ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Tuesday, September 14, 2010

ಬಾಲ್ಯ....

ಬಾಲ್ಯ ಎಷ್ಟು ಸುಂದರ ಅಲ್ವಾ ? ನಾವೆಲ್ಲಾ Miss ಮಾಡ್ಕೊಳೋ ಬಹು ದೊಡ್ಡ ಆಸ್ತಿ. ನಾವು ಕಳ್ಕೊಂಡ ಬಾಲ್ಯವನ್ನ ನಮ್ಮ ಮಕ್ಕಳಲ್ಲಿ ಅಥವಾ ನಮ್ಮ ಸುತ್ತ ಮುತ್ತ ಕಾಣ ಸಿಗುವ ಮಕ್ಕಳಲ್ಲಿ ಕಂಡು ಸಂತಸ ಪಡುತ್ತೇವೆ. ನಾವು ಚಿಕ್ಕವರಾಗಿದ್ದಾಗಿನ ನೆನಪು ನಮ್ಮ ನನಪಿನಂಗಳದಲ್ಲಿ ಬಂದು ಒಮ್ಮೊಮ್ಮೆ ನಲಿದು, ಕುಣಿದು ಹೋಗುವುದು ಸಾಮಾನ್ಯವೇ.

ಮೊನ್ನೆ ನಾನು ನನ್ನ ಅಜ್ಜನ ಮನೆಯಾದ ಬಾರಕೂರಿಗೆ ಹೋಗಿದ್ದೆ. ಅಲ್ಲಿ ಕಂಡಾಪಟ್ಟೆ ಮಳೆ ಬಂದು ಅಲ್ಲಿನ ತೋಡು (ಗದ್ದೆಗಳ ನಡುವೆ ನೀರು ಹರಿಯುವ ಜಾಗ) ತುಂಬಿ ಹರಿಯುತ್ತಿತ್ತು. ಅದರಲ್ಲಿ ನಡೆದಾಡುತ್ತಾ ಇದ್ದೆ. ಅಲ್ಲಿಗೆ ನನ್ನ ಅಣ್ಣ ಮತ್ತು ಅವನ ೩ ವರ್ಷದ ಮಗಳು ವಿಸ್ಮಯ ಬಂದರು. ಅಣ್ಣ ಅವಳಿಗೆ "ಪೇಪರ್ ದೋಣಿ ಮಾಡಿಕೊಡ್ತೀನಿ, ಅದನ್ನ ನೀರಲ್ಲಿ ಬಿಡೋಣ" ಅಂತಾ ಇದ್ದ. ಆಗಲೇ ನನಗೆ ನಮ್ಮ ಬಾಲ್ಯದ ನೆನಪು ಬಹಳ ಕಾಡಿದ್ದು. ಅವುಗಳಲ್ಲಿ ಕೆಲವನ್ನು ಪಟ್ಟಿ ಮಾಡಿದ್ದೇನೆ :) ನೀವೂ ಓದಿ ನಿಮ್ಮ ಬಾಲ್ಯವನ್ನ ನೆನಪುಮಾಡಿಕೊಳ್ಳಿ :)

• ನಾವೆಲ್ಲಾ ಚಿಕ್ಕವರಾಗಿದ್ದಾಗ ಹಳೇ ಪೇಪರಿನಲ್ಲಿ (ಒಮ್ಮೊಮ್ಮೆ ಹೊಸಾ ನೋಟ್ ಬುಕ್ಕಿನಿಂದ ಹರಿದದ್ದೂ ಇದೆ) ದೋಣಿ, ರಾಕೇಟ್, ವಿಮಾನ ಇನ್ನೂ ಮುಂತಾದವನ್ನ ಮಾಡಿ ಶಾಲೆಯ ಬಿಡುವಿನಲ್ಲಿ ತರಗತಿಗಳಲ್ಲೇ ಆಟ ಆಡಿದ್ದುಂಟು.

• ಎರೆಡು ಪುಸ್ತಕಗಳ ಹಾಳೆಗಳನ್ನು ಒಂದರಮೇಲೊಂದರಂತೆ ಜೋಡಿಸಿ ನಂತರ ಅದನ್ನ ಉಲ್ಟಾ ಮಾಡಿ ಸಿನಿಮ ನೋಡುವ ಆಟ ಆಡಿದ್ದುಂಟು.

• ಆಟದ ಸಮಯದಲ್ಲಿ ಲಗೋರಿ, ಜೂಟಾಟ, ಐಸ್ ಪೈಸ್ ಎಲ್ಲಾ ಆಡಿದ್ದನ್ನು ನೆನಸಿಕೊಂಡರೆ ಏನೋ ಒಂದು ರೀತಿ ಖುಷಿಯಾಗತ್ತೆ. :)

• ಆಗೆಲ್ಲಾ ನಮಗೆ ತೆಂಗಿನ ಗರಿಯ ಬುಡವೇ (ಹೆಡೆಮಂಡೆ) ಬ್ಯಾಟು, ಖಾಲಿಯಾದ ಪ್ಲಾಸ್ಟಿಕ್ ಕವರಿನ ಗಂಟೇ ಬಾಲು. ಅದರಲ್ಲೇ ಕ್ರಿಕೇಟನ್ನು ಮ್ಯಾಚ್ ಫಿಕ್ಸಿಂಗ್ ಇಲ್ಲದೇ ಆಡಿ ಖುಷಿಪಟ್ಟಿದ್ವಿ.

• ಪುಸ್ತಕದ ಕೊನೆಯ ಹಾಳೆಯಲ್ಲಿ ಮೂರುಕಲ್ಲಿನ ಆಟದ ಮನೆಗಳು ಇದ್ದೇ ಇರುತ್ತಿದ್ದವು. ಚೌಕಾಬಾರ, ಚನ್ನೇಮಣೆ, ಕಳ್ಳಾ ಪೊಲೀಸ್ ಆಟ, ಪಠ್ಯಪುಸ್ತಕದಿಂದ ಆಡಿದ ಬುಕ್ ಕ್ರಿಕೇಟ್ ಮತ್ತು ಇನ್ನೂ ಹಲವು ಆಟಗಳು ನಮ್ಮ ಮೆಚ್ಚಿನ ಆಟಗಳಾಗಿರುತ್ತಿದ್ದವು.

• ರಜೆ ಬಂತೆಂದರೆ ನಾನು ಕ್ರಿಕೇಟ್ ಆಡಲು ಅಕ್ಕನಹಿಂದೆ ದುಂಬಾಲು ಬೀಳುತ್ತಿದ್ದೆ. ಅದಕ್ಕವಳು ತನ್ನ "ಅಮ್ಮ ಆಟಕ್ಕೆ" ಬಂದರೆ ಮಾತ್ರಾ ಕ್ರಿಕೇಟನ್ನು ಆಡುವುದಾಗಿ ಶರತ್ತು ಇಡುತ್ತಿದ್ದಳು. ವಿಧಿ ಇಲ್ಲದೇ ಒಲ್ಲದ ಮನಸ್ಸಿನಿಂದ ಒಪ್ಪಿ ಕ್ರಿಕೇಟಿನ ಆಟ ಆಡಲು ಕಾಯುತ್ತಿದ್ದೆ.

• ಸ್ವಿಚ್ ಆನ್ ಮಾಡಿರದ ಪ್ಲಗ್ಗಿಗೆ ಪಿನ್ನನ್ನು ಚುಚ್ಚಿ ಕರೆಂಟ್ ಹೊಡೆಸಿಕೊಂಡದ್ದು ನೆನಸಿಕೊಂಡರೆ ಈಗಲೂ ನಗು ಬರುತ್ತದೆ.

• ಪುಟ್ಟ ಪುಟ್ಟ ಮೋರಿಗಳಲ್ಲಿ ಮೀನು ಹಿಡಿದು ಹಾರ್ಲಿಕ್ಸ್ ಬಾಟಲಿಗೆ ಹಾಕಿ ಸಾಕಲು ಮಾಡುತ್ತಿದ್ದ ವಿಫಲಯತ್ನ ಗಳು, ಏರೋಪ್ಲೇನ್ ಚಿಟ್ಟೆಯನ್ನು ಹಿಡಿಯಲು ಹೋಗಿ ಎಡವಿ ಕೆಳಬಿದ್ದದ್ದು.

• ಅಪ್ಪನೊಡನೆ ಪೇಟೆಗೆ ಹೋದಾಗ ಹಠಮಾಡಿ ಕೊಂಡ ಪ್ಲಾಸ್ಟಿಕ್ ಲಾರಿಯ ಗಾಲಿ ಮುರಿದಾಗ ಬೇಸರದಿಂದ ಸಪ್ಪೆಮುಖ ಮಾಡಿಕೊಂಡದ್ದು.

• ಶಾಲೆ ಮುಗಿಸಿ ಮನೆಗೆ ಬಂದು ಅಮ್ಮನಿಗೆ ಏನಾದರೂ ತಿನ್ನಲಿಕ್ಕೆ ಕೊಡು ಅಂತ ತಲೆ ತಿಂದದ್ದು.

• ಸುಳ್ಳು ಸುಳ್ಳಾಗೇ ಹೊಟ್ಟೇ ನೋವು ಬರಿಸಿಕೊಂಡು ಶಾಲೆಗೆ ಹೋಗದೇ ಚಕ್ಕರ್ ಹೊಡೆದು ಮನೆಯಲ್ಲಿ ಮಜವಾಗಿ ಸಮಯ ಕಳೆದದ್ದು.

• ಐಯೋಡೆಕ್ಸ್ ಬಾಟಲಿಯಲ್ಲಿ ನಲ್ಲಿ ಗಿಡ ನೆಟ್ಟು ಪ್ರೀತಿಯಿಂದ ೫ ವರುಷ ಸಾಕಿದ್ದು.

• ಅಪ್ಪ ಪೇಟೆಯಿಂದ ತಂದಿದ್ದ ಕಡಲೇ ಕಾಯಿಯನ್ನ ಎಲ್ಲರೊಂದಿಗೆ ಹಂಚಿ ತಿಂದದ್ದು.

• ಅಪ್ಪನ ಸೈಕಲ್ಲಿನ ಚಕ್ರವನ್ನು ಜೋರಾಗಿ ತಿರುಗಿಸಿ ಅದಕ್ಕೆ ಕಡ್ಡಿ ಇಟ್ಟು ಅಪ್ಪನಿಂದ ಬೈಸಿಕೊಂಡದ್ದು.

• ಊಟ ಮಾಡಲು ಮನಸ್ಸಿಲ್ಲದಾಗ ಅಮ್ಮನ ಕೈ ತುತ್ತಿಗೆ ಕಾಡಿದ್ದು, ಕೈ ತುತ್ತು ತಿಂದು ನಿದ್ರೆಗೆ ಜಾರಿದ್ದು.

ಸಧ್ಯಕ್ಕೆ ಇಷ್ಟು ಸಾಕು, ಮಿಕ್ಕವನ್ನು ಪಟ್ಟಿ ಮಾಡುತ್ತಾ ಹೋದರೆ ಅದು ನಿಲ್ಲುವುದೇ ಇಲ್ಲ... :)

1 comment:

Shashi jois said...

ಪ್ರಶಾಂತ ಬಾಲ್ಯದ ನೆನಪುಗಳೇ ಹಾಗೇ..ಮೆಲುಕು ಹಾಕಿದಾಗ ಸಿಗುವ ಆನಂದ ಅನುಭವಿಸಿದವರಿಗೆ ಗೊತ್ತು