ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Thursday, November 13, 2008

ಪ್ರೀತಿ ಮೂಡಿದಾಗ...

ಛೇ....

ನಾನು ಹೀಗೆ ಮಾಡಬಾರದಿತ್ತು.....
ಆ ಪುಟ್ಟ ಮನಸ್ಸಿಗೆ ನೋವು ನೀಡಬಾರದಿತ್ತು....
ನಾನು ಅವಳನ್ನು ನೋಯಿಸಿಬಿಟ್ಟೆ ಕಣೋ !!!!
ಅವಳ ಆ ಕಣ್ಣುಗಳಿಂದ ಕಣ್ಣೀರಿಳಿಸಿಬಿಟ್ಟೆ....
ದೇವರು ನನ್ನನ್ನು ಯಾವತ್ತೂ ಕ್ಷಮಿಸುವುದಿಲ್ಲ....
ಅಲ್ಲ ಅಲ್ಲ ತಪ್ಪು....
ಈ ಪ್ರಶ್ನೆ ಬರುವುದೇ ಇಲ್ಲ ಅಲ್ವೇನೋ ???
ನಾನು ಈ ರೀತಿ ಮಾಡಿದ್ದು ಅವನ ಸಹಾಯದಿಂದನೇ ಅಲ್ವಾ ?
ಅವ್ನು ನನ್ಗೆ ಯಾಕೆ ಈ ರೀತಿ ತೊಂದ್ರೆ ಕೊಡ್ತ ಇದಾನೆ ?
ನಾನು ಮತ್ತೆ ಅವಳು ಗೆಳೆತನದಲ್ಲಿ ಖುಷಿಯಾಗಿದ್ವೋ ಆದ್ರೆ ಅದ್ಯಾವತ್ತು ಈ ರೀತಿ ಪ್ರೀತಿಗೆ ತಿರುಗಿತ್ತೋ ನನ್ಗೇ ಗೊತ್ತಾಗ್ಲಿಲ್ಲ ಕಣೋ....

ಇದು ಗಿರಿಧರ ತನ್ನ ಆಪ್ತಗೆಳೆಯ ಶಶಾಂಕನೊಂದಿಗೆ ಆಡಿದ ನೋವು ತುಂಬಿದ ಮಾತುಗಳು... ಗಿರಿಧರ ಪ್ರತೀದಿನ ಅವನ ಆಗು ಹೋಗುಗಳನ್ನ ಶಶಾಂಕನೊಂದಿಗೆ ಚಾಚೂ ತಪ್ಪದೇ ಹೇಳುತ್ತಿದ್ದ, ಅಂದು ಅವನು ಅಂದು ಪುಟ್ಟ ಮಗುವಾಗಿದ್ದ... ನೋವು ತುಂಬಿದ ಹೃದಯದಿಂದ ಸೊರಗಿಹೋಗಿದ್ದ. ಕಾಲೇಜಿನಲ್ಲಿ ವ್ಯಾಸಂಗಮಾಡುವಾಗ ಇವರಿಬ್ಬರ ಗೆಳೆತನ ಪ್ರಾರಂಭವಾದದ್ದು... ಒಂದು ಜೀವ ಎರೆಡು ದೇಹದಂತಿದ್ದ ಆ ಇಬ್ಬರ ಗೆಳೆತನ ನಿತ್ಯ ನೂತನವಾಗಿತ್ತು. ಗೆಳೆಯರು ಎಂದರೆ ಹೀಗಿರಬೇಕು- ಇವರೇ ಬೇರೆಯವರಿಗೆ ಮಾದರಿ ಎಂದು ಎಲ್ಲಾ ಹೊಗಳುತ್ತಿದ್ದರು.

ಗಿರಿಧರ ಸ್ವಭಾವದಲ್ಲಿ ಸಾಧು, ಮೃದು ಹೃದಯಿ. ಬಹಳ ಬೇಗ ನೊಂದುಕೊಳ್ಳುವ ಅವನು ಅಂದು ಶಶಾಂಕನೊಡನೆ ತನ್ನ ಜೀವನದಲ್ಲಾದ ಘಟನೆಯನ್ನು ಹೇಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಒಂದೇ ಊರಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಬೇರೆ ಬೇರೆ ಸ್ಥಳದಲ್ಲಿದ್ದದ್ದರಿಂದ ಕೇವಲ ದೂರವಾಣಿಯಲ್ಲಿ ಸಂವಾದ ಮಾಡುತ್ತಿದ್ದರು.

ಗಿರಿಧರನ ಮತ್ತು ಲಾಸ್ಯಳ ಪರಿಚಯವಾಗಿ ೧ ವರುಷ ೬ ತಿಂಗಳು ಕಳೆದಿದ್ದರೂ ಅವರು ಒಬ್ಬರನ್ನೊಬ್ಬರು ಭೇಟಿಮಾಡಿರಲಿಲ್ಲ. ಪರಸ್ಪರ ಪ್ರೀತಿಸುತ್ತಿದ್ದ ಯುವಜೋಡಿ ಅದು. ತಮ್ಮದೇ ಆದ ಕನಸುಗಳಲೋಕದಲ್ಲಿದ್ದ ಅವರಿಗೆ ವಾಸ್ತವ ಬದುಕಿನ ಕಟು ಸತ್ಯದ ಅರಿವಾಗಿರಲಿಲ್ಲ. ಕೆಲಸದಲ್ಲಿ ಉತ್ತಮ ಪ್ರಗತಿಹೊಂದಿ ಆಕೆಯ ಮನೆಯಲ್ಲಿ ಆಕೆಯನ್ನು ವಿವಾಹವಾಗುವ ಕನಸ ಕಂಡಿದ್ದ. ಆದರೆ ಅವನ ಮನೆಯಲ್ಲಿನ ಪರಿಸ್ಥಿತಿ ಅವನನ್ನು ಆಕೆಯಿಂದ ದೂರಮಾಡಿತ್ತು. ಪ್ರತಿದಿನ ಸಮಯದ ಅರಿವಿಲ್ಲದೇ ಕೇವಲ ದೂರವಾಣಿಯ ಸಂಪರ್ಕದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು... ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿದ್ದರು. ಅಡಿಪಾಯವಿಲ್ಲದ ಕಟ್ಟಡದ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು. ತಮ್ಮದೇ ಆದ ಪುಟ್ಟ ಮನೆ, ಮನೆಯಲ್ಲಿ ತಮ್ಮ ಸಂಸಾರದ ಕನಸ ಹೆಣೆಯುತ್ತಿದ್ದರು. ಶಶಾಂಕ ಇದನ್ನು ದೂರದಿಂದಲೇ ಗಮನಿಸುತ್ತಿದ್ದ ಮತ್ತು ಗಿರಿಧರ-ಲಾಸ್ಯರ ಸಂಭಂದವನ್ನು ಗೌರವಿಸುತ್ತಿದ್ದ. ಪ್ರತಿದಿನ ಲಾಸ್ಯಳೊಂದಿಗೆ ಮಾತನಾಡಿ ಶಶಾಂಕನೊಂದಿಗೆ ಮಾತನಾಡಿದರೆ ಗಿರಿಧರನಿಗೆ ಒಂದುರೀತಿಯ ಸಮಾಧಾನ. ಗಿರಿಧರ-ಲಾಸ್ಯರ ಜೋಡಿ ಎಲ್ಲಾ ಯುವಪ್ರೇಮಿಗಳಂತೆ ಇರಲಿಲ್ಲ. ಪರಸ್ಪರ ಗೌರವಿಸುತ್ತಾ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದರು. ಮುಂದೆ ಒಮ್ಮೆ ತಾವು ಬೇರೆ ಬೇರೆ ಆಗುವ ಸಂಧರ್ಭ ಒದಗಿ ಬಂದರೂ ಧೈರ್ಯಗೆಡದೇ ಅದನ್ನು ಎದುರಿಸಬೇಕೆಂದು ನಿರ್ಧರಿಸಿದ್ದರು.

ಅಂದು ಆಕಸ್ಮಿಕವಾಗಿ ಆದ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಗಿರಿಧರನ ಮನೆಯವರು ಸಂಪ್ರದಾಯಸ್ಥರು. ಗಿರಿಧರನಿಗೆ ಮದುವೆ ಮಾಡುವ ವಿಚಾರದಲ್ಲಿ ಮನೆಯಲ್ಲಿ ಮಾತುಕತೆ ನಡೆದಿತ್ತು. ಮೊದಲು ಹುಡುಗಿಯ ಚಿತ್ರವನ್ನು ನೋಡಿ ನಂತರ ಜಾತಕವನ್ನು ನೋಡಿ ಅದೆರಡೂ ಒಪ್ಪಿಗೆಯಾದರೆ ಮುಂದಿನ ಮಾತುಕತೆ ಮುಗಿಸಿ ಮದುವೆ... ಗಿರಿಧರನಿಗೆ ಇದೆಲ್ಲಾ ತಿಳಿದಿದ್ದರೂ ಆತ ಲಾಸ್ಯಳನ್ನ ಪ್ರೀತಿಸುತ್ತಿದ್ದ. ಆ ವಿಚಾರವಾಗಿ ಆಕೆಯೊಡನೆ ಸಮಾಲೋಚನೆಕೂಡಾ ನಡೆಸಿದ್ದ. ಪರಸ್ಪರ ಒಪ್ಪಿಗೆಯಾದಮೇಲೆ, ಜಾತಕದ ಪ್ರಶ್ನೆ ಕಾಡುವುದಿಲ್ಲವೆಂದು ಅವರಿಬ್ಬರ ನಂಬಿಕೆ. ಆದರೆ ಒಂದು ದಿನ ಗಿರಿಧರನ ತಾಯಿಗೆ ತನ್ನ ಮನದ ಇಂಗಿತವನ್ನ ತಿಳಿಸಬೇಕೆನಿಸುವಷ್ಟರಲ್ಲಿ ಆತನ ತಾಯಿ ಮದುವೆಯ ವಿಚಾರ ಮಾತನಾಡತೊಡಗಿದರು.

"ನೋಡೋ ಗಿರೀ... ನಾನು ಮೊನ್ನೆ ಊರಿಗೆ ಹೋಗಿದ್ದಾಗ ಸುಬ್ಬಾಶಾಸ್ರಿಗಳ ಮಗಳು ಸಿಕ್ಕಿದ್ಳು ಕಣೋ... ಈಗ ಚಂದ ಕಾಣ್ತಾಳೆ... ಅವ್ಳಿಗೂ ಡಿಗ್ರೀ ಆಗಿದ್ಯಂತೆ.... ಹುಡುಗೀ ಅಂದ್ರೆ ಹಾಗಿರ್ಬೇಕು ನೋಡು. ದೊಡ್ಡವ್ರು ಅಂದ್ರೆ ಅವ್ಳಿಗೆ ಗೌರವ ಇದೆ. ನನ್ಗೆ ಅಂತವ್ಳ್ನೇ ಸೊಸೆಯಾಗಿ ತಂದ್ಕೋಬೇಕು ಅಂತ ಆಸೆ ಕಣೋ... ನೀನು ಅದಿಕ್ಕೆ ಒಪ್ಕೋತೀಯ ಅಂತನೂ ಗೊತ್ತು. ನನ್ ಕಣ್ ಮುಚ್ಚೋದ್ರೋಳ್ಗೇ ನಿನ್ ಮದ್ವೆ ನೋಡ್ಬೇಕು ಅಂತ ಆಸೆ. ನೆರವೇರಿಸ್ಕೊಡ್ತೀಯಾ......"

ಈ ವಿಚಾರವನ್ನ ಕೇಳಿ ಗಿರಿಧರನಿಗೆ ಸಿಡಿಲು ತಲೆಯಮೇಲೆರಗಿದ ಹಾಗಾಯಿತು... ಇನ್ನೂ ಒದುತ್ತಿರುವ ಅವನ ಲಾಸ್ಯಳಿಗೆ ಈ ವಿಚಾರವನ್ನ ಹೇಳುವುದು ಹೇಗೆ ? ಮುಂದಿನ ಜೀವನದಬಗ್ಗೆ ಸುಂದರ ಕನಸುಗಳನ್ನ ಹೆಣೆದಿರುವ ನಾವಿಬ್ಬರೂ ದೂರ ದೂರವಾದರೆ ನಮ್ಮ ಭವಿಷ್ಯದ ಕತೆ ಏನಾದೀತು ?? ಈ ವಿಚಾರವನ್ನು ಅವಳೊಡನೆ ಪ್ರಸ್ತಾಪ ಮಾಡುವುದಾದರೂ ಹೇಗೆ ? ತಲೆಯಲ್ಲಿ ನೂರಾರು ರೀತಿಯ ಪ್ರಶ್ನೆಗಳ ಸುರಿಮಳೆಗೆ ಗಿರಿಧರ ತತ್ತರಿಸಿ ಹೋಗಿದ್ದ...

ಅಂದಿನಿಂದ ಅವನಿಗೆ ಲಾಸ್ಯಳ ಜೊತೆಯಲ್ಲಿ ಮಾತನಾಡುವುದು ಕಷ್ಟವಾಗ ತೊಡಗಿತು. ಲಾಸ್ಯಳ ಹಲವು ಪ್ರಯತ್ನದ ನಡುವೆಯೂ ಗಿರಿಧರ ಅವನ ಮನೆಯಲ್ಲಿ ನಡೆದ ವಿಷಯವನ್ನ ಹೇಳಲಾಗಲಿಲ್ಲ. ಅವನ ಆ ರೀತಿಯ ವರ್ತನೆ ಲಾಸ್ಯಳ ಮೇಲೆ ಬಹಳವಾಗಿ ಪರಿಣಾಮಬೀರತೊಡಗಿತು. ಅವಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಆದರೆ ಗಿರಿಧರನ ವರ್ತನೆ ಆಕೆಗೆ ಅರ್ಥವಾಗಲಿಲ್ಲ. ಪರಿಪರಿಯಾಗಿ ಕೇಳಿದರೂ ಗಿರಿಧರನಿಂದ ಉತ್ತರ ಬಾರದ ಕಾರಣ ಲಾಸ್ಯ ತನಗಾಗುತ್ತಿರುವ ವೇದನೆಯನ್ನು ಅವನೊಡನೆ ಹೇಳಿದಳು.

ಇಷ್ಟುದಿನಗಳಿಂದ ಒಳಗೆ ಬಚ್ಚಿಟ್ಟಿದ್ದ ನೋವನ್ನು ಅಂದು ಗಿರಿಧರ ಹೊರಗೆಡವಿದ: ದಯವಿಟ್ಟೂ ನನ್ನ ಕ್ಷಮಿಸಿಬಿಡು.... ನಾನು ನಿನ್ನ ಮನಸ್ಸನ್ನ ಕೆಡಿಸಿದವನು... ಆದರೆ ನಾನು ಇಂದು ನಿಸ್ಸಹಾಯಕನಾಗಿದ್ದೇನೆ. ಮನೆಯಲ್ಲಿ ಅಮ್ಮನ ಬೇಡಿಕೆಯನ್ನು ಈಡೇರಿಸದ ಮಗ ಎನ್ನುವ ಪಟ್ಟ ನನ್ನಿಂದ ಕಟ್ಟಿಕೊಳ್ಳಲಾಗುವುದಿಲ್ಲ, ಹಾಗೆಂದು ನನ್ನ ಪ್ರೀತಿಗೂ ಮೋಸ ಮಾಡಲಾಗುವುದಿಲ್ಲ. ನನಗೆ ದಾರಿ ತೋಚದಾಗಿದೆ..... ಇಷ್ಟು ಹೇಳುತ್ತಲೇ ಅವನ ಕಣ್ಣೀರು ಧರೆಗಿಳಿಯತೊಡಗಿತು. ಪುಟ್ಟಮಗುವಿನಂತೆ ಅಳುತ್ತಾ ನಿಂತುಬಿಟ್ಟ. ಇತ್ತಕಡೆ ಲಾಸ್ಯಳಿಗೆ ಅವನ ಮಾತುಗಳನ್ನು ಕೇಳಿ ಯಾವರೀತಿ ಪ್ರತಿಕ್ರಿಯಿಸಬೇಕೆಂಬುದು ತಿಳಿಯಲಿಲ್ಲ. ಎರಡೂ ಕಡೆಯಿಂದ ಕೇವಲ ಬಿಕ್ಕಳಿಸಿ ಅಳುವ ಧನಿಯನ್ನು ಬಿಟ್ಟು ಬೇ‍ರೆ ಏನೂ ಸದ್ದಿರಲಿಲ್ಲ....

No comments: