ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Tuesday, June 24, 2008

ಕಾವ್ಯ ಗಂಗೆಯನ್ನರಸುತ್ತಾ...

ಬಹಳದಿನಗಳಾಗಿ ಹೋಯಿತು
ಕಾವ್ಯ ಗಂಗೆಯನ್ನ ಹರಿಬಿಟ್ಟು
ಎಲ್ಲಿ ಹೊರಟಿದೆಯೋ ಅವಳ ಪಯಣ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಮುಂಜಾನೆ ಎದ್ದು ಸೂರ್ಯೋದಯಕ್ಕೆ
ಮುಂಚಿನಸಮಯದಲ್ಲಿ ಜಳಕವಮಾಡಿ
ಜಪ ತಪದಲ್ಲಿ ಲೀನವಾಗುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಪ್ರತಿದನದ ಎಂದೂ ಮುಗಿಯದ
ಪಯಣದಲ್ಲಿ ದಾರಿಯಲ್ಲಿ ಸಿಕ್ಕುವ
ಅಪರಿಚಿತ ಮುಖಗಳಲ್ಲಿ ಅಡಗಿರುವ ಪರಿಚಯವನ್ನು ಹುಡುಕುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಹಕ್ಕಿಗಳ ಇಂಪಾದ್ ಇಂಚರದಿ
ದಿಗಂತದಿ ತೇಲುವ ತಿಳಿ ಮೋಡದ ನಡುವೆ
ಇಣುಕಿ ನೋಡುವ ಭಾಸ್ಕರನ ನೋಡುತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ತಂಪಾದ ತಂಗಾಳಿಯಲ್ಲಿ ತೇಲಿಬರುವ
ನನ್ನವರ ನೆನಪುಗಳ ಮೆಲುಕುಹಾಕುತ್ತಾ
ದಿನದ ದಣಿವನ್ನ ಬೆಳದಿಂಗಳ ಚೆಂದಿರನೊಡನೆ ಕಳೆಯುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

Wednesday, June 11, 2008

"ನೀನಾರಿಗಾದೆಯೋ ಎಲೆ ಮಾನವ"

ನೆನ್ನೆ ಮನೆ ಕೆಲಸ ಮುಗಿಸಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ೫.೦೦ ಘಂಟೆಗೆ ಎಚ್ಚರವಾಗಲಿಲ್ಲ. ನನ್ನ ಮೊಬೈಲಿನಲ್ಲಿ ಮೆಸ್ಸಜ್ ಟೋನ್ ಕೂಗಿ ೫.೨೦ಕ್ಕೆ ನನ್ನ ಎಬ್ಬಿಸಿತ್ತು, ನಾನು ಇದ್ಯಾರು ಇಷ್ಟು ಬೆಳಿಗ್ಗೆ ಬೆಳಿಗ್ಗೆ ನನಗೆ Good morning ವಿಶ್ ಮಾಡ್ತಾಇರೊವ್ರು ಅಂತ ಅರ್ಧಂಭರ್ದ ಕಣ್ಣಿನಲ್ಲೇ ಮೆಸ್ಸೇಜನ್ನ ಓದಿ ಧಡ್ ಅಂತ ಎದ್ದು ಕುಳಿತೆ. ಅದು ನನ್ನ ಸ್ನೇಹಿತನಾದ ಹರೀಶನದು. We might need 4 units of A+ blood for my dad. I might call u if required ಅಂತ ಬಂದಿತ್ತು. ತಕ್ಷಣ ಅವನಿಗೆ ಫೋನ್ ಮಾಡಿ ಏನಯ್ತು ? ಏನು ವಿಚಾರ ಅಂತೆಲ್ಲಾ ಕೇಳಿ ತಿಳ್ಕೊಂಡೆ. ನೆನ್ನೆ ರಾತ್ರಿ ಸುಮಾರು ೧೦.೦೦ ಘಂಟೆಗೆ ಅವರ ತಂದೆಗೆ ಅಪಘಾತವಾಗಿ ಕಾಲಿನ ೨ ಮೂಳೆ ಮುರಿದು, ತಲೆಗೆ ಪೆಟ್ಟುಬಿದ್ದು ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಅನ್ನೋ ವಿಚಾರ ಕೇಳಿ ನನ್ನ ಎದೆ ಧಸಕ್ ಅಂತು. ಕಳೆದ ೫ ತಿಂಗಳ ಹಿಂದೆಯಷ್ಟೇ ನನ್ನ ತಂದೆಯನ್ನ ಕಳೆದುಕೊಂಡ ನಾನು ನನ್ನ ತಂದೆಯನ್ನ ನೆನಪುಮಾಡಿಕೊಂಡೆ.

ನಾನು ಎಲ್ಲಿಗೆ ಬರಬೇಕು ? ಎಷ್ಟು ಹೊತ್ತಿಗೆ ಬರಬೇಕು ಎಂಬ ವಿವರವನ್ನ ಪಡೆದುಕೊಂಡು ನಿತ್ಯಕರ್ಮಗಳನ್ನ ಮುಗಿಸಿ, ನೆನ್ನೆತಾನೆ ಸೀಮೇ ಬದನೆಯ ಸಿಪ್ಪೆ ತೆಗೆದಿಟ್ಟದ್ದರಲ್ಲಿ ಗಡಿಬಿಡಿಯಲ್ಲಿ ಚಟ್ನಿಮಾಡಿಟ್ಟು ಸ್ವಲ್ಪ ಅವಲಕ್ಕಿಯನ್ನ ತಿಂದು ಮನೆಗೆ ಬೀಗ ಹಾಕಿ ಮಣಿಪಾಲ್ ಆಸ್ಪತ್ರೆಯತ್ತ ಧಾವಿಸಿದೆ. ದಾರಿಯಲ್ಲೋ ನೂರಾರು ವಾಹನಗಳು.... ಅದರ ಸವಾರರು ತಮ್ಮದೇ ಲೋಕದಲ್ಲಿ ವಿಹರಿಸುತ್ತಾ, ಯೋಚನೆಯಲ್ಲಿ ಮುಳುಗಿ, ಕಿವಿಗೆ ಮೊಬೈಲನ್ನು ಸಿಕ್ಕಿಸಿಕೊಂಡು ದಾರಿಬಿಡದೇ ಹೋಗುತ್ತಿದ್ದರು. ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತೆರಳಿ ರಕ್ತನೀಡಿ ಒಂದು ಜೀವವನ್ನ ಅಪಾಯದ ಅಂಚಿನಿಂದ ಪಾರುಮಾಡುವುದರಲ್ಲಿ ನೆರವು ನೀಡಬೇಕೆನ್ನುವುದು ನನ್ನ ತವಕ. ಆದರೆ ಆ ಮಹಾಜನಗಳು ನನ್ನ ದುಗುಡವನ್ನ ಎಲ್ಲಿ ತಿಳಿದಾರು. ಹಾಗೂ ಹೀಗೂ ಮಾಡಿ ಏರ್ಪೋರ್‍ಟ್ ರಸ್ತೆಯನ್ನ ತಲುಪಿದ ನನಗೆ ಸ್ವಾಗತಿಸಿದ್ದು ದೋಡ್ಡ ಟ್ರ್‍ಆಫಿಕ್ ಜ್ಯಾಮ್... ಚಕ್ರವ್ಯೂಹದೊಳು ನುಗ್ಗಿದಂತೆ ಅದರ ಮಧ್ಯೆ ಸಿಕ್ಕ ಸಿಕ್ಕ ಸಂದಿಗಳಲ್ಲಿ ನುಗ್ಗಿ ಅಂತೂ ಇಂತೂ ಆಸ್ಪತ್ರೆ ಸೇರಿದೆ.

ಹರೀಶನ ಅಣ್ಣ ಹೇಳಿದಂತೆ ನಾನು ರಕ್ತನಿಧಿಯನ್ನ ಹುಡುಕಿಕೊಂಡು ಹೊರಟೆ. ರಕ್ತನಿಧಿಯಲ್ಲಿ ಸ್ವಲ್ಪ ಹೊತ್ತು ಹರೀಶನೊಂದಿಗೆ ಕುಳಿತಿದ್ದು ಮಾತನಾಡಿದ ನಂತರ ನನ್ನ ರಕ್ತದಾನ ಮಾಡಲಿಕ್ಕೆ ಒಳಕ್ಕೆ ಹೋದೆ. ಮೊದಲು ಸ್ವಲ್ಪ ರಕ್ತವನ್ನ ಪರೀಕ್ಷೆಗೆ ತೆಗೆದುಕೊಂಡ ನಂತರ ಅದನ್ನ ಪರೀಕ್ಷೆ ಮಾಡಿ ನಂತರ ನನ್ನ ರಕ್ತವನ್ನ ಪಡೆಯಲಿಕ್ಕೆ ಪ್ರಾರಂಭಿಸಿದ್ರು. ಹಾಗೇ ಹಾಸಿಗೆ ಮೇಲೆ ಮಲಗಿದ್ದಾಗ ಮಾಡೋಕೆ ಬೇರೆ ಏನು ಕೆಲಸ !!! ಸುತ್ತ ಮುತ್ತ ಕಣ್ಣಾಡಿಸಿದೆ, ಒಂದು ಬರಹ ನನ್ನ ಆಕರ್ಷಿಸಿತು... ಅದರಲ್ಲಿದ್ದ ಅರ್ಥ ಈ ರೀತಿ ಇದೆ:

ನೇತ್ರದಾನ ಕೇವಲ ಒಮ್ಮೆ ಮಾತ್ರ,
ಮೂತ್ರಪಿಂಡದಾನ ಕೇವಲ ಒಮ್ಮೆ ಮಾತ್ರ,
ಹೃದಯದಾನ ಕೇವಲ ಒಮ್ಮೆ ಮಾತ್ರ,
ಆದರೆ ರಕ್ತದಾನ ನಿರಂತರ, ಜೀವ ಇರುವ ವರೆಗೆ...


ಎಷ್ಟು ಸತ್ಯದ ಮಾತಲ್ವ ??? ನಮ್ಮಲ್ಲಿ ಅನೇಕರು ರಕ್ತದಾನ ಮಾಡೋದಕ್ಕೆ ಹೆದರ್ತಾರೆ. ಹೋದ ರಕ್ತ ಮತ್ತೆ ಮರಳಿ ಬರುವುದಿಲ್ಲ ಅನ್ನುವ ಅಪನಂಬಿಕೆ ಅವರದ್ದು. ಆದರೆ ಸತ್ಯ ಎಂದರೆ ಕೇವಲ ೪೮ ಘಂಟೆಗಳಲ್ಲಿ ನಿಮ್ಮ ರಕ್ತವನ್ನ ನಿಮ್ಮ ದೇಹವು ಪಡೆದುಕೊಂಡಿರುತ್ತದೆ. ಹಾಗಾದಮೇಲೆ ನಾವು ಯಾಕೆ ರಕ್ತವನ್ನ ಅವಶ್ಯಕತೆ ಇರುವವರಿಗೆ ದಾನ ಮಾಡಿ ಒಂದು ಜೀವವನ್ನು ಉಳಿಸಬಾರದು ??? ನಾನು ನನ್ನ ೧೮ನೇ ವಯಸ್ಸಿನಿಂದ ನಿರಂತರವಾಗಿ ರಕ್ತವನ್ನ ದಾನ ಮಾಡುತ್ತಾ ಬರುತ್ತಿದ್ದೇನೆ. ನನಗೆ ಯಾವ ತೊಂದರೆಯೂ ಆಗಿಲ್ಲ... ಆರೋಗ್ಯದಿಂದ ಆರಾಮವಾಗಿದ್ದೇನೆ. ಇವತ್ತಿನ ದಿನ ನಾವು ಚೆನ್ನಾಗಿ ಆರೋಗ್ಯದಿಂದ ಇರಬಹುದು, ನಾಳೆ ನಮಗೇ ಏನಾದರೂ ಆದರೆ ??? ಈಗ ಅದೆಲ್ಲಾ ಬೇಡ ಅಲ್ವಾ ??? ಒಟ್ಟಿನಲ್ಲಿ ನಾ ಕೊಟ್ಟ ರಕ್ತದಿಂದ ಒಬ್ಬ ವ್ಯಕ್ತಿ ಅಪಾಯದಿಂದ ಪಾರಾಗಿ ಗುಣಮುಖನಾದರೆ ನನಗೆ ಅದೇ ಸಂತೋಷ...

ನಿಮ್ಮೆಲ್ಲರಲ್ಲಿ ನನ್ನದೊಂದು ಸಣ್ಣ ಕೋರಿಕೆ PLEASE DONATE BLOOD TO SAVE LIFE....

Tuesday, June 10, 2008

ನೆನಪು...

ನೆನಪು

ಅಪ್ಪ ಹೋದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನ ಸಿಕ್ಕುತ್ತಿಲ್ಲ. ನಾನು ಅಪ್ಪನೊಂದಿಗೆ ಕಳೆದ ಪ್ರತೀ ಕ್ಷಣ ನನ್ನ ಕಣ್ಮುಂದೆ ಹಾದು ಬರುತ್ತವೆ, ನನ್ನನ್ನು ಕೂಗಿ ಕರೆಯುತ್ತವೆ. ನಾನು ಇನ್ನೇನು ಆ ಕ್ಷಣವನ್ನ ಹಿಡಿದು ಅದರೊಡನೆ ಬೆರೆಯಬೇಕೆನಿಸುವಷ್ಟರಲ್ಲಿ ವಿಕ್ರಮನ ಕೈಗೆ ಸಿಕ್ಕದ ಬೇತಾಳದಂತೆ ಮತ್ತೆಲ್ಲೋ ಮರೆಯಾಗಿ ಹುದುಗಿಬಿಡುತ್ತದೆ. ಪ್ರತೀದಿನ ಪ್ರತೀಕ್ಷಣ ನಾನು ಜೀವನದಲ್ಲಿ ಒಂಟಿ ಪಯಣಿಗ ಎನ್ನುವ ಸತ್ಯವನ್ನ ಕಣ್ಮುಂದೆ ತೋರುತ್ತದೆ.

ಅಪ್ಪನ ನೆನಪಾದಾಗಲೆಲ್ಲಾ ನಾನು ಅವರೊಡನೆ ಕಳೆದ ಕೆಲವು ಘಟನೆಗಳ ದ್ರುಶ್ಯಾವಳಿಗಳು ಪದೇ ಪದೇ ಕಾಣುತ್ತವೆ. ವಾರಾಂತ್ಯದಲ್ಲಿ ಬಿಡುವಿದ್ದಾಗ ಮನೆಗೆ ಹೋಗಿ ಮನೆಯ ಹೊಸ್ತಿಲು ತುಳಿಯುತ್ತಿದ್ದಂತೆಯೇ ತಮಾಷೆಯಾಗಿ "ಏನ್ ಬುದ್ದೀ ಹೇಗಿದ್ದೀರಾ !!!, ಮನೆ ಕಡೆ ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗ್ತಾ ಐತೋ ??? " ಎಂದೆಲ್ಲಾ ಮಾತನಾಡಿದ್ದು ನೆನಪಿಗೆಬರುತ್ತದೆ.

"ಅಪ್ಪಾ, ನಾನು ಬಂದ್ಮೇಲೆ ನಿಮ್ಗೆ ಟಿವಿ ಸಿಕ್ಕೊದಿಲ್ಲ, ಒಂದು ದಿನ ಅಡ್ಜಸ್ಟ್ ಮಾಡ್ಕೊಳಿ ಆಯ್ತಾ ??" ಹೀಗೆ ಹೇಳಿದಾಗ ಅಪ್ಪ, "ಪರ್ವಾಗಿಲ್ಲ ಬಿಡೋ, ನಾನೇನು ನೋಡೋದಿಲ್ಲ, ಎಲ್ಲಾ ನಿಮ್ ಅಮ್ಮನೇ ನೋಡೋದು... ನೀನು ಏನ್ ಬೇಕಾದ್ರೂ ಹಾಕ್ಕೊ. ಹೇಗಿದ್ರೂ ನೀನು ಅಲ್ಲಿ ಅಂತೂ ನೋಡೋದಿಲ್ಲ" ಅಂತ ಹೇಳಿ ಒಂದು ಕಿರುನಗೆ ನಕ್ಕು ತಾವೂ ನನ್ನಜೊತೆಯಲ್ಲಿ ಕುಳಿತು ಹಿಂದಿ ಸಿನಿಮಾದ ಸಿಡಿಯನ್ನ ನೋಡುತ್ತಲಿದ್ದರು. "ಅಪ್ಪಾ !!! ಕನ್ನಡಕ ಹಳೇದಾಗಿದೆ, ಅದೂ ಅಲ್ದೇ ಗಾಜಿನ ಕನ್ನಡಕ ಅಪ್ಪಾ, ಇದು ಬೇಡ, ಪ್ಲಾಸ್ಟಿಕ್ ದು ಮಾಡಿಸ್ಕೊಳಿ, ಅದು ಭಾರ ಕಮ್ಮಿ ಇರತ್ತೆ ಅಂತ ಹೇಳಿದ್ರೆ, ಅಯ್ಯೋ ಬಿಡೋ ಪರ್ವಾಗಿಲ್ಲ, ಇದ್ದರೆ ಇನ್ನೆಷ್ಟುದಿನಾ ಅಂತ ಇರ್ತೀನಿ, ಇವತ್ತು ಇದ್ದು ನಾಳೆ ಹೋಗೋ ಶರೀರ !!! ಅದಕ್ಕೆ ಹೊಸಾ ಕನ್ನಡಕ ಅಂತ ದುಡ್ಡು ಖರ್ಚುಮಾಡಬೇಡ, ಅದನ್ನೇ ಕೂಡಿಡು... ಮುಂದೆ ನಿನ್ನ ಮದುವೇ ಆದಮೇಲೆ ಬೇಕಾಗತ್ತೆ" ಅಂತೆಲ್ಲಾ ಹೇಳ್ತಾ ಇದ್ರು.

"ನಾಳೆ ನಿನಗೆ ಪುರುಸೊತ್ತಾದಾಗ ತೆಂಗಿನ ಕಾಯಿ ಕುಯ್ಯೋಣ, ಟೈಮ್ ಇಲ್ಲಾ ಅಂದ್ರೆ ಬೇಡ". ನೆಕ್ಸ್ಟ್ ಟೈಮ್ ತೆಗೆದ್ರಾಯ್ತು ಅಂತ ಹೇಳಿದಾಗ ನಾನು ಸಾಧ್ಯವಾದಷ್ಟೂ ನನ್ನ ಎಲ್ಲಾಕೆಲಸಗಳನ್ನ ಬಿಟ್ಟು ಹೋಗಿ ತೆಂಗಿನ ಕಾಯಿ ಕುಯ್ದು ಕೊಡುತ್ತಿದ್ದೆ. ಕಾಯಿ ತೆಗೆಯುವಾಗಲೂ ಅಪ್ಪ ಕೆಳಗೆ ನಿಂತು ನನಗೆ ಮಾರ್ಗದರ್ಶನ ನೀಡ್ತಾಇದ್ರು. "ಅದುಬೇಡ, ಅದರ ಪಕ್ಕದ್ದ್ನ ತೆಗಿ, ಸ್ವಲ್ಪ ತಡಿ ಯಾರೂ ಬರ್ತಾ ಇದಾರೆ, ಇಗ ತೆಗೀಬಹುದು, ಆ ಕಾಯಿ ಬೇಡ ಅದು ಇನ್ನೂ ಎಳೆಸು. ಅದರ ಪಕ್ಕದ್ದನ್ನ ತೆಗಿ" ಅಂತೆಲ್ಲಾ ಹೇಳಿದಮೇಲೆ ನಾನು ಕಾಯಿ ಕೆಡವಿದ ನಂತರ ಅದನ್ನೆಲ್ಲಾ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಈ ಸಾರಿ ಏಷ್ಟು ಕಾಯಿ ಕಿತ್ತಿದ್ದು ಅಂತ ಎಣಿಕೆ ಮಾಡ್ತಾ ಇದ್ರು. ಸ್ವಾಭಿಮಾನಿಯಾದ ಅಪ್ಪ ಕಾಯಿ ಕಿತ್ತಾದಮೇಲೆ ತಾವೇ ಆ ಚೀಲವನ್ನ ಮಹಡಿಯ ಮೇಲೆ ಇಡಲು ಅದನ್ನ ಹೊತ್ತುಕೊಂಡು ಹೋಗುತ್ತಿದ್ದರು, ಆದರೆ ನಾನು ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ. "ಬಿಡೋ ಪರ್ವಾಗಿಲ್ಲ, ನೀನು ಕಾಯಿ ಕಿತ್ತು ಸುಸ್ತಾಗಿರ್ತೀಯ. ಸ್ವಲ್ಪ ಸುಧಾರಿಸ್ಕೋ... ಕಣ್ಣಿಗೆ ಧೂಳು ಬಿತ್ತಾ !!! ಸ್ವಲ್ಪ ನೀರು ಹಾಕಿ ತೊಳ್ಕೊ !!!" ಎಂದೆಲ್ಲಾ ಬರೀ ನನ್ನಬಗ್ಗೆ ಕಾಳಜಿವಹಿಸುತ್ತಿದ್ದರೇ ಹೊರತು ಅವರ ಬಗೆಗೆ ಕಾಳಜಿ ವಹಿಸಿದ್ದು ಕಡಿಮೆಯೇ.

ಕಾಯಿಕಿತ್ತಾದಮೇಲೆ ಒಣಗಿರುವ ತೆಂಗಿನ ಗರಿಗಳೂ ಬೀಳುತ್ತಿದ್ದವು, ಅದನ್ನ ಕತ್ತಿ ಹಿಡಿದು ತುಂಡು ತುಂಡುಮಾಡಿ ಬಿಸಿಲಿಗೆ ಹಾಕದಿದ್ದರೆ ಅಪ್ಪನಿಗೆ ಸಮಾಧಾನ ಸಿಕ್ಕುತ್ತಿರಲಿಲ್ಲ. ಸಾಧ್ಯವಾದಷ್ಟೂ ನಾನು ಅದಕ್ಕೆ ಅವಕಾಶ ನೀಡದ ಕಾರಣ, ನಾನು ಅಲ್ಲಿ ಇರದಿದ್ದಾಗ ಆ ಕೆಲಸಕ್ಕೆ ಕೈ ಹಾಕುತ್ತಿದ್ದರು.

ಮೊನ್ನೆತಾನೆ ನಮ್ಮ ಮನೆಯಲ್ಲಿ ನಾನು ಮತ್ತೆ ನನ್ನ ಅಕ್ಕ ಸೇರಿ ಕಾಯಿಗಳನ್ನ ತೆಗೆಯುತ್ತಿದ್ದಾಗ ನನಗರಿವಿಲ್ಲದೇ ಅಪ್ಪಾ !!! ಅಂತ ಬಾಯಿಯಿಂದ ಸ್ವರ ಹೊರಬಂದು ತಕ್ಷಣ ಅವರಲ್ಲಿ ಇಲ್ಲವೆಂದು ಅರಿವಾಯಿತು. ಕಣ್ಣಿನಿಂದ ಅವರ ನೆನಪಬಿಂದುಗಳು ಹರಿದುಬಂದವು. ಕೆಳಗಿದ್ದ ಅಕ್ಕ "ಏನಾಯ್ತೋ ?" ಅಂತ ಕೇಳಿದ್ದಕ್ಕೆ "ಏನಿಲ್ವೇ, ಧೂಳು ಕಣ್ಣಿಗೆ ಬಿತ್ತು..." ಅಂತ ಸುಳ್ಳು ಹೇಳಿದ್ದು ಅವಳ ಅರಿವಿಗೂ ಬಂದಿತ್ತು. "ಆ ಕಾಯಿ ಬೇಡ ಅದು ಇನ್ನೂ ಎಳೆಸು. ಅದರ ಪಕ್ಕದ್ದನ್ನ ತೆಗಿ" ಅಂತ ಹೇಳಲು ಅಲ್ಲಿ ಅಪ್ಪ ಇರಲಿಲ್ಲ...

ಅಪ್ಪ ನನ್ನೊಡನೆ ಇಲ್ಲದಿದ್ದರೂ ಅವರು ಕಲಿಸಿರುವ ಸ್ವಾಭಿಮಾನ, ಆತ್ಮಾಭಿಮಾನ ಅವರೊಡನೆ ಕಳೆದ ಮಧುರ ವಾತ್ಸಲ್ಯಭರಿತ ಕ್ಷಣಗಳು ನನ್ನೊಂದಿಗಿದ್ದಾವೆ. ಅವರು ಸ್ವರ್ಗಸ್ಥರಾದ ೫ ತಿಂಗಳುಗಳ ನಂತರವೂ ನಾನು ಮನೆಗೆ ಹೋದಾಗ ನನಗರಿವಿಲ್ಲದಂತೆ ಮನಸ್ಸಿನಿಂದ ಮಾತು ಹೊರಡುತ್ತದೆ... "ಏನ್ ಬುದ್ದೀ, ಹೇಗಿದ್ದೀರಾ !!!"

Thursday, June 5, 2008

ಹೈದರಾಬಾದಿನ ದಿನಗಳು....

ಹೈದರಾಬಾದಿನ ಆಫೀಸಿನಲ್ಲಿ ಜಾಸ್ತಿಏನೂ ಕೆಲಸ ಇಲ್ಲದೇ ಇದ್ದಿದ್ರಿಂದ ನಾನು ಅಂತರ್ಜಾಲದಲ್ಲಿ ನನ್ನ ಗೆಳೆಯರಜೊತೆ ಮಾತಾಡೊ ಅಭ್ಯಾಸ ಇತ್ತು. ಹಾಗೇ ನನಗೆ ತುಂಬಾಜನ ಗೆಳೆಯರಾದ್ರು. ನನ್ನ ನಿಜಜೀವನದಲ್ಲಿ ಪಡಿದೇಇರೋ ತಮ್ಮ, ತಂಗಿಯರ ಪ್ರೀತಿ ಇಲ್ಲಿಂದ ಪಡ್ಕೊಂಡೆ. ಇಷ್ಟರ ಮಧ್ಯದಲ್ಲಿ ವಿಜಯ್ ನನ್ಗೆ ತುಂಬಾ ಆಪ್ತನಾದ. ದಿನಾ ಅಲ್ದಿದ್ದ್ರೂ ವಾರಂತ್ಯದಲ್ಲಿ ಅವನ ಪುಟ್ಟ ಗೂಡಿಗೆ ಹೂಗಿ ಬರ್ತಾ ಇದ್ದೆ. ಹಾಗೆ ನಮ್ಮ ಸ್ನೇಹ ಗಾಡವಾಯ್ತು... ಶಿಲ್ಪಾ ಕೂಡಾ ಕನ್ನಡದವಳು. ಸ್ನೇಹಕ್ಕೆ ಬೆಲೆ ಕೊಡೋ ಹುಡುಗಿ. ನಮ್ಮ ಆಫೀಸ್ ಹತ್ತಿರದಲ್ಲೇ ಇತ್ತು. ಹಾಗಾಗಿ ಒಮೊಮ್ಮೆ ಹರಟೆ ಹೊಡಿಯೊದಿಕ್ಕೆ ಭೇಟಿಯಾಗ್ತಾ ಇರ್ತಿದ್ವಿ. ನಾನು ವಿಜಯ್ ಶಿಲ್ಪ... ಮೂರೂಜನ ತುಂಬಾನೇ ಒಳ್ಳೆ ಗೆಳೆಯರಾದ್ವಿ.

ಗೆಳೆತನ ನನ್ನ ಯಾವ ರೀತಿಯಲ್ಲಿ ಪ್ರೋತ್ಸಾಹಿಸತ್ತೆ ಅನ್ನೊದನ್ನ ನಾನು ತಿಳಿದಿರಲಿಲ್ಲ. ಯಾವ ಕ್ಷಣದಲ್ಲಿ ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ನೋ... ಗೊತ್ತಾಗ್ಲಿಲ್ಲ (ಕವಿ ಅಂತ ನನ್ನ ನಾನೇ ಕರ್ಕೊಬೇಕು ಅಲ್ವ !!!!). ಆವತ್ತಿನ ದಿನ ಹೈದರಾಬಾದಿನ ಮೊದಲ ಮಳೆ ಬೀಳ್ತಾಇತ್ತು. ನಾನು ವಿಜಯ್ ಜೊತೆ ಫೋನಿನಲ್ಲಿ ಮಾತಾಡ್ತಾ ಅವನಿಗೆ ಹಾಗೇ ಒಂದು ಕವನದ ರೂಪದಲ್ಲಿ ಏನೋ ಹೇಳಿದೆ. ತಕ್ಷಣ ಅವನು ನನ್ನ ಪ್ರೋತ್ಸಾಹಿಸಿ ನೀನು ಇದನ್ನ ಬರೀ ಚೆನ್ನಾಗಿದೆ ಅಂತ ಹುರಿದುಂಬಿಸಿದ. ಆವತ್ತು ಹೊರಗೆ ಬಂದದ್ದೇ ನನ್ನ ಮೊದಲ ಕವನ "ಭಾವನೆಗಳ ಸಾಗರದಲ್ಲಿ". ಮೊದಲ ಪ್ರಯತ್ನ ಸಫಲವಾಗದಿದ್ದರೂ ವಿಫಲವಾಗಲಿಲ್ಲ... ನಾನು ಬರೆದ ಸಾಲುಗಳನ್ನ ನನ್ನ ಗೆಳೆಯರೊಡನೆ ಹಂಚಿಕೊಂಡೆ, ಏಲ್ಲ ನನಗೆ ಪ್ರೋತ್ಸಾಹಿಸಿದ್ರು. ಹೀಗೇ ಕೇವಲ ಒಂದು ತಿಂಗಳಿನಲ್ಲಿ ಹೆಚ್ಚೂಕಮ್ಮೀ ೩೦ ಕವನಗಳು ಹೊರಗೆ ಬಂದ್ವು. ಅವು ಕವನಗಳಲ್ಲ, ನನ್ನ ಮನಸ್ಸಿನ ಭಾವನೆಗಳು. ಕೆಲವು ಸಲ ರಾತ್ರಿ ೪ ಘಂಟೆಯಲ್ಲಿ ೪ ಸಾಲು ನೆನಪಾಗಿ ಆ ಅರ್ಧ ರಾತ್ರಿಯಲ್ಲಿ ಎದ್ದು ಬರೆದದ್ದೂ ಇದೆ. ವಿಜಯ್ ನನಗೆ ನಾನು ಬರೆದ ಕವನಗಳನ್ನ ನನ್ನದೇ ಆದ ಬ್ಲಾಗ್ ನಲ್ಲಿ ಹಾಕೋದಕ್ಕೆ ಹೇಳಿ ನಾನು ಅದನ್ನ ಅಂತರ್ಜಾಲದಲ್ಲಿ ಪ್ರಕಟಗೊಳಿಸಿದೆ. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಚೆನ್ನಾಗೇ ಇತ್ತು. ನನ್ನ ಕವನವನ್ನ ಓದಿ ನನ್ನಗೆ ಕೆಲವು ಮಿತ್ರರು ಆಪ್ತರಾದರು. ನನ್ನ ಬಾಳಿನಲ್ಲಿ ಅಳಿಸಿಹೋಗದ ಮೈಲಿಗಲ್ಲಾದರು. ಅವರಿಗೆಲ್ಲಾ ಇಲ್ಲಿ ಒಂದು ಅಭಿನಂದನೆ ಸಲ್ಲಿಸ್ತಾಇದ್ದೆನೆ.

ಹೀಗೇ ನಡಿತಾ ಇರೋವಾಗ ನನ್ನ ಹಳೇ ಕಂಪನಿಯ ಸಹೋದ್ಯೋಗಿ, ಮಿತ್ರರೂ ಆದ ಶಂಕರಮೂರ್ತಿ ಹೈದರಾಬಾದಿಗೆ ಬರೋವಿಚಾರ ತಿಳಿಸಿದ್ರು. ನಾನು ಹೇಗಿದ್ರೂ ಒಬ್ಬನೇ ಇದ್ದದ್ದರಿಂದ ನನ್ನ ಜೊತೆ ಬಂದು ಉಳಿದುಕೊಳ್ಳಬಹುದು ಅಂತ ಹೇಳಿ ನನ್ನದೇ ಆದ ಕೆಲವು ಕರಾರುಗಳನ್ನ ಅವರಿಗೆ ಹೇಳಿದೆ :) . ಅದಕ್ಕೆಲ್ಲಾ ಒಪ್ಪಿ ಶಂಕರ್ ನನ್ನ ಮನೆಗೆ ಬಂದರು.
ಅಲ್ಲಿಂದ ನಮ್ಮ ಅಡುಗೆ ಮಾಡೋ ಕಾರ್ಯಕ್ರಮ ಸ್ವಲ್ಪ ಜಾಸ್ತಿ ಆಯ್ತು. ನಾವಿಬ್ಬರೂ ಸೇರಿ ಅಡುಗೆ ಮಾಡ್ಕೋತಿದ್ವಿ. ಜೊತೆ ನಲ್ಲಿ ಊಟಮಾಡಿ ಪಾತ್ರೆ ತೊಳೆದಿಡ್ತಿದ್ವಿ. ಬೇಸರ ಆದ್ರೆ ಅಲ್ಲೇ ಮನೆಸುತ್ತಾಮುತ್ತಾ ಹೊಗಿ ತಿರುಗಾಡ್ಕೊಂಡು ತರಕಾರಿ, ಮೊಸರು ತಂದು ರಾತ್ರಿ ಅದನ್ನ ಮಜ್ಜಿಗೆ ಅಥವಾ ಲಸ್ಸಿ ಮಾಡಿಕೊಂಡು ಕುಡಿದು ಹೊತ್ತು ಕಳೀತಾ ಇದ್ವಿ.

ನನ್ನ ಮಿತ್ರ ಮಂಡಳಿಯಿಂದ ನನಗೆ ಬಹಳಷ್ಟು ಸಹಾಯ ಸಿಕ್ಕಿದೆ. ಹಾಗೆ ನಾನು ಕೂಡಾ ನನ್ನ ಕೈಲಾದ ಸಹಾಯವನ್ನ ಮಾಡಿದ್ದೇನೆ ಎಂದು ನನ್ನ ಅನಿಸಿಕೆ. ಅದೆಷ್ಟು ನಿಜಾನೋ ಎಷ್ಟು ಸುಳ್ಳೋ ನನ್ಗಂತೂ ಗೊತ್ತಿಲ್ಲ. ಈ ವಿಚಾರ ಬರ್ತಾ ಇದ್ದಹಾಗೇ ನನಗೆ ನನ್ನ ಗೆಳೆಯ ಅಮಿತ್ ಮತ್ತೆ ದೀಪ್ತಿ ನೆನಪಾಗ್ತಾ ಇದಾರೆ, ಸ್ವಲ್ಪ ಅವರಬಗ್ಗೆ ನಿಮಗೆ ಹೇಳ್ತೀನಿ.

ಅಮಿತ್ ಬಗ್ಗೆ ಹೇಳ್ಬೇಕು ಅಂದ್ರೆ ಅವನು ನನ್ನ ಆರ್ಕುಟ್ ಗೆಳತಿ ದೀಪ್ತಿ ಯಿಂದ ಪರಿಚಯ ಆದದ್ದು. ಇನ್ನು ದೀಪ್ತಿ ಯಾರು ಅಂತ ಹೇಳ್ಬೆಕು ಅಲ್ವಾ ???? ಆಯ್ತು ಆಯ್ತು... ಅವಳು ನನ್ನಗೆ ಅದೇ ಆರ್ಕುಟ್ಟಿನಮೂಲಕ ಪರಿಚಯವಾದ ಮತ್ತೊಬ್ಬಗೆಳತಿ. ಹೈದರಾಬಾದಿನಲ್ಲಿ ನನಗೆ ಬೇರೆಬೇರೇ ಅಡುಗೆಯ ಪಾಕರುಚಿ ಕಲಿಸೋದಕ್ಕೆ ಅದರ ವಿಧಾನಗಳನ್ನ ಕಳಿಸಿಕೊಟ್ಟವಳು. ಅವಳ ಗೆಳೆಯನೇ ಈ ಅಮಿತ್. ನಾನು ಹೈದರಾಬದಿನಲ್ಲಿ ವಾಸವಾಗಿದ್ದಾಗ ನನ್ನ ಜೊತೆ ಕೆಲವು ತಿಂಗಳು ನನ್ನ ಅತಿಥಿಯಾಗಿದ್ದವನು. ಅವನಿಗೆ ಹೈದರಾಬಾದಿನಲ್ಲಿ ಕೆಲವು ತಿಂಗಳು ಕೆಲಸವಿದ್ದಿದ್ದರಿಂದ ಉಳಿದುಕೊಳ್ಳೋದಿಕ್ಕೆ ನನ್ನ ಜೊತೆ ಇದ್ದ. ಸೀದಾ ಸಾದಾ ಹುಡುಗ, ಆದರೆ ಬತ್ತಿ ಹೊಡಿಯೋದು, ಎಣ್ಣೇ ಹಾಕೊದು ಬಿಟ್ರೆ ಮತ್ತೆಲ್ಲಾ ಒಳ್ಳೇ ಅಭ್ಯಾಸಗಳೆ ಇತ್ತು. ನನ್ನ ಮೊದಲ ಉಪ್ಪಿಟ್ಟಿನ ಪ್ರಯೋಗಕ್ಕೆ ಸಿಕ್ಕಿದ್ದೇ ಅಮಿತ್. ಬೆಳಿಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ವಾಪಾಸ್ ಬಂದು ನಮ್ಮಜೊತೆ ಹರಟೆ ಹೊಡ್ಕೊಂಡು ಮಲ್ಕೊತಾ ಇದ್ದ. ವಾರಾಂತ್ಯದಲ್ಲಿ ಅಮಿತ್ ಮತ್ತೆ ಶಂಕರ್ ಜೋಡಿ ಮನೆ ಬಿಟ್ಟು ಹೊರಗೆ ತಿರುಗಾಡ್ಕೊಂಡು ಬರ್ತಾಇದ್ರು. ಈಗ ಅಮಿತ್ ಮತ್ತೆ ದೀಪ್ತಿ ಇಬ್ಬರೂ ದಂಪತಿಗಳು. ಅವರನ್ನ ಒಂದುಮಾಡಿದ ಹಿರಿಮೆ ಆರ್ಕುಟ್ ಗೆ ಸೇರಬೇಕು.

ಹೈದರಾಬಾದಿಗೆ ಬಂದಾಗಿನಿಂದಾ ನಾನು ಎಲ್ಲೂ ಹೋಗಿರಲಿಲ್ಲ, ಆದ್ದರಿಂದ ನಾನು, ಶಂಕರ್, ಅಮಿತ್, ವಿಜಯ್ ಮತ್ತೆ ಶಿಲ್ಪಾ ಎಲ್ಲಾ ಸೇರಿ ಒಂದು ಸಿನಿಮಾಕ್ಕೆ ಹೋಗೋದು ಅಂತ ತೀರ್ಮಾನಿಸ್ಕೊಂಡು ಡೈಹಾರ್ಡ್ ಭಾಗ-೪ ಕ್ಕೆ ಮಲ್ಟಿಪ್ಲಕ್ಸ್ ಗೆ ಹೋದ್ವಿ. ಸಿನಿಮಾಏನೋ ಚೆನ್ನಾಗೇ ಇತ್ತು, ಆದರೆ ಇವತ್ತಿಗೂ ನನಗೆ ಸಿನಿಮಾಗಿಂತಾ ನನ್ನ ಗೆಳೆಯರೊಡನೆ ಕಳೆದ ಸಮಯ ನೆನಪಾಗತ್ತೆ. ನಾನು ವಿಜಯ್ ಒಟ್ಟಿಗೇ ವಿರಾಮದಲ್ಲಿ ಹೋಗಿ ಪಾಪ್ ಕರ್ನ್ ತಂದಿದ್ದು, ಕತ್ತಲ ಸಿನಿಮಾ ಹಾಲ್ನಲ್ಲಿ ಎಡವಿ ತಡವರಿಸಿದ್ದು... ಹೀಗೆ... ಸಿನಿಮಾ ಮುಗಿದ ನಂತರ ಇನ್ನೂ ಸಮಯವಿದ್ದದ್ದರಿಂದ ಮತ್ತೆ ನಮ್ಮ ಪ್ರಯಾಣ ಹುಸೇನ್ ಸಾಗರ್ ಕಡೆ ಹೊರಡ್ತು. ಅಲ್ಲಿ ನಾವು ಎಲ್ಲಾ ಸೇರಿ ಜೋಳ, ಐಸ್ಕ್ರೀಮ್ ತಿಂದು ಸಕ್ಕತ್ ಮಜಾ ಮಾಡಿದ್ವಿ. ನಾನು ಇಲ್ಲಿ ನನ್ನ ಎಲ್ಲಾ ದಿನಗಳನ್ನ ನನ್ನ ದಿನಚರಿಯಲ್ಲಿ ಬರೀಬೇಕು ಅಂತ ಅಂದುಕೊಂಡಿದ್ದೆ. ಆದರೆ ಬರೀತಾ ಇಲ್ಲ, ಯಾಕೇ ಅಂದ್ರೆ ಅದನ್ನ ಬರೀತಾ ಹೋದ್ರೇ ನನ್ನದೇ ಒಂದು ಕಾದಂಬರಿ ಬಿಡುಗಡೆ ಮಾಡ್ಬೇಕಾಗತ್ತೇನೋ...

ನಾನು ಅಲ್ಲಿ ಯಾವ ಪ್ರೇಕ್ಷಣೀಯ ಸ್ಥಳಗಳಿಗೂ ಹೋಗಿರಲಿಲ್ಲ. ಹೀಗಿರೋವಾಗ ಇದ್ದಕ್ಕಿದ್ದಂತೇ ನಾನು, ಶಂಕರ್ ಮತ್ತೆ ಅಮಿತ್ ಸೇರಿ ಮತ್ತೊಂದು ವಾರಾಂತ್ಯದಲ್ಲಿ ಮಂತ್ರಾಲಯಕ್ಕೆ ಹೊಗೋ ಕಾರ್ಯಕ್ರಮ ಹಾಕ್ಕೋಂಡ್ವಿ. ಅಮಿತ್ ತನ್ನ ಊರಿಗೆ ಹೋಗಬೇಕಿದ್ದಿದ್ದರಿಂದ ನಮ್ಮಜೊತೆ ಬರಲಿಲ್ಲ. ನಾನು ಮತ್ತೆ ಶಂಕರಮೂರ್ತಿ ಮಂತ್ರಾಲಯಕ್ಕೆ ಹೊರಡುವುದು ನಿಶ್ಚಯವಾಯ್ತು ಮತ್ತೆ ಏ.ಪಿ.ಸ್.ಟಿ.ಡಿ.ಸಿ ಯ ಮೂಲಕ ಮಂತ್ರಾಲಯ ಪ್ರವಾಸದ ಕಾರ್ಯಕ್ರಮ ಶುರುವಾಯ್ತು. ಶನಿವಾರದಂದು ಅವರದೇ ಆದ ಒಂದು ಮಿನಿ ಬಸ್ ನಲ್ಲಿ ನಾನು ಮತ್ತೆ ಶಂಕರ್ ಇಬ್ಬರೂ ಹೊರಟಿದ್ವಿ, ನಮ್ಮ ಜೊತೆ ನಮ್ಮ ಗುಂಪಿನ ಮಿಕ್ಕ ಸದಸ್ಯರಿಲ್ಲದ ಕಾರಣ ಪ್ರಯಾಣ ಬಹಳ ಬೇಸರ ಬರಿಸ್ತಾಇತ್ತು. ಆದ್ದರಿಂದ ನಮ್ಮ ಸಹಪ್ರಯಾಣಿಗರ ಬಗ್ಗೆ ನಾವು ಮಾತಾಡಿಕೊಳ್ತಾ ನಗುನಗುತ್ತಾ ಪ್ರಯಾಣ ಮುಂದುವರಿಸ್ತಾ ಇದ್ವಿ. ಅದೊಂದು ಪ್ಯಾಕೇಜ್ ಟೂರ್ ಆದದ್ದರಿಂದ ಕೇವಲ ಮಂತ್ರಾಲಯವಲ್ಲದೇ ಮತ್ತಿತರ ಸ್ಥಳಗಳನ್ನೂ ನೋಡ್ಕೊಂಡು ವಾಪಾಸ್ ಬಂದ್ವಿ.

ನನಗೆ ಅಲ್ಲಿವಾತಾವರಣ ದಿನ ಕಳೆದಂತೆ ಬೇಸರ ತರಲಾರಂಭಿಸಿತ್ತು. ಕೆಲಸಮಾಡಲು ಅಲ್ಲಿ ಹೆಚ್ಚಿನ ಅವಕಾಶವಿಲ್ಲದ ಕಾರಣ ನಾನು ಅಲ್ಲಿಂದ ಹೊರಟು ಮರಳಿ ಬೆಂಗಳೂರಿಗೆ ಬರುವ ಯೋಜನೆ ಹಾಕತೊಡಗಿದೆ. ನಾನು ಅಲ್ಲಿ ಇನ್ನೂ ಕೆಲವು ದಿನ ಇರಬಹುದು ಅನ್ನೋಒಂದು ಲೆಕ್ಕಾಚಾರದ ಮೇಲೆ ನಾನು ಅಲ್ಲಿಯ ಒಂದು ಕಂಪ್ಯೂಟರ್ ಕ್ಲಾಸಿಗೆ ಶಿಲ್ಪಜೊತೆ ಹೋಗಿ ಸೇರಿದ್ದೆ, ನಿಮಗೆ ಶಿಲ್ಪಾಳ ಪರಿಚಯ ಮಾಡಿಕೊಟ್ಟಿಲ್ಲ ಅಲ್ವಾ !!! ಆಮೇಲೆ ಅವಳನ್ನ ಇಲ್ಲಿ ಪರಿಚಯಿಸ್ತೀನಿ. ಹಾಗಾಗಿ ನಾನು ಬೆಂಗಳೂರಿಗೆ ಮರಳಿಬರೊ ವಿಚಾರನ್ನ ಸ್ವಲ್ಪ ತಿಂಗಳಮಟ್ಟಿಗೆ ಮುಂದೂಡಿದ್ದೇ ಈ ಕ್ಲಾಸಿನ ವಿಚಾರಕ್ಕಾಗಿ. ಇದೆಲ್ಲದರ ನಡುವೆ ನನ್ನ ಸಹೋದ್ಯೋಗಿ ಮತ್ತೆ ಮಿತ್ರರೂ ಆದ ಶಿವರಾಜ್ ಅವರಿಗೆ ಕಂಕಣಭಾಗ್ಯ ಕೂಡಿಬಂದಿತ್ತು. ಹೌದು, ಅವರಿಗೆ ಮದುವೆ... ಆ ಸಂಭ್ರಮದಲ್ಲಿ ನಾನೂ ಭಾಗಿಯಾಗುವ ಉತ್ಸಾಹದಲ್ಲಿ ಅವರಿಗೆ ಮದುವೆಯ ಆಮಂತ್ರಣಪತ್ರವನ್ನ ನಾನೆ ತಯಾರಿಸಿ ಕೊಟ್ಟಿದ್ದೆ, ನನ್ನ ಬಳಿ ಮುದ್ರಣಯಂತ್ರ ಇಲ್ಲ ಸ್ವಾಮೀ, ಅಂತರ್ಜಾಲದಲ್ಲಿ ಹುಡುಕಿ ಯಾವುದೋ ಒಂದು ಒಳ್ಳೆಯ ಚಿತ್ರವನ್ನ ಕದ್ದು ಅದರಮೇಲೆ ಕನ್ನಡದಲ್ಲಿ ಆಮಂತ್ರಣ ಪತ್ರವನ್ನ ಬರೆದುಕೊಟ್ಟಿದ್ದೆ. ೧೩-ಮೆ-೨೦೦೮ ಈ ತಾರೀಖು ಶಿವರಾಜ್ ಮತ್ತು ಶಿವಲೀಲ ಅವರ ಮದುವೆ ಸಮಾರಂಭ ಧಾರವಾಡದಲ್ಲಿ ಎಂದು ನಿಶ್ಚಯವಾಯಿತು. ಅದಕ್ಕೆಂದೇ ನಾನು ಮತ್ತೆ ನಮ್ಮ ಮ್ಯಾನೇಜರ್ ಹೈದರಾಬಾದಿನಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ವಿ. ದಾರಿಯ ಖರ್ಚಿನಲ್ಲಿ ಅರ್ಧ ನನ್ನ ಮ್ಯಾನೇಜರ್ರೇ ಹಾಕಿಕೊಂಡ್ರು. ಹವಾನಿಯಂತ್ರಿತ ರೈಲ್ವೇಬೋಗಿಯಲ್ಲಿ ಧಾರವಾಡಕ್ಕೆ ಬಂದು ಸೇರಿದ್ವಿ. ಶಿವರಾಜ್ ಅವರ ಮನೆಯವರಿಂದ ಆಥಿತ್ಯ ಪಡೆದುಕೊಂಡು ನನ್ನ ಮ್ಯಾನೇಜರ್ ಕಾದಿರಿಸಿದ್ದ ಹೋಟೇಲ್ ರೂಮಿಗೆ ಬಂದೆ. ಅಲ್ಲಿ ನಾನು ಕರುನಾಡಿಗೆ ಬಂದ ಖುಷಿ ಒಂದುಕಡೆಯಾದರೆ ನನ್ನ ಮನೆಯವರೊಂದಿಗೆ, ಗೆಳೆಯರೊಡನೆ ಹೆಚ್ಚುಹೊತ್ತು ಮಾತನಾಡಬಹುದು ಅನ್ನೋದು ಮತ್ತೊಂದು ಸಂಭ್ರಮ. ಮದುವೆ ಮುಗಿಸಿ ನಂತರ ಮರಳಿ ನನ್ನ ಬೆಂಗಾಡು ಹೈದರಾಬಾದಿಗೆ ಮರಳಿ ಬಂದೆ.

ಈಗ ಸ್ವಲ್ಪ ಶಿಲ್ಪಾಳ ಪರಿಚಯ ಮಾಡಿಕೊಳ್ಳೋಣ, Charming, innocent and decent girl ನನ್ನ ಗೆಳತಿ ಶಿಲ್ಪ. ಒಬ್ಬಳೇ ಕರ್ನಾಟಕದಿಂದ ಇಷ್ಟುದೂರದ ಹೈದರಾಬಾದಿಗೆ ಬಂದಿದ್ದರೂ ಜೀವನದಲ್ಲಿ ಏನಾದರೊಂದು ಸಾಧಿಸಲೇಬೇಕು ಎಂದು ಪಣತೊಟ್ಟಿದ್ದ ಛಲಗಾತಿಆಕೆ. ಸ್ವಲ್ಪ ವಿದೇಷೀತಿಂಡಿಗಳ ವ್ಯಾಮೋಹ ಜಾಸ್ತಿನೇ ಇತ್ತು ಅವಳಿಗೆ, ಆದರೂ ಕೋಮಲ ಮನಸ್ಸು. ಭವಿಷ್ಯದ ಕನಸನ್ನ ಕಟ್ಟಿ ಅದನ್ನು ಸಾಕಾರಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟವಳು. ಕಂಪ್ಯೂಟರ್ ಕೋರ್‍ಸಿಗೆ ಅವಳಜೊತೆಯಲ್ಲಿ ಹೋಗಬೇಕಿದ್ದ ನಾನು ಅನಿವಾರ್ಯಕಾರ್‍ಅಣಗಳಿಂದ ಆ ಅವಕಾಶವನ್ನ ಕಳೆದುಕೊಂಡೆ. ತನ್ನ ಗೆಳತಿಯರೊಡನೆ ಮನೆ ಮಾಡ್ಕೊಂಡು ತಾನೇ ಅಡುಗೆಕೂಡಾ ಮಾಡ್ತಾ, ಕೆಲಸಕ್ಕೂ ಬಂದು, ಕ್ಲಾಸಿಗೂ ಹೋಗ್ತಾ ಇದ್ಳು. ಅವಳ ಗೆಳೆತನದ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೀತೀನಿ, ಯಾಕಂದ್ರೆ ಇಲ್ಲಿ ಅವಳ ಮತ್ತೆ ವಿಜಯ್ ನ ಪರಿಚಯ ಮಾಡಿಕೊಡ್ತಾಇದ್ರೆ ಪುಟಗಳೇ ಸಾಲೋದಿಲ್ಲ.

ಹೀಗೇ ನಾನು ನನ್ನ ಜೀವನದ ಪಯಣ ಸಾಗುತ್ತಾ ಇರೋವಾಗ ಒಂದುದಿನ ನಮ್ಮ ಮ್ಯಾನೇಜರ್ ಮತ್ತೆ ನಮ್ಮ ಆಫೀಸಿನ ಹೆಚ್ ಆರ್ ಆದ ಕಾರ್ತಿಕ್ಗೂ ಮಾತಿನ ಚಕಮಕಿ ನಡೆದು ನಮ್ಮ ಮ್ಯಾನೇಜರ್ ತಮ್ಮ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ್ರು. ಅಲ್ಲಿಂದ ಮುಂದೆ ನಡೆಯುವ ಬೆಳವಣಿಗೆಯನ್ನ ಊಹಿಸಿಕೊಂಡು ನನಗೆ ಮತ್ತೆ ಶಿವರಾಜಿಗೆ ನಡುಕ ಶುರು ಆಗಿತ್ತು. ಮೊದಲೇ ಹೈದರಾಬಾದಿನಿಂದ ಹೆಚ್ಚಿಗೆ ಏನೂ ವಹಿವಾಟು ಆಗುತ್ತಿರಲಿಲ್ಲ, ಅದರ ಜೊತೆಗೆ ಈ ಘಟನೆ... ನಾವು ಮನಸ್ಸಿನಲ್ಲೇ ಮುಂದಿನ ಬೆಳವಣಿಗೆ ಬಗ್ಗೆ ಊಹಿಸಿಕೊಂಡಿದ್ವಿ.


ಹೈದರಾಬಾದಿನಲ್ಲಿ ಸಂತಸ ತಂದ ಮಳೆ:
ಆವತ್ತೊಂದು ದಿನ ನಾನು ಮತ್ತೆ ಶಿಲ್ಪಾ ನಮ್ಮ ಕಂಪ್ಯೂಟರ್ ಸೆಂಟರ್ನಿಂದ ಮನೆಗೆ ಹೊರಟಿದ್ವಿ, ದಾರಿಮೇಲೆ ದಟ್ಟವಾದ ಮೋಡ ಇದಿದ್ದ್ರಿಂದ ಮಳೆ ಬಂದೇ ಬರತ್ತೆ ಅಂತ ಗೊತ್ತಿತ್ತು. ಆದರೂ ಮಳೆ ಬರೋದಕ್ಕೆ ಮುಂಚೆ ಹೋಗಿ ಮನೆ ಸೇರ್ಕೊಳ್ಳೊಣ ಅಂತ ಭಂಡಧೈರ್ಯ ಮಾಡಿ ಮನೇಕಡೆಗೆ ಹೊರಟಿದ್ವಿ. ನಾವಂದುಕೊಂಡಿದ್ದ ಹಾಗೇ ದಾರಿಯಲ್ಲಿ ಮಳೆ ಬಂದೇ ಬಿಡ್ತು. ಮಳೆಯ ಪ್ರಾರಂಭದಲ್ಲಿ ವಿಧಿಯಿಲ್ಲದೇ ನೆನೆದ್ವಿ, ಆದರೆ ಆಮೇಲೆ ಆ ಮಳೆಹನಿಗಳಲ್ಲೂ ಒಂದು ರೀತಿಯ ಖುಷಿ ಸಿಕ್ತು. ಆ ಕ್ಷಣದಲ್ಲಿ ನಾವಿಬ್ಬರೂ ಚಿಕ್ಕ ಮಕ್ಕಳಾಗ್ಬಿಟ್ಟಿದ್ವಿ... ದಾರಿಯಲ್ಲಿ ಮ್ಯಕ್ಡೋನಾಲ್ಡ್ಸ್ ಗೆ ಹೋಗಿ ವಿದೇಷೀ ತಿಂಡಿ(ಬರ್ಗರ್) ತಿಂದು ಹರಟೆ ಹೊಡಿತಾ ಮತ್ತೆ ನಮ್ಮ ಪ್ರಯಾಣ ಮುಂದುವರಿಸಿದ್ವಿ, ಜೊತೆ ಜೊತೆಯಲ್ಲೇ ಮಳೆಕೂಡಾ ತನ್ನ ರೌದ್ರ ರೂಪವನ್ನ ತೋರಿಸ್ತಾನೇ ಇತ್ತು. ಹಾಗೂ ಹೀಗೂ ಶಿಲ್ಪನ್ನ ಅವಳ ಮನೆಗೆ ಬಿಟ್ಟು ನಾನು ನನ್ನ ಮನೆ ದಾರಿ ಹಿಡಿದು ಹೊರಟೆ. ಮನೆಗೆಬಂದು ಬೆಚ್ಚನೆಯ ನೀರಿನಲ್ಲಿ ಸ್ನಾನಮಾಡಿ ರಾಗಿ ಅಂಬಲಿ ಕುಡಿದು ನನ್ನ ಹೊದಿಕೆ ಹೊದ್ದುಕೊಂಡು ಮಲಗಿದಾಗ ಸಿಕ್ಕ ಸಂತೋಷ... ಅಬ್ಭಾ !!! ಅದನ್ನ ಇಲ್ಲಿ ವಿವರಿಸೊದಕ್ಕೆ ಪದಗಳು ಸಿಕ್ತಾ ಇಲ್ಲ.

ಮನಸ್ಸಿನಲ್ಲಿ ನಾನು ಹೈದರಾಬಾದಿನಲ್ಲಿ ಉಳಿವ/ ಮರಳಿ ಹಿಂದಿರುಗುವ ಪ್ರಶ್ನೆಗಳ ಸರಮಾಲೆ ಸುಳಿತಾಇರೋ ಹಾಗೇ ನನ್ನ ಸಹೋದ್ಯೋಗಿ ಬಂದು ನಮ್ಮ ಮೇಡಂ ಮೀಟಿಂಗೆ ಕರೀತಾ ಇದಾರೆ, ಸೋಮವಾರ ನಾವಿಬ್ಬ್ರೂ ಬೆಂಗಳೂರಿಗೆ ಹೋಗಬೇಕು ಅಂತ ಹೇಳಿದ್ರು. ಆ ವಿಚಾರ ಕೇಳಿ ಮನ್ಸಲ್ಲಿ ಏನೊ ಖುಷಿಆದ್ರೂ ಹಾಗೇ ಒಂದ್ ಸ್ವಲ್ಪ ಭಯ ಆಯ್ತು. ಖುಷಿ ನಾನು ಮರಳಿ ನನ್ನ ನಾಡಿಗೆ ಹೋಗ್ತಾಇದೀನಿ ಅಂತ, ಭಯ ಎಲ್ಲಿ ಏನಾಗತ್ತೋ ಅಂತ. ನನ್ಗೆ ನನ್ನ ಸಹೋದ್ಯೋಗಿ ಸಮಾಧಾನ ಹೇಳಿದ್ರೆ ನಾನು ನನ್ನ ಸಹೋದ್ಯೋಗಿಗೆ ಸಮಾಧಾನ ಹೇಳ್ತಾಇದ್ವಿ. ಆದ್ರೆ ಇಬ್ಬರ ಮನಸ್ಸಲ್ಲೂ ಎಲ್ಲೊ ಒಂದು ರೀತಿ ಆತಂಕ ಇದ್ದೇ ಇತ್ತು.

ನಾನು ಮಿಕ್ಕ ಎರಡುದಿನ ತಡಮಾಡೋದು ಬೇಡ ಅಂತ ಆವತ್ತೇ ರಾತ್ರಿ ಟಿಕೇಟ್ ಬುಕ್ಮಾಡ್ಸಿ ರಾತ್ರಿ ಹೊರಡೋಕ್ಕೆ ಸಿದ್ಧತೆ ಮಾಡ್ಕೊಂಡೆ. ರಾತ್ರಿ ಪ್ರಯಾಸದಾಯಕವಾದ ಪ್ರಯಾಣ ಮಾಡಿ, ಬೆಳಿಗ್ಗೆ ನಮ್ಮ ಕನ್ನಡವನ್ನ ಕರುನಾಡನ್ನ ನೋಡಿದ್ಮೇಲೇ ನನ್ಗೆ ಸ್ವಲ್ಪ ಸಮಾಧಾನ, ಸಂತೋಷ ಆಗಿದ್ದು. ನನ್ನ ಅಪಾರ ಮಿತ್ರಮಂಡಳಿಗೆ ಮೆಸ್ಸೇಜ್ ಮಾಡಿ ನಾನು ಬಂದಿರೋದನ್ನ ಹೇಳಿದೆ. ಎರಡುದಿನ ಅದು ಹ್ಯಾಗೆ ಹೋಯ್ತೂ ಗೊತ್ತೇ ಆಗ್ಲಿಲ್ಲ...

ಇನ್ನು ನಾನು ಕಾಯ್ತಾ ಇದ್ದ ದಿನ ಬಂದೇ ಬಿಡ್ತು, ಸೋಮವಾರ ನಮ್ಮ ಹೊಸಾ ಡೈರೆಕ್ಟರ್ ಮತ್ತೆ ಹೊಸಾ ಹೆಡ್ ಜೊತೆ ಇದ್ದ ಮೀಟಿಂಗೊಸ್ಕರ ನಾನು ನನ್ನ ಸಹೋದ್ಯೋಗಿ ಇಬ್ಬರೂ ನಮ್ಮ ಬೆಂಗಳೂರಿನ ಕಾರ್ಯಾಲಯಕ್ಕೆ ಬಂದ್ವಿ. ಮೊದಲನೇ ಸುತ್ತಿನಲ್ಲಿ ನಮ್ಮ ಹೊಸಾ ಡೈರೆಕ್ಟರ್ (ಖಂಡಿತಾ ಇದು ಸಿನಿಮಾ ಅಲ್ಲ ರೀ...) ಪಾಪ ಶಿವರಾಜ್ ಅವರಿಗೆ ಸಕ್ಕತ್ತಾಗಿ ಕ್ಲಾಸ್ ತೊಗೋಂಡಿದ್ರು. ಶಿವರಾಜಿಗೇ ಹಾಗಾದ್ರೆ ಇನ್ನು ನನ್ನ ಕಥೆಏನಪ್ಪಾ ಅಂತ ಹೆದರಿಕೊಂಡೇ ಮಾತಾಡಿಸೊಕೆ ಹೋದೆ. ಅಲ್ಲಿ ನಾನು ಅಂದುಕೊಂಡಿದ್ದ ಹಾಗೇ ಮೂರುಜನ ದಿಗ್ಗಜರು ಆಸೀನರಾಗಿದ್ರು. ನನಗೆ ಅಲ್ಲಿ ಮತ್ತೊಮ್ಮೆ ಸಂದರ್ಶನ ಮಾಡಿದ್ರು. ಇಲ್ಲಿ ಆ ದಿಗ್ಗಜರು ಯಾರು ಅನ್ನೋದನ್ನ ಹೇಳ್ತಾಇಲ್ಲ. ನನ್ನ ಸಂದರ್ಶನದ ಮುಂದಿನ ಬೆಳವಣಿಗೆ ಬಗ್ಗೆ ನನಗೆ ಸ್ವಲ್ಪ ಅನುಮಾನ ಮೊದಲಿಂದಲೇ ಇತ್ತು. ಅದಕ್ಕೆ ಸರಿಯಾಗಿ ನಾನು ಮರಳಿ ಬೆಂಗಳೂರಿಗೆ ಬರಬೇಕಾಯಿತು. ಅಲ್ಲಿ ನನಗೆ ಹೈದರಾಬಾದಿನ ಬ್ರ್ಯಾಂಚನ್ನ ಮುಚ್ಚಲಿರುವ ನಿರ್ಧಾರದಬಗ್ಗೆ ಸ್ಪಷ್ಟವಿವರ ಸಿಕ್ಕಿತು.

ಮೀಟಿಂಗ್ ಮುಗಿಸಿ ಅಲ್ಲಿ ನಾನು ಮರಳಿ ಬೆಂಗಳೂರಿಗೆ ಬರೋ ವಿಚಾರ ಕೇಳಿ ಒಂದು ರೀತಿ ಖುಷಿ ಆದ್ರೆ ಮತ್ತೋಂದುಕಡೆ ನನ್ಗೇ ತಿಳಿದೇಇರೋಹಾಗೆ ಬೇಜಾರಾಗ್ತಾ ಇತ್ತು. ಮರಳಿ ಬೆಂಗಳೂರಿಗೆ ಬರೋ ವಿಚಾರ ಏನೋ ಖುಷಿನೇ, ಆದ್ರೂ ನಾನು ನನ್ನ ಹೈದರಾಬಾದಿನ ದಿನಗಳನ್ನ, ಜನಗಳನ್ನ, ಆಪ್ತಮಿತ್ರರನ್ನ, ಆ ಕ್ಷಣಗಳನ್ನ, ನಾನೇ ಬಾಡಿಗೆಗೆ ಪಡೆದ ಮನೆಯನ್ನ, ಇದೆಲ್ಲಾ ಬಿಟ್ಟು ಮರಳಿಬರೋ ವಿಚಾರ ಕೇಳಿ ನನ್ಗೆ ಜೀರ್ಣಿಸ್ಕೊಳೊಕ್ಕೆ ಕಷ್ಟ ಆಗ್ತಾ ಇತ್ತು.

ನಾನು ಹುಟ್ಟಿ ಬೆಳೆದ ಊರನ್ನ ಬಿಟ್ಟು ಕೆಲಸಕ್ಕೆ ಅಂತ ಬೆಂಗಳೂರನ್ನ ಸೇರಿ ಮತ್ತೆ ಅಲ್ಲಿಂದ ಕೆಲಸದ್ಮೇಲೇ ಹೈದರಾಬಾದಿಗೆ ಬಂದು ಇಲ್ಲಿ ಕೇವಲ ೫ ತಿಂಗಳೋ ಅಥವ ೬ ತಿಂಗಳೋ ಇದ್ದರೂ... ನಾನು ನನ್ನ ಇಡೀ ಜೀವನ ಮರೀದೇ ಇರೋಹಾಗೆ ನನ್ನ ಹೈದರಾಬಾದಿನ ದಿನಗಳು ನನ್ನನ್ನ ಆವರಿಸಿಬಿಟ್ಟಿದ್ವು.

ಒಂದು ಕ್ಷಣದಲ್ಲಿ ಆ ಸುದ್ದಿ ಕೇಳಿ ಸಂತಸಪಟ್ಟರೂ ಮರುಘಳಿಗೆಯಲ್ಲಿ ಅಷ್ಟೇ ಬೇಸರವಾಯ್ತು. ನನ್ನ ಆ ೫ ತಿಂಗಳ ಒಂಟಿತನವನ್ನ ದೂರ ತಳ್ಳಿದ್ದ ನನ್ನ ಗೆಳೆಯರನ್ನ ಬಿಟ್ಟು ಬರೋಕೆ ತುಂಬಾ ಬೇಸರವಾಗ್ತಾ ಇತ್ತು. ಅಲ್ಲಿ ನಾನೇ ಮಾಡಿದ್ದ ಬಾಡಿಗೆ ಮನೆ, ನನ್ನದೇ ಆದ ಸಾಮ್ರಾಜ್ಯವನ್ನ ಬಿಟ್ಟು ಬರಬೇಕಲ್ಲಾ, ನನಗಿದ್ದ ಸ್ವಾತಂತ್ರ್ಯವನ್ನ ಕಳೆದುಕೊಳ್ಳಬೇಕಲ್ಲಾ, ಎಂದೆಲ್ಲಾ ನನ್ನ ಮನಸ್ಸು ನನಗೆ ಹೇಳುತ್ತಲೇ ಇತ್ತು.

ಆದರೂ ಬೇರೆ ದಾರಿ ಇಲ್ಲದೇ ತುರಾತುರಿಯಲ್ಲಿ ಮನೆ ಖಾಲಿ ಮಾಡೋ ಕಾಯಕಕ್ಕೆ ಕೈ ಹಾಕಿದೆ. ಶಿವರಾಜ್ ಕೂಡಾ ಇದರಲ್ಲಿ ತಮ್ಮ ಸಹಾಯ ಹಸ್ತ ನೀಡಿದ್ರು ಅನ್ನೊದನ್ನ ವಿಷೇಶವಾಗಿ ಹೇಳಬೇಕಿಲ್ಲ.

Wednesday, June 4, 2008

ನನ್ನ ಅಮ್ಮ

೦೪-ಜೂನ್-೨೦೦೮

ನೆನ್ನೆ ತಾನೆ ಅಪ್ಪನ ಮಾಸಿಕ ಇತ್ತು, ಅದಕ್ಕೆಂದು ಮೊನ್ನೆ ರಾತ್ರಿ ಬೆಂಗಳೂರಿನಿಂದ ಬಸ್ ನಲ್ಲಿ ಹೊರಟಿದ್ದ ನನ್ನ ಪಕ್ಕದಲ್ಲಿ ಸರಿ ಸುಮಾರು ೩೦ರಿಂದ ೪೦ರ ಒಳಗಿನ ಮಹಿಳೆ ಕುಳಿತಿದ್ದರು. ನೋಡಲಿಕ್ಕೆ ಅವಿದ್ಯಾವಂತೆಯಂತೆ ಕಾಣಿತ್ತಿದ್ದ ಆ ಮಹಿಳೆ ಬಸ್ಸನ್ನು ಹತ್ತಿದಾಗಿನಿಂದಾ ಏನಾದರೊಂದು ತಿಂಡಿಯನ್ನ ತಿನ್ನುತ್ತಲೇ ಇದ್ದರು.

ಪ್ರಯಾಣ ಇನ್ನೂ ಬಿಡದಿಯನ್ನೂ ಮುಟ್ಟಿರಲಿಲ್ಲ, ಆಕೆಗೆ ವಾಂತಿ ಶುರುವಾಯಿತು. ಒಬ್ಬೊಂಟಿ ಮಹಿಳೆ, ಅದರಜೊತೆಯಲ್ಲಿ ಆಕೆಗೆ ಕಾಡುತ್ತಿದ್ದ ಅನಾರೋಗ್ಯ. ಸುಸ್ತಾಯ್ತಾ ? ನೀರುಬೇಕಾ ? ಸ್ವಲ್ಪ ಸುಧಾರಿಸ್ಕೊ !!! ನಿದ್ದೆಮಾಡು !!! ಹೀಗೆಲ್ಲಾ ಹೇಳುವುದಕ್ಕೆ ಅಲ್ಲಿ ಆಕೆಯ ಸಂಭಂದಿಗಳು ಯಾರೂ ಇರಲಿಲ್ಲ. ಅದರ ಬದಲಿಗೆ ಏನು ಹೆಂಗಸೋ ಏನೋ, ಮೈ ಗೆಲ್ಲಾ ಹಾರಿಸ್ತಾಳೆ, ಏಯ್, ಹೋಗಿ ಹಿಂದಿನ ಸೀಟಿನಲ್ಲಿ ಕೂತ್ಕೋ, ಅಲ್ಲಿ ಹೋಗಿ ವಾಂತಿ ಮಾಡ್ಕೊ !!! ಹೀಗೆ ಎಲ್ಲಾ ಬೈಗುಳಗಳ ಸುರಿಮಳೆ ಪ್ರಾರಂಭಿಸಿದ್ರು. ನನಗೆ ಆಕೆಯ ಮೇಲೆ ಮರುಕ ಉಂಟಾಗಿ ನನ್ನಬಳಿ ಇದ್ದ ನೀರನ್ನ ಸ್ವಲ್ಪ ಕುಡಿಯಲಿಕ್ಕೆ ಕೊಟ್ಟೆ. ಆಗ ನನ್ನ ಕಣ್ಣಲ್ಲಿ ನನಗರಿವಿಲ್ಲದಂತೆ ನೀರು ತುಂಬಿತ್ತು. ಒಂಟಿತನದಲ್ಲಿ ಇರುವ ನೋವು ಅದನ್ನ ಅನುಭವಿಸಿದವರಿಗೇ ಗೊತ್ತು.

ನೀರು ಕುಡಿದ ಆಕೆ ನನ್ನ ಪಕ್ಕದಲ್ಲೇ ಮುದುಡಿ ಮಲಗಿದಳು. ಆಕೆಗೆ ಏನು ಸಮಸ್ಯೆ ಇತ್ತೋ ಏನೋ, ಯಾವ ಕಾರಣಕ್ಕಾಗಿ ಮೈಸೂರಿನ ಪ್ರಯಾಣ ಬೆಳಸಿದ್ದಳೋ ಏನೋ, ಒಂದಲ್ಲಾ ಒಂದು ದಿನ ನಾವೂ ಹೀಗೇ ಇದೇ ಪಾಡು ಅನುಭವಿಸಿರಬಹುದು. ಆಗಲೇ ನಮಗೆ ನಮ್ಮ ಆಪ್ತರು ನೆನಪಾಗುವುದು. ಇಂದಿನ ಪೀಳಿಗೆಗೆ ಇದರ ಆತಂಕವಿಲ್ಲ, ಏಕೆಂದರೆ ತಕ್ಷಣದ ನೆರವಿಗೆ ಒಂದು ಫೋನಾದರೂ ಮಾಡಬಹುದು ಕಾರಣ ಅವರ ಕೈನಲ್ಲಿ ಇರುವ ಮೊಬೈಲು. ಆದರೆ ಆಕೆಗೆ ಫೋನು ಕೊಟ್ಟರೂ ಆಕೆ ಸಂಪರ್ಕಿಸಬೇಕಾದವರ ದೂರವಾಣಿ ಸಂಖ್ಯೆ ತಿಳಿಯದು.

ಆ ಸಂಧರ್ಭದಲ್ಲಿ ನನಗೆ ನನ್ನ ಅಮ್ಮ ನೆನಪಾದಳು. ಮಗುವಿನ ಮನಸ್ಸಿನ ನನ್ನ ಅಮ್ಮನಿಗೆ ಹೊರಗಿನ ಪ್ರಪಂಚದ ಒಂದೇ ಒಂದು ಕಿಂಡಿಯೆಂದರೆ ದೂರದರ್ಶನ (ಕೇಬಲ್ ಕೂಡಾ ಇಲ್ಲ), ಅದರಲ್ಲಿ ಬರುವ ಧಾರಾವಹಿಗಳ ಪಾತ್ರಗಳನ್ನು ಕಂಡು ತನ್ನ ತಾನೇ ಮರೆಯುವಷ್ಟು ಮುಗ್ದೆ. ಅಯ್ಯೋ !!! ನೋಡು ನೋಡು ಅವ್ಳಿಗೆ ಎಲ್ಲಾ ಬೈತಾ ಇದಾರೆ, ಪಾಪ, ಅವ್ಳು ಯಾಕೆ ಅವ್ನ ಮನೆಗೆ ಹೋಗ್ಬೇಕಿತ್ತು ? ಸುಮ್ನೆ ಇರ್ಬಾರ್ದಿತ್ತಾ ??? ಎಂದೆಲ್ಲಾ ತಾನೇ ಆ ಧಾರಾವಾಹಿಯೊಳಗೆ ಇರುವ ಒಂದು ಪಾತ್ರವೆಂಬಂತೆ ಅದರಲ್ಲಿ ತಲ್ಲೀನಳಾಗಿಬಿಡುತ್ತಾರೆ. ಹೌದು, ಈಗ ಆಕೆಯ ದಿನದ ಹೆಚ್ಚಿನಪಾಲು ಸಮಯ ಕಳೆಯುವುದು ಆ ಮಾಂತ್ರಿಕ ಪೆಟ್ಟಿಗೆಯೊಡನೆಯೇ.

ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ನಾನು ಹೋಗಿ ನೋಡಿಕೊಂಡು ಮಾತನಾಡಿಸಿಕೊಂಡು ಬರುತ್ತೇನೆ. ನನ್ನ ಸಹೋದರ/ಸಹೋದರಿಯರ ಪ್ರೀತಿ ಆಕೆಗೆ ಸಿಕ್ಕರೂ ನಾನು ನನ್ನ ಪಾಲಿನ ಪ್ರೀತಿಯನ್ನ ಆಕೆಗೆ ಕೊಡುವುದರಲ್ಲಿ ಮೋಸ ಮಾಡುತ್ತಿದ್ದೇನೆಬ ಅಳುಕು ನನ್ನಲ್ಲಿ. ಸಾಧ್ಯವಾದಷ್ಟು ಆಕೆಯೊಡನೆ ಮಾತನಾಡಿ ಆಕೆಯ ಒಂಟಿತನವನ್ನ ದೂರಮಾಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ.

ಮುಲತಃ ಸ್ವಲ್ಪ ಹಠವಾದಿಯಾದ ನನ್ನ ಅಮ್ಮ ಸುಲಭವಾಗಿ ಯಾರ ಮಾತನ್ನೂ ಒಪ್ಪಿಕೊಳ್ಳುವುದಿಲ್ಲ. ಒಂದು ತಿಂಗಳಿನ ಹಿಂದೆ ಆಕೆಯನ್ನ ಬೊಂಬಾಯಿಗೆ ನನ್ನ ಅಕ್ಕ ಕರ್ಕೊಂಡು ಹೋಗಿದ್ರು, ಸ್ವಲ್ಪ ಮನಸ್ಸು ಹಗುರವಾಗ್ಲಿ ಅಂತ. ಆಕೆಯನ್ನ ನಾನೇ ಉಡುಪಿಗೆ ಬಿಟ್ಟು ಬಂದಿದ್ದೆ. ಉಡುಪಿಗೆ ಹೋಗೋವಾಗ ಸ್ವಲ್ಪ ನೆಮ್ಮದಿಯಾಗಿ ಪ್ರಯಾಣ ಮಾಡ್ಲಿ ಅಂತ ನನ್ನ ಹತ್ತಿರ ಇದ್ದ ಒಂದು ಐಪಾಡ್ ನಲ್ಲಿ ಹಾಡುಗಳನ್ನ ಆಕೆಗೆ ಕೇಳೋಕ್ಕೆ ಕೊಟ್ಟೆ. ಅಯ್ಯೋ !!!! ಇದು ನನ್ಗೆ ಆಗೋದಿಲ್ಲ ಮಾರಾಯಾ !!! ಕಿವಿಯಿಂದ ಬಿದ್ದು ಬಿದ್ದು ಹೋಗತ್ತೆ ಅಂತ ಆಕೆಯ ಕಂಪ್ಲೈಂಟು !!! ಕೊನೆಗೆ ನನ್ನ ಮೊಬೈಲಿನ ಇಯರ್ ಫೋನನ್ನ ಕೊಟ್ಟು ಆಕೆ ಹಾಡುಕೇಳೋಹಾಗೆ ಮಾಡಿದೆ. ಹಾಡು ಕೇಳ್ತಾ ನನ್ನ ಮುದ್ದು ಅಮ್ಮ ನಿದ್ದೆ ಮಾಡಿದ್ಳು. ನಿದ್ದೆಯಲ್ಲಿ ಒಂದು ಪುಟ್ಟ ಪಾಪು ನನ್ನ ಹತ್ತಿರ ಮಲಗಿರೋತರ ಕಾಣ್ತಾ ಇತ್ತು.

ಅಮ್ಮ, ನಿನ್ನ ಋಣ ನಾ ಹೇಗೆ ತೀರಿಸಲಿ !!!