ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Monday, February 16, 2009

ಫೆಬ್ರವರಿ ೧೪ ೨೦೦೯

ಫೆಬ್ರವರಿ ೧೪ ೨೦೦೯

ಇವತ್ತಿನ ದಿನವನ್ನ ನಾನು ಮರಿಯೋದಕ್ಕೆ ಆಗೊದಿಲ್ಲ. ಇವತ್ತು ಪ್ರೇಮಿಗಳ ದಿನ ಅನ್ನೋ ಕಾರಣದಿಂದ ಅಲ್ಲ, ಇವತ್ತು ನನ್ನ ಜನ್ಮದಿನ... ನಾನು ನನ್ನ ಪ್ರತೀ ಜನ್ಮದಿನದಂದು ಯಾರೊಬ್ಬರೊಂದಿಗಾದರೂ ಇರ್ತಾ ಇದ್ದೆ. ಆದರೆ ಈ ಸಲ ನನ್ನ ಬಾಡಿಗೆ ಮನೆಯಲ್ಲಿ ನಾನು ಮತ್ತೆ ನನ್ನ ಎಫ್ ಎಂ ರೇಡಿಯೋ ಮಾತ್ರ ಇದ್ದದ್ದು. ಯಾಕೋ ಮನಸ್ಸಿಗೆ ಬೇಸರ ಆಗ್ತಾ ಇತ್ತು. ಕಳೆದವರ್ಷವಷ್ಟೇ ನನ್ನ ಅಪ್ಪನ್ನ ಕಳ್ಕೊಂಡಿದ್ದ ನಾನು ಈ ಬಾರೀನೂ ಅವರನ್ನ, ಮತ್ತೆ ಅಮ್ಮ, ಅಕ್ಕ, ಅನ್ನನ್ನ ಮಿಸ್ ಮಾಡ್ಕೋತಾ ಇದೀನಿ. ಅಪ್ಪ ಇದ್ದಾಗ ಮೈಸೂರಿನ ನಮ್ಮ ಮನೆಗೆ ಹೋಗಿ ಮನೆಯವರೆಲ್ಲರ ಜೊತೆ ಸ್ವಲ್ಪ ಹರಟೆ ಹೊಡೆದು ಬೇಕರಿ ತಿನಿಸುಗಳನ್ನ ತರಿಸಿಕೊಂಡು ಸಣ್ಣದಾಗಿ ಪಾರ್ಟಿ ಮಾಡೋದು, ಅದರಲ್ಲೇ ಖುಷಿ ಕಾಣೋದು, ಅಣ್ಣನ ತಲೆ ತಿಂದು ಯಾವುದಾದರೂ ಸಿನಿಮಾಕೆ ಹೋಗೋದು, ಸಂಜೆ ಪಾನೀಪೂರಿ ತಿನ್ನೋದು ಮನೆಗೆ ಬಂದು ಊಟ ಮಾಡಲ್ಲ ಅಂತ ಅಮ್ಮನಹತ್ತಿರ ಬೈಸ್ಕೊಳೋದು. :)

ಈ ಸಲ ಯಾರಿದ್ದಾರೆ... ಹಾಗೇ ಬೇಸರದಲ್ಲಿ ರಾತ್ರಿ ಕಳಿತಾ ಇದ್ದಾಗ ಟ್ರಿಣ್ ಟ್ರಿಣ್ ಅಂತ ನನ್ನ ಮೊಬೈಲ್ ಮೆಸ್ಸೇಜ್ ಬಂತು ಅಂತ ಹೇಳ್ತು. ಹುಟ್ಟುಹಬ್ಬನ್ನ ಆಫೀಸಿದ್ದಿದ್ದ್ರೆ ನನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಆಚರಿಸ್ತಾ ಇದ್ದೆ. ಆದ್ರೆ ಇವತ್ತು ರಜಾದಿನ ಬೇರೆ, ಹೇಳೀ ಕೇಳೀ ಎರಡನೇ ಶನಿವಾರ. ಹಾಗಾಗಿ ಮನೆಯಲ್ಲೇ ಇದ್ದ ನಾನು ಬೆಳಗಿನ ಯೋಗಾ ಕ್ಲಾಸಿಗೆ ಹೋಗುವ ಬಗ್ಗೆ ಯೋಚ್ನೆ ಮಾಡ್ತಾ ಮೆಸೇಜ್ ನೋಡಿದೆ. ಘಂಟೆ ಸರಿ ಸುಮಾರು ೪.೧೫ ಅನ್ಸತ್ತೆ, ನನ್ನ ಅಣ್ಣ ಮೆಸ್ಸೇಜ್ ಮಾಡಿದ್ದ. "ಇಷ್ಟು ಹೊತ್ತಿಗೆ ಬಹುಷಃ ಅಮ್ಮನಿಗೆ ಹೊಟ್ಟೇ ನೋವ್ತಾ ಇತ್ತು ಅಂತ ಕಾಣತ್ತೆ" ಅನ್ನೋ ಸಂದೇಶ ಇತ್ತು. ನಾನು ಏನು ಅಂತ ಯೋಚ್ನೆ ಮಾಡಿದ್ಮೇಲೆ ಗೊತ್ತಗಿದ್ದು... ಇದು ನಾನು ಹುಟ್ಟಿದಾಗ ಅಂದರೆ __ ವರ್ಷಗಳ ಹಿಂದಿನ ಮಾತನ್ನ ಅಣ್ಣ ಹೇಳ್ತಾ ಇದಾನೆ ಅಂತ. ಖುಷಿ ಆಯ್ತು :) ಮೆಸ್ಸೇಜ್ ಮುಂದುವರೆದಿತ್ತು: "ಅಪ್ಪ ನನ್ನ ಪಕ್ಕದಿಂದ ಎದ್ದು ಅಮ್ಮನ ಮಾತಾಡಿಸೊಕೆ ಹೋಗಿದ್ರು, ಅಮ್ಮ ಅಪ್ಪನಿಗೆ First shift ಇದ್ದದ್ದರಿಂದ ತಿಂಡಿಮಾಡಲು ಹಿಡಿದಿದ್ದ ಪಾತ್ರೆನ ದಾರಿಯಲ್ಲೇ ಇಟ್ಟು ಏದುಸಿರು ಬಿಡ್ತಾ ಇದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ ನಾನು ಮಲಗಿಬಿಟ್ಟೆ"

ಇಷ್ಟಕ್ಕೆ ನಾನು __ ವರ್ಷ ಹಿಂದಕ್ಕೆ ಹೋಗಿಬಿಟ್ಟಿದ್ದೆ :) ನನ್ನ ಅಣ್ಣನ ಬರಹ ಹಾಗಿತ್ತು. ಎಲ್ಲಾ ನನ್ನ ಕಣ್ಮುಂದೇ ನಡಿತಾಇದ್ಯೇನೋ ಅನ್ನೋ ಹಾಗೆ. ಅಷ್ಟರಲ್ಲಿ ಮತ್ತೊಮ್ಮೆ ಟ್ರಿಣ್ ಟ್ರಿಣ್.... ಯಾರದ್ದೋ ಶುಭಾಷಯ ಅಂತ ತಿಳ್ಕೊಂಡು ಮೆಸ್ಸೇಜ್ ನೋಡಿದೆ, ಮತ್ತೆ ನನ್ನ ಅಣ್ಣನದೇ ಮೆಸ್ಸೇಜ್. ಅಣ್ಣ __ ವರ್ಷಹಿಂದಿನ ಘಟನೆಯನ್ನ ನನ್ನ ಮುಂದೆ ಎಳೆ ಎಳೆಯಾಗಿ ಬಿಡಿಸಿಡ್ತಾ ಇದ್ದ. "ಸುಮಾರು ೭ ಘಂಟೆ ಇರಬಹುದು, ಬೀಗ ತೆಕ್ಕೊಂಡು ಅಪ್ಪ ಒಳಗೆ ಬಂದ್ರು. ಬಂದವರೇ ನನ್ನನ್ನ ಇವತ್ತು ನೀನು ಸ್ಕೂಲಿಗೆ ಹೋಗಬೇಡ ಅಂದ್ರು. ರಾತ್ರಿ ಕೂತ್ಕೊಂಡು ಬರೆದಿದ್ದ ಹೋಂವರ್ಕ್ ಮುದುಕೀ ಜಯ ಮಿಸ್ಸಿಗೆ ತೋರಿಸೋಕೆ ಆಗೊದಿಲ್ವಲ್ಲ ಅಂತ ಬೇಜಾರಾಯ್ತು" (ಅಣ್ಣನ ಸ್ಕೂಲಿನಲ್ಲಿ ೩ ಜನ ಜಯ ಅನ್ನೋ ಟೀಚರ್ ಇದ್ದಿದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡಹೆಸರು)

ನಾನು ಅಣ್ಣನ ಮೆಸೇಜ್ ಗಳನ್ನ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತಸಪಡ್ತಾ ಇದ್ದೆ. ಮುಂದೇನಾಯ್ತು... ಹೇಳು... ನನು ಅಣ್ಣನಿಗೆ ಪ್ರತ್ಯುತ್ತರ ಕೊಟ್ಟೆ. ಅಣ್ಣ ಮುಂದುವರಿಸಿದ್ದ: "ನನಗಿನ್ನೂ ನೆನಪಿದೆ ಆವತ್ತು ಗುಲಾಬಿ ಬಣ್ಣದ ಟೀ ಷರ್ಟ್ ಹಾಕ್ಕೊಂಡಿದ್ದೆ, ಆವತ್ತು ಫಸ್ಟ್ ಟೈಮ್ ಅಷ್ಟು ಬೆಳಿಗ್ಗೆ ೫ ನಿಮಿಷ ಬಾಗಿಲ ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದೆ, ಆವತ್ತು ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮನೆ ಯಜಮಾನನ ಹೆಂಡತಿ 'ನಿನಗೊಬ್ಬ ತಮ್ಮ ಹುಟ್ಟಿದಾನೆ ಕಣೋ' ಅಂದ್ರು. ಆಗ ನನ್ಗೆ ವಿವರಿಸಲಾಗದ ಅವ್ಯಕ್ತ ಭಾವನೆಗಳ ಕ್ಷಣ. ಏನೋ ತರೋದಿಕ್ಕೆ ಅಂತ ಅಪ್ಪ ಹೊರಗಡೆ ಹೋಗಿದ್ರು. ಅವರು ಬರೋ ದಾರೀನೇ ಕಾಯ್ತಾಇದ್ದೆ"

ಅಣ್ಣ ನನಗೆ ಈ ರೀತಿ ಮೆಸ್ಸೇಜಿನಲ್ಲಿ __ ವರ್ಷದ ಹಿಂದಿನ ಘಟನೆಯನ್ನ ಹೇಳ್ತಾಇದ್ರೆ ನಾನೇ ಅಲ್ಲಿದ್ದು ಎಲ್ಲದನ್ನ ನೋಡ್ತಾ ಇದೀನೇನೋ ಅನ್ನೋರೀತಿ ಖುಷಿ ಆಗ್ತಾ ಇತ್ತು. ಮತ್ತೊಮ್ಮೆ ಟ್ರಿನ್ ಟ್ರಿನ್ ಅಂತ ರಿಂಗಣಿಸಿದ ನನ್ನ ಮೊಬೈಲ್ ನನ್ನ ಹುಟ್ಟಿದ ಸಂಭ್ರಮದ ಕಥೆ ಹೇಳಲು ಬೆಳಕ ಚೆಲ್ಲಿ ನಕ್ಕಿತ್ತು. "ಅಪ್ಪ ನನ್ನನ್ನ ಸೈಕಲ್ಲಿನಲ್ಲಿ ಕೂರಿಸ್ಕೊಂಡು ಕಮಲಾರಾಮನ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಅಮ್ಮ ಮಲಗಿದ್ರು. ನನ್ನನ ನೋಡಿ ನಕ್ಕರು. ಆಯ ಒಳಗಿನಿಂದ ಬಟ್ಟೆಯಲ್ಲಿ ಸುತ್ತಿದ ನಿನ್ನನ್ನ ಸಂಭ್ರಮದಿಂದ ತಂದು ತೋರಿಸಿ ನಿನ್ನ ತಮ್ಮನ್ನ ನೋಡಪ್ಪಾ ಅಂದ್ರು". ನಿಜ ಅಲ್ವ... ಆ ಪುಟ್ಟ ಮನಸ್ಸಿನ ಕಂದನಿಗೆ ತನ್ನ ತಮ್ಮನನ್ನ ನೋಡಲು ಎಷ್ಟು ಕಾತರ ಇದ್ದಿರಬಹುದು, ಮನಸ್ಸಲ್ಲಿ ಏನೇನು ಭಾವನೆಗಳು ಮೂಡಿರಬಹುದು... ಆ ಭಾವನೆಗಳು ನನ್ನ ಅಣ್ಣನ ಮತ್ತೊಂದು ಮೆಸ್ಸೇಜಿನಲ್ಲಿ ಮುಂದುವರೆದಿತ್ತು. "ನಿನ್ನ ಕಣ್ಣುಮುಚ್ಚಿದ ಮುಖ, ಆ ಪುಟ್ಟ ಕೈ ಬೆರಳುಗಳು, ಮಧ್ಯ ಮಧ್ಯ ಹೊರಡುತ್ತಿದ್ದ ಉವ್ವ್ಯಾ ಉವ್ವ್ಯಾ ರಾಗ... ನನಗೆ ಅರಿವಿಲ್ಲದಂತೆ ನಿನ್ನನ್ನು ಮುಟ್ಟಲು ನಿನ್ನ ಕಡೆ ಹೆಜ್ಜೆ ಹಾಕಿದ್ದೆ. ಮುಟ್ಟಬಾರದು !!! ದೂರ ನಿಂತ್ಕೊ !! ಅಮ್ಮ ಅಲ್ಲಿಂದ್ಲೇ ಗದರಿದ್ರು"

ಇಲ್ಲಿಗೆ ನನ್ನ ಹುಟ್ಟಿದ ಘಳಿಗೆಯ ಸಂಭ್ರಮವನ್ನ ಅಣ್ಣ ನನ್ನ ಮುಂದಿಟ್ಟಿದ್ದ. ಇದಕ್ಕಿಂತಾ ಒಂದು ಒಳ್ಳೇ ಉಡುಗೊರೆ ಬೇರೆ ಏನೂ ಇರಲಿಕ್ಕಿಲ್ಲ. ಆ ಮೆಸ್ಸೇಜನ್ನ ಓದಿ ಸಂಭ್ರಮಿಸೋದ್ರಲ್ಲಿ ಅಣ್ಣ ನಿದ್ದೆ ಬಿಟ್ಟು ನನಗೆ ಮೆಸ್ಸೇಜ್ ಮಾಡ್ತಾಇರೋದು ನನ್ನ ಗಮನಕ್ಕೆ ಬಾರದೇ ಹೋಗಿತ್ತು. ಸಮಯ ಸುಮಾರು ೫.೧೫ ಆಗಿತ್ತು. ಅಣ್ಣ ತನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿದ್ದ, ರಾತ್ರಿಯೆಲ್ಲಾ ಅವನ ವಿಧ್ಯಾರ್ಥಿಗಳ ಉತ್ತರಪತ್ರಿಕೆಯನ್ನ ತಿದ್ದುತ್ತಾ ಅದರಮಧ್ಯೆ ನನಗೆ ಮೆಸ್ಸೇಜ್ ಮಾಡ್ತಾ ಇದ್ದ. ಆ ಮೆಸ್ಸೇಜ್ಗಳನ್ನ ಓದಿ ಒಳಗೊಳಗೇ ಸಂತಸಪಡುತ್ತಾ ನಾನೂ ಸ್ನಾನಮಾಡಿಕೊಂಡು ನನ್ನ ಯೋಗಾ ಕ್ಲಾಸಿಗೆ ಹೊರಟೆ. ದಿನಪೂರ್ತಿ ನನ್ನ ಕಣ್ ಮುಂದೆ ನನ್ನ ಹುಟ್ಟಿದ ದೃಷ್ಯಾವಳಿಗಳು ತೇಲಿ ಬರುತ್ತಿದ್ದವು.


ಯೋಗಾ ಕ್ಲಾಸಿನಿಂದ ಮನೆಗೆ ಬಂದೆ. ಅಣ್ಣನ ಮೆಸ್ಸೇಜ್ ಇತ್ತು. "ಬಿಡುವಿದ್ದಾಗ ಕಾಲ್ ಮಾಡು, ನಿನ್ನ ಬಗ್ಗೆ ಒಂದು ಕವನ ಬರ್ದಿದೀನಿ" ಒಂದು ಕ್ಷಣ ಕೂಡಾ ತಡ ಮಾಡದೇ ಅಣ್ಣನಿಗೆ ಕರೆನೀಡಿದೆ. ಅವನು ಬರೆದ ಕವನ ಓದಿದ. ನಾನು ಹುಟ್ಟಿದಾಗಿನಿಂದಾ ನಾನು ಬೆಳೆದುಬಂದ ದಾರಿಯ ಮೈಲಿಗಲ್ಲುಗಳನ್ನು ಗುರುತಿಸಿ ಒಂದು ಸೊಗಸಾದ ಕವನ ಬರೆದಿದ್ದ. ಆ ಕವನವನ್ನ ಕೇಳಿ ನನಗೆ ವ್ಯಕ್ತಪಡಿಸಲಾಗದ ಸಂತಸವಾಗ್ತಾ ಇತ್ತು. :) ನಿಂತಲ್ಲೇ ಮುಗುಳ್ನಕ್ಕೆ, ಅಣ್ಣನನ್ನನ್ನು ಎಷ್ಟು ಇಷ್ಟಾ ಪಡ್ತಾನೆ ಅನ್ನೋದನ್ನ ಕಂಡುಕೊಂಡೆ. ನನ್ನ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟಿದ್ದ ನನ್ನ ಮುದ್ದಿನ ಅಣ್ಣ. ಕಾಲ ಇವತ್ತಿನ ರೀತಿ ನಾಳೆ ಇರೋದಿಲ್ಲ, ಆದರೆ ನಾನು ಆ ಭಗವಂತನನ್ನ ಇದಕ್ಕಿಂತಾ ಚೆನ್ನಾಗಿ ಇರದಿದ್ದರೂ ಪರವಾಗಿಲ್ಲ, ಹೀಗೇ ಮುಂದುವರೀತಾ ಇರ್ಲಿ ನಮ್ಮ ಪ್ರೀತಿ ವಿಶ್ವಾಸ ಅಂತ ಕೋರಿಕೊಂಡೆ.

ಸಾಯಂಕಾಲ ಯೋಗಾ ಕ್ಲಾಸಿನಲ್ಲಿ ನನ್ನ ಜನ್ಮದಿನದ ಆಚರಣೆ ಭಿನ್ನವಾಗಿತ್ತು. ನನ್ನ ತರಗತಿಯ ಗುರುಗಳು ನನಗೇ ತಿಳಿಯದಂತೆ ಒಂದು ಕೇಕ್ ತರಿಸಿದ್ದರು. ಎಲ್ಲರಮುಂದೆ ನಾನು ಆ ಕೇಕನ್ನ ಕತ್ತರಿಸಿದೆ. ಅದು ನನ್ನ ಜೀವನದ ಮೊಟ್ಟ ಮೊದಲ ಕೇಕ್ ಕಟ್ಟಿಂಗ್ :) ಈಗ ಸಮಯ ಸುಮಾರು ರಾತ್ರಿ ೧೨.೩೦ ನನ್ನ ಇಂದಿನ ಜನ್ಮದಿನದ ಆಚರಣೆಯನ್ನ ಮೆಲುಕುಹಾಕುತ್ತಾ ಮಲಗುತ್ತಿದ್ದೇನೆ...

2 comments:

anusha said...

hmm :-)

Unknown said...

chennagide prashanth :) adanna odtha odtha neevu matthe hutti bandreno ansthu :) ashtu chennagi bardiddira

soooooooooper!!! :)