ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Monday, April 12, 2010

"ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ"

ಪ್ರತೀ ದಿನ ಕಂಪ್ಯೂಟರಿನ ಕೆಲಸ ಬಿಟ್ಟರೆ ನನ್ನ ಚಟುವಟಿಕೆಗಳು ಮತ್ಯಾವುದರಲ್ಲೂ ಹೆಚ್ಚಿಗೆ ಇರದ ದಿನಗಳ ಮಾತು. ನಾನು ಅಂದು ನನ್ನ ಗೆಳೆಯರೊಡನೆ ಚಾರಣಕ್ಕೆ ಹೊರಟಿದ್ದೆ. ಹೊಸಾ ತಂಡ, ಹೊಸಾ ಜನ, ಹೊಸಾ ಪ್ರದೇಶ... ಎಲ್ಲವೂ ಹೊಸತಾಗಿತ್ತು. ಯಾವುದೇ ಪ್ರವಾಸದಲ್ಲಾಗಲಿ, ಅಥವಾ ಸಭೆ ಸಮಾರಂಭಗಳಲ್ಲಾಗಲಿ ನಮಗೆ ಮೊದಲು ಯಾರ ಪರಿಚಯವೂ ಇಲ್ಲದಿದ್ದರೂ ಅಲ್ಲಿಂದ ಹೊರ ನಡೆವಾಗ ಯಾರದ್ದಾದರೂ ಪರಿಚಯ ಆಗಿರುತ್ತದ್ದೆ.

ನನಗೆ ನಿನ್ನ ಪರಿಚಯವೂ ಹಾಗೇ ಆದದ್ದು. ನಾವೆಲ್ಲಾ ಅಂದು ರಾತ್ರಿ ಬೆಂಗಳೂರಿನಿಂದ ಹೊರಟು ನಮ್ಮ ಪ್ರವಾಸದ ತಾಣದೆಡೆಗೆ ತೆರಳುವಾಗ ನೀನಾರೋ ನಾನಾರೋ... ಆ ಬಸ್ಸಿನ ಒಂದು ಮೂಲೆಯಲ್ಲಿ ನಾನು ಕುಳಿತಿದ್ದರೆ ನೀನೆಲ್ಲಿದ್ದೆಯೋ ನನಗಂತೂ ನೆನಪಿಲ್ಲ. ನಾನು ನನ್ನಷ್ಟಕ್ಕೆ ಕಿಟಕಿಯಿಂದ ಇಣುಕಿ ಹೊರ ಪ್ರಪಂಚವನ್ನು ನೋಡುತ್ತಾ ಕುಳಿತಿದ್ದೆ. ಮೊದಲಿಗೆ ನನ್ನ ಸ್ನೇಹಿತನಿಂದ ನಿನ್ನ ಪರಿಚಯವಾದರೂ ಬರಿಯ ನಗೆ ಬೀರಿ ಸುಮ್ಮನಾದೆ. ಅಲ್ಲಿಂದ ನಮ್ಮ ತಂಡ ಪ್ರವಾಸ ಮಾಡಲಿದ್ದ ಸ್ಥಳಕ್ಕೆ ಬಂದಾಗ ಕತ್ತಲೆಯನ್ನ ಸೀಳಿಕೊಂಡು ಸೂರ್ಯದೇವ ನಮಗೆಲ್ಲ ಶುಭೋದಯವನ್ನ ಸಾರಿದ್ದ. ಮಾರ್ಗ ಕಡಿದಾದ್ದರಿಂದ ನಾವೆಲ್ಲಾ ಅಲ್ಲಿದ್ದ ಮಿನಿ ಲಾರಿಯೊಂದನ್ನೇರಿ ಪಯಣವನ್ನು ಮುಂದುವರೆಸಿದ್ದೆವು. ನಾನು ನನ್ನಷ್ಟಕ್ಕೇ ನನ್ನ ಕ್ಯಾಮರಾ ಕಣ್ಣಿನಿಂದ ಸುತ್ತಲ ಪರಿಸರವನ್ನ ನೋಡುತ್ತಿದ್ದೆ. ಆಗ ಮೊದಲಬಾರಿಗೆ ನೀನು ನನ್ನೊಡನೆ ಮಾತಿಗಿಳಿದೆ. "ಬರೀ ನಿಮ್ದೇ ಫೋಟೋ ತೆಕ್ಕೋತೀರಾ ? ನಾವೂ ಎಲ್ಲಾ ಇಲ್ಲೇ ಇದೀವಲ್ಲ"... ಸರಿ... ಮಾತಿಗಿಳಿದಾಯಿತು. "ಅದಕ್ಕೇನಂತೆ, ನಿಮ್ದೂ ಒಂದ್ ಫೋಟೋ ತೆಗೀತೀನಿ" ಅಂದು ನಿನ್ನದೂ ಒಂದು ಫೋಟೋವನ್ನ ತೆಗೆದಿದ್ದೆ. ತದನಂತರ ನಿನ್ನ ಈ-ಮೈಲ್ ಐಡಿಯನ್ನು ನನಗೆ ತಿಳಿಸಿ "ಈ ಫೋಟೋನ ಮೈಲ್ ಮಾಡಿ, ಮರೀಬೇಡಿ" ಅಂದಿದ್ದೆ- ಅಷ್ಟಕ್ಕೇ ನಮ್ಮ ಮಾತು ಅಲ್ಲಿಗೆ ಮುಗಿದಿತ್ತು.

ನಮ್ಮ ಚಾರಣದ ಪ್ರಾರಂಭದ ಹಂತದಲ್ಲಿ ಹೆಚ್ಚಾಗಿ ಕಷ್ಟಕರವೆನಿಸಿರದಿದ್ದರೂ ನಮ್ಮಲ್ಲಿ ಕೆಲವರು ತುಸು ಬಳಲಿದ್ದರು, ನೀನೂ ಅದರಲ್ಲೊಬ್ಬಳು. ಚಾರಣದ ಮೊದಲ ಹಂತದಲ್ಲಿ ಎಲ್ಲಾ ಒಟ್ಟಿಗೇ ಮಾತನಾಡುತ್ತಾ ಹೋದಂತೆ ನೀನೂ ನನ್ನೊಡನೆ ಮಾತಿಗಿಳಿದೆ. ಆ ಗುಂಪಿನಲ್ಲಿ ನನಗೆ ಪರಿಚಯವಿದ್ದ ಒಬ್ಬನೇ ಗೆಳೆಯ ತುಸು ದೂರದಲ್ಲಿ ಹೋಗುತ್ತಿದ್ದರಿಂದ ನಿನ್ನೊಡನೆ ಮಾತನಾಡುತ್ತಾ ನಾನೂ ಹೆಜ್ಜೆ ಹಾಕತೊಡಗಿದೆ. ಅದು ನಿನ್ನ ಮೊದಲನೇ ಚಾರಣ. ನಾನು ವರ್ಷಕ್ಕೊಂದುಬಾರಿ ತಪ್ಪದೇ ಚಾರಣಕ್ಕೆ ಹೋಗುತ್ತಿದ್ದ ಚಾರಣಿಗ. ನನಗೆ ಚಾರಣದಲ್ಲಿದ್ದ ಅನುಭವವನ್ನ ಹಂಚಿಕೊಳ್ಳುತ್ತಾ ನಿನ್ನೊಡನೆ ನಡೆಯುತ್ತಿದ್ದೆ. ಒಂದು ಹಂತದಲ್ಲಿ ಚಾರಣದ ಹಾದಿ ಕಡಿದಾಗಿತ್ತು ಅಲ್ಲಿ ನಿನ್ನಿಂದ ಹತ್ತಲು ತುಸು ಕಷ್ಟವೆನಿಸಿದ್ದರಿಂದ ನನ್ನ ಸಹಾಯ ಹಸ್ತವನ್ನ ನಿನ್ನೆಡೆಗೆ ಚಾಚಿದ್ದೆ. ಅಲ್ಲಿಂದ ಮುಂದೆ ಎಲ್ಲೇ ಕಡಿದಾದ ದಾರಿಯಿದ್ದರೂ ನಾನು ನಿನ್ನ ಸಹಾಯಕ್ಕೆ ನಿಂತಿರುತ್ತಿದ್ದೆ, ಕೈ ಹಿಡಿದು ಮೇಲೆ ಹತ್ತಿಸುತ್ತಿದ್ದೆ.

ನಿನ್ನಲ್ಲಿ ಏನೋ ವಿಷೇಶತೆ ಇರುವ ಹಾಗನಿಸುತ್ತಿತ್ತು. ಎಲ್ಲರಂತೆ ನೀನು ಅತಿಯಾಗಿ ಅಲಂಕಾರ ಮಾಡಿರಲಿಲ್ಲ ನಿನ್ನಲ್ಲಿ ಮುಗ್ಧತೆ ಮತ್ತು ಸರಳತೆ ಎದ್ದು ಕಾಣುತ್ತಿತ್ತು. ನಿನ್ನ ಸ್ನೇಹಮಾಡಬೇಕೆನಿಸಿತು. ಸಾಮಾನ್ಯವಾಗಿ ಬಹುಪಾಲು ಹುಡುಗರಿಗೆ ಗರ್ಲ್ ಫ್ರೆಂಡ್ಸ್ ಇದ್ದೇ ಇರುತ್ತಾರೆ. ಎಲ್ಲೋ ನೂರಕ್ಕೆ ೧೦ ಜನಮಾತ್ರ ಆ ತಾಪತ್ರೇಯ (?) ದಿಂದ ದೂರ ಉಳಿದಿರುತ್ತಾರೆ. ಆ ಹತ್ತು ಜನರಲ್ಲಿ ನಾನೂ ಒಬ್ಬನಾಗಿದ್ದೆ. ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಕೆಲವು ಘಟನೆಗಳು ಇದ್ದೇ ಇರುತ್ತದೆ. ನನ್ನ ಜೀವನದಲ್ಲಿಕೂಡಾ ಹಲವು ಘಟನೆಗಳು ನಡೆದಿವೆ. ಆದರೆ ನಿನ್ನೊಡನೆ ಕಳೆದ ಆ ೨ ದಿನಕೂಡಾ ಆ ಘಟನೆಗಳ ಸಾಲಿನಲ್ಲಿ ಬಂದು ನಿಲ್ಲುತ್ತವೆಂದು ನಾನು ಎಣಿಸಿರಲಿಲ್ಲ.

ಬಿಸಿಲಿನ ತಾಪ ಏರುತ್ತಲಿತ್ತು. ನೀನು ತಲೆಯಮೇಲೆ ಯಾವುದೇ cap ಹಾಕಿರಲಿಲ್ಲ. ಬಹುಷಃ ಅನುಭವದ ಕೊರತೆ ಅಂತ ಕಾಣ್ಸತ್ತೆ. ನಾನು ಪೂರ್ವಸಿದ್ದತೆ ಮಾಡಿಕೊಂಡೇ ಬಂದಿದ್ದೆ. ತಲೆಯಮೇಲೆ ಒಂದು ಕ್ಯಾಪ್, ಸೊಂಟಕ್ಕೊಂದು ಪೌಚ್, ಅದರಲ್ಲಿ ಕೆಲವು ಪೆಪ್ಪರ್ಮೆಂಟ್ ಗಳು. ಪುಟ್ಟದೊಂದು ನೀರಿನ ಬಾಟಲಿ, ಆಪತ್ಕಾಲಕ್ಕೆ ಗಾಯಗಳಿಗೆ ಹಚ್ಚುವ ಒಂದು ತೈಲ... ಇತ್ಯಾದಿ. ನಿನ್ನ ಪಾಡು ನೋಡಿ ಅಯ್ಯೋ ಅನ್ನಿಸ್ತಾ ಇತ್ತು ನನ್ಗೆ. ಹುಡುಗರಾದರೆ ಗಟ್ಟಿಗರು.. ಹೇಗಾದರೂ ತಡೆದುಕೊಳ್ಳ್ತಾರೆ. ಆದರೆ ಹುಡುಗಿಯರು ಸ್ವಲ್ಪಮಟ್ಟಿಗೆ ಕೋಮಲಾಂಗಿಯರು. ಬಿಸಿಲಿನ ತಾಪ ತಡೆಯಲೆಂದು Sunscreen Lotionಗಳು ತುಟಿ ಒಡೆಯದಿರಲೆಂದು Lip Guard ಗಳು ಇತ್ಯಾದಿ ಇಲ್ಲದೇ ಹೊರಗೆ ಬಾರದವರು. ನಾನು ನನ್ನ ತಲೆಏರಿದ್ದ capಅನ್ನ ತೆಗೆದು ನಿನಗೆ ಕೊಟ್ಟೆ. ಬಿಸಿಲಿನ ತಾಪದಲ್ಲೂ ನಿನ್ನ ಮೊಗದಲ್ಲಿ ಮಂದಹಾಸ ಮಿನುಗಿತ್ತು. ಒಟ್ಟಿನಲ್ಲಿ ನನಗೆ ಪದೇ ಪದೇ ಹಿಂದಿಯ ಮಧುರ ಗೀತೆ "ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ" ನೆನಪಿಗೆ ಬರುತ್ತಲಿತ್ತು.

ನಾ ಕೊಟ್ಟ capಅನ್ನ ತಲೆಮೇಲೇರಿಸಿ ಕಡಿದಾದ (ಅಷ್ಟೇನೂ ಕಡಿದಾಗಿರಲಿಲ್ಲದ) ದಾರಿಯಲ್ಲಿ ತ್ರಾಸಪಟ್ಟು ಅಲ್ಲಲ್ಲಿ ಬಂಡೆಗಳಮೇಲೆ ಕುಳಿತು ಮತ್ತೆ ಮರಗಳ ನೆರಳಿನಲ್ಲಿ ವಿಶ್ರಮಿಸಿ ಮುಂದೆ ಬರುತ್ತಿದ್ದ ನಿನ್ನಪಾಡು ನೋಡಿ ಯಾರಿಗಾದರೂ "ಅಯ್ಯೋ ಪಾಪದ್ ಹುಡ್ಗಿ, ಯಾಕ್ ಅಷ್ಟು ಕಷ್ಟಾಪಟ್ಕೊಂಡ್ ಹೋಗ್ಬೇಕೋ, ಸುಮ್ನೆ ಮನೆಲಿ ಕೂತ್ರೆ ಆಗಲ್ವಾ ???" ಅಂತ ಅನ್ನಿಸೋ ಹಾಗಿತ್ತು . ಅಂತೂ ಇಂತೂ ಆ ಗುಡ್ಡದ ಅರ್ಧ ದಾರಿ ಕ್ರಮಿಸಿಯಾಯಿತು. ನಾನು ಮಾರ್ಗಮಧ್ಯದಲ್ಲಿ ಅವಕಾಶ ಸಿಕ್ಕಲ್ಲೆಲ್ಲಾ ಆ ಪ್ರಕೃತಿಯ ಸೊಬಗನ್ನ ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾ ಹೋದೆ. ಅದರ ಮಧ್ಯೆ ನನಗರಿವಿಲ್ಲದಂತೇ ನಿನ್ನ ಕೆಲವು ತುಣುಕುಗಳೂ ಸೆರೆಯಾಗಿದ್ದವು. ಅರ್ಧ ದಾರಿ ಕ್ರಮಿಸಿದಮೇಲೆ ಮಿಕ್ಕಿದ್ದ ಅರ್ಧ ದಾರಿ ಬಲು ತ್ರಾಸದಾಯಕವಾಗಿ ಕಾಣತೊಡಗಿತು. ನಾನೊಬ್ಬನೇ ಇದ್ದಲ್ಲಿ ಬಹುಷಃ ಪೂರ್ತಿಯಾಗಿ ಹತ್ತಿಬಿಡುತ್ತಿದ್ದೆ. ಆದರೆ ನಿನ್ನ ಮೊಗದಲ್ಲಿ "ನನ್ಗೆ ಯಾರೂ ಹೆಲ್ಪ್ ಮಾಡ್ತಾ ಇಲ್ಲ, ನನ್ ಜೊತೆ ಇರು, ಪ್ಲೀಸ್" ಅನ್ನೊ ಭಾವನೆ ಎದ್ದು ಕಾಣುತ್ತಿತ್ತು. ಸರಿ ಆದದ್ದು ಆಗಿಹೋಗಲಿ ಅಂತ ಚಾರಣವನ್ನ ಅಲ್ಲಿಗೇ ನಿಲ್ಲಿಸಿ ಸ್ವಲ್ಪ ಹೊತ್ತು ನಾವು ಮತ್ತೆ ಹಲವರು ಅಲ್ಲಿಯೇ ಕುಳಿತು ಆ ಸೌಂದರ್ಯವನ್ನ ಸವಿಯುತ್ತಾ ಕೆಲಹೊತ್ತು ಕಾಲ ಮುಂದೂಡಿದೆವು. ಹೇಗೋ ಮಾಡಿ ಅರ್ಧ ಹತ್ತಿದ್ದೇನೋ ಆಯಿತು, ಇನ್ನು ಇಳಿಯೋದು ಹೇಗೇ ??? ಹತ್ತುವಾಗ ಸ್ವಲ್ಪ ಸುಲಭವಾದರೂ ಇಳಿಯುವಾಗ ನಮ್ಮ ದೇಹದ ಸಮತೋಲನ ಅತ್ಯಗತ್ಯ. ಕಾಲು ಜಾರಿದರೆ ಸೀದಾ ಕೆಳಗಿನ ಬಂಡೆಗಳಿಗೆ ಢಿಕ್ಕಿ ಹೊಡೆಯುವುದು ಖಂಡಿತ. ನಮ್ಮಲ್ಲಿ ಕೆಲವರು ಜೊತೆಗೆ ತಂದಿದ್ದ ಕೋಲಿನ ಸಹಾಯ ಪಡೆದು ಇಳಿದರೆ, ನೀನು ಮತ್ತೆ ನಿನ್ನ ಬೆಂಬಲಿಗರು ಬಾಲ್ಯದ "ಜಾರುಬಂಡಿ" ಯನ್ನ ಮತ್ತೆ ನೆನಪಿಸಿಕೊಂಡು ಜಾರುತ್ತಾ ಇಳಿದಿರಿ.

ನಾವೆಲ್ಲಾ ಪ್ರವಾಸವನ್ನ ಪ್ರಯಾಸದಿಂದ ಮುಗಿಸಿ ಮರಳಿ ನಮ್ಮ ನಮ್ಮ ಗೂಡಿಗೆ ಮರಳಲು ಇದ್ದ ಸಂಪರ್ಕ ಕೊಂಡಿಯನ್ನೇರಿದೆವು. ದಾರಿಯುದ್ದಕ್ಕೂ ಅಂತ್ಯಾಕ್ಷರಿಗಳ ಸುರಿಮಳೆ. ಆ ಬಸ್ಸಿನ ಛಾವಣಿ ಸ್ವಲ್ಪ ಗಟ್ಟಿಮುಟ್ಟಾಗಿದ್ದರಿಂದ ಹಾರಿ ಹೋಗಲಿಲ್ಲವೆನ್ನುವುದು ಸಂತಸದ ವಿಷಯ :) ಅಲ್ಲಿಯೇ ನಿನ್ನ ಮೊಬೈಲ್ ಸಂಖ್ಯೆ, ಈ-ಮೈಲ್ ವಿಳಾಸವನ್ನು ಮತ್ತೊಮ್ಮೆ ಪಡೆದುಕೊಂಡೆ. ನಾವೆಲ್ಲಾ ಹಾಡುತ್ತಾ ಕುಣಿಯುತ್ತಾ ಮರಳಿ ಬೆಂಗಳೂರಿಗೆ ಸೇರಿದ್ದೆವು. ಅದಾದನಂತರದ ಕೆಲವು ದಿನಗಳು ನೀನು ನನ್ನೊಂದಿಗೆ ಮೊಬೈಲಿನಲ್ಲಿ ಮಾತನಾಡಿಸಿದ್ದುಂಟು. SMS ಕಳಿಸಿದ್ದುಂಟು. ಆದರೆ ದಿನ ಕಳೆದಂತೆ ಅವೆಲ್ಲವೂ ಕಡಿಮೆಯಾಗತೊಡಗಿತು.

ನಿಜವಾಗಲೂ ನನಗೆ ನಿನ್ನಲ್ಲಿ ಪ್ರೀತಿ ಪ್ರೇಮ ಅಂಥದ್ದೇನೂ ಇರಲಿಲ್ಲ.. ಆದರೆ ಒಬ್ಬ ಹುಡುಗ ಮತ್ತೊಂದು ಹುಡುಗಿಯಜೊತೆಯಲ್ಲಿ ಸಲುಗೆಇಂದ ಇದ್ದಾಗ ಸಮಾಜದ ಜನ ಮಾತನಾಡುವುದೇ ಪ್ರೇಮದ ಬಗ್ಗೆ. ನಮ್ಮ ನಡುವೆಯೂ ಹಾಗೇ ಆಯಿತು. ನಮ್ಮಿಬ್ಬರ ಸ್ನೇಹಕ್ಕೆ ಬೇರೆಯ ಹೆಸರು ಕಟ್ಟತೊಡಗಿತು ಸಮಾಜ. ಅದು ನನ್ನ ಗಮನಕ್ಕೆ ಬಂದದ್ದು ನನ್ನ ಸ್ನೇಹಿತನಿಂದ. ಬಹುಷಃ ನಿನಗೆ ನಿನ್ನ ಆಫೀಸಿನಲ್ಲೂ ಹಾಗೇ ಹೇಳಿದ್ದಿರಬಹುದು. ಅದೇ ಕಾರಣದಿಂದ ನೀನು ಕ್ರಮೇಣ ಫೋನ್ ಕಾಲ್, ಮೆಸ್ಸೇಜ್ ಎಲ್ಲ ವನ್ನೂ ಕಡಿಮೆಮಾಡಿರಬಹುದು. ನಾನುಕೂಡಾ ಕಡಿಮೆ ಮಾಡಿದೆ. ನೀನು ಚಾಟ್ ನಲ್ಲಿ Online ಇದ್ದರೂ ನಾನು ನಿನ್ನನ್ನು ಮಾತನಾಡಿಸುವ ಧೈರ್ಯ ಮಾಡುತ್ತಿರಲಿಲ್ಲ. ಇಂದಿಗೂ ನಿನ್ನನ್ನು Online ನಲ್ಲಿ ನೋಡುತ್ತೇನೆ. ನಮ್ಮ ಚಾರಣದ ದಿನಗಳನ್ನ ನೆನಪಿಸಿಕೊಳ್ಳುತ್ತೇನೆ, ಹಿಂದಿಯ ಮಧುರ ಗೀತೆ "ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ" ಹಾಗೆಯೇ ನನ್ನ ಕಿವಿಗಳಲ್ಲಿ ಗುಯ್ ಗುಡುತ್ತದೆ.

"ಖೂಬ್ ಸೂರತ್ ಬಾತ್ ಯೇ, ಚಾರ್ ಪಲ್ಕಾ ಸಾಥ್ ಯೇ, ಸಾರೀ ಉಮರ್ ಮುಝ್ಕೋ ರಹೇಗಾ ಯಾದ್"

No comments: