ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Monday, November 17, 2008

ಹುನ್ಕಲ್ ವುಡ್

ಪ್ರತೀ ಸಲದಂತೆ ಈ ಸಲವೂ ಡಿಸೆಂಬರಿನಲ್ಲಿ ನಮ್ಮ ಚಾರಣದ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿತ್ತು. ಕಳೆದಬಾರಿ ಅಣ್ಣನ ಮಗಳಿನ ನಾಮಕರಣವಿದ್ದಿದ್ದರಿಂದ ನನಗೆ ಚಾರಣಕ್ಕೆ ಹೋಗಲಾಗಿರಲಿಲ್ಲ. ವರುಷದ ಮಿಕ್ಕ ದಿನಗಳಲ್ಲಿ ಯಾಂತ್ರಿಕಜೀವನದಿಂದ ಸ್ವಲ್ಪ ಬದಲಾವಣೆ ಇರಲೆಂದು ನಮ್ಮ ಚಾರಣದ ತಂಡ ಡಿಸೆಂಬರಿನಲ್ಲಿ ಚಾರಣಕ್ಕೆ ಹೋಗುವುದು ವಾಡಿಕೆ. ಕಳೆದಬಾರಿ ಪ್ರಕೃತಿಯ ಮಡಿಲಿನಲ್ಲಿ ವಿಹರಿಸುವ ಅವಕಾಶ ಕೈತಪ್ಪಿದ್ದರಿಂದ ಈ ಸಲವಾದರೂ ಚಾರಣಕ್ಕೆ ಹೋಗಲೇಬೇಕೆಂದು ಮೊದಲೇ ಮನದಲ್ಲಿ ಎಣಿಸಿದ್ದೆ. ನಾನು ಖಂಡಿತವಾಗಿ ಬರುವುದಾಗಿಯೂ ತಿಳಿಸಿದ್ದೆ.

ಆದರೆ ಸ್ವಲ್ಪದಿನಗಳ ನಂತರವಷ್ಟೇ ನೆನಪಾಗಿದ್ದದ್ದು.... ನಾವು ಚಾರಣಕ್ಕೆ ಹೊರಡುವ ದಿನಾಂಕದಂದೇ ಅಪ್ಪನ ಮಾಸಿಕ ಇದೆಯೆಂದು. ಚಾರಣಕ್ಕಿಂತಾ ಮಾಸಿಕ ಮುಖ್ಯವಾದದ್ದರಿಂದ ಈ ಸಲವೂ ಚಾರಣದ ಅವಕಾಶ ಕೈ ತಪ್ಪಿ ಹೋಯಿತು. ಪ್ರಕೃತಿಯ ಮಡಿಲಿನಲ್ಲಿ ಪ್ರತಿವರುಷವೂ ಕಳೆಯುತ್ತಿದ್ದ ದಿನಗಳನ್ನು ಈ ಸಲ ಕಳೆಯಲಾಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಮನೋಹರ ೨ ದಿನಗಳ ಚಾರಣದಬಗ್ಗೆ ಹೇಳಿದ. ಚಾರಣದ ಸ್ಥಳ, ಹೊರಡುವ ವೇಳೆ, ಅಲ್ಲಿಗೆ ಹೋಗುವ ವ್ಯವಸ್ಥೆ ಎಲ್ಲಾ ತಿಳಿದುಕೊಂಡು ನಾನು ಬರುವುದಾಗಿ ಹೇಳಿ ಆ ವಿಚಾರವಾಗಿ ಅದರಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡೆ. ಹರ್ಷ ಈ ಚಾರಣದ ಜವಾಬ್ದಾರಿಯನ್ನು ಹೊತ್ತಿದ್ದರು. ಪ್ರಾಕ್-ಸಿಸ್ ಅನ್ನುವ ಕಂಪನಿಯಲ್ಲಿ ಕೆಲಸ ಮಾಡುವ ಅವರು ಮತ್ತು ಅವರ ಸಹೋದ್ಯೋಗಿಗಳ ಜೊತೆಯಲ್ಲಿ ನಾನೂ ಒಬ್ಬನಾಗಿ "ಹುನ್ಕಲ್ ವುಡ್" ಅನ್ನುವ ಧಾಮಕ್ಕೆ (Resort) ಹೋಗಿ ಹತ್ತಿರದಲ್ಲೇ ಇರುವ ಹುನ್ಕಲ್-ರಾಕ್ ಅನ್ನು ಹತ್ತುವುದು ನಮ್ಮ ಪೂರ್ವಯೋಜಿತ ಕಾರ್ಯಕ್ರಮವಾಗಿತ್ತು. ಅಂದಾಜು ೩೪ ಜನ ಒಟ್ಟಿಗೇ ಒಂದು ಬಸ್ಸಿನಲ್ಲಿ ಚಿಕ್ಕಮಗಳೂರಿನ ಮೂಲಕ "ಹುನ್ಕಲ್ ವುಡ್" ಧಾಮಕ್ಕೆ ಹೋಗಬೇಕಾಗಿತ್ತು. ಅಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಅಚ್ಚುಕಟ್ಟಾಗಿದ್ದದ್ದರಿಂದ ಹರ್ಷ ಮೊದಲೇ ಅದನ್ನು ಕಾದಿರಿಸಿದ್ದರು. ಆ ೩೪ ಜನದಲ್ಲಿ ೪ ಪುಟ್ಟ ಮಕ್ಕಳೂ ಇದ್ದದ್ದು ವಿಷೇಶ.



ಪ್ರಕೃತಿಯ ಈ ಸೊಬಗನ್ನ ಸವಿಯಲು ನಾವು ನಾಡಿನ ಜನಜಂಗುಳಿಯಿಂದ, ಯಾಂತ್ರಿಕ ಬದುಕಿನಿಂದ ದೂರ ಅಂದರೆ ಚಿಕ್ಕಮಗಳೂರಿನಿಂದ ಅಂದಾಜು ೨೨ ಕಿ.ಮೀ ದೂರ ಬರಬೇಕು. ಇಲ್ಲಿಗೆ ಬಂದಾದಮೇಲೆ ಯಾವುದೇ ಮೊಬೈಲ್ ಕೆಲಸ ಮಾಡುವುದಿಲ್ಲ. ಬಿ.ಎಸ್.ಎನ್.ಎಲ್ ಬಿಟ್ಟು, ಅದು ಸಿಟಿಯ ಒಳಗಡೆ ಕೆಲಸ ಮಾಡದಿದ್ದರೂ ಇಲ್ಲಿ ಕೆಲಸ ಮಾಡುತ್ತದೆ ;)

ಇಲ್ಲಿಯೇ ವಾಸವಾಗಿರುವ ಸಹಾಯಕರು ನಮ್ಮ ಅಡುಗೆ, ತಿಂಡಿ ಮತ್ತು ಕಾಫಿಯ ವ್ಯವಸ್ಥೆ ಮಾಡಿದ್ದರು. ಇಲ್ಲಿಯ ರಾತ್ರಿಗಳನ್ನು ನೀವು ಮೇಣದಬತ್ತಿಯ ಸಹಾಯದಿಂದ ಕಳೆಯಬೇಕಾದೀತು, ಜೊತೆಯಲ್ಲಿ ಬ್ಯಾಟರಿಯನ್ನು ಕೊಂಡೊಯ್ದರೆ ಒಳಿತು. ಇಲ್ಲಿಗೆ ನೀವು ಈ ಮಾರ್ಗದಲ್ಲಿ ಬರಬಹುದು: ಬೆಂಗಳೂರು>ಚನ್ನರಾಯಪಟ್ಟಣ>ಹಾಸನ>ಬೇಲೂರು>ಚಿಕ್ಕಮಗಳೂರು>ಹೊಸಪೇಟೆ. ಅಲ್ಲಿಂದ ಅವರದೇ ಆದ ಸಾರಿಗೆ ವ್ಯವಸ್ಥೆಯಲ್ಲಿ ಹುನ್ಕಲ್ ವುಡ್ ತಲುಪಬೇಕು. ನೀವು ಕ್ರಮಿಸುವ ಅಂದಾಜು ದೂರ ೨೭೦ ಕಿ.ಮೀ. ಗಳು

ನಾವು ಬೆಂಗಳೂರನ್ನು ಶುಕ್ರವಾರ ರಾತ್ರಿ ಬಿಟ್ಟು ಶನಿವಾರ ಮುಂಜಾವದಂದು ಆ ಸ್ಥಳವನ್ನು ತಲುಪಿ, ಅಲ್ಲಿನ ಕಾರ್ಯಕ್ರಮಗಳನ್ನ ಮುಗಿಸಿ ಭಾನುವಾರ ರಾತ್ರಿ ಮರಳಿ ಬೆಂಗಳೂರಿಗೆ ಬರುವ ಯೋಜನೆಯನ್ನು ಹರ್ಷ ಮೊದಲೇ ಸಿದ್ದಪಡಿಸಿದ್ದರು.

ಪೂರ್ವನಿರ್ಧಾರಿತ ಯೋಜನೆಯಂತೆ ಖಾಸಗಿ ಬಸ್ಸನ್ನು ಬಾಡಿಗೆಗೆ ಪಡೆದುಕೊಂಡದ್ದರಿಂದ ಆಯ್ದ ಸ್ಥಳಗಳಿಂದ ನಾವೆಲ್ಲಾ ಆ ಬಸ್ಸನ್ನು ಹತ್ತಿ ರಾತ್ರಿ ಸುಮಾರು ರಾತ್ರಿ ೧೧.೩೦ ಕ್ಕೆ ಬಿಟ್ಟು ಬೆಳಗ್ಗೆ ಸುಮಾರು ೫.೩೦ ರ ಸಮಯಕ್ಕೆ ಚಿಕ್ಕಮಗಳೂರಿಗೆ ಬಂದಿದ್ದೆವು. ಬೆಂಗಳೂರಿನ ಚಳಿಗೆ ಹೋಲಿಸಿದರೆ ಅಲ್ಲಿನ ಚಳಿ ಒಂದು ಕೈ ಮೇಲೆ ಇದ್ದಂತಿತ್ತು. ರೆಸಾರ್ಟಿಗೆ ಹೋಗಲು ಇನ್ನು ಸಮಯವಿದ್ದದ್ದರಿಂದ ಅಲ್ಲೇ ಬಿಸಿ ಬಿಸಿ ಟೀ ಕುಡಿದು ನಂತರ ಮುಂದೆ ಸಾಗಿತ್ತು ನಮ್ಮ ಪಯಣ. ಆ ಚಳಿಯಲ್ಲಿ ಕೈಯಲ್ಲಿ ಬಿಸಿ ಬಿಸಿ ಟೀ ಕುಡಿಯುವ ಮಜವೇ ಬೇರೆ !!! ಗ್ರಾಹಕರಿಗೆ ಕಾದಿದ್ದ ಒಬ್ಬ ಟೋಪಿ ಮಾರುವವನಿಗೆ ನಮ್ಮ ಬಸ್ಸನ್ನು, ಬಸ್ಸಿನ ತುಂಬಾ ತುಂಬಿರುವ ಜನರನ್ನು ನೋಡಿ ಬಸ್ಸಿನಬಳಿಗೇ ತನ್ನ ಟೋಪಿ ತುಂಬಿದ ಚೀಲವನ್ನು ತಂದು ತನ್ನ ವ್ಯಾಪಾರವನ್ನು ಪ್ರಾರಂಭಿಸಿದ. ಅಲ್ಲಿಂದ ಹೊರಟ ನಮ್ಮ "ಹಂಸ" ಸುಮಾರು ೭.೦೦ ಸಮಯಕ್ಕೆ "ಹುನ್ಕಲ್ ವುಡ್" ಹತ್ತಿರದ ಮುಖ್ಯರಸ್ತೆಗೆ ಬಂದಿತ್ತು. ಅಲ್ಲಿಂದ ಅವರದೇ ಸಾರಿಗೆ ವ್ಯವಸ್ಥೆಯಲ್ಲಿ ನಾವು ಆ ಧಾಮಕ್ಕೆ ಹೋಗಬೇಕಾಗಿತ್ತು.

ಅಲ್ಲಿ ಮತ್ತೊಂದು ಚಹಾ ವಿರಾಮದ ನಂತರ ಸರಕುಸಾಗಾಣೆ ವಾಹನವೊಂದು ಅಲ್ಲಿನ ದಿನಗೂಲಿ ಕಾರ್ಮಿಕರನ್ನು ಹೊತ್ತು ಆ ಎಸ್ಟೇಟಿನ ಒಳಗೆ ಹೋಯಿತು. ಅದು ಮರಳಿ ನಮ್ಮ ಮುಂದೆ ಬಂದು ನಿಂತಾಗಲೇ ನಮಗೆ ತಿಳಿದದ್ದು, ಅದೇ ನಮ್ಮ ಮುಂದಿನ "ರಾಜಹಂಸ"ವೆಂದು. ನಾವೆಲ್ಲಾ ಅದರೊಳಗೆ (ಕುರಿಗಳು ಸಾರ್, ಕುರಿಗಳು) ಹತ್ತಿ ಯಾವ ಟೋರಾ ಟೋರಾದಲ್ಲೂ ಸಿಗದ ಮಜವನ್ನು ಅನುಭವಿಸಿ ೭.೫೦ಕ್ಕೆ ರೆಸಾರ್ಟ್ ತಲುಪಿದೆವು.

ಅಲ್ಲೇ ಸ್ವಲ್ಪ ಹೊತ್ತು ವಿಶ್ರಮಿಸಿ ತಿಂಡಿಯನ್ನು ತಿಂದು ಮಧ್ಯಾನ್ನದ ಊಟವನ್ನು ಕಟ್ಟಿಸಿಕೊಂಡು ಸುಮಾರು ೧೧.೨೦ಕ್ಕೆ ನಮ್ಮ ಚಾರಣವನ್ನು ಪ್ರಾರಂಭಿಸಿದೆವು. ಪುಟ್ಟಾಣಿ ರತನ್ ಪುಟ್ಟ ಬ್ಯಾಗ್ ಮತ್ತು ಪುಟ್ಟ ಬೈನಾಕ್ಯುಲರ್ ನೊಂದಿಗೆ ತಾನೂ ದೊಡ್ಡವರಿಗಿಂತ ಏನೂ ಕಡಿಮೆಯಿಲ್ಲವೆನ್ನುವಂತೆ ಬಂದಿದ್ದ. ಮಿಕ್ಕ ಪುಟಾಣಿಗಳು ತಮ್ಮ ಪೋಷಕರ ರಕ್ಷಣೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮುಂದೆ ಸಾಗುತ್ತಿದ್ದರು.



ಸಾಹಸಿಗರಿಗೆ, ಚಾರಣಿಗರಿಗೆ ಹೇಳಿಮಾಡಿಸಿದ ಈ ನಿಸರ್ಗತಾಣದಲ್ಲಿ ಸಣ್ಣ ಝರಿ, ಮನಮೊಹಕ ಪರ್ವತ ಶ್ರೇಣಿ, ದಟ್ಟವಾದ ಕಾಡುಗಳನ್ನೊಳಗೊಂಡಿರುವ ಈ ತಾಣ ಮುಖ್ಯವಾಗಿ ದಿನನಿತ್ಯದ ಜಂಜಾಟದಿಂದ ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ದಿತ್ತು

ಮಧ್ಯಾನ್ನ ೧೨ರ ಸಮಯದಲ್ಲಿ ನಮ್ಮ ತಂಡಕ್ಕೆ ಹಸಿರು ಹಾವಿನ ದರುಶನವಾಯಿತು. ನವೆಂಬರ್ ತಿಂಗಳಿನಲ್ಲಿ ಮಳೆ ಇರದ ಕಾರಣ ನಮಗೆ ಜಿಗಣೆಗಳ ಕಾಟ ಇರಲಿಲ್ಲ, ಹಾಗೂ ಎಲ್ಲೆಲ್ಲಿ ತೇವಾಂಶವಿರುತ್ತದೋ ಅಲ್ಲೆಲ್ಲಾ ಅವುಗಳದೇ ರಾಜ್ಯಾಭಾರ... ಕಾಫೀ ಎಸ್ಟೇಟಿನಲ್ಲಿ ಕೆಲಸಾಮಾಡುವ ಕಾರ್ಮಿಕರು ಈ ಜಿಗಣೆಗಳ ಕಾಟದಿಂದ ಪಾರಾಗಲು ಸಾಸಿವೆ ಎಣ್ಣೆಗೆ ನಷ್ಯದ ಪುಡಿಯನ್ನು ಬೆರೆಸಿ ತಮ್ಮ ಕೈ ಕಾಲುಗಳಿಗೆ ಲೇಪಿಸಿಕೊಳ್ಳುತ್ತಾರಂತೆ, ಅದು ಅಲ್ಲಿ ಕೆಲಸಮಾಡಲು ಬಂದಿದ್ದವರಿಂದ ನಮಗೆ ತಿಳಿದುಬಂದ ವಿಷಯ. ಅಲ್ಲಿಂದ ಬಳಲಿದ್ದ ತಂಡದ ಸದಸ್ಯರನ್ನು ಹುರಿದುಂಬಿಸುತ್ತಾ ನಮ್ಮ ಹೆಜ್ಜೆಗಳನ್ನು ಹುನ್ಕಲ್-ರಾಕ್ ನ ಕಡೆಗೆ ಸವೆಸುತ್ತಿದ್ದೆವು. ಮಧ್ಯಾನ್ನ ೧.೨೦ ರ ಸಮಯದಲ್ಲಿ ಊಟಮಾಡುವ ಸಲುವಾಗಿ ಒಂದು ಝರಿಯಬಳಿ ತಂಗಿದ್ದೆವು, ಅಲ್ಲಿ ನಮಗೆ ಜಿಗಣೆ, ಮತ್ತು ಪಿಟ್ ವೈಪರ್ ಗಳು ಕಾಣಿಸಿದವು. ಈ ವೈಪರ್ ಅನ್ನುವ ಉರಗ ಪ್ರಭೇದ ಅತ್ಯಂತ ವಿಷಕಾರಿ. ನಮಗೆ ಕಂಡಿದ್ದು ಆಕಾರದಲ್ಲಿ ಪುಟ್ಟ ಮರಿಯಂತಿದ್ದರೂ ಅದರ ವಿಷ ಮಾರಣಾಂತಿಕವೇ. ಎಲ್ಲರ ಕ್ಯಾಮರಾ ಕಣ್ಣು ಆ ವೈಪರಿನತ್ತ ಹೊರಳಿತು.... ಕ್ಯಾಮರಾಗಳು ಮಾತನಾಡತೊಡಗಿದವು, ಕ್ಲಿಕ್.... ಕ್ಲಿಕ್... ಕ್ಲಿಕ್.... ಆ ವೈಪರ್ ತನ್ನ ಸುರುಳಿ ಸುತ್ತಿದ ಮೈಯನ್ನು ಛಾಯಾಗ್ರಾಹಕರಿಗೆ ಪ್ರದರ್ಶಿಸುತ್ತಾ ತನ್ನ ಬಳಿ ಬರಬೇಡಿರೆಂದು ಎಚ್ಚರಿಕೆ ನೀಡುತ್ತಿತ್ತು. ಅಲ್ಲಿಂದ ಸ್ವಲ್ಪ ಮುಂದೆ ಬಂದಂತೆ ಹಾವಿಗಿಂತಾ ನಾನೇನು ಕಮ್ಮಿ ಎನ್ನುವಂತೆ ಮತ್ತೊಂದು ಕೀಟ ತನ್ನ ಹೊಳಪಿನ ಮೈಮಾಟ ಪ್ರದರ್ಶಿಸಿತು.




ಚಾರಣಿಗರೆಲ್ಲಾ ಉತ್ಸಾಹದಿಂದ ಆ ಹೆಬ್ಬಂಡೆಯಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಮಿಕ್ಕವರು ಸುಸ್ತಾಗಿ ಹಿಂದೆ ಉಳಿದಿದ್ದೆವು. ಕಡಿದಾದ ಹುಲ್ಲುತುಂಬಿದ ಆ ಪರ್ವತವನ್ನು ಹತ್ತಲು ಅನುಭವ ಬೇಕೇ ಬೇಕು. ನಮ್ಮೊಂದಿಗೆ ಬಂದಿದ್ದ ಗೈಡ್ ನಮ್ಮಿಂದ ದೂರ ಹೋಗಿದ್ದರಿಂದ ನಮ್ಮ ಮತ್ತು ಅವರ ನಡುವಣ ಸಂಪರ್ಕ ಇರಲಿಲ್ಲ. ಹಾಗಾಗಿ ನಾವು ಹಿಂದುಳಿಯಬೇಕಾಯಿತು. ನಾವೆಲ್ಲಾ ಅಲ್ಲೇ ಕುಳಿತು ನಿಸರ್ಗದ ಸೊಬಗನ್ನು ಸವಿಯುತ್ತಲಿದ್ದರೆ ಮೇಲಿನ ತಂಡ ಆ ಹೆಬ್ಬಂಡೆಯನ್ನು ತಲುಪಲೇ ಬೇಕೆಂದು ತನ್ನ ಚಾರಣವನ್ನು ಮುಂದುವರಿಸಿತ್ತು. ಮುಂದಿನ ದಾರಿ ಕಡಿದಾದ್ದರಿಂದ ನಮ್ಮ ವಿಭಜಿತ ತಂಡ ಸುಮಾರು ೩.೦೦ ಘಂಟೆಯ ಸಮಯದಲ್ಲಿ ಮರಳಿ ರೆಸಾರ್ಟಿಗೆ ಹೋಗುವ ನಿರ್ಧಾರಕ್ಕೆ ಬಂದೆವು. ಹತ್ತುವಾಗ ನಿಂತು ಹತ್ತಿದ್ದ ತಂಡದ ಸದಸ್ಯರು ಇಳಿಯುವಾಗ ಪುಟ್ಟ ಮಕ್ಕಳು ಜಾರುಬಂಡೆಯಲ್ಲಿ ಜಾರಿದಂತೆ ಜಾರಿಕೊಂಡು ಇಳಿಯುತ್ತಿದ್ದರು. ಚಾರಣವನ್ನು ಮುಗಿಸಿ ಮರಳಿ ರೆಸಾರ್ಟಿಗೆ ಬಂದಾಗ ಸಂಜೆ ೬.೩೦ರ ಸಮಯ.

ಅಲ್ಲಿಂದ ಬಂದು ಸ್ವಲ್ಪ ಸುಧಾರಿಸಿಕೊಂಡಮೇಲೆ ಕರೆಂಟ್ ಇಲ್ಲದ ಕಾರಣ ನನ್ನ ಕ್ಯಾಮರದ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಲಾಗಲಿಲ್ಲ. ಸಂಜೆಯಹೊತ್ತಿಗೆ ಬಿಸಿ ಬಿಸಿ ಮೆಣಸಿನಕಾಯಿ ಭಜ್ಜಿ, ಮತ್ತೆ ಕಾಪಿ ಬಂದಿತು. ಬೆಂಗಳೂರಿನಲ್ಲಿ ಬಹಳ ಕಡಿಮೆ ಕಾಫಿ ಕುಡಿಯುವ ನಾನು ಅಲ್ಲಿ ಅವರು ಕೊಟ್ಟಾಗಲೆಲ್ಲ ಬೇಡ ಎನ್ನದೇ ಕುಡಿಯುತ್ತಿದ್ದೆ, ಅಲ್ಲಿಯ ಚಳಿಗೆ ಅದು ಅತ್ಯವಶ್ಯಕ. ರಾತ್ರಿ Camp fireಹಾಕಿಕೊಂಡು ಅದರಲ್ಲಿಯ ಬಿಸಿಗೆ ಮೈಒಡ್ಡಿ ಕುಳಿತು ನಮಗೆ ತಿಳಿದಿರುವ ಹಾಡುಗಳನ್ನ ನಮ್ಮದೇ ರೀತಿಯಲ್ಲಿ ಹಾಡಿ, ಮಲಗುವ ಮುಂಚೆ ಮಲ್ಲಿ ಅವರಿಂದ "ಪಾಚೊ ನಾ ಆಯೋ" ಕಥೆಯನ್ನು ಕೇಳಿ ನಂತರ ಎಲ್ಲಾ ತಮ್ಮ ತಮ್ಮ ಕನಸಿನಲೋಕಕ್ಕೆ ಹೊರಳಿದರು.


ಬೆಳಿಗ್ಗೆ ಮನೋಹರ ಕತ್ತಿಗೆ ತನ್ನ ಕ್ಯಾಮರವನ್ನ ತೂಗುಹಾಕಿಕೊಂಡು ಪಕ್ಷಿವೀಕ್ಷಣೆಗೆ ಹೊರಟ. ಅಲ್ಲಿ ನಮಗೆ "ಬೀ ಈಟರ್" "ವ್ಯಾಗ್ ಟೈಲ್" "ಬುಲ್ ಬುಲ್" ಇವೇ ಮೊದಲಾದ ಪಕ್ಷಿಗಳನ್ನು ನೋಡುವ ಅವಕಾಶ ದೊರಕಿತು. ಬೆಳಗಿನ ತಿಂಡಿ ಮುಗಿಸಿ ಅದೇ ಬಂಗಲೆಯ ಹತ್ತಿರದಲ್ಲಿದ್ದ ಒಂದು ಸಣ್ಣ ಝರಿಯನ್ನು ನೋಡಲು ನಮ್ಮತಂಡ ಹೊರಟಿತು. ಸಾಮಾನ್ಯವಾಗಿ ನಮ್ಮಲ್ಲಿ ಕಾಣಸಿಗುವ Dragan flyನ ಮತ್ತೊಂದು ಪ್ರಭೇಧ ನಮ್ಮನ್ನು ಚಕಿತಗೊಳಿಸಿತು. ಸಾಮಾನ್ಯ ಚಿಟ್ಟೆಯಂತೆ ಹಾರುತ್ತಿದ್ದ ಆ ಚಿಟ್ಟೆ ಹೋಲಿಕೆಯಲ್ಲಿ Dragan flyನಂತಿತ್ತು. ಸಾಮಾನ್ಯವಾಗಿ Dragan flyಗಳು ಕುಳಿತಾಗ ತಮ್ಮ ರೆಕ್ಕೆಯನ್ನು ಅಗಲವಾಗಿ ಹರಡಿ ಕೂರುತ್ತವೆ, ಆದರೆ ಈ Dragan flyಪ್ರಭೇಧ ತನ್ನ ರೆಕ್ಕೆಯನ್ನು ಮಡಚಿ ಕೂರುತ್ತಿತ್ತು.



ಆ ಸೊಬಗನ್ನು ಸವಿಯುತ್ತಾ ನಂತರ ಅಲ್ಲಿಂದ ನಮ್ಮ ತಾಣಕ್ಕೆ ಮರಳಿ ಬಂದೆವು. ಅಲ್ಲಿ ಊಟಮಾಡಿಕೊಂಡು ಮತ್ತದೇ "ರಾಜಹಂಸ" ದಲ್ಲಿ ಮುಖ್ಯರಸ್ತೆಗೆ ಬಂದು ನಮಗಾಗಿ ಕಾದು ಕುಳಿತಿದ್ದ "ಹಂಸ"ವನ್ನೇರಿ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದೆವು. ಪಯಣದ್ದ ಪ್ರಾರಂಭದಲ್ಲಿ ನಮ್ಮ ಹಂಸದಲ್ಲಿ Sansui ಚಿತ್ರ ಪ್ರದರ್ಶನವಾಯಿತು. ನಂತರ ಹಿಂದಿನ ಸಾಲುಗಳಲ್ಲಿ ಕುಳಿತಿದ್ದ ನಮ್ಮ ಮಧುರ !!!! ಕಂಠದಿಂದ ಸುಶ್ರಾವ್ಯ ಗಾನಸಿರಿ ಶುರುವಾಗಿ ಅದು ಬೆಂಗಳೂರಿನ ತನಕ ಮುಂದುವರಿದಿತ್ತು. ೨ ದಿನಗಳಿಂದ ಜೊತೆಯಲ್ಲಿದ್ದ ತಂಡದ ಸದಸ್ಯರು ತಮ್ಮ ತಮ್ಮ ಗೂಡು ಸೇರುವ ತವಕದಲ್ಲಿದ್ದರು.

Thursday, November 13, 2008

ಪ್ರೀತಿ ಮೂಡಿದಾಗ...

ಛೇ....

ನಾನು ಹೀಗೆ ಮಾಡಬಾರದಿತ್ತು.....
ಆ ಪುಟ್ಟ ಮನಸ್ಸಿಗೆ ನೋವು ನೀಡಬಾರದಿತ್ತು....
ನಾನು ಅವಳನ್ನು ನೋಯಿಸಿಬಿಟ್ಟೆ ಕಣೋ !!!!
ಅವಳ ಆ ಕಣ್ಣುಗಳಿಂದ ಕಣ್ಣೀರಿಳಿಸಿಬಿಟ್ಟೆ....
ದೇವರು ನನ್ನನ್ನು ಯಾವತ್ತೂ ಕ್ಷಮಿಸುವುದಿಲ್ಲ....
ಅಲ್ಲ ಅಲ್ಲ ತಪ್ಪು....
ಈ ಪ್ರಶ್ನೆ ಬರುವುದೇ ಇಲ್ಲ ಅಲ್ವೇನೋ ???
ನಾನು ಈ ರೀತಿ ಮಾಡಿದ್ದು ಅವನ ಸಹಾಯದಿಂದನೇ ಅಲ್ವಾ ?
ಅವ್ನು ನನ್ಗೆ ಯಾಕೆ ಈ ರೀತಿ ತೊಂದ್ರೆ ಕೊಡ್ತ ಇದಾನೆ ?
ನಾನು ಮತ್ತೆ ಅವಳು ಗೆಳೆತನದಲ್ಲಿ ಖುಷಿಯಾಗಿದ್ವೋ ಆದ್ರೆ ಅದ್ಯಾವತ್ತು ಈ ರೀತಿ ಪ್ರೀತಿಗೆ ತಿರುಗಿತ್ತೋ ನನ್ಗೇ ಗೊತ್ತಾಗ್ಲಿಲ್ಲ ಕಣೋ....

ಇದು ಗಿರಿಧರ ತನ್ನ ಆಪ್ತಗೆಳೆಯ ಶಶಾಂಕನೊಂದಿಗೆ ಆಡಿದ ನೋವು ತುಂಬಿದ ಮಾತುಗಳು... ಗಿರಿಧರ ಪ್ರತೀದಿನ ಅವನ ಆಗು ಹೋಗುಗಳನ್ನ ಶಶಾಂಕನೊಂದಿಗೆ ಚಾಚೂ ತಪ್ಪದೇ ಹೇಳುತ್ತಿದ್ದ, ಅಂದು ಅವನು ಅಂದು ಪುಟ್ಟ ಮಗುವಾಗಿದ್ದ... ನೋವು ತುಂಬಿದ ಹೃದಯದಿಂದ ಸೊರಗಿಹೋಗಿದ್ದ. ಕಾಲೇಜಿನಲ್ಲಿ ವ್ಯಾಸಂಗಮಾಡುವಾಗ ಇವರಿಬ್ಬರ ಗೆಳೆತನ ಪ್ರಾರಂಭವಾದದ್ದು... ಒಂದು ಜೀವ ಎರೆಡು ದೇಹದಂತಿದ್ದ ಆ ಇಬ್ಬರ ಗೆಳೆತನ ನಿತ್ಯ ನೂತನವಾಗಿತ್ತು. ಗೆಳೆಯರು ಎಂದರೆ ಹೀಗಿರಬೇಕು- ಇವರೇ ಬೇರೆಯವರಿಗೆ ಮಾದರಿ ಎಂದು ಎಲ್ಲಾ ಹೊಗಳುತ್ತಿದ್ದರು.

ಗಿರಿಧರ ಸ್ವಭಾವದಲ್ಲಿ ಸಾಧು, ಮೃದು ಹೃದಯಿ. ಬಹಳ ಬೇಗ ನೊಂದುಕೊಳ್ಳುವ ಅವನು ಅಂದು ಶಶಾಂಕನೊಡನೆ ತನ್ನ ಜೀವನದಲ್ಲಾದ ಘಟನೆಯನ್ನು ಹೇಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಒಂದೇ ಊರಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಬೇರೆ ಬೇರೆ ಸ್ಥಳದಲ್ಲಿದ್ದದ್ದರಿಂದ ಕೇವಲ ದೂರವಾಣಿಯಲ್ಲಿ ಸಂವಾದ ಮಾಡುತ್ತಿದ್ದರು.

ಗಿರಿಧರನ ಮತ್ತು ಲಾಸ್ಯಳ ಪರಿಚಯವಾಗಿ ೧ ವರುಷ ೬ ತಿಂಗಳು ಕಳೆದಿದ್ದರೂ ಅವರು ಒಬ್ಬರನ್ನೊಬ್ಬರು ಭೇಟಿಮಾಡಿರಲಿಲ್ಲ. ಪರಸ್ಪರ ಪ್ರೀತಿಸುತ್ತಿದ್ದ ಯುವಜೋಡಿ ಅದು. ತಮ್ಮದೇ ಆದ ಕನಸುಗಳಲೋಕದಲ್ಲಿದ್ದ ಅವರಿಗೆ ವಾಸ್ತವ ಬದುಕಿನ ಕಟು ಸತ್ಯದ ಅರಿವಾಗಿರಲಿಲ್ಲ. ಕೆಲಸದಲ್ಲಿ ಉತ್ತಮ ಪ್ರಗತಿಹೊಂದಿ ಆಕೆಯ ಮನೆಯಲ್ಲಿ ಆಕೆಯನ್ನು ವಿವಾಹವಾಗುವ ಕನಸ ಕಂಡಿದ್ದ. ಆದರೆ ಅವನ ಮನೆಯಲ್ಲಿನ ಪರಿಸ್ಥಿತಿ ಅವನನ್ನು ಆಕೆಯಿಂದ ದೂರಮಾಡಿತ್ತು. ಪ್ರತಿದಿನ ಸಮಯದ ಅರಿವಿಲ್ಲದೇ ಕೇವಲ ದೂರವಾಣಿಯ ಸಂಪರ್ಕದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು... ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿದ್ದರು. ಅಡಿಪಾಯವಿಲ್ಲದ ಕಟ್ಟಡದ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು. ತಮ್ಮದೇ ಆದ ಪುಟ್ಟ ಮನೆ, ಮನೆಯಲ್ಲಿ ತಮ್ಮ ಸಂಸಾರದ ಕನಸ ಹೆಣೆಯುತ್ತಿದ್ದರು. ಶಶಾಂಕ ಇದನ್ನು ದೂರದಿಂದಲೇ ಗಮನಿಸುತ್ತಿದ್ದ ಮತ್ತು ಗಿರಿಧರ-ಲಾಸ್ಯರ ಸಂಭಂದವನ್ನು ಗೌರವಿಸುತ್ತಿದ್ದ. ಪ್ರತಿದಿನ ಲಾಸ್ಯಳೊಂದಿಗೆ ಮಾತನಾಡಿ ಶಶಾಂಕನೊಂದಿಗೆ ಮಾತನಾಡಿದರೆ ಗಿರಿಧರನಿಗೆ ಒಂದುರೀತಿಯ ಸಮಾಧಾನ. ಗಿರಿಧರ-ಲಾಸ್ಯರ ಜೋಡಿ ಎಲ್ಲಾ ಯುವಪ್ರೇಮಿಗಳಂತೆ ಇರಲಿಲ್ಲ. ಪರಸ್ಪರ ಗೌರವಿಸುತ್ತಾ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದರು. ಮುಂದೆ ಒಮ್ಮೆ ತಾವು ಬೇರೆ ಬೇರೆ ಆಗುವ ಸಂಧರ್ಭ ಒದಗಿ ಬಂದರೂ ಧೈರ್ಯಗೆಡದೇ ಅದನ್ನು ಎದುರಿಸಬೇಕೆಂದು ನಿರ್ಧರಿಸಿದ್ದರು.

ಅಂದು ಆಕಸ್ಮಿಕವಾಗಿ ಆದ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಗಿರಿಧರನ ಮನೆಯವರು ಸಂಪ್ರದಾಯಸ್ಥರು. ಗಿರಿಧರನಿಗೆ ಮದುವೆ ಮಾಡುವ ವಿಚಾರದಲ್ಲಿ ಮನೆಯಲ್ಲಿ ಮಾತುಕತೆ ನಡೆದಿತ್ತು. ಮೊದಲು ಹುಡುಗಿಯ ಚಿತ್ರವನ್ನು ನೋಡಿ ನಂತರ ಜಾತಕವನ್ನು ನೋಡಿ ಅದೆರಡೂ ಒಪ್ಪಿಗೆಯಾದರೆ ಮುಂದಿನ ಮಾತುಕತೆ ಮುಗಿಸಿ ಮದುವೆ... ಗಿರಿಧರನಿಗೆ ಇದೆಲ್ಲಾ ತಿಳಿದಿದ್ದರೂ ಆತ ಲಾಸ್ಯಳನ್ನ ಪ್ರೀತಿಸುತ್ತಿದ್ದ. ಆ ವಿಚಾರವಾಗಿ ಆಕೆಯೊಡನೆ ಸಮಾಲೋಚನೆಕೂಡಾ ನಡೆಸಿದ್ದ. ಪರಸ್ಪರ ಒಪ್ಪಿಗೆಯಾದಮೇಲೆ, ಜಾತಕದ ಪ್ರಶ್ನೆ ಕಾಡುವುದಿಲ್ಲವೆಂದು ಅವರಿಬ್ಬರ ನಂಬಿಕೆ. ಆದರೆ ಒಂದು ದಿನ ಗಿರಿಧರನ ತಾಯಿಗೆ ತನ್ನ ಮನದ ಇಂಗಿತವನ್ನ ತಿಳಿಸಬೇಕೆನಿಸುವಷ್ಟರಲ್ಲಿ ಆತನ ತಾಯಿ ಮದುವೆಯ ವಿಚಾರ ಮಾತನಾಡತೊಡಗಿದರು.

"ನೋಡೋ ಗಿರೀ... ನಾನು ಮೊನ್ನೆ ಊರಿಗೆ ಹೋಗಿದ್ದಾಗ ಸುಬ್ಬಾಶಾಸ್ರಿಗಳ ಮಗಳು ಸಿಕ್ಕಿದ್ಳು ಕಣೋ... ಈಗ ಚಂದ ಕಾಣ್ತಾಳೆ... ಅವ್ಳಿಗೂ ಡಿಗ್ರೀ ಆಗಿದ್ಯಂತೆ.... ಹುಡುಗೀ ಅಂದ್ರೆ ಹಾಗಿರ್ಬೇಕು ನೋಡು. ದೊಡ್ಡವ್ರು ಅಂದ್ರೆ ಅವ್ಳಿಗೆ ಗೌರವ ಇದೆ. ನನ್ಗೆ ಅಂತವ್ಳ್ನೇ ಸೊಸೆಯಾಗಿ ತಂದ್ಕೋಬೇಕು ಅಂತ ಆಸೆ ಕಣೋ... ನೀನು ಅದಿಕ್ಕೆ ಒಪ್ಕೋತೀಯ ಅಂತನೂ ಗೊತ್ತು. ನನ್ ಕಣ್ ಮುಚ್ಚೋದ್ರೋಳ್ಗೇ ನಿನ್ ಮದ್ವೆ ನೋಡ್ಬೇಕು ಅಂತ ಆಸೆ. ನೆರವೇರಿಸ್ಕೊಡ್ತೀಯಾ......"

ಈ ವಿಚಾರವನ್ನ ಕೇಳಿ ಗಿರಿಧರನಿಗೆ ಸಿಡಿಲು ತಲೆಯಮೇಲೆರಗಿದ ಹಾಗಾಯಿತು... ಇನ್ನೂ ಒದುತ್ತಿರುವ ಅವನ ಲಾಸ್ಯಳಿಗೆ ಈ ವಿಚಾರವನ್ನ ಹೇಳುವುದು ಹೇಗೆ ? ಮುಂದಿನ ಜೀವನದಬಗ್ಗೆ ಸುಂದರ ಕನಸುಗಳನ್ನ ಹೆಣೆದಿರುವ ನಾವಿಬ್ಬರೂ ದೂರ ದೂರವಾದರೆ ನಮ್ಮ ಭವಿಷ್ಯದ ಕತೆ ಏನಾದೀತು ?? ಈ ವಿಚಾರವನ್ನು ಅವಳೊಡನೆ ಪ್ರಸ್ತಾಪ ಮಾಡುವುದಾದರೂ ಹೇಗೆ ? ತಲೆಯಲ್ಲಿ ನೂರಾರು ರೀತಿಯ ಪ್ರಶ್ನೆಗಳ ಸುರಿಮಳೆಗೆ ಗಿರಿಧರ ತತ್ತರಿಸಿ ಹೋಗಿದ್ದ...

ಅಂದಿನಿಂದ ಅವನಿಗೆ ಲಾಸ್ಯಳ ಜೊತೆಯಲ್ಲಿ ಮಾತನಾಡುವುದು ಕಷ್ಟವಾಗ ತೊಡಗಿತು. ಲಾಸ್ಯಳ ಹಲವು ಪ್ರಯತ್ನದ ನಡುವೆಯೂ ಗಿರಿಧರ ಅವನ ಮನೆಯಲ್ಲಿ ನಡೆದ ವಿಷಯವನ್ನ ಹೇಳಲಾಗಲಿಲ್ಲ. ಅವನ ಆ ರೀತಿಯ ವರ್ತನೆ ಲಾಸ್ಯಳ ಮೇಲೆ ಬಹಳವಾಗಿ ಪರಿಣಾಮಬೀರತೊಡಗಿತು. ಅವಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಆದರೆ ಗಿರಿಧರನ ವರ್ತನೆ ಆಕೆಗೆ ಅರ್ಥವಾಗಲಿಲ್ಲ. ಪರಿಪರಿಯಾಗಿ ಕೇಳಿದರೂ ಗಿರಿಧರನಿಂದ ಉತ್ತರ ಬಾರದ ಕಾರಣ ಲಾಸ್ಯ ತನಗಾಗುತ್ತಿರುವ ವೇದನೆಯನ್ನು ಅವನೊಡನೆ ಹೇಳಿದಳು.

ಇಷ್ಟುದಿನಗಳಿಂದ ಒಳಗೆ ಬಚ್ಚಿಟ್ಟಿದ್ದ ನೋವನ್ನು ಅಂದು ಗಿರಿಧರ ಹೊರಗೆಡವಿದ: ದಯವಿಟ್ಟೂ ನನ್ನ ಕ್ಷಮಿಸಿಬಿಡು.... ನಾನು ನಿನ್ನ ಮನಸ್ಸನ್ನ ಕೆಡಿಸಿದವನು... ಆದರೆ ನಾನು ಇಂದು ನಿಸ್ಸಹಾಯಕನಾಗಿದ್ದೇನೆ. ಮನೆಯಲ್ಲಿ ಅಮ್ಮನ ಬೇಡಿಕೆಯನ್ನು ಈಡೇರಿಸದ ಮಗ ಎನ್ನುವ ಪಟ್ಟ ನನ್ನಿಂದ ಕಟ್ಟಿಕೊಳ್ಳಲಾಗುವುದಿಲ್ಲ, ಹಾಗೆಂದು ನನ್ನ ಪ್ರೀತಿಗೂ ಮೋಸ ಮಾಡಲಾಗುವುದಿಲ್ಲ. ನನಗೆ ದಾರಿ ತೋಚದಾಗಿದೆ..... ಇಷ್ಟು ಹೇಳುತ್ತಲೇ ಅವನ ಕಣ್ಣೀರು ಧರೆಗಿಳಿಯತೊಡಗಿತು. ಪುಟ್ಟಮಗುವಿನಂತೆ ಅಳುತ್ತಾ ನಿಂತುಬಿಟ್ಟ. ಇತ್ತಕಡೆ ಲಾಸ್ಯಳಿಗೆ ಅವನ ಮಾತುಗಳನ್ನು ಕೇಳಿ ಯಾವರೀತಿ ಪ್ರತಿಕ್ರಿಯಿಸಬೇಕೆಂಬುದು ತಿಳಿಯಲಿಲ್ಲ. ಎರಡೂ ಕಡೆಯಿಂದ ಕೇವಲ ಬಿಕ್ಕಳಿಸಿ ಅಳುವ ಧನಿಯನ್ನು ಬಿಟ್ಟು ಬೇ‍ರೆ ಏನೂ ಸದ್ದಿರಲಿಲ್ಲ....

Friday, November 7, 2008

ನಿಮ್ಮಲ್ಲಿ ನಲ್ಮೆಯ ವಿನಂತಿ...

ನಾವು ನಮ್ಮ ಕಳೆದುಹೋದ ದಿನಗಳತ್ತ ತಿರುಗಿ ನೋಡಿದರೆ ಎಂದಾದರೂ ಒಮ್ಮೆ ನಿಮಗೆ ನಿಮ್ಮ ಮನೆಯ ವಿಳಾಸಕ್ಕೆ ಒಂದು ಪತ್ರ ಅಥವಾ ಕರಪತ್ರ ಬಂದಿರಬಹುದು... "ಜೈ ಸಂತೋಷೀ ಮಾ" ...... ಹೀಗೆ ಆರಂಭವಾಗುವ ಪತ್ರ "ಇದನ್ನು ____ ಜನರಿಗೆ ಕಳುಹಿಸಿದರೆ ಒಳ್ಳೆಯದಾಗುತ್ತದೆ, ಇಲ್ಲವಾದಲ್ಲಿ ಕೆಡುಕಾಗುತ್ತದೆ" ಇಲ್ಲಿಯವರೆಗೆ ಇರುತ್ತಿತ್ತು. ಆದರೆ ಕಾಲ ಬದಲಾದಂತೆ ಇದು ಮರೆಯಾಯಿತೆಂದೇನಲ್ಲ, ಇದನ್ನು ಕಳುಹಿಸುವ ಜನರು ಹೊಸಾ ತಂತ್ರಜ್ಞಾನಕ್ಕೆ ಅನುಗುಣವಾಗಿ ತಮ್ಮ ಈ ರೀತಿಯ ಸಂದೇಶಗಳನ್ನ ಬದಲಾಯಿಸಿಕೊಂಡಿದ್ದಾರೆ... ಅಂಚೆಯನ್ನು ಮರೆತು ಮೊಬೈಲಿಗೆ, ಈ-ಮೈಲಿಗೆ ದಾಸರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು e-mailಗಳು, SMSಗಳು, Orkut scrapಗಳು ನಿಮಗೆ ಅಷ್ಟಾಗಿ ಪರಿಚಯವಿಲ್ಲದವರಿಂದ ಬಂದಿರುತ್ತದೆ, ಅದರ ಅಡಕ ಈ ಮೇಲೆ ಹೇಳಿದ್ದಕ್ಕಿಂತಾ ಭಿನ್ನವೇನಲ್ಲ... "ಇದು _____ ದೇವಿಯ/ದೇವರ ಪವಾಡ... ಇದನ್ನು ೨೦ ಜನಗಳಿಗೆ ಕಳುಹಿಸಿದರೆ ನಿಮ್ಮ ಭವಿಷ್ಯ ಉತ್ತಮವಾಗುವುದು, ಕಡೆಗಾಣಿಸಿದರೆ ಕೆಡುಕಾಗುವುದು. ನಾನು ಇದನ್ನು ನಿಮಗೆ ಕಳುಹಿಸಲೇ ಬೇಕಾಗಿದೆ, ಕ್ಷಮೆ ಇರಲಿ" ಇತ್ಯಾದಿ ಇತ್ಯಾದಿ...

ದೇವರು ಅಥವಾ ದೇವತೆಯ ಹೆಸರು ಜೈ ಸಾಯಿನಾಥ್, ಜೈ ಅಂಬಾ..... ಏನಾದರೂ ಆಗಿರಬಹುದು ಹೀಗೇ ಪಟ್ಟಿ ಮಾಡುತ್ತಲಿದ್ದರೆ ಅದು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಈ ಪಟ್ಟಿಯಲ್ಲಿ ಅಲ್ಲ, ಜೀಸಸ್ ದೇವರುಗಳೂ ಸೇರಿದ್ದಾರೆ. ಮೇಲಿನ ಹೆಸರನ್ನು ನೋಡಿಯೇ ಆಸ್ತಿಕರು ದೇವರಮೇಲಿನ ಭಕ್ತಿಯಿಂದಲೋ, ಭಯದಿಂದಲೋ, ತಮ್ಮ ಭವಿಷ್ಯದ ಚಿಂತೆಯಿಂದಲೋ ತಮ್ಮ ಪರಿಚಯದವರಿಗೆ ಅದನ್ನು ಕಳುಹಿಸುತ್ತಾರೆ. ಅವರ ಮಟ್ಟಿಗೆ ಅದು ಕೇವಲ ಒಂದು ಸಂದೇಶ ಮಾತ್ರ, ಆದರೆ ಅದರ ಹಿಂದೆ ತಂತ್ರಜ್ಞಾನ ತಿಳಿಯುವ ಆಸಕ್ತಿ ಅವರಲ್ಲಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಂಪನಿಗಳು ನೀಡಿರುವ ಉಚಿತ SMS package ನಿಂದ ಆ ಸಂದೇಶ ಕಳುಹಿಸುವ ವ್ಯಕ್ತಿಗೆ ಯಾವುದೇ ಖರ್ಚಿಲ್ಲದೇ ತನ್ನ ಕೆಲಸ ಆಗಿಹೋಗುತ್ತದೆ. ಆದರೆ ಅದೇ ಒಂದು e-mail ಆದರಂತೂ ಒಂದು ನಯಾಪೈಸೆ ಕೂಡಾ ಖರ್ಚಿಲ್ಲ... ಉಚಿತವಾಗಿ ತಮ್ಮ ಪರಿಚಯಸ್ಥರ e-mailಐಡಿ ಗಳನ್ನ ಹಾಕಿ ಕಳುಹಿಸಿದರಾಯಿತು. e-mailವಿಚಾರದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬಹಳ ದೊಡ್ಡಮೊತ್ತವನ್ನು ವ್ಯಯಿಸುತ್ತಿರುವುದು ಕಳುಹಿಸಿವವನ ಗಮನಕ್ಕೆ ಬರುವುದಿಲ್ಲ. ಅವನ ಮಟ್ಟಿಗೆ ಅದು ಕೇವಲ ಒಂದು ಸಂದೇಶವಷ್ಟೇ... ಆದರೆ ಆ ಸಂದೇಶವನ್ನ ಸ್ವೀಕರಿಸುವ ವ್ಯಕ್ತಿಗೆ ಮೇಲೆ ಹೇಳಿದಂತೆ ಅಪಾರ ನಂಬಿಕೆ ಇದ್ದಲ್ಲಿ ಆತ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ, ಕಳುಹಿಸದೇ ಬೇರೆ ದಾರಿ ಇಲ್ಲ... ಹಾಗಾಗಿ ಅವನಿಂದ ಆ e-mail ಮತ್ತಷ್ಟು e-mailಐಡಿ ಗಳಿಗೆ ತಳ್ಳಲ್ಪಡುತ್ತದೆ. ಅದರಿಂದ ಆಗುವ ಲಾಭ ???

ಸುಮ್ಮನೆ ಸಮಯದ ನಷ್ಟ ಮಾನಸಿಕ ಕಿರಿಕಿರಿ ಇತ್ಯಾದಿ.... ಈ ಮೇಲಿನ ಸಂದೇಶಗಳು ಕೇವಲ ದೇವರಿಗೆ ಸೀಮಿತವಾಗಿಲ್ಲ, ಅದು ನಿಮ್ಮ ಗೆಳೆತನಕ್ಕೂ ಸವಾಲೊಡ್ಡಬಹುದು.... "ನಿನಗೆ ನಿಜವಾಗಿಯೂ ನನ್ನ ಬಗ್ಗೆ ಕಾಳಜಿ ಇದ್ದರೆ ನನಗೂ ಸೇರಿದಂತೆ ಇದನ್ನು ೨೦ ಜನರಿಗೆ ಕಳುಹಿಸು, ಎಷ್ಟು ಜನ ನಿನ್ನ ಬಗ್ಗೆ ಕಾಳಜಿ ಹೊಂದಿದ್ದರೆಂದು ನಿನಗೆ ಅರಿವಾಗುತ್ತದೆ". ಕೇವಲ ಸಂದೇಶ ಕಳುಹಿಸಿದರೆ ಮಾತ್ರಕ್ಕೆ ಕಾಳಜಿಯೆ ??? ಒಂದು ರೀತಿಯಲ್ಲಿ ಇಂತಹಾ ಸಂದೇಶಗಳು ಮೊಬೈಲ್ ಕಂಪನಿಯನ್ನು ಉದ್ದಾರ ಮಾಡುತ್ತವೆ !!! ನಾನು ಸಾಧ್ಯವಾದಷ್ತೂ ಇಂತಹಾ ಸಂದೇಶ ಕಳುಹಿಸುವ ಸ್ನೇಹಿತರಿಗೆ ಆದಷ್ಟೂ ತಿಳಿಹೇಳುತ್ತೇನೆ. ಸಾಧ್ಯವಾದಲ್ಲಿ ನೀವೂ ತಿಳಿಹೇಳಿ :)

ಕೊನೆಯದಾಗಿ ನಾನು ಹೇಳುವುದಿಷ್ಟೆ : ಇದನ್ನು ೨೦ ಜನಕ್ಕಲ್ಲ ಸಾಧ್ಯವಾದಷ್ಟು ಜನರಿಗೆ ತಿಳಿಹೇಳಿ ಅವರಲ್ಲಿ ಅರಿವು ಮೂಡಿಸಿರಿ :) ದೇವರು ನಮ್ಮ SMS ನಿಂದ ಸಂತಸ ಗೊಳ್ಳುವುದಿಲ್ಲ.... ಬದಲಾಗಿ ಕಷ್ಟಪಟ್ಟು ದುಡಿದರೆ ಸಂತಸ ಪಡಬಹುದೇನೊ....

Monday, November 3, 2008

ಪಯಣ-1

ಸ್ವಲ್ಪ ದಿನಗಳ ಹಿಂದೆ ಕೆಲಸದಮೇಲೆ ನಾನು ಉತ್ತರ ಕರ್ನಾಟಕದ ಹೊಸಪೇಟೆಗೆ ಹೋಗಬೇಕಾಯಿತು. ಒಂದು ಹೊಸಾ ತಂತ್ರಾಂಶವನ್ನ ಅಲ್ಲಿಯ ಕಂಪನಿಯಲ್ಲಿ ಅಳವಡಿಸಿಕೊಡಬೇಕಾಗಿತ್ತು. ನಾನು ನಮ್ಮ ಕಾರ್ಯಾಲಯದಲ್ಲಿ ಅದನ್ನು ಒಮ್ಮೆ ಪರೀಕ್ಷಿಸಿದ್ದರೂ ಆ ವಾತಾವರಣಕ್ಕೆ, ಆ ಕಂಪನಿಯವರ ಬೇಡಿಕೆಗೆ ಈ ತಂತ್ರಾಂಶ ಹೊಂದಿಕೆಯಾಗುತ್ತದೋ ಇಲ್ಲವೋ ಅನ್ನುವ ಅನುಮಾನ...

ನಾನು ನನ್ನ ಆಫೀಸನ್ನ ಸಂಜೆ ಸರಿ ಸುಮಾರು ೫.೪೫ಕ್ಕೆ ಬಿಟ್ಟು ಮನೆಗೆ ಬಂದೆ. ಇನ್ನೂ ಹೊರಡುವ ತಯಾರಿ ಆಗಿಲ್ಲದ ಕಾರಣ ಸ್ವಲ್ಪ ಗಡಿಬಿಡಿಯಾಗುತ್ತಿತ್ತು. ಮನೆಗೆ ಬರುವ ಮುನ್ನ ಗಟ್ಟಿ ಅವಲಕ್ಕಿ, ಸ್ಲೈಸ್, ಮತ್ತೆ ಖರ್ಜೂರವನ್ನ ಮನೆಗೆ ತಂದಿದ್ದೆ. ನನ್ನ ಮನೆಯಿಂದ ಹೊರಟು ಕೆಂಪೇಗೌಡ ಬಸ್ ನಿಲ್ದಾಣವನ್ನ ತಲುಪಲು ಕನಿಷ್ಟಪಕ್ಷ ೧ ಘಂಟೆಯಾದರೂ ಬೇಕು. ಬೆಂಗಳೂರಿನ ಅದರಲ್ಲೂ ಬನ್ನೆರುಘಟ್ಟ ರಸ್ತೆಯ ವಾಹನದಟ್ಟಣೆಯಲ್ಲಿ ಸಿಕ್ಕಿಕೊಂಡರೆ ಬಿಡಿಸಿಕೊಳ್ಳಲು ಹರಸಾಹಸ ಮಾಡಬೇಕು. ಹಾಗಾಗಿ ಅಡುಗೆ ಮಾಡಿಕೊಂಡು ಊಟಮಾಡಿ ಹೊರಡಲು ನನ್ನ ಬಳಿ ಸಮಯದ ಅಭಾವವಿತ್ತು. ಹೇಗಿದ್ದರೂ ಆಗತಾನೆ ತಂದಿದ್ದ ಅವಲಕ್ಕಿ ಕೈಗೆ ಸಿಕ್ಕಿದ್ದರಿಂದ ಅದನ್ನೇ ಸ್ವಲ್ಪ ನೆನೆಸಿಕೊಂಡು ಮೊಸರಿನೊಂದಿಗೆ ತಿಂದು ಬಸ್ಸನ್ನು ಹುಡುಕುತ್ತಾ ಹೊರಟೆ. ನಾನಿರುವ ಮನೆಯ ಹತ್ತಿರದಲ್ಲಿ ಯಾವುದೇ Busstop ಇಲ್ಲದ್ದರಿಂದ ನಡೆದುಕೊಂಡು ಬನ್ನೇರುಘಟ್ಟ ಮುಖ್ಯರಸ್ತೆಗೆ ಬಂದೆ. ರಾತ್ರಿ ೧೦.೪೫ ಕ್ಕೆ ಗಂಗಾವತಿಗೆ ಹೊರಡುವ ಐರಾವತ ಬಸ್ಸನ್ನು ನಾನು ಹತ್ತಬೇಕಿತ್ತು. ನಾನು ಕೆಂಪೇಗೌಡ ನಿಲ್ದಾಣದ ಬಸ್ಸನ್ನು ಹತ್ತಿದಾಗಲೇ ೯ ಘಂಟೆ ಸಮಯವಾಗಿತ್ತು. ಮನದಲ್ಲೇ Traffic jamನ ಭಯಂಕರ ರೂಪವನ್ನ ನೆನೆಸಿಕೊಂಡು ನಾನು ಅದರಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಐರಾವತವನ್ನೇರಿದರೆ ಸಾಕೆನ್ನಿಸಿತ್ತು.

ಗ್ರಾಮಾಂತರ ಬಸ್ ನಿಲ್ದಾಣಕ್ಕೆ ನಾನು ಬಂದಾಗ ಇನ್ನೂ ಘಂಟೆ ೧೦ರ ಸಮಯ. ೪೫ ನಿಮಿಷ ಸಮಯವಿದ್ದದ್ದರಿಂದ ಅಲ್ಲೇ ಕುಳಿತುಕೊಳ್ಳುವ ಆಸನ ಖಾಲಿ ಇದ್ದದ್ದನ್ನು ಹುಡುಕಿ ಕುಳಿತೆ. ನಾನೇನೋ ಸಮಯಕ್ಕೆ ಮುಂಚಿತವಾಗಿ ಬಂದು ನಿರಾಳವಾಗಿ ಕುಳಿತಿದ್ದೆ. ಆದರೆ ನನ್ನ ಸುತ್ತ ಮುತ್ತ ಸ್ವಲ್ಪ ತಡವಾಗಿ ಬಂದವರ ಮುಖದಲ್ಲಿ ತಮ್ಮ ಬಸ್ಸು ತಪ್ಪಿಹೋದಬಗ್ಗೆ ಬೇಸರ, ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ ಪರಸ್ಪರ ದೂಷಿಸುತ್ತಿದ್ದ ದೃಷ್ಯ, ಆ ಜನಜಂಗುಳಿಯ ನಡುವೆ ಕುಡುಕರ ಕಾಟ, ಅವನನ್ನು ಬೆನ್ನಟ್ಟಿ ಬರುತ್ತಿದ್ದ ಪೋಲೀಸ್ ಪೇದೆಗಳು, ಭಿಕ್ಷುಕಿಯೊಬ್ಬಳು ತಾನು ಸಾಕಿದ ನಾಯಿಯ ಜೊತೆಯಲ್ಲಿ ತಿನ್ನುತ್ತಿದ್ದ Tigerಬಿಸ್ಕತ್ತಿನ ದೃಷ್ಯ ನನ್ನ ಸುತ್ತ ಸುಳಿದಾಡುತ್ತಿದ್ದವು. ಮನೆಯಿಂದ, ಮನೆಯವರಿಂದ ತಿರಸ್ಕಾರಕ್ಕೊಳಗಾದ ಹಲವಾರುಮಂದಿ ಇದೇರೀತಿ ರೈಲ್ವೇ ನಿಲ್ದಾಣದಲ್ಲೋ, ಬಸ್ ನಿಲ್ದಾಣದಲ್ಲೋ ತಮ್ಮ ಆಶ್ರಯವನ್ನ ಕಾಣಬೇಕಾಗುತ್ತದೆ. ಅದೇ ವಿಚಾರವನ್ನ ಯೋಚಿಸುತ್ತಿದ್ದಂತೆ ಅಲ್ಲಿ ಸಂತಸದ ಕ್ಷಣಗಳೂ ಕಂಡು ಬಂದವು. ಎಂದೋ ಭೇಟಿಯಾಗಿ ಸ್ನೇಹಿತರಾಗಿದ್ದು ನಂತರ ಜೀವನದ ಓಟದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗದೇ ಇದ್ದ ಸ್ನೇಹಿತರು ಆ ನಿಲ್ದಾಣದಲ್ಲಿ ಭೇಟಿಯಾಗಿದ್ದರು. ಪರಸ್ಪರ ಹಸ್ತಲಾಘವಮಾಡುತಾ ಒಬ್ಬರನ್ನೊಬ್ಬರು ಖುಷಿಯಾಗಿ ಮಾತನಾಡಿಸುತ್ತಾ ಇದ್ದದ್ದನ್ನು ಕಾಣುತ್ತಿದ್ದಂತೇ ನಾ ಕಾದು ಕುಳಿತಿದ್ದ ಬಸ್ಸು ನಿಲ್ದಾಣಕ್ಕೆ ಬಂದು ನಿಂತಿತು.

ಹೊಸಪೇಟೆಗೆ ಇದು ನನ್ನ ೨ನೇ ಪಯಣ. ಆ ಸ್ಥಳದ ಪರಿಚಯ ಹೆಚ್ಚಾಗಿ ಇರದ ಕಾರಣ ಆ ಬಸ್ಸಿನ ನಿರ್ವಾಹಕನನ್ನ ಸ್ವಲ್ಪ ಹೊಸಪೇಟೆ ಬಂದಾಗ ನನ್ನನ್ನು ಎಚ್ಚರಿಸುವಂತೆ ಕೇಳಿಕೊಂಡು ನನ್ನ ಜಾಗಕ್ಕೆ ಹೋಗಿ ಕುಳಿತೆ. ಬಸ್ಸಿನ ಒಳಗಡೆ ಕನ್ನಡ ಚಲನಚಿತ್ರಗಳ ಗಾನಸುಧೆ ಹರಿದು ಬರುತ್ತಿತ್ತು. ಆದರೆ ಅದನ್ನು ಆಸ್ವಾದಿಸಲು ಬಸ್ಸಿನ ಒಳಗೆ ಕುಳಿತಿದ್ದ ಇಬ್ಬರು ಆಂಗ್ಲಭಾಷಿಗ ಕನ್ನಡಿಗರು ಅವಕಾಶ ನೀಡುತ್ತಿರಲಿಲ್ಲ. ದಾರಿಯುದ್ದಕ್ಕೂ ಪರಸ್ಪರ ಆಂಗ್ಲಭಾಷೆಯಲ್ಲೇ ಸಂಭಾಷಿಸುತ್ತಾ ತಮ್ಮ ದೂರವಾಣಿಯಲ್ಲಿ ಕನ್ನಡ ಮಾತನಾಡುತ್ತಾ (ಅಲ್ಲಾದರೂ ಕನ್ನಡದಲ್ಲಿ ಮಾತನಾಡಿದರೆನ್ನುವುದೇ ಸಮಾಧಾನ) ಕಿರಿಕಿರಿ ಉಂಟುಮಾಡುತ್ತಿದ್ದರು. ಅವರಿ ಕಿರಿಕಿರಿ ತಾಳಲಾಗದೇ ನಾನು ನನ್ನ ಕಿವಿಗೆ ಎಫ್ ಎಂ ಅನ್ನು ಚುಚ್ಚಿಕೊಂಡೆ. ರಾತ್ರಿಯ ಹೊತ್ತು ಬಸ್ಸು ದಾರಿಯನ್ನು ಸವೆಸುತ್ತಾ ಮುಂದೆಸಾಗಿತ್ತು. ಎಲ್ಲಾ ಸಹಪ್ರಯಾಣಿಗರು ನಿದ್ರಾದೇವಿಯ ವಶವಾದರೂ ನಾನವರ ಗೊರಕೆ ಸದ್ದಿಗೆ ನಿದ್ರಿಸಲಾಗದೇ ನಿದ್ರಿಸುವ ಪ್ರಯತ್ನ ಮಾಡುತ್ತಿದ್ದೆ. ಅಂತೂ ಇಂತೂ ಕತ್ತಲು ಕಳೆದು ಬೆಳಗಿನ ಚುಮುಚುಮು ಬೆಳಕಿನೊಂದಿಗೆ ಹೊಸಪೇಟೆ ನನ್ನನ್ನು ಸ್ವಾಗತಿಸಿತು.

ಬಸ್ ನಿಲ್ದಾಣದಿಂದ ಮೊದಲೇ ಕಾದಿರಿಸಿದ್ದ ಪ್ರಿಯದರ್ಶಿನಿ ಹೋಟೆಲಿಗೆ ನಡೆದುಕೊಂಡು ಬಂದು ನಿತ್ಯಕರ್ಮಗಳನ್ನು ಮುಗಿಸಿ ನಾ ತಂತ್ರಾಂಶವನ್ನ ಅಳವಡಿಸಿಕೊಡಬೇಕಾದ ಕಂಪನಿಗೆ ಹೊರಟೆ. ಮೊದಲೇ ಸ್ವಲ್ಪ ತಡವಾಗಿದ್ದದ್ದರಿಂದ ಗಡಿಬಿಡಿಯಲ್ಲಿ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಒಂದು ಧ್ವನಿ ನನ್ನ ಕೂಗಿದಂತಾಯಿತು. ಪರಿಚಯವಿಲ್ಲ ಈ ಊರಿನಲ್ಲಿ ನನ್ನ ಯಾರಾದರೂ ಏತಕ್ಕಗಿ ಕರೆದಾರು ? ಅವರು ಯಾರನ್ನೋ ಕರೆದಿರಬೇಕೆಂದು ಮುಂದೆ ಸಾಗಿದೆ. ನಂತರ ಹಿಂದಿನಿಂದ ಬಂದ ಬಾಲಕನೊಬ್ಬ ತನ್ನ ಕೈನಲ್ಲಿ ನಾ ಕಾದಿರಿಸಿದ್ದ ಬಸ್ಸಿನ ಟಿಕೇಟನ್ನು ಹಿಡಿದು ತಂದಿದ್ದ. ತಡವಾಯಿತೆಂದು ಗಡಿಬಿಡಿಯಲ್ಲಿ ಹೆಜ್ಜೆಹಾಕುವಾಗ ಪುಸ್ತಕದೊಳಗಿನಿಂದ ಟಿಕೇಟು ಬಿದ್ದುಹೋದದ್ದು ನನ್ನ ಗಮನಕ್ಕೇ ಬಂದಿರಲಿಲ್ಲ. ಆ ಹುಡುಗನಿಗೆ ಧನ್ಯವಾದಗಳನ್ನು ಹೇಳಿ ಟಿಕೇಟನ್ನ ಭದ್ರವಾಗಿರಿಸಿಕೊಂಡೆ.

ಅಲ್ಲಿಂದ ಗ್ರಾಹಕರ ಕಂಪನಿಗೆ ಹೋಗಿ ಅಲ್ಲಿ ಆ ಹೊಸಾ ತಂತ್ರಾಂಶವನ್ನ ಅಳವಡಿಸಿ ಅದರಬಗ್ಗೆ ಅವರಿಗೆ ವಿವರಿಸಿ ನಂತರ ನಾನು ಮರಳಿ ಬೆಂಗಳೂರಿಗೆ ಪಯಣ ಬೆಳೆಸಿದೆ.