ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Monday, November 17, 2008

ಹುನ್ಕಲ್ ವುಡ್

ಪ್ರತೀ ಸಲದಂತೆ ಈ ಸಲವೂ ಡಿಸೆಂಬರಿನಲ್ಲಿ ನಮ್ಮ ಚಾರಣದ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿತ್ತು. ಕಳೆದಬಾರಿ ಅಣ್ಣನ ಮಗಳಿನ ನಾಮಕರಣವಿದ್ದಿದ್ದರಿಂದ ನನಗೆ ಚಾರಣಕ್ಕೆ ಹೋಗಲಾಗಿರಲಿಲ್ಲ. ವರುಷದ ಮಿಕ್ಕ ದಿನಗಳಲ್ಲಿ ಯಾಂತ್ರಿಕಜೀವನದಿಂದ ಸ್ವಲ್ಪ ಬದಲಾವಣೆ ಇರಲೆಂದು ನಮ್ಮ ಚಾರಣದ ತಂಡ ಡಿಸೆಂಬರಿನಲ್ಲಿ ಚಾರಣಕ್ಕೆ ಹೋಗುವುದು ವಾಡಿಕೆ. ಕಳೆದಬಾರಿ ಪ್ರಕೃತಿಯ ಮಡಿಲಿನಲ್ಲಿ ವಿಹರಿಸುವ ಅವಕಾಶ ಕೈತಪ್ಪಿದ್ದರಿಂದ ಈ ಸಲವಾದರೂ ಚಾರಣಕ್ಕೆ ಹೋಗಲೇಬೇಕೆಂದು ಮೊದಲೇ ಮನದಲ್ಲಿ ಎಣಿಸಿದ್ದೆ. ನಾನು ಖಂಡಿತವಾಗಿ ಬರುವುದಾಗಿಯೂ ತಿಳಿಸಿದ್ದೆ.

ಆದರೆ ಸ್ವಲ್ಪದಿನಗಳ ನಂತರವಷ್ಟೇ ನೆನಪಾಗಿದ್ದದ್ದು.... ನಾವು ಚಾರಣಕ್ಕೆ ಹೊರಡುವ ದಿನಾಂಕದಂದೇ ಅಪ್ಪನ ಮಾಸಿಕ ಇದೆಯೆಂದು. ಚಾರಣಕ್ಕಿಂತಾ ಮಾಸಿಕ ಮುಖ್ಯವಾದದ್ದರಿಂದ ಈ ಸಲವೂ ಚಾರಣದ ಅವಕಾಶ ಕೈ ತಪ್ಪಿ ಹೋಯಿತು. ಪ್ರಕೃತಿಯ ಮಡಿಲಿನಲ್ಲಿ ಪ್ರತಿವರುಷವೂ ಕಳೆಯುತ್ತಿದ್ದ ದಿನಗಳನ್ನು ಈ ಸಲ ಕಳೆಯಲಾಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಮನೋಹರ ೨ ದಿನಗಳ ಚಾರಣದಬಗ್ಗೆ ಹೇಳಿದ. ಚಾರಣದ ಸ್ಥಳ, ಹೊರಡುವ ವೇಳೆ, ಅಲ್ಲಿಗೆ ಹೋಗುವ ವ್ಯವಸ್ಥೆ ಎಲ್ಲಾ ತಿಳಿದುಕೊಂಡು ನಾನು ಬರುವುದಾಗಿ ಹೇಳಿ ಆ ವಿಚಾರವಾಗಿ ಅದರಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡೆ. ಹರ್ಷ ಈ ಚಾರಣದ ಜವಾಬ್ದಾರಿಯನ್ನು ಹೊತ್ತಿದ್ದರು. ಪ್ರಾಕ್-ಸಿಸ್ ಅನ್ನುವ ಕಂಪನಿಯಲ್ಲಿ ಕೆಲಸ ಮಾಡುವ ಅವರು ಮತ್ತು ಅವರ ಸಹೋದ್ಯೋಗಿಗಳ ಜೊತೆಯಲ್ಲಿ ನಾನೂ ಒಬ್ಬನಾಗಿ "ಹುನ್ಕಲ್ ವುಡ್" ಅನ್ನುವ ಧಾಮಕ್ಕೆ (Resort) ಹೋಗಿ ಹತ್ತಿರದಲ್ಲೇ ಇರುವ ಹುನ್ಕಲ್-ರಾಕ್ ಅನ್ನು ಹತ್ತುವುದು ನಮ್ಮ ಪೂರ್ವಯೋಜಿತ ಕಾರ್ಯಕ್ರಮವಾಗಿತ್ತು. ಅಂದಾಜು ೩೪ ಜನ ಒಟ್ಟಿಗೇ ಒಂದು ಬಸ್ಸಿನಲ್ಲಿ ಚಿಕ್ಕಮಗಳೂರಿನ ಮೂಲಕ "ಹುನ್ಕಲ್ ವುಡ್" ಧಾಮಕ್ಕೆ ಹೋಗಬೇಕಾಗಿತ್ತು. ಅಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಅಚ್ಚುಕಟ್ಟಾಗಿದ್ದದ್ದರಿಂದ ಹರ್ಷ ಮೊದಲೇ ಅದನ್ನು ಕಾದಿರಿಸಿದ್ದರು. ಆ ೩೪ ಜನದಲ್ಲಿ ೪ ಪುಟ್ಟ ಮಕ್ಕಳೂ ಇದ್ದದ್ದು ವಿಷೇಶ.



ಪ್ರಕೃತಿಯ ಈ ಸೊಬಗನ್ನ ಸವಿಯಲು ನಾವು ನಾಡಿನ ಜನಜಂಗುಳಿಯಿಂದ, ಯಾಂತ್ರಿಕ ಬದುಕಿನಿಂದ ದೂರ ಅಂದರೆ ಚಿಕ್ಕಮಗಳೂರಿನಿಂದ ಅಂದಾಜು ೨೨ ಕಿ.ಮೀ ದೂರ ಬರಬೇಕು. ಇಲ್ಲಿಗೆ ಬಂದಾದಮೇಲೆ ಯಾವುದೇ ಮೊಬೈಲ್ ಕೆಲಸ ಮಾಡುವುದಿಲ್ಲ. ಬಿ.ಎಸ್.ಎನ್.ಎಲ್ ಬಿಟ್ಟು, ಅದು ಸಿಟಿಯ ಒಳಗಡೆ ಕೆಲಸ ಮಾಡದಿದ್ದರೂ ಇಲ್ಲಿ ಕೆಲಸ ಮಾಡುತ್ತದೆ ;)

ಇಲ್ಲಿಯೇ ವಾಸವಾಗಿರುವ ಸಹಾಯಕರು ನಮ್ಮ ಅಡುಗೆ, ತಿಂಡಿ ಮತ್ತು ಕಾಫಿಯ ವ್ಯವಸ್ಥೆ ಮಾಡಿದ್ದರು. ಇಲ್ಲಿಯ ರಾತ್ರಿಗಳನ್ನು ನೀವು ಮೇಣದಬತ್ತಿಯ ಸಹಾಯದಿಂದ ಕಳೆಯಬೇಕಾದೀತು, ಜೊತೆಯಲ್ಲಿ ಬ್ಯಾಟರಿಯನ್ನು ಕೊಂಡೊಯ್ದರೆ ಒಳಿತು. ಇಲ್ಲಿಗೆ ನೀವು ಈ ಮಾರ್ಗದಲ್ಲಿ ಬರಬಹುದು: ಬೆಂಗಳೂರು>ಚನ್ನರಾಯಪಟ್ಟಣ>ಹಾಸನ>ಬೇಲೂರು>ಚಿಕ್ಕಮಗಳೂರು>ಹೊಸಪೇಟೆ. ಅಲ್ಲಿಂದ ಅವರದೇ ಆದ ಸಾರಿಗೆ ವ್ಯವಸ್ಥೆಯಲ್ಲಿ ಹುನ್ಕಲ್ ವುಡ್ ತಲುಪಬೇಕು. ನೀವು ಕ್ರಮಿಸುವ ಅಂದಾಜು ದೂರ ೨೭೦ ಕಿ.ಮೀ. ಗಳು

ನಾವು ಬೆಂಗಳೂರನ್ನು ಶುಕ್ರವಾರ ರಾತ್ರಿ ಬಿಟ್ಟು ಶನಿವಾರ ಮುಂಜಾವದಂದು ಆ ಸ್ಥಳವನ್ನು ತಲುಪಿ, ಅಲ್ಲಿನ ಕಾರ್ಯಕ್ರಮಗಳನ್ನ ಮುಗಿಸಿ ಭಾನುವಾರ ರಾತ್ರಿ ಮರಳಿ ಬೆಂಗಳೂರಿಗೆ ಬರುವ ಯೋಜನೆಯನ್ನು ಹರ್ಷ ಮೊದಲೇ ಸಿದ್ದಪಡಿಸಿದ್ದರು.

ಪೂರ್ವನಿರ್ಧಾರಿತ ಯೋಜನೆಯಂತೆ ಖಾಸಗಿ ಬಸ್ಸನ್ನು ಬಾಡಿಗೆಗೆ ಪಡೆದುಕೊಂಡದ್ದರಿಂದ ಆಯ್ದ ಸ್ಥಳಗಳಿಂದ ನಾವೆಲ್ಲಾ ಆ ಬಸ್ಸನ್ನು ಹತ್ತಿ ರಾತ್ರಿ ಸುಮಾರು ರಾತ್ರಿ ೧೧.೩೦ ಕ್ಕೆ ಬಿಟ್ಟು ಬೆಳಗ್ಗೆ ಸುಮಾರು ೫.೩೦ ರ ಸಮಯಕ್ಕೆ ಚಿಕ್ಕಮಗಳೂರಿಗೆ ಬಂದಿದ್ದೆವು. ಬೆಂಗಳೂರಿನ ಚಳಿಗೆ ಹೋಲಿಸಿದರೆ ಅಲ್ಲಿನ ಚಳಿ ಒಂದು ಕೈ ಮೇಲೆ ಇದ್ದಂತಿತ್ತು. ರೆಸಾರ್ಟಿಗೆ ಹೋಗಲು ಇನ್ನು ಸಮಯವಿದ್ದದ್ದರಿಂದ ಅಲ್ಲೇ ಬಿಸಿ ಬಿಸಿ ಟೀ ಕುಡಿದು ನಂತರ ಮುಂದೆ ಸಾಗಿತ್ತು ನಮ್ಮ ಪಯಣ. ಆ ಚಳಿಯಲ್ಲಿ ಕೈಯಲ್ಲಿ ಬಿಸಿ ಬಿಸಿ ಟೀ ಕುಡಿಯುವ ಮಜವೇ ಬೇರೆ !!! ಗ್ರಾಹಕರಿಗೆ ಕಾದಿದ್ದ ಒಬ್ಬ ಟೋಪಿ ಮಾರುವವನಿಗೆ ನಮ್ಮ ಬಸ್ಸನ್ನು, ಬಸ್ಸಿನ ತುಂಬಾ ತುಂಬಿರುವ ಜನರನ್ನು ನೋಡಿ ಬಸ್ಸಿನಬಳಿಗೇ ತನ್ನ ಟೋಪಿ ತುಂಬಿದ ಚೀಲವನ್ನು ತಂದು ತನ್ನ ವ್ಯಾಪಾರವನ್ನು ಪ್ರಾರಂಭಿಸಿದ. ಅಲ್ಲಿಂದ ಹೊರಟ ನಮ್ಮ "ಹಂಸ" ಸುಮಾರು ೭.೦೦ ಸಮಯಕ್ಕೆ "ಹುನ್ಕಲ್ ವುಡ್" ಹತ್ತಿರದ ಮುಖ್ಯರಸ್ತೆಗೆ ಬಂದಿತ್ತು. ಅಲ್ಲಿಂದ ಅವರದೇ ಸಾರಿಗೆ ವ್ಯವಸ್ಥೆಯಲ್ಲಿ ನಾವು ಆ ಧಾಮಕ್ಕೆ ಹೋಗಬೇಕಾಗಿತ್ತು.

ಅಲ್ಲಿ ಮತ್ತೊಂದು ಚಹಾ ವಿರಾಮದ ನಂತರ ಸರಕುಸಾಗಾಣೆ ವಾಹನವೊಂದು ಅಲ್ಲಿನ ದಿನಗೂಲಿ ಕಾರ್ಮಿಕರನ್ನು ಹೊತ್ತು ಆ ಎಸ್ಟೇಟಿನ ಒಳಗೆ ಹೋಯಿತು. ಅದು ಮರಳಿ ನಮ್ಮ ಮುಂದೆ ಬಂದು ನಿಂತಾಗಲೇ ನಮಗೆ ತಿಳಿದದ್ದು, ಅದೇ ನಮ್ಮ ಮುಂದಿನ "ರಾಜಹಂಸ"ವೆಂದು. ನಾವೆಲ್ಲಾ ಅದರೊಳಗೆ (ಕುರಿಗಳು ಸಾರ್, ಕುರಿಗಳು) ಹತ್ತಿ ಯಾವ ಟೋರಾ ಟೋರಾದಲ್ಲೂ ಸಿಗದ ಮಜವನ್ನು ಅನುಭವಿಸಿ ೭.೫೦ಕ್ಕೆ ರೆಸಾರ್ಟ್ ತಲುಪಿದೆವು.

ಅಲ್ಲೇ ಸ್ವಲ್ಪ ಹೊತ್ತು ವಿಶ್ರಮಿಸಿ ತಿಂಡಿಯನ್ನು ತಿಂದು ಮಧ್ಯಾನ್ನದ ಊಟವನ್ನು ಕಟ್ಟಿಸಿಕೊಂಡು ಸುಮಾರು ೧೧.೨೦ಕ್ಕೆ ನಮ್ಮ ಚಾರಣವನ್ನು ಪ್ರಾರಂಭಿಸಿದೆವು. ಪುಟ್ಟಾಣಿ ರತನ್ ಪುಟ್ಟ ಬ್ಯಾಗ್ ಮತ್ತು ಪುಟ್ಟ ಬೈನಾಕ್ಯುಲರ್ ನೊಂದಿಗೆ ತಾನೂ ದೊಡ್ಡವರಿಗಿಂತ ಏನೂ ಕಡಿಮೆಯಿಲ್ಲವೆನ್ನುವಂತೆ ಬಂದಿದ್ದ. ಮಿಕ್ಕ ಪುಟಾಣಿಗಳು ತಮ್ಮ ಪೋಷಕರ ರಕ್ಷಣೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮುಂದೆ ಸಾಗುತ್ತಿದ್ದರು.



ಸಾಹಸಿಗರಿಗೆ, ಚಾರಣಿಗರಿಗೆ ಹೇಳಿಮಾಡಿಸಿದ ಈ ನಿಸರ್ಗತಾಣದಲ್ಲಿ ಸಣ್ಣ ಝರಿ, ಮನಮೊಹಕ ಪರ್ವತ ಶ್ರೇಣಿ, ದಟ್ಟವಾದ ಕಾಡುಗಳನ್ನೊಳಗೊಂಡಿರುವ ಈ ತಾಣ ಮುಖ್ಯವಾಗಿ ದಿನನಿತ್ಯದ ಜಂಜಾಟದಿಂದ ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ದಿತ್ತು

ಮಧ್ಯಾನ್ನ ೧೨ರ ಸಮಯದಲ್ಲಿ ನಮ್ಮ ತಂಡಕ್ಕೆ ಹಸಿರು ಹಾವಿನ ದರುಶನವಾಯಿತು. ನವೆಂಬರ್ ತಿಂಗಳಿನಲ್ಲಿ ಮಳೆ ಇರದ ಕಾರಣ ನಮಗೆ ಜಿಗಣೆಗಳ ಕಾಟ ಇರಲಿಲ್ಲ, ಹಾಗೂ ಎಲ್ಲೆಲ್ಲಿ ತೇವಾಂಶವಿರುತ್ತದೋ ಅಲ್ಲೆಲ್ಲಾ ಅವುಗಳದೇ ರಾಜ್ಯಾಭಾರ... ಕಾಫೀ ಎಸ್ಟೇಟಿನಲ್ಲಿ ಕೆಲಸಾಮಾಡುವ ಕಾರ್ಮಿಕರು ಈ ಜಿಗಣೆಗಳ ಕಾಟದಿಂದ ಪಾರಾಗಲು ಸಾಸಿವೆ ಎಣ್ಣೆಗೆ ನಷ್ಯದ ಪುಡಿಯನ್ನು ಬೆರೆಸಿ ತಮ್ಮ ಕೈ ಕಾಲುಗಳಿಗೆ ಲೇಪಿಸಿಕೊಳ್ಳುತ್ತಾರಂತೆ, ಅದು ಅಲ್ಲಿ ಕೆಲಸಮಾಡಲು ಬಂದಿದ್ದವರಿಂದ ನಮಗೆ ತಿಳಿದುಬಂದ ವಿಷಯ. ಅಲ್ಲಿಂದ ಬಳಲಿದ್ದ ತಂಡದ ಸದಸ್ಯರನ್ನು ಹುರಿದುಂಬಿಸುತ್ತಾ ನಮ್ಮ ಹೆಜ್ಜೆಗಳನ್ನು ಹುನ್ಕಲ್-ರಾಕ್ ನ ಕಡೆಗೆ ಸವೆಸುತ್ತಿದ್ದೆವು. ಮಧ್ಯಾನ್ನ ೧.೨೦ ರ ಸಮಯದಲ್ಲಿ ಊಟಮಾಡುವ ಸಲುವಾಗಿ ಒಂದು ಝರಿಯಬಳಿ ತಂಗಿದ್ದೆವು, ಅಲ್ಲಿ ನಮಗೆ ಜಿಗಣೆ, ಮತ್ತು ಪಿಟ್ ವೈಪರ್ ಗಳು ಕಾಣಿಸಿದವು. ಈ ವೈಪರ್ ಅನ್ನುವ ಉರಗ ಪ್ರಭೇದ ಅತ್ಯಂತ ವಿಷಕಾರಿ. ನಮಗೆ ಕಂಡಿದ್ದು ಆಕಾರದಲ್ಲಿ ಪುಟ್ಟ ಮರಿಯಂತಿದ್ದರೂ ಅದರ ವಿಷ ಮಾರಣಾಂತಿಕವೇ. ಎಲ್ಲರ ಕ್ಯಾಮರಾ ಕಣ್ಣು ಆ ವೈಪರಿನತ್ತ ಹೊರಳಿತು.... ಕ್ಯಾಮರಾಗಳು ಮಾತನಾಡತೊಡಗಿದವು, ಕ್ಲಿಕ್.... ಕ್ಲಿಕ್... ಕ್ಲಿಕ್.... ಆ ವೈಪರ್ ತನ್ನ ಸುರುಳಿ ಸುತ್ತಿದ ಮೈಯನ್ನು ಛಾಯಾಗ್ರಾಹಕರಿಗೆ ಪ್ರದರ್ಶಿಸುತ್ತಾ ತನ್ನ ಬಳಿ ಬರಬೇಡಿರೆಂದು ಎಚ್ಚರಿಕೆ ನೀಡುತ್ತಿತ್ತು. ಅಲ್ಲಿಂದ ಸ್ವಲ್ಪ ಮುಂದೆ ಬಂದಂತೆ ಹಾವಿಗಿಂತಾ ನಾನೇನು ಕಮ್ಮಿ ಎನ್ನುವಂತೆ ಮತ್ತೊಂದು ಕೀಟ ತನ್ನ ಹೊಳಪಿನ ಮೈಮಾಟ ಪ್ರದರ್ಶಿಸಿತು.




ಚಾರಣಿಗರೆಲ್ಲಾ ಉತ್ಸಾಹದಿಂದ ಆ ಹೆಬ್ಬಂಡೆಯಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಮಿಕ್ಕವರು ಸುಸ್ತಾಗಿ ಹಿಂದೆ ಉಳಿದಿದ್ದೆವು. ಕಡಿದಾದ ಹುಲ್ಲುತುಂಬಿದ ಆ ಪರ್ವತವನ್ನು ಹತ್ತಲು ಅನುಭವ ಬೇಕೇ ಬೇಕು. ನಮ್ಮೊಂದಿಗೆ ಬಂದಿದ್ದ ಗೈಡ್ ನಮ್ಮಿಂದ ದೂರ ಹೋಗಿದ್ದರಿಂದ ನಮ್ಮ ಮತ್ತು ಅವರ ನಡುವಣ ಸಂಪರ್ಕ ಇರಲಿಲ್ಲ. ಹಾಗಾಗಿ ನಾವು ಹಿಂದುಳಿಯಬೇಕಾಯಿತು. ನಾವೆಲ್ಲಾ ಅಲ್ಲೇ ಕುಳಿತು ನಿಸರ್ಗದ ಸೊಬಗನ್ನು ಸವಿಯುತ್ತಲಿದ್ದರೆ ಮೇಲಿನ ತಂಡ ಆ ಹೆಬ್ಬಂಡೆಯನ್ನು ತಲುಪಲೇ ಬೇಕೆಂದು ತನ್ನ ಚಾರಣವನ್ನು ಮುಂದುವರಿಸಿತ್ತು. ಮುಂದಿನ ದಾರಿ ಕಡಿದಾದ್ದರಿಂದ ನಮ್ಮ ವಿಭಜಿತ ತಂಡ ಸುಮಾರು ೩.೦೦ ಘಂಟೆಯ ಸಮಯದಲ್ಲಿ ಮರಳಿ ರೆಸಾರ್ಟಿಗೆ ಹೋಗುವ ನಿರ್ಧಾರಕ್ಕೆ ಬಂದೆವು. ಹತ್ತುವಾಗ ನಿಂತು ಹತ್ತಿದ್ದ ತಂಡದ ಸದಸ್ಯರು ಇಳಿಯುವಾಗ ಪುಟ್ಟ ಮಕ್ಕಳು ಜಾರುಬಂಡೆಯಲ್ಲಿ ಜಾರಿದಂತೆ ಜಾರಿಕೊಂಡು ಇಳಿಯುತ್ತಿದ್ದರು. ಚಾರಣವನ್ನು ಮುಗಿಸಿ ಮರಳಿ ರೆಸಾರ್ಟಿಗೆ ಬಂದಾಗ ಸಂಜೆ ೬.೩೦ರ ಸಮಯ.

ಅಲ್ಲಿಂದ ಬಂದು ಸ್ವಲ್ಪ ಸುಧಾರಿಸಿಕೊಂಡಮೇಲೆ ಕರೆಂಟ್ ಇಲ್ಲದ ಕಾರಣ ನನ್ನ ಕ್ಯಾಮರದ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಲಾಗಲಿಲ್ಲ. ಸಂಜೆಯಹೊತ್ತಿಗೆ ಬಿಸಿ ಬಿಸಿ ಮೆಣಸಿನಕಾಯಿ ಭಜ್ಜಿ, ಮತ್ತೆ ಕಾಪಿ ಬಂದಿತು. ಬೆಂಗಳೂರಿನಲ್ಲಿ ಬಹಳ ಕಡಿಮೆ ಕಾಫಿ ಕುಡಿಯುವ ನಾನು ಅಲ್ಲಿ ಅವರು ಕೊಟ್ಟಾಗಲೆಲ್ಲ ಬೇಡ ಎನ್ನದೇ ಕುಡಿಯುತ್ತಿದ್ದೆ, ಅಲ್ಲಿಯ ಚಳಿಗೆ ಅದು ಅತ್ಯವಶ್ಯಕ. ರಾತ್ರಿ Camp fireಹಾಕಿಕೊಂಡು ಅದರಲ್ಲಿಯ ಬಿಸಿಗೆ ಮೈಒಡ್ಡಿ ಕುಳಿತು ನಮಗೆ ತಿಳಿದಿರುವ ಹಾಡುಗಳನ್ನ ನಮ್ಮದೇ ರೀತಿಯಲ್ಲಿ ಹಾಡಿ, ಮಲಗುವ ಮುಂಚೆ ಮಲ್ಲಿ ಅವರಿಂದ "ಪಾಚೊ ನಾ ಆಯೋ" ಕಥೆಯನ್ನು ಕೇಳಿ ನಂತರ ಎಲ್ಲಾ ತಮ್ಮ ತಮ್ಮ ಕನಸಿನಲೋಕಕ್ಕೆ ಹೊರಳಿದರು.


ಬೆಳಿಗ್ಗೆ ಮನೋಹರ ಕತ್ತಿಗೆ ತನ್ನ ಕ್ಯಾಮರವನ್ನ ತೂಗುಹಾಕಿಕೊಂಡು ಪಕ್ಷಿವೀಕ್ಷಣೆಗೆ ಹೊರಟ. ಅಲ್ಲಿ ನಮಗೆ "ಬೀ ಈಟರ್" "ವ್ಯಾಗ್ ಟೈಲ್" "ಬುಲ್ ಬುಲ್" ಇವೇ ಮೊದಲಾದ ಪಕ್ಷಿಗಳನ್ನು ನೋಡುವ ಅವಕಾಶ ದೊರಕಿತು. ಬೆಳಗಿನ ತಿಂಡಿ ಮುಗಿಸಿ ಅದೇ ಬಂಗಲೆಯ ಹತ್ತಿರದಲ್ಲಿದ್ದ ಒಂದು ಸಣ್ಣ ಝರಿಯನ್ನು ನೋಡಲು ನಮ್ಮತಂಡ ಹೊರಟಿತು. ಸಾಮಾನ್ಯವಾಗಿ ನಮ್ಮಲ್ಲಿ ಕಾಣಸಿಗುವ Dragan flyನ ಮತ್ತೊಂದು ಪ್ರಭೇಧ ನಮ್ಮನ್ನು ಚಕಿತಗೊಳಿಸಿತು. ಸಾಮಾನ್ಯ ಚಿಟ್ಟೆಯಂತೆ ಹಾರುತ್ತಿದ್ದ ಆ ಚಿಟ್ಟೆ ಹೋಲಿಕೆಯಲ್ಲಿ Dragan flyನಂತಿತ್ತು. ಸಾಮಾನ್ಯವಾಗಿ Dragan flyಗಳು ಕುಳಿತಾಗ ತಮ್ಮ ರೆಕ್ಕೆಯನ್ನು ಅಗಲವಾಗಿ ಹರಡಿ ಕೂರುತ್ತವೆ, ಆದರೆ ಈ Dragan flyಪ್ರಭೇಧ ತನ್ನ ರೆಕ್ಕೆಯನ್ನು ಮಡಚಿ ಕೂರುತ್ತಿತ್ತು.



ಆ ಸೊಬಗನ್ನು ಸವಿಯುತ್ತಾ ನಂತರ ಅಲ್ಲಿಂದ ನಮ್ಮ ತಾಣಕ್ಕೆ ಮರಳಿ ಬಂದೆವು. ಅಲ್ಲಿ ಊಟಮಾಡಿಕೊಂಡು ಮತ್ತದೇ "ರಾಜಹಂಸ" ದಲ್ಲಿ ಮುಖ್ಯರಸ್ತೆಗೆ ಬಂದು ನಮಗಾಗಿ ಕಾದು ಕುಳಿತಿದ್ದ "ಹಂಸ"ವನ್ನೇರಿ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದೆವು. ಪಯಣದ್ದ ಪ್ರಾರಂಭದಲ್ಲಿ ನಮ್ಮ ಹಂಸದಲ್ಲಿ Sansui ಚಿತ್ರ ಪ್ರದರ್ಶನವಾಯಿತು. ನಂತರ ಹಿಂದಿನ ಸಾಲುಗಳಲ್ಲಿ ಕುಳಿತಿದ್ದ ನಮ್ಮ ಮಧುರ !!!! ಕಂಠದಿಂದ ಸುಶ್ರಾವ್ಯ ಗಾನಸಿರಿ ಶುರುವಾಗಿ ಅದು ಬೆಂಗಳೂರಿನ ತನಕ ಮುಂದುವರಿದಿತ್ತು. ೨ ದಿನಗಳಿಂದ ಜೊತೆಯಲ್ಲಿದ್ದ ತಂಡದ ಸದಸ್ಯರು ತಮ್ಮ ತಮ್ಮ ಗೂಡು ಸೇರುವ ತವಕದಲ್ಲಿದ್ದರು.

1 comment:

Mohan B.S said...

ತುಂಬಾ ಚೆನ್ನಾಗಿದೆ ನಿಮ್ಮ ಚಾರಣದ ಅನುಭವ, ಗಾಳಿಕೆರೆಯ ಸ್ವಲ್ಪ ಮುಂದೆ ಕವಲು ದಾರಿ ಸಿಗುತಂತೆ ಒಂದು ಕಲ್ಲಟ್ಟಿ ಜಲಪಾತದ ಕಡೆಗೆ, ಇನ್ನೊಂದು ಕೆ.ಗುಂಡಿ ಕಡೆಗೆ ಅದರ ಬಗ್ಗೆ ಮಾಹಿತಿ ಕೊಟ್ಟಿದ್ದರೆ ಚೆನ್ನಾಗಿರುತಿತ್ತು, ಅಂತ ನನ್ನ ಅನಿಸಿಕೆ