. ಎರಡೂ ಕಷ್ಟವಾದ ಕೆಲಸಗಳೇ. ಮಂಜಿನಿಂದ ಸ್ವಲ್ಪ ಒದ್ದೆಯಾಗಿದ್ದ ಆ ಬಂಡೆಯ ಕೆಳಗೆ ನುಸುಳುವಾಗ ಅಥವಾ ಹತ್ತಿ ದಾಟುವಾಗ ಆಯತಪ್ಪಿದಲ್ಲಿ ಪರ್ವತದಿಂದ ನೇರವಾಗಿ ಕೆಳಗೆ ಬೀಳುವುದೇ !!!! ನಮ್ಮಲ್ಲಿ ಕೆಲವರು ಆ ಬಂಡೆಯ ಕೆಳಗಿನಿಂದ ನುಸುಳಿದರೆ ಮಿಕ್ಕವರು ಅದನ್ನು ಏರಿಕೊಂಡು ಹಾಗೂ ಹೀಗೂ ದಾಟಿ ಬಂದರು. ಕೆಲವು ಬಂಡೆಗಳು ಮಂಜಿನ ನೀರಿಗೆ ಒದ್ದೆಯಾದ್ದರಿಂದ ನಮ್ಮ ಕಾಲುಗಳು ಜಾರುತ್ತಲಿದ್ದವು. ಇಂತಹಾ ಸಮಯದಲ್ಲಿ ನಿಮ್ಮ ಅನುಭವ ಮತ್ತು ತಾಳ್ಮೆಯೇ ನಿಮಗೆ ಶ್ರೀರಕ್ಷೆ. ಒಂದು ಹಂತದಲ್ಲಿ ನಮ್ಮೊಂದಿಗೆ ಬಂದಿದ್ದ ಪ್ರವೀಣ್ ಆ ಬಂಡೆಗಳನ್ನು ಹತ್ತಲಾಗದೇ ನಮ್ಮ Lunch Point ಗೆ ಮರಳಿ ಅಲ್ಲಿಂದ ಇದ್ದ ರಸ್ತೆಯಲ್ಲಿ ಯಾವುದಾದರೂ ಬಸ್ ಹಿಡಿದು ಬಾಬಾ ಬುಡನ್ ಗಿರಿಗೆ ಬರುವುದಾಗಿ ಹೇಳಿದರೂ ನಂತರ ಪ್ರಯಾಸದಿಂದ ನಮ್ಮ ಮಾರ್ಗದಲ್ಲೇ ಬಂದದ್ದು ನಮಗೂ ಮತ್ತು ಅವನಿಗೂ ಖುಷಿತಂದಿತ್ತು.


ಬಂಡೆಗಳನ್ನ ದಾಟಿ ನಂತರ ಹುಲ್ಲುಗಾವಲಿನ ಚಾರಣ ಆರಂಭವಾಯಿತು. ಇಷ್ಟು ಹೊತ್ತಿಗೆ ನಮ್ಮನ್ನಾವರಿಸಿದ್ದ ಮಂಜು ಕರಗಿದ್ದದ್ದರಿಂದ ನಮಗೆ ದೂರದಲ್ಲಿ ನಿಂತಿದ್ದ ಟವರ್ ಕಾಣುತ್ತಿತ್ತು. ಬಂಡೆಗಳನ್ನ ಹತ್ತುವ ಸಾಹಸವಿಲ್ಲದ್ದರಿಂದ ಎಲ್ಲಾ ಹುಲ್ಲುಗಾವಲಿನಲ್ಲಿ ಸ್ವಲ್ಪ ಸುಧಾರಿಸಿಕೊಂಡು ನಡೆಯುತ್ತಿದ್ದೆವು. ಇದೇ ಜಾಗದ ಸಪೀಪದಲ್ಲಿ ಇರುವುದೇ "ಮಾಣಿಕ್ಯಧಾರಾ". ನಾವೆಲ್ಲಾ ಸುಮಾರು ೧೬:೦೦ ರ ಹೊತ್ತಿಗೆ BSNL ಟವರ್ರಿನ ಹತ್ತಿರವಿರುವ ಪಾಳುಬಿದ್ದಿದ್ದ ಪೋಲೀಸ್ ಚೆಕ್ ಪೋಸ್ಟ್ ಬಳಿ ಬಂದೆವು. ಅಲ್ಲಿ ಕೆಲವರು ಕುಳಿತುಕೊಂಡು ಸುಧಾರಿಸಿಕೊಂಡರೆ ಮಿಕ್ಕವರು ಆ ಟವರ್ರನ್ನು ಹತ್ತುವ ಸಾಹಸ ಮಾಡುತ್ತಿದ್ದರು. :D


ಅಲ್ಲಿಂದ ನಮ್ಮ ಚಾರಣ ೧೪:೩೦ಕ್ಕೆ ಮತ್ತೆ ಪ್ರಾರಂಭವಾಗಿ ಡಂಬಾರು ರಸ್ತೆಯ ಮೂಲಕ ಬಾಬಾ ಬುಡನ್ ಗಿರಿಯತ್ತ ಹೊರಟಿತ್ತು. ಮಾರ್ಗಮಧ್ಯದಲ್ಲಿ ನಮಗೆ ಕೆಲವು ಸುಂದರವಾದ Photoಗಳು ಸೆರೆ ಸಿಕ್ಕವು. ನಾವಲ್ಲಿಂದ ಹೋಗುತ್ತಿದ್ದಂತೆಯೇ ನಮ್ಮನ್ನ ಗಾಳೀಕೆರೆಗೆ ಕರೆದೊಯ್ಯಲು ಜೀಪ್ ಡ್ರೈವರ್ ಗಳು ಪೈಪೋಟಿ ನಡೆಸುತ್ತಿದ್ದರು. ಕೊನೆಗೆ ಒಂದು ಜೀಪ್ ಚಾಲಕನ ಹತ್ತಿರ ಹರ್ಷ ಮಾತನಾಡಿ ಚರ್ಚೆ ಮಾಡಿ ಅವನಿಗೆ ನಮ್ಮ ಲಘು ಉಪಹಾರವನ್ನು ಮುಗಿಸುವ ವರೆಗೆ ಕಾಯುವಂತೆ ಹೇಳಿ ಹೊಟೇಲಿನ ಕಡೆಗೆ ನಡೆದೆವು, ಸಮಯ ಸುಮಾರು ೧೭:೧೫ ಆಗಿರಬಹುದು. ನಾನು, ಹರ್ಷ, ಪ್ರವೀಣ್ ಮತ್ತೆ ವಿಶ್ವನಾಥ್ ಸಸ್ಯಾಹಾರಿಗಳಾದ್ದರಿಂದ ಪರೋಟ ಮತ್ತು ದಾಲ್ ತಿಂದರೆ ಮಿಕ್ಕವರು ಆಮ್ಲೇಟನ್ನು ಸವಿದರು. ಅಲ್ಲಿಂದ ಕೇವಲ ೧೦ ನಿಮಿಷದ ದಾರಿಕ್ರಮಿಸಿದ ನಂತರ ನಮ್ಮ ಮುಂದಿನ ಗುರಿ ಸಿಕ್ಕಿಬಿಟ್ಟಿತು, ಅದೇ ಗಾಳೀಕೆರೆ. ಇಷ್ಟು ಹೊತ್ತಿಗೇ ಸಂಜೆ ೧೮:೩೦ರ ಸಮಯ, ಮಂಜು ನಮ್ಮನ್ನು ಸ್ವಲ್ಪ ಸ್ವಲ್ಪವಾಗೇ ನುಂಗುತ್ತಿತ್ತು.


ಸಂಜೆ ಅಲ್ಲಿಯೇ Camping ಆದ್ದರಿಂದ ನಾವೆಲ್ಲಾ ನಮ್ಮ ಬೆನ್ನ ಮೇಲಿದ್ದ ಹೊರೆಯನ್ನು ಕೆಳಗಿಳಿಸಿ ಸ್ವಲ್ಪ ವಿಶ್ರಾಂತಿ ಪಡೆದೆವು. ಪರ್ವತಗಳಿಂದ ಮೂರೂಕಡೆಗಳಿಂದ ಆವರಿಸಲ್ಪಟ್ಟ ಪ್ರದೇಶವಿದು. ಮತ್ತೊಂದೆಡೆ ದೊಡ್ಡ ಕಣಿವೆ, ಅಲ್ಲಿಯೇ ಒಂದು ಪುಟ್ಟ ಕೆರೆ. ಆ ಕೆರೆ ಎಷ್ಟು ದೊಡ್ಡದೆಂದು ನೋಡಲಾಗಲಿಲ್ಲ, ಎತ್ತನೋಡಿದರೂ ಅಲ್ಲಿ ಬರೀ ಮಂಜನ್ನು ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ. ಆ ಸ್ಥಳದಲ್ಲಿ ಒಂದು ಗುಡಿಸಲಿನ ಅಳಿದುಳಿದ ಕಂಬಗಳಿದ್ದವು. ಅಲ್ಲಿ ೩ Tentಗಳನ್ನು ಹಾಕಲು ಸ್ಥಳಾವಕಾಶವಿಲ್ಲದ್ದರಿಂದ ಅಲ್ಲಿಂದ ಸ್ವಲ್ಪ ಮುಂದೆ ಸಮತಟ್ಟಾದ ಪ್ರದೇಶದಲ್ಲಿ ನಮ್ಮ Tentಗಳನ್ನ ಹಾಕುವುದಾಗಿ ನಿರ್ಧರಿಸಿ Tentಗಳನ್ನ ಹಾಕಲು ಶುರುಮಾಡಿದೆವು. ಸಂಜೆ ಮಂಜು ಮುಸುಕಿದ್ದರಿಂದ ಬಹಳ ಬೇಗ ಕತ್ತಲು ಆವರಿಸುತ್ತಿತ್ತು. ಅನೀಸ್ ಮತ್ತು ತಂಡ ಬಿಸಿನೀರಿನ ವ್ಯವಸ್ಥೆಮಾಡಲು ಶುರುಮಾಡಿದರೆ ನಾವೆಲ್ಲಾ ಟೆಂಟ್ ಗಳನ್ನ ಹಾಕುತ್ತಿದ್ದೆವು.

ಟೆಂಟ್ ಹಾಕಿದನಂತರ ನಾವೆಲ್ಲಾ ಊಟಕ್ಕೆ ಹಾಜರಾದೆವು. ಅಂದಿನ ಊಟ MTRರವರ Ready to eat Rice items ಆಗಿತ್ತು. ತಯಾರಿಸಲು ಬಹಳ ಸುಲಭವಾದ ಆ ಪ್ಯಾಕೇಟುಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿ ೫ ನಿಮಿಷಗಳಕಾಲ ಬಿಟ್ಟರೆ ಬಿಸಿ ಬಿಸಿಯಾದ ರುಚಿ ರುಚಿಯಾದ ಅಡುಗೆ ಸಿದ್ದ. ಆದರೆ ಆ ಮಂಜು ಮುಸುಕಿದ್ದ ಬೆಟ್ಟದಲ್ಲಿ ಕುದಿಯುವ ನೀರನ್ನು ಸಿದ್ದಪಡಿಸುವುದೇ ಒಂದು ಸಾಹಸ. ಅಂತೂ ಇಂತೂ ಅನೀಸ್ ಮತ್ತವನ ತಂಡದಿಂದ ನಮ್ಮೆಲ್ಲರ ಊಟದ ಕಾರ್ಯಕ್ರಮ ಮುಗಿದಿತ್ತು.

ಕತ್ತಲು ಬೇಗನೇ ಆವರಿಸಿದ್ದರಿಂದ ಸುಮಾರು ೮.೩೦ಕ್ಕೆ ನಾವೆಲ್ಲಾ ನಮ್ಮ ನಮ್ಮ ಟೆಂಟಿನಲ್ಲಿ ಮಲಗಿದ್ವಿ. ನಾನು ಮತ್ತು ಪ್ರವೀಣ್ ಒಂದು ಟೆಂಟಿನಲ್ಲಿ ಮಲಗಿದ್ವಿ. ನಮ್ಮ ಟೆಂಟ್ ಸ್ವಲ್ಪ ಮಧ್ಯದಲ್ಲಿ ಇದ್ದದ್ದರಿಂದ ನಮಗೇನೂ ತೊಂದರೆ ಆಗಲಿಲ್ಲ. ಆದರೆ ಮಿಕ್ಕ ೨ ಟೆಂಟ್ ಗಳಲ್ಲಿದ್ದವರಿಗೆ ನಿದ್ರೆ ಇರಲಿಲ್ಲ ಅಂತ ಬೆಳಗ್ಗೆ ನಾನು ಎದ್ದಮೇಲೆ ತಿಳಿದದ್ದು. ರಾತ್ರಿ ರಭಸದಿಂದ ಬೀಸಿದ ಗಾಳಿ ಎರಡರಲ್ಲಿ ಒಂದು ಟೆಂಟಿನ ಮೇಲ್ಚಾವಣಿಯನ್ನ ಹಾರಿಸಿತ್ತಂತೆ. ನಂತರ ಅವರೆಲ್ಲಾ ಬೇರೆಕಡೆಗಳಲ್ಲಿ ಮತ್ತೆ ಟೆಂಟನ್ನ ಹಾಕಿ ಮಲಗಿದ್ರಂತೆ. ನಾವಿಬ್ಬರೂ ಚೆನ್ನಾಗಿ ನಿದ್ದೆ ಮಾಡಿದ್ವಿ :)

ಎರಡನೇ ದಿನ (ಭಾನುವಾರ) ನಮ್ಮ ಪಯಣ ಗಾಳೀಕೆರೆಯಿಂದ ಕೆಮ್ಮಣ್ಣುಗುಂಡಿಗೆ ಹೋಗಿ ಅಲ್ಲಿಂದ ಬೀರೂರಿನಲ್ಲಿರುವ ರೈಲ್ವೇನಿಲ್ದಾಣಕ್ಕೆಬಂದು ಅಲ್ಲಿಂದ ಬೆಂಗಳೂರಿನ ಕಡೆಗೆ.

ಬೆಳಗ್ಗೆ ೬.೩೦ಕ್ಕೆ ಎದ್ದು, ನಮ್ಮ ಎಲ್ಲಾಕೆಲಸವನ್ನೂ ಮುಗಿಸಿ ತಿಂಡಿ ತಿಂದು ಪಯಣ ಮುಂದುವರೆಸಿದೆವು. ಬೆಳಗಿನ ತಿಂಡಿಗೆ Cornflakes ಮತ್ತು ಹಾಲು.

ಮುರಿದು ಹೋಗಿದ್ದ ಗುಡಿಸಲಿನ ಮಧ್ಯದಲ್ಲಿ ಮೂರುಕಲ್ಲುಗಳನ್ನು ಇಟ್ಟು ಒಲೆ ಹತ್ತಿಸಿ ಹಾಲನ್ನು ಬಿಸಿಮಾಡಿಕೊಂಡು ಅದಕ್ಕೆ Cornflakes ಹಾಕಿ ತಿಂದೆವು. ನಾನು ಕೊಂಡೊಯ್ದಿದ್ದ ಸೌತೇಕಾಯಿಯನ್ನು ತಿನ್ನಲು ಇನ್ನೂ ಸಮಯ ಬಂದಿರದ ಕಾರಣ ಅದನ್ನು ಮತ್ತೆ ನನ್ನ ಬ್ಯಾಗಿಗೆ ಹಾಕಿಕೊಂಡು ಅಲ್ಲೇ ಕೆಲವು photo ಕ್ಲಿಕ್ಕಿಸಿ ಅಂದಾಜು ೮.೩೦ಕ್ಕೆ ನಮ್ಮ ಪಯಣ ಅಲ್ಲಿಂದ ಉತ್ತರದಿಕ್ಕಿನೆಡೆಗೆ ಮುಂದುವರೆಯಿತು. ದಟ್ಟವಾದ ಮಂಜು ಮುಸುಕಿದ್ದರಿಂದ ನಮ್ಮ ಎಲ್ಲಾ ಕಾರ್ಯಗಳೂ ನಿಧಾನಗತಿಯಲ್ಲಿ ಸಾಗುತ್ತಿತ್ತು.

ಅಂದಾಜು ೧೪ ಕಿಲೋಮೀಟರಿನ ಈ ಹಾದಿ ಕಠಿಣವಾದ ಹಾದಿಯೇನಲ್ಲ. ಮಾರ್ಗಮಧ್ಯದಲ್ಲಿ ನಮಗೆ ಹಲವಾರು ಶೋಲಾಗಳು (ಎರಡುಪರ್ವತಗಳು ಸೇರುವ ಮಧ್ಯದ ಕಾಡು) ಮತ್ತೆ ಕೆಲವು ಪರ್ವತದ ಅಂಚು ಮತ್ತೆ ಕೆಲವು ಝರಿಗಳು ಈ ಮಾರ್ಗದಲ್ಲಿ ಸಿಕ್ಕುತ್ತವೆ.


ಮಾರ್ಗ ಪೂರ್ಣವಾಗಿ ಮಂಜು ಮುಸುಕಿದ್ದರಿಂದ ಪ್ರತಿಯೊಬ್ಬರೂ ನಿರ್ಧಿಷ್ಟ ಅಂತರದಲ್ಲಿ ಮುಂದುವರೆಯುತ್ತಿದ್ದೆವು. ಹೆಚ್ಚುದೂರ ಬಂದರೆ ಇಬ್ಬರ ನಡುವೆ ಮಂಜು ಆವರಿಸಿ ದಾರಿ ಕಾಣಿಸುತ್ತಿರಲಿಲ್ಲ. ಗಾಳೀಕೆರೆಯಿಂದ ಕೆಮ್ಮಣ್ಣುಗುಂಡಿಯ ವರೆಗೂ ಇರುವ ಹಾದಿಯನ್ನ "ರಾಜ-ಹಾದಿ" ಎನ್ನುತ್ತಾರಂತೆ. ಹಿಂದೆ ರಾಜ ಮಹರಾಜರುಗಳು ಇದೇಹಾದಿಯಲ್ಲಿ ಕ್ರಮಿಸುತ್ತಿದ್ದರಂತೆ. ನಾವು ಚಾರಣ ಮಾಡುವಹೊತ್ತಿಗೆ ಆ ವಿಶಾಲವಾದ ಹಾದಿ ಬಹುತೇಕ ಗಿಡಗಂಟೆಗಳಿಂದ ಮುಚ್ಚಲ್ಪಟ್ಟಿತ್ತು. ನಮ್ಮೊಡನೆ GPS ಇಲ್ಲದಿದ್ದಲ್ಲಿ ಮಾರ್ಗಮಧ್ಯೆ ಕಳೆದುಹೋಗುವ ಸಂಭವ ಹೆಚ್ಚಿತ್ತು. ಚಾರಣದ ಮಧ್ಯೆ ಮಂಜಿಲ್ಲದ ದಿನಗಳಲ್ಲಿ ಹಾದಿ ಸುಗಮವಾಗಿರುತ್ತದೆ. ಮಾರ್ಗಮಧ್ಯೆ ನಮಗೆ ಅಂದಾಜು ೬-೭ ಶೋಲಾ ಕಾಡುಗಳು ಎದುರಾಗುತ್ತವೆ. ಅಲ್ಲೆಲ್ಲಾ ನಿಮ್ಮ ದಾರಿಯನ್ನು ನೀವೇ ಮಾಡಿಕೊಂಡು ಮುನ್ನಡೆಯಬೇಕು. ಸಹಚಾರಣಿಗರು ತಂದಿದ್ದ "ಖರ್ಜೂರ" ಮತ್ತು "ಟ್ಯಾಂಗ್" ಅನ್ನು ಸೇವಿಸುತ್ತಾ ಮಾರ್ಗ ಮಧ್ಯದಲ್ಲಿ ಜೋಫಿನ್ ಮತ್ತು ಸಂಗಡಿಗರ ನೃತ್ಯ ಕಾರ್ಯಕ್ರಮವನ್ನ ನೋಡಿಕೊಂಡು ಮುಂದುವರೆದೆವು. :) ಹರ್ಷ ಅದರ ವಿಡಿಯೋ ಚಿತ್ರಣ ಮಾಡಿದರು, ಮಂಜಿನ ಮಧ್ಯೆ ಹೇಗೆ ಮೂಡಿ ಬಂದಿತ್ತೂ... ನಾನು ನೋಡಲಾಗಲಿಲ್ಲ.

ಶೋಲಾ ಕಾಡುಗಳನ್ನೆಲ್ಲಾ ದಾಟಿ ಒಂದು ಬಯಲಿನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು. ಎಲ್ಲರಿಗೂ ದಣಿವಾದ್ದರಿಂದ ಮತ್ತೆ ನಮ್ಮ "ಟ್ಯಂಗ್" ಕುಡಿದು ಪಯಣ ಮುಂದುವರಿಸಿದೆವು. ಮಧ್ಯಹ್ನ ಅಂದಾಜು ೧೨.೦೦ ಘಂಟೆಗೆ ನಮ್ಮ ಮತ್ತೊಂದು ವಿರಾಮ. ಅಷ್ಟು ಹೊತ್ತಿಗಾಗಲೇ ಸೂರ್ಯ ನಮ್ಮನ್ನು ನೋಡಲು ತನ್ನ ಕಿರಣಗಳನ್ನ ಬೀರಿದ್ದ, ಮಂಜು ಕರಗುತ್ತಿತ್ತು.

ಆ ಸ್ಥಳದ ಎದುರಿನಲ್ಲಿ ದಟ್ಟವಾದ ಕಾಡಿನಿಂದಾವೃತವಾದ ಕಣಿವೆ, ಮತ್ತು ಭದ್ರಾ ಅಣೇಕಟ್ಟೆಯ ನಯನ ಮನೋಹರವಾದ ದೃಷ್ಯ ನಮ್ಮ ದಣಿವನ್ನು ಮರೆಯಾಗಿಸಿತ್ತು. ಅಲ್ಲಿ ನಮ್ಮ ಕಣ್ಣುಗಳಲ್ಲದೇ ಕ್ಯಾಮರಾ ಕಣ್ಣುಗಳೂ ಆ ಸೊಬಗನ್ನ ಸೆರೆಹಿಡಿಯುತ್ತಿದ್ದವು.



ಆ ವಿರಾಮದಲ್ಲಿ ನಮಗೆಲ್ಲಾ ಮೊದಲೇ ತಂದಿದ್ದ Dil-pasand ಮತ್ತು Cream-bun ನೀಡಲಾಯಿತು. ನನ್ನ ಬ್ಯಾಗಿನಲ್ಲಿ ಇಲ್ಲಿಯ ತನಕ ಜೊತೆಯಾಗಿ ಬಂದಿದ್ದ ಸೌತೇಕಾಯಿಯನ್ನು ಎಲ್ಲರಿಗೂ ನೀಡಿ ನನ್ನ ಭಾರವನ್ನ ಕಡಿಮೆ ಮಾಡಿಕೊಂಡೆ ;) ಅಲ್ಲಿಂದ ಕೆಳಗೆ ಕಣಿವೆಯ ಕಡೆಗೆ ಇಳಿದರೆ ಒಂದು ಗುಹೆ ಇದೆಯಂತೆ, ನಮ್ಮಲ್ಲಿ ಕೆಲವರು ಅತ್ತಕಡೆಗೆ ಹೊರಟರು. ಮಿಕ್ಕವರು ಕೆಮ್ಮಣ್ಣುಗುಂಡಿಯ ಹಾದಿ ಹಿಡಿದೆವು. ಹಾಗೆಯೇ ಮುಂದೆ ಸಾಗುವಾಗ ಅಲ್ಲಿ ಮಹಾರಾಜರು ಹಿಂದೆ ತಂಗಲು ಬಳಸುತ್ತಿದ್ದ ಮಹಲಿನ ಪಳಯುಳಿಕೆ ಇದೆ. ದಾರಿಯುದ್ದಕ್ಕೂ ಪ್ರಕೃತಿಯ ಸೊಬಗನ್ನ ಸಾಧ್ಯವಾದಷ್ಟೂ ನನ್ನ ಕ್ಯಾಮರದ ಒಳಗಡೆ ತುಂಬಿಸುವ ಪ್ರಯತ್ನ ಮಾಡುತ್ತಾ ನಮ್ಮ ಅಂತಿಮವಾದ ಮತ್ತು ಕಠಿಣವಾದ ಮಾರ್ಗದ ಮುಂದೆ ಬಂದು ನಿಂತಾಗ ಸಮಯ ಸುಮಾರು ೧.೩೦.

ಈ ದುರ್ಗಮವಾದ ಹಾದಿ ಎದುರಾಗುವಮುನ್ನ ನಮಗೆ ಕೆಮ್ಮಣ್ಣುಗುಂಡಿಯ ಕಟ್ಟಡಗಳು ಬರಿಗಣ್ಣಿಗೇ ಕಾಣುತ್ತವೆ, ಆದರೆ ಮಾರ್ಗಮಾತ್ರ ಕಾಣುವುದಿಲ್ಲ. ಹಾಗಾಗಿ ಆ ಹಾದಿಯನ್ನ ನಾವೇ ಮಾಡಿಕೊಂಡು ಕೆಳಗಿಳಿಯಬೇಕು. ಮನು ಮತ್ತು ಹರ್ಷ ಕೆಳಗಿಳಿಯುವ ಹಾದಿಯ ಪತ್ತೆಯಲ್ಲಿ ತೊಡಗಿ ವಿಫಲರಾದರು. ಕಾರಣ ಅಷ್ಟು ದಟ್ಟವಾದ ಆ ಕಾಡುಮರಗಳು ಮತ್ತು ಮುಳ್ಳಿನಿಂದ ಕೂಡಿದ ಪೊದೆಗಳು.

ಸುಮಾರು ೩೦ ನಿಮಿಷದ ಹಾದಿಯಲ್ಲಿ ೬ ಅಡಿಗೂ ಮೀರಿದ ಎತ್ತರದ ಪೊದೆಗಳನ್ನು ಸರಿಸುತ್ತಾ ನಾವೆಲ್ಲಾ ಯುದ್ದಕ್ಕೆ ಹೊರಟ ಸೈನಿಕರಂತೆ ಮುನ್ನುಗ್ಗುತ್ತಿದ್ದೆವು. ನಮ್ಮ ಗುರಿಇದ್ದದ್ದು ಕೆಮ್ಮಣ್ಣುಗುಂಡಿಯೊಂದೇ. ಮಾರ್ಗಮಧ್ಯದಲ್ಲಿ ನಮ್ಮನ್ನು ದಾರಿ ತಪ್ಪಿಸುವ ಹಾದಿಗಳು ಹಲವಾರು, ಆದರೆ ನಾವು ಕೇವಲ GPSನ ಮಾತನ್ನು ಮಾತ್ರ ಕೇಳುತ್ತಾ ಮುನ್ನಡೆದೆವು. ಮಾರ್ಗಮಧ್ಯದಲ್ಲಿ ಮತ್ತೊಮ್ಮೆ ಕಡಿದಾದ ಪರ್ವತವನ್ನು ಹತ್ತಬೇಕಾಯಿತು, ಆದರೆ ಹತ್ತಲು ಯಾವುದೇ ಆಧಾರವಿರಲಿಲ್ಲ, ಇದ್ದದ್ದು ಅಲ್ಲಿ ಬೆಳೆದು ನಿಂತಿದ್ದ ಮುಳ್ಳಿನ ಪೊದೆಗಳಷ್ಟೇ. ನಾನು ನನ್ನ ಕೈಗಳಿಗೆ Glove ಹಾಕಿದ್ದರಿಂದ ಆ ಪೊದೆಗಳನ್ನ ಸರಿಸಲು ಅನುಕೂಲವಾಯಿತು. ಮುಳ್ಳಿನ ಪೊದೆಗಳು ನಮ್ಮ ಮೈ ಮೇಲೆ ಮಾಡಿದ್ದ ಗಾಯಗಳು ನಮ್ಮ ಮುಖ್ಯಹಾದಿ ದೊರೆತ ಸಂಭ್ರಮದಲ್ಲಿ ಮರೆಯಾಗಿದ್ದವು. ಅಂತೂ ಇಂತೂ ನಾವೆಲ್ಲಾ ಸುರಕ್ಷಿತವಾಗಿ ಮುಖ್ಯ ರಸ್ತೆಯಲ್ಲಿದ್ದೆವು... ಹುರ್ರೇ..... :D

ನಾವೆಲ್ಲಾ ಕೆಮ್ಮಣ್ಣುಗುಂಡಿ ತಲುಪಿ ವಿಶ್ರಮಿಸಿಕೊಳ್ಳುತ್ತಿರುವಾಗ ಹರ್ಷ ಮತ್ತವನ ಸಂಗಡಿಗರು ಅಲ್ಲಿಂದ ಬೀರೂರಿಗೆ ಹೊರಡಲು ನಮಗೆ ಜೀಪಿನ ವ್ಯವಸ್ಥೆ ಮಾಡಲು ಹೊರಟಿದ್ದರು. ನಾವೆಲ್ಲಾ ಎರಡು ಜೀಪಿನಲ್ಲಿ ಬೀರೂರಿನ ಕಡೆಗೆ ಪಯಣ ಬೆಳೇಸಿದೆವು.

ಮಾರ್ಗಮಧ್ಯದಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು ನಮ್ಮನ್ನೆಲ್ಲಾ ಬೀಳ್ಗೊಟ್ಟಿತು. ಬೀರೂರಿನಿಂದ ನಮ್ಮ ರೈಲ್ವೇ ಪ್ರಯಾಣ ೫.೪೫ಕ್ಕೆ ಶುರುವಾಗಿ ೯.೨೦ಕ್ಕೆ ಬೆಂಗಳೂರನ್ನು ತಲುಪಿದೆವು. ಅಲ್ಲಿಂದ ನಾನು ನನ್ನ ಮನೆಯಕಡೆ ಹೊರಡುವ BMTC ಹತ್ತಿ ಮನೆಗೆ ಬಂದೆ.


ನಿಸರ್ಗಮಾತೆಯ ಮಡಿಲಿನಲ್ಲಿ ಕಳೆದ ಆ ೨ ದಿನ ಅವಿಸ್ಮರಣೀಯ.... :)

Friday, August 21, 2009

"ಮುನಿಯ"



"ಮುನಿಯ" ಎಂದಾಕ್ಷಣ ಯಾವುದೋ ಕನ್ನಡ ಚಿತ್ರವಲ್ಲ... ಇದು ಒಂದು ಪುಟ್ಟ ಪಕ್ಷಿಯ ಉಳಿವಿನ ಹೋರಾಟದ ಲೇಖನ...

ಶುಕ್ರವಾರದಂದು ವಾರಾಂತ್ಯವಾದ್ದರಿಂದ ಕೆಲಸದ ಒತ್ತಡ ಹೆಚ್ಚಿರಲಿಲ್ಲ. ರಾತ್ರಿ ಸವಿಯಾದ ನಿದ್ದೆ ಮಾಡಿ ಬೆಳಗ್ಗೆ ಬೇಗ ಎದ್ದು ಬರಿಅಕ್ಕಿ ದೋಸೆ (ನೀರು ದೋಸೆ) ಮತ್ತೆ ಕಡಲೇ ಬೇಳೆ ಚಟ್ನಿ ಮಾಡಿದ್ದೆ. ನೆನ್ನೆ ನನ್ನ ಸಹೋದ್ಯೋಗಿಯಾದ ಕನಕರಾಜ ತನಗೂ ತಿಂಡಿ ತರುವಂತೆ ಹೇಳಿದ್ದರಿಂದ ಅವನನಿಗೂ ದೋಸೆಯನ್ನ ಮಾಡಿಕೊಂಡು ಡಬ್ಬಿಯಲ್ಲಿ ತಂದಿದ್ದೆ. ಪ್ರತಿದಿನದಂತೆ ಇಂದಿನ ಕೆಲಸ ಪ್ರಾರಂಭಿಸಿ ಮಧ್ಯೆ ವಿರಾಮದ ಸಲುವಾಗಿ ನಮ್ಮ ಕ್ಯಾಂಟಿನಿಗೆ ಟೀ ಕುಡಿಯಲು ಹೋದಾಗ ಅಲ್ಲಿ ಒಂದು ಪುಟ್ಟ ಪಕ್ಷಿ ಹಾರಾಡಿದಂತಾಯಿತು. ಸಂಪೂರ್ಣವಾಗಿ ಕಿಟಕಿಗಳನ್ನು ಮುಚ್ಚಿರುವ ಜಾಗದಲ್ಲಿ ಇದ್ಯಾವ ಹಕ್ಕಿ ಬಂದಿತೆಂದು ಗಮನವಿಟ್ಟು ನೋಡಿದಾಗ ಅದು ಹಿಂದೆ ನಾನು ಸಾಕಿದ್ದ "ಮುನಿಯ" ಎಂಬ ಹಕ್ಕಿ ಎಂದು ತಿಳಿಯಿತು. ಪಾಪ... ಅದು ಹೇಗೋ ದಾರಿ ತಪ್ಪಿ ಕ್ಯಾಂಟಿನಿಗೆ ಬಂದುಬಿಟ್ಟಿತ್ತು. ಹವಾನಿಯಂತ್ರಿತವಾದ ನಮ್ಮ ಕಾರ್ಯಾಲಯದಲ್ಲಿ ಯಾವುದೇ ಕಿಟಕಿಯನ್ನು ತೆರೆದಿಡುವ ಹಾಗಿಲ್ಲ, ದಾರಿ ತಪ್ಪಿ ಒಳಗೆ ಬಂದಿರುವ ಇದನ್ನು ಮತ್ತೆ ಹೊರಗೆ ಕಳಿಸುವುದು ಹೇಗೆಂದು ನನಗೆ ತಿಳಿಯಲಿಲ್ಲ. ಆ ಪಕ್ಷಿಯೋ ಅಪಾರ ಜನ ಜಂಗುಳಿಯನ್ನು ಕಂಡು ಬೆದರಿ ಅತ್ತಿಂದಿತ್ತ ಇತ್ತಿಂದತ್ತ ಹಾರಾಡುತ್ತಾ ತನ್ನಲ್ಲಿದ್ದ ಶಕ್ತಿಯನ್ನ ಕಳೆದುಕೊಳ್ಳುತ್ತಲಿತ್ತು. ಅದನ್ನು ಕಂಡು ಹಾಗೇ ಏನೂಮಾಡಲಾಗದೇ ಮರಳಿ ನನ್ನ ಜಾಗಕ್ಕೆ ಬಂದೆ.

ಕೆಲಸದ ಒತ್ತಡದಲ್ಲೂ ನನಗೆ ಅದರದೇ ಚಿಂತೆ... ಮತ್ತೊಂಮ್ಮೆ ನಾನು ಹೊರಬಂದಾಗ ಅದೇ ಹಕ್ಕಿ ನಮ್ಮ ಕ್ಯಾಂಟಿನಿನಿಂದ ಹೊರಬಂದು ನಮ್ಮ ಕಾರ್ಯಾಲಯದ ಆವರಣದಲ್ಲಿ ಹಾರಾಡುತ್ತಾ ಹೊರ ಹೋಗುವ ದಾರಿ ಹುಡುಕುತ್ತಿತ್ತು. ನಾನು ಕೆಲಸ ಮಾಡುವುದು ೬ನೇ ಅಂತಸ್ಥಿನಲ್ಲಿ. ಅದೂ ಪೂರ್ಣವಾಗಿ ಗಾಜಿನಿಂದಾವ್ರುತವಾದ ಕಟ್ಟಡ. ಇನ್ನು ಅದಕ್ಕೆ ಹೊರ ಹೋಗುವ ದಾರಿಯಾದರೂ ಹೇಗೆ ಸಿಗಬೇಕು... ನಾನು ಅದನ್ನು ಹಿಡಿದು ಹೊರಬಿಡಲು ನನ್ನ ಶಕ್ತಿಮೀರಿದ ಪ್ರಯತ್ನ ಮಾಡಿ ವಿಫಲನಾಗಿದ್ದೆ. ಅದು ನನ್ನ ಕೈಗೆಟುಕದಂತೆ ಮೇಲೆ ಹೋಗಿ ಕಣ್ಮುಚ್ಚಿ ಕುಳಿತಿತ್ತು.

ದಾರಿಕಾಣದೇ ಕೊನೆಗೆ ಆ ಗಣೇಶನನ್ನು ನೆನೆದು ಆ ಪಕ್ಷಿಗೆ ಒಂದು ದಾರಿ ತೋರಿಸೆಂದು ಕೋರಿಕೊಂಡು ಮತ್ತೆ ನನ್ನ ಕಾರ್ಯಸ್ಥಳಕ್ಕೆ ಮರಳಿದೆ. ಪ್ರತೀ ಅರ್ಧ ಘಂಟೆಗೊಮ್ಮೆ ಅದು ಕುಳಿತಿದ್ದ ಸ್ಥಳಕ್ಕೆ ಹೋಗಿ ಅದನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದೆ. ಕಡೆಗೂ ನನ್ನ ಕೋರಿಕೆ ಆ ಗಣೇಶನಿಗೆ ಕೇಳಿಸಿತೇನೋ ಎಂಬಂತೆ ಆ ಹಕ್ಕಿ ನನ್ನ ಕೈಗೆಟುಕುವ ಸ್ಥಳಕ್ಕೆ ಬಂದು ಕಣ್ಮುಚ್ಚಿ ಕುಳಿತಿತ್ತು. ಬಹಳಹೊತ್ತಿನಿಂದಾ ಹಾರಾಡಿ ಸ್ವಲ್ಪ ಬಳಲಿದ್ದರಿಂದ ಮಿಸುಕಾಡದೇ ಕುಳಿತಿದ್ದ ಅದರೆಡೆಗೆ ಸದ್ದು ಮಾಡದೇ ಹೆಜ್ಜೆ ಹಾಕಿದೆ. ಆ ಪಕ್ಷಿಯನ್ನ ನನ್ನೆರಡೂ ಕೈಗಳಿಂದ ಅದಕ್ಕೆ ತೊಂದರೆಯಾಗದಂತೆ ಹಿಡಿದು ನಮ್ಮ ಕಟ್ಟಡದಿಂದ ಹೊರಬಂದು ಅದನ್ನು ಮತ್ತೆ ನಿಸರ್ಗದ ಮಡಿಲಿಗೆ ಬಿಟ್ಟೆ. ಬದುಕಿದೆಯಾ ಬಡಜೀವವೇ ಎಂಬಂತೆ ತನ್ನೆ ರೆಕ್ಕೆಗಳನ್ನು ಚಾಚುತ್ತಾ ಅದು ಹತ್ತಿರವಿದ್ದ ಒಂದು ಮರದ ಮೇಲೆ ಹಾರಿ ಕುಳಿತಿತು. :-D

ಕೆಲವು ತಿಂಗಳ ಹಿಂದೆ ಒಂದು ಪುಟ್ಟ ಅಳಿಲಿನ ಮರಿಯನ್ನ ಕಾಪಾಡಲು ಪ್ರಯತ್ನ ಪಟ್ಟು ಅದು ವಿಫಲವಾಗಿತ್ತು :-( , ಆದರೆ ಇಂದು ಆ ಪುಟ್ಟಜೀವವನ್ನ ಕಾಪಾಡಿದ ಸಂತಸದಿಂದ ಮರಳಿ ನನ್ನ ಕೆಲಸದೆಡೆಗೆ ಮರಳಿದೆ :-) . ಮೇಲೆ ಲಗತ್ತಿಸಿರುವ ಚಿತ್ರವನ್ನ ಗೂಗಲ್ಲಿನಿಂದ ಪಡೆದದ್ದು.

Monday, July 20, 2009

RJಗಳೊಡನೆ ಒಂದು ಸಂಜೆ

ಪ್ರತೀದಿನ ಬೆಳ್ಳಂಬೆಳಿಗ್ಗೆ ಎದ್ದು ಚುಮು ಚುಮು ಮುತ್ತಿಡುವ ಚಳಿಯಲ್ಲಿ ರೇಡಿಯೋ ಸ್ಟೇಷನ್ನಿಗೆ ಬಂದು ಸರಿಯಾಗಿ 7ಘಂಟೆಗೆ Very Goooooooood Morning ಅಂತ ಫುಲ್ಲ್ ಜೋಷಿನಲ್ಲಿ ಎಲ್ಲರ ದಿನ ಪ್ರಾರಂಭಿಸುವ RJ Pradeepa ನ ಕಾರ್ಯಕ್ರಮವನ್ನ ಪ್ರತೀದಿನ ಕೇಳುವ ಕೇಳುಗ ನಾನು. ಪ್ರದೀಪ ಪ್ರತಿ ದಿನ ಮಳೆಯಿರಲಿ ಮಂಜಿರಲಿ ರೇಡಿಯೋ ಸ್ಟೇಷನ್ನಿಗೆ ಬಂದು 7:15ಕ್ಕೆ ಯಾರಿಗಾದರೂ ಕೋಳಿ ಕೂಗಿಸಿ ತರಲೆ ಮಾಡಿ ಸದಾ ಖುಷಿಯಿಂದ ಚಟಪಟನೆ ಮಾತನಾಡುತ್ತಾ ಇರುವ RJ ಪ್ರದೀಪನ ಕಾರ್ಯಕ್ರಮ Whatte fun Morning. ಆ ಕಾರ್ಯಕ್ರಮವನ್ನ ಕೇಳುತ್ತಲೇ ನಾನು ಆಫೀಸಿಗೆ ರೆಡಿಯಾಗುವುದು. ಸಮಯ ಸಿಕ್ಕಾಗೆಲ್ಲಾ ಪ್ರದೀಪನಿಗೆ ಕಾಲ್ ಮಾಡಿ ಅವರೊಡನೆ ಮಾತನಾಡ್ತಾ ಗಡಿಬಿಡಿಯಲ್ಲಿ ಆಫೀಸಿಗೆ ಹೊರಡುತ್ತೇನೆ.

Sardaar ಗಳಿಗೆ ಗುಂಡ ಅನ್ನುವ ಹೊಸಾ ನಾಮಕರಣ ಮಾಡಿ ಯಾವುದೇ Sardaar ಗಳಿಗೆ ಬೇಸರವಾಗದಂತೆ ಪ್ರತೀದಿನ ಒಂದೊಂದು ನಗೆಚಟಾಕಿಯನ್ನ ಹಾರಿಸುತ್ತಾ, ನಮ್ಮ ಬೆಂಗಳೂರಿನ ಸುತ್ತ ಮುತ್ತಲ ಆಗು ಹೋಗುಗಳಬಗ್ಗೆ ಎಲ್ಲರಿಗೂ Update ಕೊಡುತ್ತಾ ಎಲ್ಲರೊಡನೆ ಸೌಜನ್ಯದಿಂದ ಮಾತನಾಡುತ್ತಾ ಇರುವ ಪ್ರದೀಪನನ್ನ ನಾನು ನೋಡಿಯೇ ಇರಲಿಲ್ಲ. ಆದರೂ ಅವರು ಆಯ್ಕೆಮಾಡಿ ಹಾಕುವ ಹಾಡುಗಳನ್ನ ಕೇಳುತ್ತಾ, ಅವರ ಸಂಭಾಷಣೆಯ ರೀತಿಯನ್ನು ಕೇಳುತ್ತಾ ಅವರ ಅಭಿಮಾನಿಯಾದೆ. ಕೇಳುಗರನ್ನ ತನ್ನತ್ತ ಸೆಳೆಯುವಲ್ಲಿ RadioCity ಯಶಸ್ವಿಯಾಗಿದೆಯೆಂದರೆ ಅದು ಇಂತಹಾ RJ ಗಳಿಂದಲೇ. ಪ್ರತಿದಿನ ಜನರ ಪ್ರತಿನಿಧಿಯಾಗಿ ಬರುವ Character(ಮಣಿ) ಮತ್ತು ಪ್ರದೀಪನ ಸಂಭಾಷಣೆ ಸಕತ್ ಮಜ ಕೊಡತ್ತೆ.

ಹೀಗೇ ಒಮ್ಮೆ RadioCity ಯವರು ಪ್ರಾರಂಭಿಸಿದ Musicನ ಕಿಲಾಡಿಗಳಲ್ಲಿ ನಾನು ಭಾಗವಹಿಸಿ ಸರಿಸುಮಾರು 600 to 700 ಸಲ ಪ್ರದೀಪನಿಗೆ Vote ಮಾಡಿದ್ದೆ. ಕಾರಣ ಪ್ರದೀಪನ ಕಾರ್ಯಕ್ರಮ ಅಷ್ಟು ಹಿಡಿಸಿಬಿಟ್ಟಿತ್ತು. ಅದರ ನಡುವೇ ಬುಧವಾರ RadioCityಗೆ call ಮಾಡಿದ್ದಾಗ ಪ್ರದೀಪ ನನಗೆ ಅವರ ಕಡೆಯಿಂದ ಒಂದು T-Shirt ಮತ್ತು Mug ಕೊಡ್ತೀನಿ ಅಂತ ಹೇಳಿದ್ರು. ಇದೇ ರೀತಿ ಗುರುವಾರವೂ ಮತ್ತೊಮ್ಮೆ T-Shirt ಮತ್ತು Mug ಗೆಲ್ಲುವ ಅವಕಾಶ ನನಗೆ ದೊರಕಿತ್ತು. ಇದಕ್ಕಾಗಿ 600 to 700 ಸಲ SMS ಕಳಿಸಿದ್ರಿಂದ ಆ ತಿಂಗಳು ಹೊರಲಾರದ ಭಾರ ಹೊರುವ ಹಾಗೆ Vodafoneನವರು ಸರಿಯಾಗಿ Bill ಕಳಿಸಿಕೊಟ್ಟಿದ್ದರು.



ಶನಿವಾರ ಗರುಡಾ ಮಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ Musicನ ಕಿಲಾಡಿಯ Result ಹೊರಬರತ್ತೆ, ಅಲ್ಲೇ ನಿಮಗೆ ನಿಮ್ಮ ಬಹುಮಾನ ಅಂದರೆ T-Shirt ಮತ್ತು Mugನ ಕೊಡ್ತಾರೆ, ಸಂಜೆ ಸರಿಯಾಗಿ 5 ಘಂಟೆಗೆ ಬಂದ್ಬಿಡಿ ಅಂತ RadioCity office ನ ಸಿಬ್ಬಂದಿ ಫೋನ್ ಮಾಡಿದ್ರು. ಶನಿವಾರ ರಜೆ ಇದ್ದರೂ ಆಫೀಸಿನಲ್ಲಿ ಇದ್ದ ಸ್ವಲ್ಪ ಕೆಲಸವನ್ನ ಮುಗಿಸಿ ಗರುಡಾ ಮಾಲ್ Address ಮತ್ತು ದಾರಿಯನ್ನು ಕೇಳ್ಕೊಂಡು ಅಂತೂ ಇಂತೂ ತಲುಪಿದೆ. ಅಲ್ಲಿ ಆಗತಾನೆ ವೇದಿಕೆ ಸಜ್ಜಾಗುತ್ತಿತ್ತು. ದೊಡ್ಡದಾಗಿ ಪ್ರದೀಪನ ಮತ್ತು ವಿನಾಯಕ ಜೋಷಿಯ Photo ಹಾಕಿದ್ರು. ಯಾವಾಗ Programe ಶುರುಆಗೋದು ಅಂತ ಕೇಳಿದ್ದಕ್ಕೆ ಇನ್ನೇನು ಆಗತ್ತೆ, ಇಬ್ಬರೂ RJಗಳು ಬರ್ತಾಇದಾರೆ ಅನ್ನೋ ಸಾಲುಗಳು 5 ಘಂಟೆಗೆ ಶುರುವಾದದ್ದು ಪ್ರತೀ ಅರ್ಧ ಘಂಟೆಗೆ ಪ್ರತಿದ್ವನಿಸುತ್ತಿತ್ತು. ಅಂತೂ ಇಂತೂ ಇಬ್ಬರೂ RJಗಳು Film Actor ತರುಣ್ ಜೊತೆಯಲ್ಲಿ ವೇದಿಕೆಗೆ ಬಂದೇಬಿಟ್ರು. ಅಲ್ಲಿ ಸ್ವಲ್ಪ ಕೂಗಾಟ ಕಿರುಚಾಟ ಎಲ್ಲ ಮಜವಾಗಿತ್ತು.

ಮಜ ಬೇಸರವಾಗಿ ಮಾರ್ಪಾಡಾಗಿದ್ದು ಕಾರ್ಯಕ್ರಮದ ಅಂತ್ಯದಲ್ಲಿ T-Shirt ಮತ್ತು Mugನ ಹಂಚೋವಾಗ. ಸತತವಾಗಿ ಎರಡುದಿನ ಗೆದ್ದಿದ್ದರೂ ನನಗೆ ಒಂದೂ T-Shirt ಮತ್ತುMug ಸಿಕ್ಕಲಿಲ್ಲ. ಕೆಲವರಿಗೆ ಮಾತ್ರ ಅದು ಸಿಕ್ಕರೂ ನನಗೆ ಮತ್ತೆ ಕೆಲವರಿಗೆ ಸಿಕ್ಕಲಿಲ್ಲ. ಅಲ್ಲಿಂದ ಬಂದದಕ್ಕೆ ಕೇವಲ RJ ಗಳನ್ನ ನೋಡಿ ಅದರಲ್ಲೇ ಸಮಾಧಾನ ಪಟ್ಟುಕೊಂಡು ವಾಪಾಸ್ ಬರೋಣ ಅಂದುಕೊಂಡೆ. ಆದರೆ RadioCity ಗೆ ಸಂಭಂದಿಸಿದ ಒಬ್ಬರು (ಮಧು) ಎದುರಿಗೆ ಬರುತ್ತಿದ್ದನ್ನ ನೋಡಿ ಅವರಿಗೆ ನಡೆದ ವಿಷಯ ತಿಳಿಸಿ ಸೋಮವಾರ ಅವರ Office ನಿಂದಲೇ ಅದನ್ನ ಪಡೆದುಕೊಳ್ಳುವ ಭರವಸೆ ಮಧುವಿನಿಂದ ಪಡೆದು ಮನೆಯತ್ತ ಪಯಣ ಬೆಳೆಸಿದೆ. ಅಂದಿನ ದಿನ "Radio City" Musicನ ಕಿಲಾಡಿಯಾಗಿ ಹೊರಹೊಮ್ಮಿತ್ತು.



ಶನಿವಾರದ ಆ ಘಟನೆಯ ನಂತರ ಮತ್ತೆ ಸೋಮವಾರ RadioCityಯ Officeಗೆ ಹೋಗಿ ನನ್ನ ಆ T-Shirt ಮತ್ತು Mugಅನ್ನ ತಂದೆ. ಇದಾದ ನಂತರ ಗುರುವಾರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಗ ನನ್ನ ಮೊಬೈಲ್ ರಿಂಗಣಿಸಿತು, ಯಾರಿರಬಹುದು ಎಂದು ನೋಡಿದಾಗ RadioCity ಆಫೀಸಿನ ನಂಬರ್ ಕಂಡಿತು. ಕಳೆದವಾರದ ಹಿಂದೆಯಷ್ಟೇ ಮ್ಯೂಸಿಕ್ ನ ಕಿಲಾಡಿಗಳು ಸ್ಪರ್ಧೆ ನಡ್ದಿದ್ದರಿಂದ ಆ ವಿಚಾರವಾಗೇನಾದರೂ ಈ ಕರೆ ಇರಬಹುದು ಅಂತ Phone call ರಿಸೀವ್ ಮಾಡ್ದಾಗ ಅತ್ತಕಡೆಯಿಂದ RJ Pradeepa ನ ಧ್ವನಿ ಕೇಳಿಸಿತು. ಶುಕ್ರವಾರ ಸಂಜೆ ಒಟ್ಟಿಗೇ Coffee ಕುಡ್ಯೋಣ ನಮ್ Officeಗೆ ಬರ್ತೀರಾ ?? ಅಂತ ಪ್ರದೀಪ ಕೇಳಿದಾಗ "ಖಂಡಿತಾ ಬಂದೇ ಬರ್ತೀನಿ" ಅಂತ ಖುಷಿಯಿಂದ ಒಪ್ಪಿಕೊಂಡೆ.

ಹೇಗಿದ್ದರೂ ವಾರಾಂತ್ಯವಾದ್ದರಿಂದ ಕೆಲಸವನ್ನ ಬೇಗ ಮುಗಿಸಿ ಸರಿಯಾಗಿ 6 ಘಂಟೆಗೆ ಸುರಿವ ಮಳೆಯಲ್ಲಿ RadioCity Office ಗೆ ಬಂದೆ. ಅಲ್ಲಿ ನನ್ನಂತೆಯೇ ಆಮಂತ್ರಿತ ಕೆಲವು ಕೇಳುಗರಿದ್ದರು. ಗರುಡಾ ಮಾಲಿನಲ್ಲಿ ಪ್ರದೀಪನನ್ನ ಗುರುತಿಸಿದ್ದರಿಂದ ಈಸಲ ಪ್ರಯಾಸಪಡದೇ ಗುರುತಿಸಿದೆ. ಆತ್ಮೀಯವಾಗಿ ಬರಮಾಡಿಕೊಂಡ ಪ್ರದೀಪ ಅಲ್ಲಿ ಬಂದಿದ್ದ ಕೇಳುಗರಿಗೆ ನನ್ನ ಕಿರುಪರಿಚಯ ಮಾಡಿಕೊಟ್ಟರು. ಮಳೆಯಲ್ಲಿ ನೆನೆದುಬಂದಿದ್ದ ನನಗೆ ಬಿಸಿ ಬಿಸಿ Tea ಕೊಟ್ಟರು. ಆತ್ಮೀಯವಾಗಿ ಹರಟಿದರು. ಆ ನಡುವೆ ಸ್ವಲ್ಪ Flash back ಘಟನೆಗಳನ್ನ ನೆನೆಯುತ್ತಾ ಹರಟೆ ಹೊಡೆಯುತ್ತಾ ಇರುವಾಗ ಅಲ್ಲಿಗೆ RJ Sweet heart ಸೌಜನ್ಯ ಬಂದರು. ಅವರೊಡನೆ ಮಾತನಾಡಿದ ನಂತರ Loveguru ಖ್ಯಾತಿಯ RJ ರಾಜೇಶ್ ಪ್ರದೀಪನೊಡಗೂಡಿ ಬಂದರು. ಎಲ್ಲಾ RJ ಗಳನ್ನ ನೋಡಿ ಖುಷಿಯಾಯ್ತು. ಎಲ್ಲರೂ Tea ಕುಡಿದ ನಂತರ ಪ್ರದೀಪ ತಮ್ಮ Radio station ತೊರಿಸಲು ನಮ್ಮನ್ನ ತಮ್ಮೊಡನೆ ಕರೆದೊಯ್ದರು. RJ ವಿನಾಯಕ ಜೋಷಿ ತಮ್ಮ City ಮಾತು ಕಾರ್ಯಕ್ರಮ ನಡೆಸಿಕೊಡುತ್ತಲಿದ್ದರು. ಮೊಟ್ಟಮೊದಲಿಗೆ ಒಂದು Radio Station ನ ನೋಡಿದೆ.



ಅಲ್ಲಿಂದ ಪ್ರದೀಪ, ರಾಜೇಶ್, ಮತ್ತು ವಿನಾಯಕ ಜೋಷಿಯೊಡನೆ ನಮ್ಮ Mobileನಲ್ಲಿ Photo ಕ್ಲಿಕ್ಕಿಸಿ ಪ್ರದೀಪನಿಗೆ ಈ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ವಂದನೆ ಸಲ್ಲಿಸುತ್ತಾ ಅದೇ ಜಿನುಗುತ್ತಿದ್ದ ಮಳೆಯಲ್ಲಿ ನೆನೆದುಕೊಂಡು Radio city ಯ ಮಧುರ ಹಾಡುಗಳನ್ನ ಕೇಳಿಕೊಂಡು ನನ್ನ ಗೂಡು ಸೇರಿಕೊಂಡೆ.

ಈ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ Happy manಗೆ ವಂದನೆಗಳು :) ಮತ್ತೊಮ್ಮೆ "ಒಟ್ಟಿಗೇ ಕಾಫೀ ಕುಡಿಯೋಣ, ನಮ್ಮ ಆಫೀಸಿಗೆ ಬರ್ತೀರಾ?" ಅಂತ ನೀವು ಕರೆಮಾಡ್ತೀರ ಅಂತ ಕಾಯ್ತಾ ಇದೀನಿ.


ಕೊನೆಯಲ್ಲಿ ನಾನು ಹೇಳೋದೇನು ಅಂದ್ರೆ ನೀವು RJ ಅಲ್ಲ, ಬದಲಾಗಿ RG ಅಂದರೆ....

ರೇಡಿಯೋ ಜಾಕಿ ಅಲ್ಲ, ರೇಡಿಯೋ ಗೆಳೆಯ.... :-)

Monday, February 16, 2009

ಫೆಬ್ರವರಿ ೧೪ ೨೦೦೯

ಫೆಬ್ರವರಿ ೧೪ ೨೦೦೯

ಇವತ್ತಿನ ದಿನವನ್ನ ನಾನು ಮರಿಯೋದಕ್ಕೆ ಆಗೊದಿಲ್ಲ. ಇವತ್ತು ಪ್ರೇಮಿಗಳ ದಿನ ಅನ್ನೋ ಕಾರಣದಿಂದ ಅಲ್ಲ, ಇವತ್ತು ನನ್ನ ಜನ್ಮದಿನ... ನಾನು ನನ್ನ ಪ್ರತೀ ಜನ್ಮದಿನದಂದು ಯಾರೊಬ್ಬರೊಂದಿಗಾದರೂ ಇರ್ತಾ ಇದ್ದೆ. ಆದರೆ ಈ ಸಲ ನನ್ನ ಬಾಡಿಗೆ ಮನೆಯಲ್ಲಿ ನಾನು ಮತ್ತೆ ನನ್ನ ಎಫ್ ಎಂ ರೇಡಿಯೋ ಮಾತ್ರ ಇದ್ದದ್ದು. ಯಾಕೋ ಮನಸ್ಸಿಗೆ ಬೇಸರ ಆಗ್ತಾ ಇತ್ತು. ಕಳೆದವರ್ಷವಷ್ಟೇ ನನ್ನ ಅಪ್ಪನ್ನ ಕಳ್ಕೊಂಡಿದ್ದ ನಾನು ಈ ಬಾರೀನೂ ಅವರನ್ನ, ಮತ್ತೆ ಅಮ್ಮ, ಅಕ್ಕ, ಅನ್ನನ್ನ ಮಿಸ್ ಮಾಡ್ಕೋತಾ ಇದೀನಿ. ಅಪ್ಪ ಇದ್ದಾಗ ಮೈಸೂರಿನ ನಮ್ಮ ಮನೆಗೆ ಹೋಗಿ ಮನೆಯವರೆಲ್ಲರ ಜೊತೆ ಸ್ವಲ್ಪ ಹರಟೆ ಹೊಡೆದು ಬೇಕರಿ ತಿನಿಸುಗಳನ್ನ ತರಿಸಿಕೊಂಡು ಸಣ್ಣದಾಗಿ ಪಾರ್ಟಿ ಮಾಡೋದು, ಅದರಲ್ಲೇ ಖುಷಿ ಕಾಣೋದು, ಅಣ್ಣನ ತಲೆ ತಿಂದು ಯಾವುದಾದರೂ ಸಿನಿಮಾಕೆ ಹೋಗೋದು, ಸಂಜೆ ಪಾನೀಪೂರಿ ತಿನ್ನೋದು ಮನೆಗೆ ಬಂದು ಊಟ ಮಾಡಲ್ಲ ಅಂತ ಅಮ್ಮನಹತ್ತಿರ ಬೈಸ್ಕೊಳೋದು. :)

ಈ ಸಲ ಯಾರಿದ್ದಾರೆ... ಹಾಗೇ ಬೇಸರದಲ್ಲಿ ರಾತ್ರಿ ಕಳಿತಾ ಇದ್ದಾಗ ಟ್ರಿಣ್ ಟ್ರಿಣ್ ಅಂತ ನನ್ನ ಮೊಬೈಲ್ ಮೆಸ್ಸೇಜ್ ಬಂತು ಅಂತ ಹೇಳ್ತು. ಹುಟ್ಟುಹಬ್ಬನ್ನ ಆಫೀಸಿದ್ದಿದ್ದ್ರೆ ನನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಆಚರಿಸ್ತಾ ಇದ್ದೆ. ಆದ್ರೆ ಇವತ್ತು ರಜಾದಿನ ಬೇರೆ, ಹೇಳೀ ಕೇಳೀ ಎರಡನೇ ಶನಿವಾರ. ಹಾಗಾಗಿ ಮನೆಯಲ್ಲೇ ಇದ್ದ ನಾನು ಬೆಳಗಿನ ಯೋಗಾ ಕ್ಲಾಸಿಗೆ ಹೋಗುವ ಬಗ್ಗೆ ಯೋಚ್ನೆ ಮಾಡ್ತಾ ಮೆಸೇಜ್ ನೋಡಿದೆ. ಘಂಟೆ ಸರಿ ಸುಮಾರು ೪.೧೫ ಅನ್ಸತ್ತೆ, ನನ್ನ ಅಣ್ಣ ಮೆಸ್ಸೇಜ್ ಮಾಡಿದ್ದ. "ಇಷ್ಟು ಹೊತ್ತಿಗೆ ಬಹುಷಃ ಅಮ್ಮನಿಗೆ ಹೊಟ್ಟೇ ನೋವ್ತಾ ಇತ್ತು ಅಂತ ಕಾಣತ್ತೆ" ಅನ್ನೋ ಸಂದೇಶ ಇತ್ತು. ನಾನು ಏನು ಅಂತ ಯೋಚ್ನೆ ಮಾಡಿದ್ಮೇಲೆ ಗೊತ್ತಗಿದ್ದು... ಇದು ನಾನು ಹುಟ್ಟಿದಾಗ ಅಂದರೆ __ ವರ್ಷಗಳ ಹಿಂದಿನ ಮಾತನ್ನ ಅಣ್ಣ ಹೇಳ್ತಾ ಇದಾನೆ ಅಂತ. ಖುಷಿ ಆಯ್ತು :) ಮೆಸ್ಸೇಜ್ ಮುಂದುವರೆದಿತ್ತು: "ಅಪ್ಪ ನನ್ನ ಪಕ್ಕದಿಂದ ಎದ್ದು ಅಮ್ಮನ ಮಾತಾಡಿಸೊಕೆ ಹೋಗಿದ್ರು, ಅಮ್ಮ ಅಪ್ಪನಿಗೆ First shift ಇದ್ದದ್ದರಿಂದ ತಿಂಡಿಮಾಡಲು ಹಿಡಿದಿದ್ದ ಪಾತ್ರೆನ ದಾರಿಯಲ್ಲೇ ಇಟ್ಟು ಏದುಸಿರು ಬಿಡ್ತಾ ಇದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ ನಾನು ಮಲಗಿಬಿಟ್ಟೆ"

ಇಷ್ಟಕ್ಕೆ ನಾನು __ ವರ್ಷ ಹಿಂದಕ್ಕೆ ಹೋಗಿಬಿಟ್ಟಿದ್ದೆ :) ನನ್ನ ಅಣ್ಣನ ಬರಹ ಹಾಗಿತ್ತು. ಎಲ್ಲಾ ನನ್ನ ಕಣ್ಮುಂದೇ ನಡಿತಾಇದ್ಯೇನೋ ಅನ್ನೋ ಹಾಗೆ. ಅಷ್ಟರಲ್ಲಿ ಮತ್ತೊಮ್ಮೆ ಟ್ರಿಣ್ ಟ್ರಿಣ್.... ಯಾರದ್ದೋ ಶುಭಾಷಯ ಅಂತ ತಿಳ್ಕೊಂಡು ಮೆಸ್ಸೇಜ್ ನೋಡಿದೆ, ಮತ್ತೆ ನನ್ನ ಅಣ್ಣನದೇ ಮೆಸ್ಸೇಜ್. ಅಣ್ಣ __ ವರ್ಷಹಿಂದಿನ ಘಟನೆಯನ್ನ ನನ್ನ ಮುಂದೆ ಎಳೆ ಎಳೆಯಾಗಿ ಬಿಡಿಸಿಡ್ತಾ ಇದ್ದ. "ಸುಮಾರು ೭ ಘಂಟೆ ಇರಬಹುದು, ಬೀಗ ತೆಕ್ಕೊಂಡು ಅಪ್ಪ ಒಳಗೆ ಬಂದ್ರು. ಬಂದವರೇ ನನ್ನನ್ನ ಇವತ್ತು ನೀನು ಸ್ಕೂಲಿಗೆ ಹೋಗಬೇಡ ಅಂದ್ರು. ರಾತ್ರಿ ಕೂತ್ಕೊಂಡು ಬರೆದಿದ್ದ ಹೋಂವರ್ಕ್ ಮುದುಕೀ ಜಯ ಮಿಸ್ಸಿಗೆ ತೋರಿಸೋಕೆ ಆಗೊದಿಲ್ವಲ್ಲ ಅಂತ ಬೇಜಾರಾಯ್ತು" (ಅಣ್ಣನ ಸ್ಕೂಲಿನಲ್ಲಿ ೩ ಜನ ಜಯ ಅನ್ನೋ ಟೀಚರ್ ಇದ್ದಿದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡಹೆಸರು)

ನಾನು ಅಣ್ಣನ ಮೆಸೇಜ್ ಗಳನ್ನ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತಸಪಡ್ತಾ ಇದ್ದೆ. ಮುಂದೇನಾಯ್ತು... ಹೇಳು... ನನು ಅಣ್ಣನಿಗೆ ಪ್ರತ್ಯುತ್ತರ ಕೊಟ್ಟೆ. ಅಣ್ಣ ಮುಂದುವರಿಸಿದ್ದ: "ನನಗಿನ್ನೂ ನೆನಪಿದೆ ಆವತ್ತು ಗುಲಾಬಿ ಬಣ್ಣದ ಟೀ ಷರ್ಟ್ ಹಾಕ್ಕೊಂಡಿದ್ದೆ, ಆವತ್ತು ಫಸ್ಟ್ ಟೈಮ್ ಅಷ್ಟು ಬೆಳಿಗ್ಗೆ ೫ ನಿಮಿಷ ಬಾಗಿಲ ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದೆ, ಆವತ್ತು ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮನೆ ಯಜಮಾನನ ಹೆಂಡತಿ 'ನಿನಗೊಬ್ಬ ತಮ್ಮ ಹುಟ್ಟಿದಾನೆ ಕಣೋ' ಅಂದ್ರು. ಆಗ ನನ್ಗೆ ವಿವರಿಸಲಾಗದ ಅವ್ಯಕ್ತ ಭಾವನೆಗಳ ಕ್ಷಣ. ಏನೋ ತರೋದಿಕ್ಕೆ ಅಂತ ಅಪ್ಪ ಹೊರಗಡೆ ಹೋಗಿದ್ರು. ಅವರು ಬರೋ ದಾರೀನೇ ಕಾಯ್ತಾಇದ್ದೆ"

ಅಣ್ಣ ನನಗೆ ಈ ರೀತಿ ಮೆಸ್ಸೇಜಿನಲ್ಲಿ __ ವರ್ಷದ ಹಿಂದಿನ ಘಟನೆಯನ್ನ ಹೇಳ್ತಾಇದ್ರೆ ನಾನೇ ಅಲ್ಲಿದ್ದು ಎಲ್ಲದನ್ನ ನೋಡ್ತಾ ಇದೀನೇನೋ ಅನ್ನೋರೀತಿ ಖುಷಿ ಆಗ್ತಾ ಇತ್ತು. ಮತ್ತೊಮ್ಮೆ ಟ್ರಿನ್ ಟ್ರಿನ್ ಅಂತ ರಿಂಗಣಿಸಿದ ನನ್ನ ಮೊಬೈಲ್ ನನ್ನ ಹುಟ್ಟಿದ ಸಂಭ್ರಮದ ಕಥೆ ಹೇಳಲು ಬೆಳಕ ಚೆಲ್ಲಿ ನಕ್ಕಿತ್ತು. "ಅಪ್ಪ ನನ್ನನ್ನ ಸೈಕಲ್ಲಿನಲ್ಲಿ ಕೂರಿಸ್ಕೊಂಡು ಕಮಲಾರಾಮನ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಅಮ್ಮ ಮಲಗಿದ್ರು. ನನ್ನನ ನೋಡಿ ನಕ್ಕರು. ಆಯ ಒಳಗಿನಿಂದ ಬಟ್ಟೆಯಲ್ಲಿ ಸುತ್ತಿದ ನಿನ್ನನ್ನ ಸಂಭ್ರಮದಿಂದ ತಂದು ತೋರಿಸಿ ನಿನ್ನ ತಮ್ಮನ್ನ ನೋಡಪ್ಪಾ ಅಂದ್ರು". ನಿಜ ಅಲ್ವ... ಆ ಪುಟ್ಟ ಮನಸ್ಸಿನ ಕಂದನಿಗೆ ತನ್ನ ತಮ್ಮನನ್ನ ನೋಡಲು ಎಷ್ಟು ಕಾತರ ಇದ್ದಿರಬಹುದು, ಮನಸ್ಸಲ್ಲಿ ಏನೇನು ಭಾವನೆಗಳು ಮೂಡಿರಬಹುದು... ಆ ಭಾವನೆಗಳು ನನ್ನ ಅಣ್ಣನ ಮತ್ತೊಂದು ಮೆಸ್ಸೇಜಿನಲ್ಲಿ ಮುಂದುವರೆದಿತ್ತು. "ನಿನ್ನ ಕಣ್ಣುಮುಚ್ಚಿದ ಮುಖ, ಆ ಪುಟ್ಟ ಕೈ ಬೆರಳುಗಳು, ಮಧ್ಯ ಮಧ್ಯ ಹೊರಡುತ್ತಿದ್ದ ಉವ್ವ್ಯಾ ಉವ್ವ್ಯಾ ರಾಗ... ನನಗೆ ಅರಿವಿಲ್ಲದಂತೆ ನಿನ್ನನ್ನು ಮುಟ್ಟಲು ನಿನ್ನ ಕಡೆ ಹೆಜ್ಜೆ ಹಾಕಿದ್ದೆ. ಮುಟ್ಟಬಾರದು !!! ದೂರ ನಿಂತ್ಕೊ !! ಅಮ್ಮ ಅಲ್ಲಿಂದ್ಲೇ ಗದರಿದ್ರು"

ಇಲ್ಲಿಗೆ ನನ್ನ ಹುಟ್ಟಿದ ಘಳಿಗೆಯ ಸಂಭ್ರಮವನ್ನ ಅಣ್ಣ ನನ್ನ ಮುಂದಿಟ್ಟಿದ್ದ. ಇದಕ್ಕಿಂತಾ ಒಂದು ಒಳ್ಳೇ ಉಡುಗೊರೆ ಬೇರೆ ಏನೂ ಇರಲಿಕ್ಕಿಲ್ಲ. ಆ ಮೆಸ್ಸೇಜನ್ನ ಓದಿ ಸಂಭ್ರಮಿಸೋದ್ರಲ್ಲಿ ಅಣ್ಣ ನಿದ್ದೆ ಬಿಟ್ಟು ನನಗೆ ಮೆಸ್ಸೇಜ್ ಮಾಡ್ತಾಇರೋದು ನನ್ನ ಗಮನಕ್ಕೆ ಬಾರದೇ ಹೋಗಿತ್ತು. ಸಮಯ ಸುಮಾರು ೫.೧೫ ಆಗಿತ್ತು. ಅಣ್ಣ ತನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿದ್ದ, ರಾತ್ರಿಯೆಲ್ಲಾ ಅವನ ವಿಧ್ಯಾರ್ಥಿಗಳ ಉತ್ತರಪತ್ರಿಕೆಯನ್ನ ತಿದ್ದುತ್ತಾ ಅದರಮಧ್ಯೆ ನನಗೆ ಮೆಸ್ಸೇಜ್ ಮಾಡ್ತಾ ಇದ್ದ. ಆ ಮೆಸ್ಸೇಜ್ಗಳನ್ನ ಓದಿ ಒಳಗೊಳಗೇ ಸಂತಸಪಡುತ್ತಾ ನಾನೂ ಸ್ನಾನಮಾಡಿಕೊಂಡು ನನ್ನ ಯೋಗಾ ಕ್ಲಾಸಿಗೆ ಹೊರಟೆ. ದಿನಪೂರ್ತಿ ನನ್ನ ಕಣ್ ಮುಂದೆ ನನ್ನ ಹುಟ್ಟಿದ ದೃಷ್ಯಾವಳಿಗಳು ತೇಲಿ ಬರುತ್ತಿದ್ದವು.


ಯೋಗಾ ಕ್ಲಾಸಿನಿಂದ ಮನೆಗೆ ಬಂದೆ. ಅಣ್ಣನ ಮೆಸ್ಸೇಜ್ ಇತ್ತು. "ಬಿಡುವಿದ್ದಾಗ ಕಾಲ್ ಮಾಡು, ನಿನ್ನ ಬಗ್ಗೆ ಒಂದು ಕವನ ಬರ್ದಿದೀನಿ" ಒಂದು ಕ್ಷಣ ಕೂಡಾ ತಡ ಮಾಡದೇ ಅಣ್ಣನಿಗೆ ಕರೆನೀಡಿದೆ. ಅವನು ಬರೆದ ಕವನ ಓದಿದ. ನಾನು ಹುಟ್ಟಿದಾಗಿನಿಂದಾ ನಾನು ಬೆಳೆದುಬಂದ ದಾರಿಯ ಮೈಲಿಗಲ್ಲುಗಳನ್ನು ಗುರುತಿಸಿ ಒಂದು ಸೊಗಸಾದ ಕವನ ಬರೆದಿದ್ದ. ಆ ಕವನವನ್ನ ಕೇಳಿ ನನಗೆ ವ್ಯಕ್ತಪಡಿಸಲಾಗದ ಸಂತಸವಾಗ್ತಾ ಇತ್ತು. :) ನಿಂತಲ್ಲೇ ಮುಗುಳ್ನಕ್ಕೆ, ಅಣ್ಣನನ್ನನ್ನು ಎಷ್ಟು ಇಷ್ಟಾ ಪಡ್ತಾನೆ ಅನ್ನೋದನ್ನ ಕಂಡುಕೊಂಡೆ. ನನ್ನ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟಿದ್ದ ನನ್ನ ಮುದ್ದಿನ ಅಣ್ಣ. ಕಾಲ ಇವತ್ತಿನ ರೀತಿ ನಾಳೆ ಇರೋದಿಲ್ಲ, ಆದರೆ ನಾನು ಆ ಭಗವಂತನನ್ನ ಇದಕ್ಕಿಂತಾ ಚೆನ್ನಾಗಿ ಇರದಿದ್ದರೂ ಪರವಾಗಿಲ್ಲ, ಹೀಗೇ ಮುಂದುವರೀತಾ ಇರ್ಲಿ ನಮ್ಮ ಪ್ರೀತಿ ವಿಶ್ವಾಸ ಅಂತ ಕೋರಿಕೊಂಡೆ.

ಸಾಯಂಕಾಲ ಯೋಗಾ ಕ್ಲಾಸಿನಲ್ಲಿ ನನ್ನ ಜನ್ಮದಿನದ ಆಚರಣೆ ಭಿನ್ನವಾಗಿತ್ತು. ನನ್ನ ತರಗತಿಯ ಗುರುಗಳು ನನಗೇ ತಿಳಿಯದಂತೆ ಒಂದು ಕೇಕ್ ತರಿಸಿದ್ದರು. ಎಲ್ಲರಮುಂದೆ ನಾನು ಆ ಕೇಕನ್ನ ಕತ್ತರಿಸಿದೆ. ಅದು ನನ್ನ ಜೀವನದ ಮೊಟ್ಟ ಮೊದಲ ಕೇಕ್ ಕಟ್ಟಿಂಗ್ :) ಈಗ ಸಮಯ ಸುಮಾರು ರಾತ್ರಿ ೧೨.೩೦ ನನ್ನ ಇಂದಿನ ಜನ್ಮದಿನದ ಆಚರಣೆಯನ್ನ ಮೆಲುಕುಹಾಕುತ್ತಾ ಮಲಗುತ್ತಿದ್ದೇನೆ...