ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Thursday, January 6, 2011

ಅಮೇದಿಕೇಲ್ ಚಾರಣ

ಕಳೆದ ಮೂರು ವರ್ಷ ಅನಿವಾರ್ಯ ಕಾರಣಗಳಿಂದ ನಾನು ಚಾರಣಕ್ಕೆ ಹೋಗಲಾಗಿರಲಿಲ್ಲ. ಈ ಬಾರಿ ಖಂಡಿತವಾಗಿ ಹೋಗಲೇಬೇಕೆಂದು ಮೊದಲೇ ನಿರ್ಧರಿಸಿದ್ದೆ. ಈ ಬಾರಿ ನಮ್ಮ ಚಾರಣ ಧರ್ಮಸ್ಥಳದ ಕೊಕ್ಕಡದ ಬಳಿಯ ಒಂದು ಪರ್ವತ "ಅಮೇದಿಕೇಲ್" ಅನ್ನುವ ಬೆಟ್ಟಕ್ಕೆ ಎಂದು ನಮ್ಮ ತಂಡದ ನಾಯಕ ಸೀತಾರಾಮು ಹೇಳಿದ್ದರು.

ನಮ್ಮತಂಡದಲ್ಲಿ ಒಟ್ಟು ೧೫ ಮಂದಿ ಇದ್ದೆವು. ೧೬ನೇಯವನಾಗಬೇಕಿದ್ದ ಬಾಲಾಜಿ ಕಡೇ ಕ್ಷಣದವರೆಗೂ suspense Maintain ಮಾಡಿ ಕೈ ಕೊಟ್ಟರು. ನಮ್ಮ ತಂಡದ ಸದಸ್ಯರು (ನನ್ನನ್ನೂ ಒಳಗೊಂಡಂತೆ):
ಸೀತಾರಾಮು, ಅಲಮೇಲು (ಅಮ್ಮಿ), ಸೌಮ್ಯ, ಸೌರಭ್, ಕೃಷ್ಣ, ಪ್ರಶಾಂತ, ಪ್ರೀತಮ್, ಯಜ್ಞನಾರಾಯಣ ಶರ್ಮ (ಅಣ್ಣಯ್ಯ), ಶ್ರೀನಿಧಿ, ಭರತ್, ರಾಜೇಶ, ಮೋಹನ, ಜ್ಯೋತಿ, ಪ್ರವೀಣ್ ಮತ್ತು ವಿನಯ್.

ರಾತ್ರಿ ೧೧ಕ್ಕೆ ಧರ್ಮಸ್ಥಳಕ್ಕೆ ಹೋಗುವ ಬಸ್ಸಿಗಾಗಿ ರಾಜೇಶ್ ಟಿಕೇಟ್ ಕಾದಿರಿಸಿದ್ದರು. ನಾನು ೨೨-೧೨-೨೦೧೦ರ ರಾತ್ರಿ ಬೆಂಗಳೂರಿನ ಟ್ರಾಫಿಕ್ ಅನ್ನು ಗಮನದಲ್ಲಿಟ್ಟುಕೊಂಡೇ ೮.೩೦ಕ್ಕೇ ಬೆಂಗಳೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಹೊರಟೆ. ನನ್ನ ಊಹೆಗೆ ತಕ್ಕಂತೆ ನಿಲ್ದಾಣ ತಲುಪುವಾಗ ಸಮಯ ಸುಮಾರು ೧೦.೧೫ ಆಗಿತ್ತು. ಧರ್ಮಸ್ಥಳಕ್ಕೆ ಹೊರಡುವ ವೋಲ್ವೋಬಸ್ ರೆಡಿಯಾಗೇ ನಿಂತಿತ್ತು ಆದರೆ ಟಿಕೆಟ್ ಮೋಹನರ ಬಳಿ ಇದ್ದದ್ದರಿಂದ ಮುಂಗೋಪಿ ಕಂಡಕ್ಟರ್ ನನ್ನನ್ನು ಬಸ್ ಹತ್ತಲು ಬಿಡಲಿಲ್ಲ. ಸ್ವಲ್ಪಹೊತ್ತು ಕಳೆದ ನಂತರ ಮೋಹನ ಮತ್ತಿತರರು ಬಂದಮೇಲೆ ಐರಾವತ ರಾತ್ರಿ ೧೦.೫೫ಕ್ಕೆ ನಿಲ್ದಾಣ ಬಿಟ್ಟು ಹೊರಟಿತು.

ದಾರಿಯಲ್ಲಿ ನಾನು ರಾಜೇಶ ಹರಟೆ ಹೊಡೆಯುತ್ತಾ ಹಾಗೇ ನಿದ್ದೆಗೆ ಜಾರಿದೆವು. ಶಿರಾಡಿ ಘಾಟಿಯ ಅಂಕು ಡೊಂಕಾದ ಏರಿಳಿತಗಳಿಂದ ಕೂಡಿದ ರಸ್ತೆಯ ಮೇಲೆ ಐರಾವತ ಸರಾಗವಾಗಿ ಸಾಗುತ್ತಿತ್ತು. ಮುಂಜಾವು ಸುಮಾರು ೫.೩೫ಕ್ಕೆ ಮೋಹನ ನಮ್ಮನ್ನೆಲ್ಲಾ ಎಬ್ಬಿಸಿದಾಗ ನಾವು ಕೊಕ್ಕಡದ ಸಮೀಪವಿರುವುದು ತಿಳಿಯಿತು. ನಾವೆಲ್ಲಾ ನಮ್ಮ ನಮ್ಮ Trekking Bag ಗಳನ್ನ ಇಳಿಸಿಕೊಂಡಮೇಲೆ ಐರಾವತ ಧರ್ಮಸ್ಥಳದಕಡೆಗೆ ಹೊರಟಿತು. ಅಲ್ಲಿ ನಮಗಾಗಿ ಗೋಪು ಗೋಖಲೆಯವರು ಕಳಿಸಿಕೊಟ್ಟಿದ್ದ ಎರೆಡು ಮಹಿಂದ್ರ ಜೀಪುಗಳು ಕಾಯುತ್ತಾ ಇದ್ದವು. ಗೋಪು ಗೋಖಲೆಯವರು ನಮ್ಮಂತೆ ಚಾರಣಕ್ಕೆ ಬರುವ ಚಾರಣಿಗರಿಗೆ ಅಲ್ಪಾವಧಿಯ ವಸತಿಯನ್ನು ನಿರ್ಧಾರಿತ ಮೊತ್ತಕ್ಕೆ ಹೊಂದಿಸಿಕೊಡುವವರು. ಆಗಲೇ ಜ್ಯೋತಿಗೆ ತಮ್ಮ Trekking Shoes ಧರ್ಮಸ್ಥಳದ ಕಡೆಗೆ ಹೊರಟಿರುವ ಅರಿವಾದದ್ದು. ತಕ್ಷಣ ಮೋಹನ ಮತ್ತು ಜ್ಯೋತಿ ಜೀಪು ಹತ್ತಿ ಐರಾವತವನ್ನು ಬೆನ್ನಟ್ಟಿ ಹೋದರು. ಕಡೆಗೆ ಅದನ್ನು ಮರಳಿ ತರುವಲ್ಲಿ ಯಶಸ್ವಿಯೂ ಆದರು.

ಕೊಕ್ಕಡಕ್ಕೆ ಅಣ್ಣಯ್ಯ ಮೊದಲೇ ಮೈಸೂರಿನಿಂದ ಬಂದಿಳಿದಿದ್ದರು. ನಾನು, ಅಣ್ಣಯ್ಯ, ಪ್ರೀತಮ್, ರಾಜೇಶ, ನಿಧಿ, ಭರತ್, ಪ್ರವೀಣ್ ಮತ್ತು ವಿನಯ್ ಕೊಕ್ಕಡದ ಬಸ್ ನಿಲ್ದಾಣದ ಬಳಿಯ ಹೋಟೇಲೊಂದರಲ್ಲಿ ಟೀ ಕುಡಿದು ಮೊದಲೇ ತಯಾರಿದ್ದ ಜೀಪಿನಲ್ಲಿ ಶಿಶಿಲದಲ್ಲಿರುವ ಗೋಪು ಗೋಖಲೆ ಅನ್ನುವವರ ಮನೆಯಕಡೆಗೆ ಹೊರಟೆವು. ಮತ್ತೊಂದು ಜೀಪಿನಲ್ಲಿ ಹಾಸನದಿಂದ ಹೊರಟಿದ್ದ ಸೀತಾರಾಮ್, ಅಮ್ಮಿ, ಸೌಮ್ಯ, ಸೌರಭ, ಕೃಷ್ಣ ಮತ್ತು ತಂಡ ಅವರೂ ಗೋಖಲೆಯವರ ಮನೆಗೆ ಬಂದಿಳಿದರು.
ನಮ್ಮಂತೆ ಈ ಮೊದಲೇ ಹಲವಾರು ಚಾರಣಿಗರು ಗೋಖಲೆಯವರ ಮನೆಗೆ ಬಂದು ಹೋದದ್ದುಂಟು. ಆ ರೀತಿ ಬರುವವರಿಗಾಗೇ ಗೋಖಲೆಯವರು ಒಂದು ವಿಶ್ರಾಂತಿ ಕೊಠಡಿಯನ್ನು ಕಟ್ಟಿಸಿಟ್ಟಿದ್ದಾರೆ. ಅಲ್ಲಿ ಬಿಸಿನೀರಿನ ವ್ಯವಸ್ಥೆ ಕೂಡಾ ಇತ್ತು. ನಾವೆಲ್ಲಾ ನಮ್ಮ ಬೆಳಗಿನ ಕೆಲಸಗಳನ್ನು ಮುಗಿಸಿ ಅವರ ಮನೆಯಲ್ಲೇ ತಿಂಡಿ ತಿಂದು ಅವರು ಮಾಡಿಕೊಟ್ಟ ಚಪಾತಿಯನ್ನು ನಮ್ಮ ಜೊತೆಗೆ ಕೊಂಡು ಶಿಶಿಲದಿಂದ ಕೆಂಬಾರದ ಕಡೆಗೆ ಸುಮಾರು ೯.೩೦ಕ್ಕೆ ಸಣ್ಣಪ್ಪ ಅನ್ನುವ ಒಬ್ಬ Guideಅನ್ನು ಕರೆದುಕೊಂಡು ಜೀಪಿನಲ್ಲಿ ಹೊರಟೆವು.

ನಮ್ಮ ಚಾರಣ ಸುಮಾರು ೧೦.೦೦ಘಂಟೆಗೆ ಕೆಂಬಾರದಿಂದ ಪ್ರಾರಂಭವಾಯಿತು. ಕೆಂಬಾರ ಸಮುದ್ರಮಟ್ಟದಿಂದ ಸುಮಾರು ೧೧೬ ಮೀಟರ್ ಎತ್ತರದಲ್ಲಿದೆ. ಇಲ್ಲಿಂದ ಎತ್ತಿನ ಭುಜವೂ ಸ್ಪಷ್ಟವಾಗಿ ಕಾಣುತ್ತದೆ. ಚಾರಣದ ಮೊದಲ ಹಂತದಲ್ಲಿ ನಾವೆಲ್ಲಾ ಉತ್ಸಾಹಿಗಳಾಗಿ ಹೆಜ್ಜೆ ಹಾಕುತ್ತಲಿದ್ದೆವು. ಅಲ್ಲಿಂದ ಸುಮಾರು ೬೦ ಮೀಟರ್ ಎತ್ತರ ಏರಿದಮೇಲೆ ಹತ್ತಿರದಲ್ಲಿ ಹರಿಯುತ್ತಿದ್ದ ಒಂದು ಝರಿಯಿಂದ ನಮ್ಮೆಲ್ಲರ ಜೊತೆಯಿದ್ದ ಖಾಲಿ ಬಾಟಲಿಗಳಿಗೆ "Original" ಮಿನರಲ್ ವಾಟರ್ ತುಂಬಿಸಿಕೊಂಡೆವು.

ಈ ಬಾರಿ ನೀರಿನ ಭಾರ ಪ್ರತಿಯೊಬ್ಬರಿಗೂ ಸಮನಾಗಿ ಹಂಚಿಕೆಯಾಗುವಂತೆ ಸೀತಾರಾಂ ಪ್ರತಿಯೊಬ್ಬರಿಗೂ 200mlಮತ್ತು 500ml ನ ಬಾಟಲ್ಗಳಿಗೆ ಒಂದು Clip ಹಾಕಿ ಕೊಟ್ಟಿದ್ದರು. ಹಾಗಾಗಿ ಪ್ರತಿಯೊಬ್ಬರಿಗೂ ಅನುಕೂಲವಾಯಿತು. ತಕ್ಷಣ ನೀರಡಿಕೆಯಾದಾಗ ಭಾರದ ಚೀಲವನ್ನು ಕೆಳಗಿಳಿಸಿ ಅದರಲ್ಲಿ ಹುದುಗಿರುವ ಬಾಟಲಿಯನ್ನು ತೆಗೆದು ನೀರುಕುಡಿಯುವ ತೊಂದರೆ ಒಂದು ಕಡೆ ತಪ್ಪಿದರೆ, ಒಬ್ಬರ ಎಂಜಲು ಮತ್ತೊಬ್ಬರು ಕುಡಿಯುವುದೂ ತಪ್ಪಿತು.ಇದುವರೆವಿಗೂ ಚಳಿಯಿಂದ ಕಾಪಾಡಿಕೊಳ್ಳಲು ನಾವು ಹಾಕಿಕೊಂಡಿದ್ದ ಸ್ವೆಟರ್ಗಳು ನಮ್ಮ ಟ್ರಕ್ಕಿಂಗ್ ಬ್ಯಾಗ್ ಸೇರಿಕೊಂಡವು. ಚಾರಣದ ಪ್ರಾರಂಭದಲ್ಲೇ ನನಗೆ ಜಿಗಣೆಯಿಂದ ಸ್ವಾಗತ ಸಿಕ್ಕಿತು.

ಸುಮಾರು ೧.೦೦ ಘಂಟೆಗೆ ನಾವೆಲ್ಲಾ ಸಮುದ್ರ ಮಟ್ಟದಿಂದ ೫೨೧ ಮೀಟರ್ ಎತ್ತರದಲ್ಲಿ ಸಿಕ್ಕ ಒಂದು ಝರಿಯಬಳಿಯಲ್ಲಿ ಚಪಾತಿ ಮತ್ತು ಸಿಹಿ ಕುಂಬಳಕಾಯಿಯ ಪಲ್ಯವನ್ನು ತಿಂದು ಝರಿಯ ನೀರು ಕುಡಿದು ಸ್ವಲ್ಪಮಟ್ಟಿಗೆ ನಮ್ಮ Energy level ಹೆಚ್ಚಿಸಿಕೊಂಡೆವು. ಚಪಾತಿ ತಿನ್ನುವಾಗ ಪ್ರವೀಣ್ ಅವರ ಸುಶ್ರಾವ್ಯ ಕಂಠಸಿರಿಯಿಂದ "ಪ್ರಿಯತಮೇ.... " ಹಾಡು ಕೇಳಿ ಬರುತ್ತಿತ್ತು. ಅಲ್ಲಿ ಸ್ವಲ್ಪ ವಿರಾಮದ ನಂತರ ಸುಮಾರು ೧.೩೦ಕ್ಕೆ ನಮ್ಮ ಪಯಣ ಅಮೇದಿಕಲ್ ಶೃಂಗದೆಡೆಗೆ ಹೊರಟಿತು.
ದಾರಿಯಲ್ಲಿ ಸುಡುಬಿಸಿಲು ನಮ್ಮ ಬೆಂಬಿಡದೇ ಜೊತೆಯಲ್ಲೇ ಬರುತ್ತಿತ್ತು. ದಾರಿಯಲ್ಲಿ ನಾವೆಲ್ಲಾ ನೆರಳಿಗಾಗಿ ಹುಡುಕುತ್ತಾ ಕಡಿದಾದ ಹಾದಿಯನ್ನು ಸವೆಸುತ್ತಿದ್ದೆವು. ಸುಮಾರು ೩.೧೫ರ ಸಮಯಕ್ಕೆ ಒಂದು ತಂಪಾದ ಸ್ಥಳದಲ್ಲಿ ನಮ್ಮ ಲಗೇಜುಗಳನ್ನು ಹೊತ್ತಿದ್ದ ದೇಹವನ್ನು ಚೆಲ್ಲಿ ಆ ನೆರಳಿನಲ್ಲಿ ಕುಳಿತೆವು. ಅಲ್ಲಿ ನಮ್ಮನ್ನು ಆದರದಿಂದ ಬರಮಾಡಿಕೊಂಡ ಸೊಳ್ಳೆಗಳು ಎಲ್ಲರಿಂದಲೂ ರಕ್ತ ಹೀರತೊಡಗಿದವು. ಈ ಬಾರಿ ಹೊಸದಾಗಿ ರಾಜೇಶನಿಂದ ಪರಿಚಯಿಸಲ್ಪಟ್ಟ ಮೊಳಕೆ ಬರಿಸಿದ ಹೆಸರಿನ ಕಾಳು ಮತ್ತು ದಾಳಿಂಬೆ ಕಾಳುಗಳು ಚೆನ್ನಾಗಿದ್ದವು.

ಅಲ್ಲಿಂದ ಸುಮಾರು ೪.೦೦ರ ಹೊತ್ತಿಗೆ ನಮ್ಮ ಪಯಣ ಮುಂದುವರಿಯಿತು. ಮೊದಲೇ ಇದ್ದ ಕಾಲುದಾರಿ ತಪ್ಪಿದ್ದರಿಂದ ನಾವೆಲ್ಲಾ ನಮ್ಮದೇ ದಾರಿಯನ್ನು ಮಾಡಿಕೊಂಡು ಒಂದು ಘಂಟೆಯನಂತರ ಒಂದು ಸಮತಟ್ಟಾದ ಸ್ಥಳಕ್ಕೆ ಬಂದು ತಲುಪಿದೆವು. ಮೇಲೆ ಒಂದು ಹೆಬ್ಬಂಡೆ ಚಾಚಿಕೊಂಡು ಬಿಸಿಲಿನಿಂದ ನಮಗೆಲ್ಲಾ ತಂಪನ್ನೀಯುತ್ತಿತ್ತು. ಅಲ್ಲಿ ಈ ಮೊದಲೇ ಬಂದಿದ್ದ ತಂಡ ತಂಗಿದ್ದ ಕುರುಹಾಗಿ ಎರಡು ಬೂದಿಗುಡ್ಡೆಗಳಿಂದ ಕೂಡಿದ ಒಲೆಗಳಿದ್ದವು. ಆ ಪ್ರದೇಶ ಸಮುದ್ರಮಟ್ಟದಿಂದ ಸುಮಾರು ೮೫೫ ಅಡಿ ಎತ್ತರದಲ್ಲಿತ್ತು.
ಅಲ್ಲಿಂದ ಮುಂದೆ ದಟ್ಟವಾದ ಹುಲ್ಲು ಬೆಳೆದಿದ್ದರಿಂದ ದಾರಿಗಾಗಿ ಸ್ವಲ್ಪ ಹುಡುಕಾಡಬೇಕಾಯಿತು. ಅಷ್ಟರಲ್ಲಾಗಲೇ ಕತ್ತಲಾವರಿಸತೊಡಗಿತ್ತು. ನಮ್ಮೆಲ್ಲರ ಬ್ಯಾಗಿನಲ್ಲಿ ಇಷ್ಟುಹೊತ್ತು ಬೆಚ್ಚಗೆ ಕುಳಿತಿದ್ದ ಬ್ಯಾಟರಿಗಳು ಈಗ ಹೊರಬಂದಿದ್ದವು. ಕತ್ತಲಾದಮೇಲೆ ಬ್ಯಾಟರಿಯ ಸಹಾಯದಿಂದ ಬೆಟ್ಟಹತ್ತಿದ ನನ್ನ ಮೊಟ್ಟ ಮೊದಲ ಅನುಭವ ಇದು, ಬಹಳ ರೋಚಕವೆನಿಸಿತು. ಚಪಾತಿ ಮತ್ತು ನೆನಸಿದ ಹೆಸರುಕಾಳನ್ನು ಬಿಟ್ಟರೆ ಮತ್ತೇನು ತಿನ್ನದ ಕಾರಣ ನಮಗೆಲ್ಲಾ ಬಹಳವಾಗಿಯೇ ದಣಿವಾಗಿತ್ತು. ನಮ್ಮಲ್ಲಿ ನಿಧಿ, ಅಣ್ಣಯ್ಯ, ಪ್ರವೀಣ ಮತ್ತು ಸೌರಭ ಮುಂದಾಳತ್ವ ವಹಿಸಿ ಸಮತಟ್ಟಾದ ಪ್ರದೇಶದ ಶೋಧ ಮಾಡಿ ಅದರಲ್ಲಿ ಯಶಸ್ಸು ಕಂಡರು. ನಾವೆಲ್ಲಾ ಕತ್ತಲಲ್ಲಿ ಎಡವುತ್ತಾ ತೆವಳುತ್ತಾ ಅಂತೂ ಇಂತೂ ಆ ಸಮತಟ್ಟಾದ ಪ್ರದೇಶಕ್ಕೆ ಸುಮಾರು ೭.೩೦ಕ್ಕೆ ಬಂದೆವು. ಸಮುದ್ರಮಟ್ಟದಿಂದ ೧೨೦೦ ಮೀಟರ್ ಎತ್ತರದ ಆ ಪ್ರದೇಶದಲ್ಲಿ ನಾವೆಲ್ಲಾ ಉಸ್ಸಪ್ಪಾ ಅಂತ ಕುಳಿತು ಸ್ವಲ್ಪ ಸುಧಾರಿಸಿಕೊಂಡು ನಂತರ ಟೆಂಟ್ ಹಾಕುವ ಕೆಲಸದಲ್ಲಿ ತೊಡಗಿದೆವು. ಈ ಬಾರಿ ಒಟ್ಟು ೪ ಟೆಂಟ್ಗಳು ಮತ್ತು ಒಂದು Open Tent ಹಾಕಿದ್ದೆವು.
ಸಾಮಾನ್ಯವಾಗಿ ಟೆಂಟ್ ಹಾಕಿದಮೇಲೆ ನಮ್ಮ ಅಡುಗೆ ಕಾರ್ಯಕ್ರಮ ಇರುತಿತ್ತು. ಆದರೆ ಈ ಬಾರಿ ನಮ್ಮಲ್ಲಿ ನೀರಿನ ಕೊರತೆ ಇದ್ದದ್ದರಿಂದ ನಾವೆಲ್ಲಾ ತಲಾ ಅರ್ಧ ಸೌತೇಕಾಯಿ, ಬಿಸ್ಕತ್ತು ಮತ್ತು ಕಿತ್ತಲೆ ಹಣ್ಣನ್ನು ತಿಂದು ಸುಮಾರು ೯.೦೦ ಘಂಟೆಗೆ ಮಲಗಿದೆವು. ಟೆಂಟ್ ಹಾಕಿದ ಸ್ಥಳ ಸಮತಟ್ಟಾಗಿರದೇ ಕೆಳಗಿನ ಕಲ್ಲು ಒಂದುರೀತಿ ಕಾಡುತ್ತಿದ್ದರೆ ಪಕ್ಕದ ಟೆಂಟ್ಗಳಿಂದ ಬರುತ್ತಿದ್ದ ವಿಧವಿಧವಾದ ಗೊರಕೆಗಳಸದ್ದು ಮತ್ತೊಂದುಕಡೆ. ಆದರೆ ದೇಹ ದಣಿದಿದ್ದ ಕಾರಣ ನಿದ್ದೆ ಚೆನ್ನಾಗಿಯೇ ಬಂದಿತ್ತು.
ಮುಂಜಾವು ಸುಮಾರು ೬.೩೦ಕ್ಕೆ ಎದ್ದ ನಾವುಗಳು ನಮ್ಮೊಂದಿಗೆ ತಂದಿದ್ದ ಕ್ಯಾಮರಗಳನ್ನೂ ಎಬ್ಬಿಸಿ ಸೂರ್ಯೋದಯದ ಅಂದವನ್ನು ಕ್ಯಾಮರಗಳಲ್ಲಿ ಸೆರೆಹಿಡಿಯಲಾರಂಭಿಸಿದೆವು. ನಂತರ ನಮ್ಮ ಬಳಿ ಉಳಿದಿದ್ದ ನೀರನ್ನು ಎಲ್ಲರೂ ಸಮನಾಗಿ ಹಂಚಿಕೊಂಡು, ಬಿಸ್ಕತ್ತು, ಸೌತೇಕಾಯಿ ಮತ್ತು ಕಿತ್ತಲೆಹಣ್ಣುಗಳನ್ನು ತಿಂದು, ಟೆಂಟ್ಗಳನ್ನು ತೆಗೆದುಕೊಂಡು ಸುಮಾರು ೮.೧೫ಕ್ಕೆ ಅಮೇದಿಕಲ್ ಬೆಟ್ಟವನ್ನು ಇಳಿಯಲಾರಂಭಿಸಿದೆವು.ಹತ್ತುವಾಗಿನ ಶ್ರಮ ಇಳಿಯುವಾಗ ಬೇಕಿಲ್ಲವಾದ್ದರಿಂದ ಎಲ್ಲರೂ ಬೇಗ ಬೇಗ ನಿರಾತಂಕವಾಗಿ ಇಳಿಯಲಾರಂಭಿಸಿದೆವು. ಸುಮಾರು ೨ ಘಂಟೆಗಳನಂತರ ನಾವು ಹಿಂದಿನದಿನ ಕಂಡಿದ್ದ ಹೆಬ್ಬಂಡೆಯ ಬಳಿ ಬಂದು ಸ್ವಲ್ಪ ವಿಶ್ರಮಿಸಿದನಂತರ ಮುಂದೆಸಾಗಿದೆವು. ಸುಮಾರು ೧೧.೦೦ಕ್ಕೆ ನೀರಿನ ಝರಿಯಬಳಿ ಕುಳಿತು Maagi ಮಾಡಲು ತಯಾರಿನಡೆಸಿದೆವು. ಅಮ್ಮಿ, ಜ್ಯೋತಿ ಇಬ್ಬರೂ ಈರುಳ್ಳಿ ಹೆಚ್ಚಿದರೆ ಮಿಕ್ಕವರು ನೀರುಕುಡಿಯುತ್ತಾ ದಣಿವಾರಿಸಿಕೊಳ್ಳುತ್ತಿದ್ದೆವು. ಪ್ರತೀ ಚಾರಣಕ್ಕೂ Match Boxನ್ನು ತಪ್ಪದೇ ತರುತ್ತಿದ್ದ ನಾವು ಈ ಬಾರಿ ಅದನ್ನು ಮರೆತು ಬಂದಿದ್ದೆವು. ಹಾಗಾಗಿ ಮ್ಯಾಗಿ ಮಾಡುವ ಕೆಲಸ ಕೈಬಿಡಬೇಕಾಯಿತು. ಸಧ್ಯಕ್ಕೆ ತಿನ್ನಲು ಚುರುಮುರಿಯನ್ನು ಬಿಟ್ಟು ಬೇರೇನು ಇರಲಿಲ್ಲ.

ನಾವು ಸೂರ್ಯನ ಬಿಸಿಲಿನಿಂದ Lenseನ ಸಹಾಯ ಪಡೆದು ಬೆಂಕಿ ಹೊತ್ತಿಸುವ ಪ್ರಯತ್ನ ಮಾಡಿ ಅದು ಸಮಯಕ್ಕೆ ಸರಿಯಾಗಿ ಉಪಯೋಗವಾಗದ ಕಾರಣ ಆ ಪ್ರಯತ್ನವನ್ನು ಕೈ ಬಿಟ್ಟೆವು. ಚುರುಮುರಿಯನ್ನು ತಿಂದು ನಂತರ ಅಲ್ಲಿಂದ ನಮ್ಮ ಪಯಣ ಮುಂದುವರೆಸಿದ ನಾವು ಸುಮಾರು ೧.೩೦ಕ್ಕೆ ಮತ್ತೊಂದುಕಡೆ ನೆರಳಿನಲ್ಲಿ ಕುಳಿತೆವು. ಈ ವಿರಾಮದಲ್ಲಿ ಕೃಷ್ಣ ಹಣ ಉಳಿತಾಯದ ಬಗ್ಗೆ 50 ದಾರಿ ಗಳನ್ನು ನಮ್ಮೆಲ್ಲರೊಡನೆ ಹಂಚಿಕೊಂಡರು. ಅಲ್ಲಿಂದ ಮತ್ತೆ ಕಾಡಿನಹಾದಿ ದೊರಕಿದ್ದರಿಂದ ಹೆಚ್ಚಿನ ವಿಶ್ರಾಮವಿಲ್ಲದೇ ನಮ್ಮಲ್ಲಿ ಕೆಲವರು ಕೆಂಬಾರಕ್ಕೆ ಸುಮಾರು ೪.೩೦ಕ್ಕೆ ಬಂದು ಹತ್ತಿರದಲ್ಲೇ ಹರಿಯುತ್ತಿದ್ದ ಝರಿಯಲ್ಲಿ ಸ್ನಾನಮಾಡಿದೆವು. ಎರಡನೇ ಗುಂಪು ಬಂದದ್ದು ಸ್ವಲ್ಪ ತಡವಾದ್ದರಿಂದ ಸ್ನಾನ ಮಾಡಲು ಸಮಯವಿರಲಿಲ್ಲ. ಕೆಂಬಾರದಿಂದ ಮತ್ತೆ ೨ ಜೀಪನ್ನು ಗೊತ್ತುಮಾಡಿದೆವು. ಅದರಲ್ಲಿ ಒಂದು ಹಾಸನದ ಕಡೆಗೂ ಹಾಗು ಮತ್ತೊಂದು ಧರ್ಮಸ್ಥಳದ ಕಡೆಗೂ ಹೊರಟವು.


ಇಲ್ಲಿಗೆ ನಮ್ಮ ೨೦೧೦ರ ಅಮೇದಿಕಲ್ ಚಾರಣ ಪುರಾಣ ಸಮಾಪ್ತವಾಯಿತು. :)

1 comment: